Advertisement

ಕುಸಿತಕ್ಕೆ ತಡೆಯಾದ ಸ್ಮಿತ್‌, ಲಬುಶೇನ್‌

11:35 PM Dec 26, 2019 | Team Udayavani |

ಮೆಲ್ಬರ್ನ್: ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ನ‌ಲ್ಲಿ ದಾಖಲೆ ಸಂಖ್ಯೆಯ ವೀಕ್ಷಕರ ಸಮ್ಮುಖದಲ್ಲಿ ಪ್ರಾರಂಭ ಗೊಂಡ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ಎಚ್ಚರಿಕೆಯ ಬ್ಯಾಟಿಂಗ್‌ ಪ್ರದರ್ಶಿಸಿದೆ. ಆರಂಭಕಾರ ಜೋ ಬರ್ನ್ಸ್ ಅವರನ್ನು 4ನೇ ಎಸೆತದಲ್ಲೇ ಶೂನ್ಯಕ್ಕೆ ಕಳೆದುಕೊಂಡ ಬಳಿಕ ಚೇತರಿಸಿಕೊಂಡು 4 ವಿಕೆಟಿಗೆ 257 ರನ್‌ ಮಾಡಿದೆ.

Advertisement

ಸ್ಟೀವನ್‌ ಸ್ಮಿತ್‌ (ಬ್ಯಾಟಿಂಗ್‌ 77) ಮತ್ತು ಮಾರ್ನಸ್‌ ಲಬುಶೇನ್‌ (63) ಅವರ ಅರ್ಧ ಶತಕ ಆಸೀಸ್‌ ಸರದಿಯ ಆಕರ್ಷಣೆ ಆಗಿತ್ತು. ಡೇವಿಡ್‌ ವಾರ್ನರ್‌ (41), ಮ್ಯಾಥ್ಯೂ ವೇಡ್‌ (38) ಇತರ ಪ್ರಮುಖ ಸ್ಕೋರರ್. ಸ್ಮಿತ್‌ ಜತೆಗೆ 25 ರನ್‌ ಮಾಡಿರುವ ಟ್ರ್ಯಾವಿಸ್‌ ಹೆಡ್‌ ಕ್ರೀಸಿನಲ್ಲಿದ್ದಾರೆ.

ನ್ಯೂಜಿಲ್ಯಾಂಡ್‌ ಪರ ಆಲ್‌ರೌಂಡರ್‌ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 2, ಟ್ರೆಂಟ್‌ ಬೌಲ್ಟ್ ಮತ್ತು ನೀಲ್‌ ವ್ಯಾಗ್ನರ್‌ ತಲಾ ಒಂದು ವಿಕೆಟ್‌ ಉರುಳಿಸಿದರು.

ಎಚ್ಚರಿಕೆಯ ಬ್ಯಾಟಿಂಗ್‌
ಬರ್ನ್ಸ್ ಅವರನ್ನು ಮೊದಲ ಓವರಿನಲ್ಲೇ ಬೌಲ್ಡ್‌ ಮಾಡಿದ ಟ್ರೆಂಟ್‌ ಬೌಲ್ಟ್ ನ್ಯೂಜಿಲ್ಯಾಂಡಿಗೆ ಭರ್ಜರಿ ಆರಂಭ ಒದಗಿಸಿದರು. ಇಲ್ಲಿಂದ ಮುಂದೆ ಆಸ್ಟ್ರೇಲಿಯ ನಿಧಾನ ಗತಿಯಲ್ಲಿ, ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಬ್ಯಾಟಿಂಗ್‌ ಮುಂದುವರಿಸತೊಡಗಿತು. ವಾರ್ನರ್‌-ಲಬುಶೇನ್‌ ಸೇರಿಕೊಂಡು 2ನೇ ವಿಕೆಟಿಗೆ 61 ರನ್‌, ಲಬುಶೇನ್‌-ಸ್ಮಿತ್‌ ಜೋಡಿಯಿಂದ 3ನೇ ವಿಕೆಟಿಗೆ 83 ರನ್‌, ಸ್ಮಿತ್‌-ವೇಡ್‌ 4ನೇ ವಿಕೆಟಿಗೆ 72 ರನ್‌ ಒಟ್ಟುಗೂಡಿಸಿ ಕಿವೀಸ್‌ ಮೇಲುಗೈಗೆ ತಡೆಯೊಡ್ಡುತ್ತ ಹೋದರು. ಸ್ಮಿತ್‌-ಹೆಡ್‌ ಮುರಿಯದ 5ನೇ ವಿಕೆಟಿಗೆ 41 ರನ್‌ ಪೇರಿಸಿದ್ದಾರೆ.

