Advertisement
1999ರ ಕಾಲಘಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್.ಎಂ.ಕೃಷ್ಣ, ರಾಜ್ಯಾದ್ಯಂತ ಪಾಂಚಜನ್ಯ ಮೊಳಗಿಸಿದರು. ಜಿಲ್ಲೆಯಲ್ಲಿ ಕೂಡ ಅದರ ಪ್ರಭಾವ ದಟ್ಟವಾಗಿ ವ್ಯಾಪಿಸಿತ್ತು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿದ ನಂತರ ಬಹುತೇಕ ಚುನಾವಣೆಗಳಲ್ಲಿ ಗೈರಾಗುವ ಮೂಲಕ ರಾಜಕೀಯ ಅಂತರವನ್ನೇ ಕಾಯ್ದುಕೊಂಡಿದ್ದರು.
Related Articles
Advertisement
ಬಿಜೆಪಿಯಲ್ಲಿ ಹೊಸ ಚೈತನ್ಯ: ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಮತ್ತು ದೇಶದ ಕ್ರಾಂತಿಕಾರಿ ಬದಲಾವಣೆಯಲ್ಲಿ ನರೇಂದ್ರ ಮೋದಿ ಅವರ ಪಾತ್ರ ಅಪಾರವಾದುದು ಎಂದು ಬಣ್ಣಿಸುತ್ತಲೇ ಬಿಜೆಪಿ ಪರ ಬ್ಯಾಟಿಂಗ್ ಆರಂಭಿಸಿರುವ ಕೇಂದ್ರ ಮಾಜಿ ಸಚಿವ, ಇತ್ತೀಚೆಗೆ ಮಂಡ್ಯದಲ್ಲಿ ಕೂಡ ಪಕ್ಷದ ಪರ ಪ್ರಚಾರ ನಡೆಸಿರುವುದು ಬಹು ದಿನಗಳಿಂದ ನಿಸ್ತೇಜವಾಗಿದ್ದ ಬಿಜೆಪಿಯಲ್ಲಿ ಹೊಸ ಚೈತನ್ಯವನ್ನು ಮೂಡಿಸಿದಂತಾಗಿದೆ.
ಕಾಂಗ್ರೆಸ್ ಜೆಡಿಎಸ್‌ನಲ್ಲಿ ಈಗಾಗಲೇ ಅಘೋಷಿತ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಚುನಾವಣಾ ಸಂಘರ್ಷ ಏರ್ಪಟ್ಟಿದೆ. ಆದರೆ, ಬಿಜೆಪಿಯಲ್ಲಿ ಉಪ ಚುನಾವಣಾ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರ ಹೆಸರನ್ನು ಮಾತ್ರ ತೇಲಿಬಿಡಲಾಗಿದೆ. ಈ ನಡುವೆ ಎಸ್.ಎಂ.ಕೃಷ್ಣ ಅವರ ಚುನಾವಣಾ ಪ್ರವೇಶ ಕುತೂಹಲವನ್ನು ಮೂಡಿಸಿದೆ.
ಜೆಡಿಎಸ್‌ಗೆ ಕಠಿಣ ಸವಾಲು: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹೊರ ಹೊಮ್ಮಿರುವ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ಮಂಡ್ಯ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸುವ ತಂತ್ರಗಾರಿಕೆಯನ್ನು ನಡೆಸುತ್ತಿರುವ ಬೆನ್ನಲ್ಲೇ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಸುಮಲತಾ ಅವರಿಗೆ ಕ್ಷೇತ್ರ ಬಿಟ್ಟುಕೊಡುವ ಮಾತುಗಳನ್ನು ಆಡಿದ್ದಾರೆ. ಅಲ್ಲದೆ, ಎಸ್.ಎಂ.ಕೃಷ್ಣ ಅವರು ಮಂಡ್ಯ ಕ್ಷೇತ್ರವನ್ನು ಹೆಚ್ಚು ಕೇಂದ್ರೀಕರಿಸಿರುವುದು ಮೇಲ್ನೋಟಕ್ಕೆ ಜೆಡಿಎಸ್‌ಗೆ ಕಠಿಣ ಸವಾಲಾಗಿ ಪರಿಣಮಿಸಿದೆ.
ಕಾಂಗ್ರೆಸ್‌ನ ಸ್ನೇಹಿತರಿಗೆ ಆಹ್ವಾನ: ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಾಗ ಬಹುತೇಕ ಪ್ರಭಾವಿ ಕಾಂಗ್ರೆಸ್ ನಾಯಕರು ಮಾತೃಪಕ್ಷದಲ್ಲೇ ಉಳಿದುಕೊಂಡರೇ ವಿನಃ, ಎಸ್.ಎಂ.ಕೃಷ್ಣ ಅವರನ್ನು ಬೆಂಬಲಿಸಿ ಅವರ ಹಿಂದೆ ಹೋಗುವ ಸಾಹಸ ಮಾಡಲಿಲ್ಲ.
