Advertisement

ಸ್ಮಿತ್‌ ವಿರುದ್ಧ  ಕ್ರಮಕ್ಕೆ ಭಾರತ ಮನವಿ

11:55 AM Mar 09, 2017 | |

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯ ನಡುವೆ ಇಲ್ಲಿ ನಡೆದ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 75 ರನ್‌ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿದೆ. ಆದರೆ ಮಳೆ ನಿಂತರೂ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ಇತ್ತಂಡಗಳ ನಡುವೆ ವಾದ-ವಿವಾದ ಜೋರಾಗಿದ್ದು ಭಾರತ ತಂಡ ಆಸ್ಟ್ರೇಲಿಯದ ವಿರುದ್ಧ ರೆಫ‌ರಿಗೆ ದೂರು ನೀಡಿದೆ. ಆಸ್ಟ್ರೇಲಿಯದ 2ನೇ ಇನ್ನಿಂಗ್ಸ್‌ನ 22ನೇ ಓವರ್‌ನಲ್ಲಿ ನಾಯಕ ಸ್ಮಿತ್‌ ಡಿಆರ್‌ಎಸ್‌ಗೆ ಮನವಿ ಸಲ್ಲಿಸಲು ತಂಡದ ಡ್ರೆಸ್ಸಿಂಗ್‌ ರೂಂಗೆ ಸಂಕೇತ ರವಾನಿಸಿದ್ದೇ ಈ ಎಲ್ಲ ವಿವಾದಗಳಿಗೆ ಕಾರಣ. ಸ್ಮಿತ್‌ ಡ್ರೆಸ್ಸಿಂಗ್‌ ಕೊಠಡಿಗೆ ಮನವಿ ಸಲ್ಲಿಸಿ ಮೋಸದಾಟವಾಡಿದ್ದಾರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆನ್ನುವುದು ಭಾರತ ತಂಡದ ವಾದ.

Advertisement

ಆದರೆ ತನ್ನ ನಾಯಕನ ಪರವಾಗಿ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ಬಲವಾಗಿ ವಾದಿಸಿದೆ. ಸ್ಮಿತ್‌ ವಿರುದ್ಧ ಬರುತ್ತಿರುವ ಆರೋಪಗಳು ಅವಮಾನಕಾರಿ. ಸ್ಮಿತ್‌ ಆ ತರಹದ ವ್ಯಕ್ತಿತ್ವದವರೇ ಅಲ್ಲ ಎನ್ನುವುದು ಕ್ರಿಕೆಟ್‌ ಆಸ್ಟ್ರೇಲಿಯ ವಾದ. ಮತ್ತೂಂದು ಕಡೆ ಸ್ಮಿತ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು, ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ವಾದಿಸಿದ್ದಾರೆ. ಆಸ್ಟ್ರೇಲಿಯದ ಮತ್ತೂಬ್ಬ ಮಾಜಿ ನಾಯಕ ಮೈಕೆಲ್‌ ಕ್ಲಾರ್ಕ್‌ ಕೂಡ ಸ್ಮಿತ್‌ ಮಾಡಿದ್ದು ತಪ್ಪೆಂದು ಹೇಳಿದ್ದಾರೆ.

ಏನಿದು ವಿವಾದ?: ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಉಮೇಶ್‌ ಯಾದವ್‌ ಎಸೆತದಲ್ಲಿ ಎಲ್‌ಬಿಗೆ ಔಟ್‌ ಆದರು. ಅದನ್ನು ಡಿಆರ್‌ಎಸ್‌ ಮೂಲಕ ಪ್ರಶ್ನಿಸಲು ಸ್ಮಿತ್‌ ಮನಸ್ಸು ಮಾಡಿದರು. ಆಗ ಬೌಲಿಂಗ್‌ ತುದಿಯಲ್ಲಿದ್ದ ಬ್ಯಾಟ್ಸ್‌ಮನ್‌ ಪೀಟರ್‌ ಹ್ಯಾಂಡ್ಸ್‌
ಕಾಂಬ್‌ಗ ಸ್ಮಿತ್‌ ಅಭಿಪ್ರಾಯ ಕೇಳಿದರು. ಹ್ಯಾಂಡ್ಸ್‌ಕಾಂಬ್‌ ಅನುಮಾನ ವ್ಯಕ್ತಪಡಿಸಿದಾಗ ಸ್ಮಿತ್‌ ತಮ್ಮ ಡ್ರೆಸ್ಸಿಂಗ್‌ ಕೊಠಡಿಯತ್ತ ತಿರುಗಿ ಸಂಕೇತ ರವಾನಿಸಿದರು. ನಿಯಮಗಳ ಪ್ರಕಾರ ಡಿಆರ್‌ಎಸ್‌ ಮನವಿ ಸಲ್ಲಿಸುವ ವೇಳೆ ಮೈದಾನದಿಂದ ಹೊರಗಿನ ವ್ಯಕ್ತಿಯ ಅಭಿಪ್ರಾಯ ಪಡೆಯುವಂತಿಲ್ಲ. ಅದನ್ನು ಮೀರಿ ಸ್ಮಿತ್‌ ಸಹಾಯಕ ಸಿಬಂದಿ ಸಹಾಯ ಪಡೆಯಲು ಮುಂದಾಗಿದ್ದು ಕೊಹ್ಲಿಗೆ ಸಿಟ್ಟು ಬರಿಸಿತು, ಅವರು ಸ್ಮಿತ್‌ರನ್ನು ಕ್ರೀಸ್‌ ತೊರೆಯುವಂತೆ ಆಗ್ರಹಿಸಿದರು.