ವಾರ್ನರ್‌ 41 ರನ್‌ 64 ಎಸೆತಗಳಿಂದ ಬಂತು (3 ಬೌಂಡರಿ). ಲಬುಶೇನ್‌ 149 ಎಸೆತ ಎದುರಿಸಿ 63 ರನ್‌ ಬಾರಿಸಿದರು. ಇದರಲ್ಲಿ 6 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಈ ವರ್ಷ ಲಬುಶೇನ್‌ ಟೆಸ್ಟ್‌ ರನ್‌ ಗಳಿಕೆ 1,085ಕ್ಕೆ ಏರಿತು.

Advertisement

5ನೇ ಶತಕದತ್ತ ಸ್ಮಿತ್‌
ಸ್ಮಿತ್‌ ಈಗಾಗಲೇ 192 ಎಸೆತ ಎದುರಿಸಿದ್ದು, 8 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ ತಮ್ಮ ಇನ್ನಿಂಗ್ಸ್‌ ಕಟ್ಟಿದ್ದಾರೆ. ಇಲ್ಲಿ ಆಡಿದ ಹಿಂದಿನ ನಾಲ್ಕೂ ಟೆಸ್ಟ್‌ಗಳಲ್ಲಿ ಸೆಂಚುರಿ ಬಾರಿಸಿರುವ ಸ್ಮಿತ್‌, ಸತತ 5ನೇ ಶತಕದ ನಿರೀಕ್ಷೆಯಲ್ಲಿದ್ದಾರೆ. “ನ್ಯೂಜಿಲ್ಯಾಂಡಿನ ನಿಖರವಾದ ಬೌಲಿಂಗ್‌ ಮತ್ತು ಅತ್ಯುತ್ತಮ ಫೀಲ್ಡಿಂಗ್‌ನಿಂದಾಗಿ ನಾನು ಹೆಚ್ಚು ತಾಳ್ಮೆಯಿಂದ ಬ್ಯಾಟಿಂಗ್‌ ನಡೆಸಬೇಕಾಯಿತು’ ಎಂದು ಸ್ಮಿತ್‌ ಹೇಳಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಆಸೀಸ್‌-4 ವಿಕೆಟಿಗೆ 257 (ವಾರ್ನರ್‌ 41, ಲಬುಶೇನ್‌ 63, ಸ್ಮಿತ್‌ ಬ್ಯಾಟಿಂಗ್‌ 77, ವೇಡ್‌ 38, ಹೆಡ್‌ ಬ್ಯಾಟಿಂಗ್‌ 25, ಗ್ರ್ಯಾಂಡ್‌ಹೋಮ್‌
48ಕ್ಕೆ 2, ವ್ಯಾಗ್ನರ್‌ 40ಕ್ಕೆ 1, ಬೌಲ್ಟ್ 60ಕ್ಕೆ 1).

ಮೊದಲ ದಿನ 80 ಸಾವಿರ ವೀಕ್ಷಕರು!
ಟೆಸ್ಟ್‌ ಪಂದ್ಯಕ್ಕೆ ವೀಕ್ಷಕರು ಬರುವುದಿಲ್ಲ, ಸ್ಟೇಡಿಯಂಗಳು ಖಾಲಿ ಹೊಡೆಯುತ್ತಿವೆ ಎಂಬುದನ್ನು ಬಾಕ್ಸಿಂಗ್‌ ಡೇ ಮುಖಾಮುಖೀಯ ಆರಂಭದ ದಿನದಾಟ ಸುಳ್ಳು ಮಾಡಿದೆ. ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವಿನ ಮೊದಲ ದಿನದಾಟವನ್ನು ವೀಕ್ಷಿಸಲು ಬರೋಬ್ಬರಿ 80,473 ವೀಕ್ಷಕರು ಆಗಮಿಸಿದ್ದರು. ಇದು ಆಸೀಸ್‌-ಕಿವೀಸ್‌ ಕ್ರಿಕೆಟ್‌ ಇತಿಹಾಸದಲ್ಲೇ, ದಿನವೊಂದರಲ್ಲಿ ಅತ್ಯಧಿಕ ವೀಕ್ಷಕರ ದಾಖಲೆಯಾಗಿದೆ. ಇದಕ್ಕಾಗಿ ಕ್ರಿಕೆಟ್‌ ಆಸ್ಟ್ರೇಲಿಯದ ಅಧ್ಯಕ್ಷ ಕೆವಿನ್‌ ರಾಬರ್ಟ್ಸ್ ಎರಡೂ ಕಡೆಯ ವೀಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