ಏಕೆಂದರೆ, ಮಂಡ್ಯದಲ್ಲಿ ಬಿಜೆಪಿಯ ಬೇರುಗಳು ಶಿಥಿಲಗೊಂಡಿದ್ದ ಕಾರಣದಿಂದಲೇ ಅವರೆಲ್ಲರೂ ಕಾಂಗ್ರೆಸ್‌ನಲ್ಲೇ ತಮ್ಮ ರಾಜಕೀಯ ಅಭಿಯಾನವನ್ನು ಮುಂದುವರಿಸಿದ್ದರು. ಈಗ ಎಸ್.ಎಂ.ಕೃಷ್ಣ ಅವರು ಬಿಜೆಪಿ ಮೂಲಕ ಪ್ರವರ್ಧಮಾನಕ್ಕೆ ಬರುವ ಪ್ರಯತ್ನ ನಡೆಸುತ್ತಿದ್ದು, ಈ ಹಂತದಲ್ಲಿ ಕಾಂಗ್ರೆಸ್‌ನ ಮಾಜಿ ಸ್ನೇಹಿತರನ್ನು ಬಿಜೆಪಿಗೆ ಆಹ್ವಾನಿಸಿರುವುದು ಸಹಜವಾಗಿಯೇ ಕುತೂಹಲವನ್ನು ಮೂಡಿಸಿದೆ.
ಜಿಲ್ಲಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕೂಗು: ಮಾಜಿ ಪ್ರಧಾನಿ ದೇವೇಗೌಡರ ನಾಯಕತ್ವದ ಜೆಡಿಎಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ ಜಿಲ್ಲೆಯಲ್ಲಿ, ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖೀಲ್ ಕುಮಾರಸ್ವಾಮಿಗೂ ರಾಜಕೀಯ ನೆಲೆಯನ್ನು ಕಲ್ಪಿಸಿಕೊಡುವ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಈ ಹಂತದಲ್ಲಿ ಸ್ಥಳೀಯ ನಾಯಕತ್ವದ ಪ್ರಶ್ನೆ ಪ್ರತಿಷ್ಠೆಯಾಗಿ ಹೊರಹೊಮ್ಮಿದೆ. ಅಲ್ಲದೆ, ಜೆಡಿಎಸ್ ಜಿಲ್ಲೆಯ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬೇಕೆಂಬ ಕೂಗು ವ್ಯಾಪಕವಾಗಿ ಎದ್ದಿದೆ.
ಸುಮಲತಾಗೆ ಬೆಜೆಡಿಎಸ್‌ನ ಒಂದು ಗುಂಪಿನ ನಾಯಕರು ಮಾತ್ರ ನಿಖೀಲ್‌ಕುಮಾರಸ್ವಾಮಿ ಅವರನ್ನು ಹೆಗಲ ಮೇಲೆ ಹೊತ್ತು ಮೆರೆಸುತ್ತಿರುವಾಗಲೇ, ಮತ್ತೂಂದು ಗುಂಪು ಆಂತರಿಕವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಕಾಂಗ್ರೆಸ್ ಅಘೋಷಿತ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುವ ಪ್ರಯತ್ನವನ್ನೂ ಮುನ್ನಡೆಸಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿಯಿಂದ ಎಸ್.ಎಂ.ಕೃಷ್ಣ ಅವರು ರಂಗಪ್ರವೇಶ ಮಾಡಿರುವುದು ಮೇಲ್ನೋಟಕ್ಕೆ ಸ್ಥಳೀಯ ನಾಯಕತ್ವದ ಹೋರಾಟಕ್ಕೆ ಚೈತನ್ಯ ತುಂಬಿದಂತಾಗಿದೆಯಾದರೂ, ಬಿಜೆಪಿಗೆ ನೆಲೆ ಇಲ್ಲದ ಮಂಡ್ಯ ಜಿಲ್ಲೆಯಲ್ಲಿ ಇತ್ತೀಚಿನ ಚುನಾವಣೆಗಳನ್ನು ಗಮನಿಸಿದರೆ ಕನಿಷ್ಠ ಓಟ್ಬ್ಯಾಂಕ್ ಅಭಿವೃದ್ಧಿಯಾಗಿದ್ದು, ಬಿಜೆಪಿಯ ಮೂಲ ಮತಗಳನ್ನು ಕ್ರೋಢೀಕರಿಸಿ ಜೆಡಿಎಸ್ ವಿರೋಧಿ ಹೋರಾಟವನ್ನು ನಡೆಸುವ ತಂತ್ರಗಾರಿಕೆ ನಡೆದಿದೆಯಾ ಎಂಬುದು ಪ್ರಶ್ನೆಯಾಗಿದೆ.
* ಮಂಡ್ಯ ಮಂಜುನಾಥ್