ಲಂಡನ್: ಲಾರ್ಡ್ಸ್ ಟೆಸ್ಟ್ ಪಂದ್ಯದ ಶನಿವಾರದ ಆಟದ ವೇಳೆ ಜೋಫ‌್ರ ಆರ್ಚರ್ ಅವರಿಂದ ಬೌನ್ಸರ್ ಏಟು ತಿಂದ ಆಸ್ಟ್ರೇಲಿಯದ ಕ್ರಿಕೆಟಿಗ ಸ್ಟೀವ್ ಸ್ಮಿತ್ ಅಂತಿಮ ದಿನ ಮೈದಾನಕ್ಕಿಳಿಯಲಿಲ್ಲ. ಇವರ ಬದಲು ಮಾರ್ನಸ್ ಲಬುಶೇನ್ ಕ್ಷೇತ್ರರಕ್ಷಣೆ ನಡೆಸಿದರು.
ಸ್ಮಿತ್ ಅವರು ವೈದ್ಯಕೀಯ ನಿಗಾದಲ್ಲಿದ್ದು, ಲೀಡ್ಸ್‌ನಲ್ಲಿ ನಡೆಯ ಲಿರುವ ಆ್ಯಶಸ್ ಸರಣಿಯ 3ನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
“ಕಳೆದ ರಾತ್ರಿಯಿಡೀ ಸ್ಮಿತ್ ದೇಹಸ್ಥಿತಿಯನ್ನು ವೈದ್ಯರು ಗಮನಿಸುತ್ತಲೇ ಇದ್ದರು. ಅವರು ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರು. ಆದರೆ ಬೆಳಗ್ಗೆ ಏಳುವ ವೇಳೆ ಸಣ್ಣ ಮಟ್ಟದಲ್ಲಿ ತಲೆನೋವು ಕಾಡಿತ್ತು. ತಂಡದ ವೈದ್ಯ ರಿಚರ್ಡ್ ಸಾ ಅವರ ಸೂಚನೆಯ ಮೇರೆಗೆ ಸ್ಮಿತ್ ಅಂತಿಮ ದಿನದ ಆಟದಿಂದ ಹಿಂದೆ ಸರಿದರು’ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.
ಶನಿವಾರ ಬ್ಯಾಟಿಂಗ್ ನಡೆಸು ತ್ತಿದ್ದಾಗ ಜೋಫ‌್ರ ಆರ್ಚರ್ ಅವರ ಬೌನ್ಸರ್ ಎಸೆತವೊಂದು ಸ್ಮಿತ್ ಅವರ ಎಡ ಕಿವಿಯ ಕೆಳಭಾಗಕ್ಕೆ ಹೋಗಿ ಬಡಿದಿತ್ತು. ಅಂಗಳದಲ್ಲೇ ಕುಸಿದ ಅವರನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಡ್ರೆಸ್ಸಿಂಗ್ ರೂಮ್‌ಗೆ ಕರೆದೊಯ್ಯಲಾಗಿತ್ತು. ಆಗ ಸ್ಮಿತ್ 80 ರನ್ ಮಾಡಿ ಆಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಚೇತರಿಸಿಕೊಂಡು ಆಡಲಿಳಿದ ಅವರು 92 ರನ್ ಮಾಡಿ ಔಟಾದರು.
ಸ್ಟೋಕ್ಸ್ ಶತಕ; ಡ್ರಾದತ್ತ ಟೆಸ್ಟ್
ಮಳೆಯಿಂದ ತೀವ್ರ ಅಡಚಣೆ ಗೊಳಗಾದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅಂತಿಮ ದಿನದ ಆಟವನ್ನು ಮುಂದುವರಿಸುತ್ತಿದೆ. 8 ರನ್ನುಗಳ ಅಲ್ಪ ಮುನ್ನಡೆಯ ಬಳಿಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟಿಗೆ 258 ರನ್ ಗಳಿಸಿ ಡಿಕ್ಲೇರ್ ಮಾಡಿದೆ. ಪಂದ್ಯ ಡ್ರಾ ಹಾದಿ ಹಿಡಿದಿದೆ. ಬೆನ್ ಸ್ಟೋಕ್ಸ್ ಶತಕ ಇಂಗ್ಲೆಂಡ್ ಸರದಿಯ ಆಕರ್ಷಣೆಯಾಗಿತ್ತು. ಅವರು ಅಜೇಯ 115 ರನ್ ಹೊಡೆದರು.