2013ರ ಆ್ಯಶಸ್‌ ಸರಣಿಯ ಬಾಕ್ಸಿಂಗ್‌ ಡೇ ಪಂದ್ಯದ ಮೊದಲ ದಿನದಾಟವನ್ನು 91,112 ಮಂದಿ ವೀಕ್ಷಿಸಿದ್ದು ಸಾರ್ವಕಾಲಿಕ ದಾಖಲೆ. ಹಾಗೆಯೇ 1975ರ ಆಸ್ಟ್ರೇಲಿಯ-ವೆಸ್ಟ್‌ ಇಂಡೀಸ್‌ ನಡುವಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟ 85,661 ಮಂದಿ ವೀಕ್ಷಕರಿಗೆ ಸಾಕ್ಷಿಯಾಗಿತ್ತು.

ಇದು 1987ರ ಬಳಿಕ ಆಸ್ಟ್ರೇಲಿಯದಲ್ಲಿ ನ್ಯೂಜಿಲ್ಯಾಂಡ್‌ ಆಡುತ್ತಿರುವ ಮೊದಲ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯವೆಂಬುದು ವಿಶೇಷ.

ಚಾಪೆಲ್‌ ದಾಖಲೆ ಮುರಿದ ಸ್ಮಿತ್‌
ಆಸ್ಟ್ರೇಲಿಯದ ಸ್ಟಾರ್‌ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ವೇಳೆ ನೂತನ ಮೈಲುಗಲ್ಲೊಂದನ್ನು ನೆಟ್ಟಿದ್ದಾರೆ. ಟೆಸ್ಟ್‌ ನಲ್ಲಿ ಅತ್ಯಧಿಕ ರನ್‌ ಗಳಿಸಿದ ಆಸ್ಟ್ರೇಲಿಯದ ಬ್ಯಾಟಿಂಗ್‌ ಸಾಧಕರ ಯಾದಿಯಲ್ಲಿ ಗ್ರೆಗ್‌ ಚಾಪೆಲ್‌ ಅವರನ್ನು ಹಿಂದಿಕ್ಕಿ 10ನೇ ಸ್ಥಾನ ಅಲಂಕರಿಸಿದ್ದಾರೆ.

ಗ್ರೆಗ್‌ ಚಾಪೆಲ್‌ 87 ಟೆಸ್ಟ್‌ಗಳಿಂದ 7,110 ರನ್‌ ಬಾರಿಸಿದ್ದರು. ಮೊದಲ ದಿನ ದಾಟದ ಅಂತ್ಯಕ್ಕೆ ಸ್ಮಿತ್‌ ಗಳಿಕೆ 7,149ಕ್ಕೆ ಏರಿದೆ. 13,378 ರನ್‌ ಬಾರಿಸಿರುವ ರಿಕಿ ಪಾಂಟಿಂಗ್‌ ಆಸ್ಟ್ರೇಲಿಯದ ಸರ್ವಾಧಿಕ ಸ್ಕೋರರ್‌ ಆಗಿದ್ದಾರೆ. ಸ್ಮಿತ್‌ ಮುಂದಿನ ಟಾರ್ಗೆಟ್‌ ಡೇವಿಡ್‌ ಬೂನ್‌ (7,422). ಬಳಿಕ ಅಲನ್‌ ಬೋರ್ಡರ್‌, ಸ್ಟೀವ್‌ ವೋ, ಮೈಕಲ್‌ ಕ್ಲಾರ್ಕ್‌ ಮೊದಲಾದವರ ಸವಾಲು ಕಾದಿದೆ.

Advertisement

Udayavani is now on Telegram. Click here to join our channel and stay updated with the latest news.

Next