ಕೊಹ್ಲಿ ಹೇಳುವುದೇನು?: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಸ್ಟೀವ್‌ ಸ್ಮಿತ್‌ ವಿರುದ್ಧ ಜೋರಾಗಿ ತಿರುಗಿಬಿದ್ದಿದ್ದಾರೆ. ನಾನು ಬ್ಯಾಟಿಂಗ್‌ ಮಾಡುವಾಗ ಆಸ್ಟ್ರೇಲಿಯ ಆಟಗಾರರು 2 ಬಾರಿ ಡ್ರೆಸ್ಸಿಂಗ್‌ ಕೊಠಡಿ ಯತ್ತ ಕೈ ಮಾಡಿದ್ದರು. ಅದನ್ನು ಅಂಪಾಯರ್‌ ಗಮನಕ್ಕೆ ತಂದಿದ್ದೆ. ನಾನು ಯಾವತ್ತೂ ಹೀಗೆಲ್ಲ ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ.

ಸ್ಮಿತ್‌ರದ್ದಲ್ಲ ನಂದು ತಪ್ಪು: ಹ್ಯಾಂಡ್ಸ್‌ಕಾಂಬ್‌
ಮತ್ತೂಂದು ಕಡೆ ನಾಯಕ ಸ್ಮಿತ್‌ ಬೆಂಬಲಕ್ಕೆ ಧಾವಿಸಿರುವ ಬೌಲಿಂಗ್‌ ತುದಿಯಲ್ಲಿದ್ದ ಬ್ಯಾಟ್ಸ್‌ಮನ್‌ ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಪ್ರಕರಣದಲ್ಲಿ ಸ್ಮಿತ್‌ರದ್ದೇನೂ ತಪ್ಪಿಲ್ಲ. ಇದರಲ್ಲಿ ನನ್ನ ಪಾಲೇ ಜಾಸ್ತಿಯಿದೆ ಎಂದಿದ್ದಾರೆ. ಸ್ಮಿತ್‌ ನನಗೆ ಅಭಿಪ್ರಾಯ ಕೇಳಿದಾಗ ಡ್ರೆಸ್ಸಿಂಗ್‌ ಕೊಠಡಿಗೆ ಕೇಳುವಂತೆ ನಾನೇ ಹೇಳಿದೆ. ನನಗೆ ಡಿಆರ್‌ಎಸ್‌ ನಿಯಮಗಳು ಗೊತ್ತಿರಲಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಆದರೆ ಒಬ್ಬ ತಂಡದ ನಾಯಕನಿಗೆ ಈ ರೀತಿಯ ಪ್ರಜ್ಞೆ ಇರಬೇಕಾದದ್ದು ಸಹಜ. ಈ ರೀತಿ ಮಾಡಿರುವುದು ತಪ್ಪು ಎಂದು ಹಲವೆಡೆ ಟೀಕೆ ವ್ಯಕ್ತವಾಗಿದೆ.

Advertisement

ಕೊಹ್ಲಿ-ಹೀಲಿ ಜಟಾಪಟಿ: ಇದರ ನಡುವೆ ಆಸ್ಟ್ರೇಲಿಯದ ವಿಕೆಟ್‌ ಕೀಪರ್‌ ಇಯಾನ್‌ ಹೀಲಿ ಕೊಹ್ಲಿಯನ್ನು ತರಾಟೆಗೆತ್ತಿಕೊಂಡಿದ್ದಾರೆ. ಕೊಹ್ಲಿ ತಮ್ಮ ಆಕ್ರಮಣಕಾರಿ ನಡವಳಿಕೆಯಿಂದ ಸಹ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸುತ್ತಿದ್ದಾರೆ. ಬರೀ ಆಟಗಾರನಾಗಿದ್ದಾಗ ಕೊಹ್ಲಿಯ ನಡವಳಿಕೆಗಳು ಸರಿ, ಈಗ ಸರಿಯಲ್ಲ ಎಂದು ಹೀಲಿ ಹೇಳಿದ್ದಾರೆ. ಒಂದು ಕಾಲದಲ್ಲಿ ನಾನು ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌
ಮನ್‌ ಎಂದಿದ್ದೆ. ನನ್ನಲ್ಲಿ ಈಗ ಅದೇ ಅಭಿಪ್ರಾಯವಿಲ್ಲ. ಕೊಹ್ಲಿ ಎದುರಾಳಿ ಆಟಗಾರರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಅವರು ಸತತವಾಗಿ ಆಸ್ಟ್ರೇಲಿಯ ತಂಡಕ್ಕೆ ಅಗೌರವ ತೋರಿದ್ದಾರೆಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ, ನಾವು 120 ಕೋಟಿ ಜನರಿದ್ದೇವೆ. ಒಬ್ಬನ ಅಭಿಪ್ರಾಯದಿಂದ ಏನೂ ಬದ ಲಾವಣೆಯಾಗಲ್ಲ. ನೀವು ಬೇಕಾದರೆ ಯೂಟ್ಯೂಬ್‌ನಲ್ಲಿ ಸ್ಟೀವ್‌ ಸ್ಮಿತ್‌ ನಡವಳಿಕೆ ಪರೀಕ್ಷಿಸಿಕೊಳ್ಳಬಹುದು. ಈ ಹಿಂದೆ ಸೆಂಚುರಿಯನ್‌ನಲ್ಲಿ ಸ್ಮಿತ್‌ ಔಟಾದಾಗ ನನ್ನ ಬಗ್ಗೆ ಏನೇನೋ ಹೇಳಿದ್ದರು. ಆಗ ಅವರು ಅಂಪಾಯರ್‌ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಇದನ್ನು ಬೇಕಾದರೆ ನೀವೆಲ್ಲ ಯೂಟ್ಯೂಬ್‌ನಲ್ಲಿ ನೋಡಿ ಎಂದು ಕೊಹ್ಲಿ ಹೀಲಿಗೆ ಕುಟುಕಿದ್ದಾರೆ.

ಯಾವುದೇ ಕ್ರಮವಿಲ್ಲ: ಐಸಿಸಿ
ಡಿಆರ್‌ಎಸ್‌ ವಿವಾದದ ಕುರಿತು ವಿರಾಟ್‌ ಕೊಹ್ಲಿ ಮತ್ತು ಸ್ಟೀವನ್‌ ಸ್ಮಿತ್‌ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಸ್ಪಷ್ಟಪಡಿಸಿದೆ.

ಸ್ಮಿತ್‌ ನಡವಳಿಕೆ ಸರಿಯಲ್ಲ: ಆಸೀಸ್‌ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌
ಬಹುತೇಕ ಆಸ್ಟ್ರೇಲಿಯದ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಸ್ಟೀವ್‌ ಸ್ಮಿತ್‌ ಬೆಂಬಲಕ್ಕೆ ನಿಂತಿದ್ದರೆ ಮಾಜಿ ನಾಯಕ ಮೈಕೆಲ್‌ ಕ್ಲಾರ್ಕ್‌ ಮಾತ್ರ ಸ್ಮಿತ್‌ ನಡವಳಿಕೆ ತಪ್ಪು ಎಂದೇ ಹೇಳಿದ್ದಾರೆ. 

ಈ ರೀತಿಯಾಗಿ ಆಸ್ಟ್ರೇಲಿಯ ತಂಡ ಡಿಆರ್‌ಎಸ್‌ಗೆ ಮನವಿ ಸಲ್ಲಿಸುತ್ತದೆ ಎಂದಾದರೆ ಅದು ತಪ್ಪು. ಇದು ಕೇವಲ ಒಮ್ಮೆ ನಡೆದಿದ್ದರೆ ನಾನು ಇದನ್ನು ಮರೆತುಬಿಡುತ್ತಿದ್ದೆ. ಆದರೆ ಹ್ಯಾಂಡ್ಸ್‌ಕಾಂಬ್‌ ಸ್ವತಃ ಸ್ಮಿತ್‌ಗೆ ಸಹಾಯಕ ಸಿಬಂದಿಯೆಡೆಗೆ ನೋಡು ಎಂದು ಸೂಚಿಸಿದ್ದಾರೆ. ಇದು ತಪ್ಪು ಎಂದು ಕ್ಲಾರ್ಕ್‌ ಸ್ಪಷ್ಟವಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next