Advertisement

ನಗಿಸುತ್ತಲೇ ಕಾಡುವ ದೆವ್ವ!

09:56 AM Aug 18, 2019 | Lakshmi GovindaRaj |

ಅದು ಆದಿಕಾಳೇಶ್ವರಿ ಗಿರಿ. ಆ ಗಿರಿಯ ತುದಿಯಲ್ಲೊಂದು ಭವ್ಯವಾದ ಬಂಗಲೆ. ಆ ಬಂಗಲೆಯೊಳಗೆ ಬೇತಾಳಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಆತ್ಮವೊಂದು ಇದೆ. ಏನೂ ಅರಿಯದ ಒಂದಷ್ಟು ಮಂದಿ ಆ ಬಂಗಲೆಗೆ ಎಂಟ್ರಿಯಾಗುತ್ತಾರೆ… ಇಷ್ಟು ಹೇಳಿದ ಮೇಲೆ, ಇದೊಂದು ಪಕ್ಕಾ ಹಾರರ್‌ ಚಿತ್ರ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ . ಸಾಮಾನ್ಯವಾಗಿ ಹಾರರ್‌ ಸಿನಿಮಾ ಅಂದಾಕ್ಷಣ, ಒಂದು ಬಂಗಲೆ, ಅಲ್ಲಿಗೆ ನಾಲ್ಕೈದು ಮಂದಿ ಹೋದಾಗ, ಅಲ್ಲಿರುವ ದೆವ್ವ ಅವರನ್ನು ಹೇಗೆಲ್ಲಾ ಭಯಾನಕವಾಗಿ ಕಾಡಿ, ಬೆದರಿಸುತ್ತೆ ಎಂಬ ಫಾರ್ಮುಲಾ ಕಾಮನ್‌.

Advertisement

ಆದರೆ, ಈ ರೆಗ್ಯುಲರ್‌ ಫಾರ್ಮುಲಾದಿಂದ ಹೊರಬಂದಿರುವ ನಿರ್ದೇಶಕರು, ಕಥೆ ಮತ್ತು ಚಿತ್ರಕಥೆಯಲ್ಲೊಂದಷ್ಟು ತಿರುವುಗಳನ್ನಿಟ್ಟು, ಹೊಸದೊಂದು “ಗಿಮಿಕ್‌’ ಮಾಡಿದ್ದಾರೆ. ಆ ಗಿಮಿಕ್‌ ಏನೆಂಬ ಕುತೂಹಲವೇನಾದರೂ ಇದ್ದರೆ, ಸಿನಿಮಾ ನೋಡಬಹುದು. ಹಾರರ್‌ ಸಿನಿಮಾ ಅಂದರೆ, ಅಲ್ಲೊಂದು ಭೀಕರವಾಗಿರುವ ಹೆಣ್ಣು ದೆವ್ವ ಅತ್ತಿಂದಿತ್ತ ಓಡಾಡಿಕೊಂಡು, ಕಿಟಕಿ, ಬಾಗಿಲುಗಳನ್ನು ಜೋರಾಗಿ ಸದ್ದು ಮಾಡುತ್ತ, ವಿಚಿತ್ರವಾಗಿ ಅರಚುತ್ತ ಬೆಚ್ಚಿಬೀಳಿಸುವ ಕಡೆ ಗಮನ ಕೊಡುತ್ತೆ. ಆದರೆ, ಈ ಹಾರರ್‌ ಚಿತ್ರದಲ್ಲಿ ಭಯಗಿಂತ ನಗುವೇ ಹೆಚ್ಚಿದೆ.

ಇಲ್ಲಿ ನಗಿಸುವ ದೆವ್ವಗಳದ್ದೇ ಹೆಚ್ಚು ಓಡಾಟ. ಹಾಗಂತ, ಅದು ಕಾಮಿಡಿ ದೆವ್ವ ಅಂದುಕೊಳ್ಳುವಂತಿಲ್ಲ. ಆ ದೆವ್ವಕ್ಕೂ ಎಲ್ಲರನ್ನೂ ಬೆಚ್ಚಿಬೀಳಿಸುವ ಶಕ್ತಿ ಇದೆ, ಎಲ್ಲಾ ದೆವ್ವಗಳಿಗೆ ಇರುವ ಟ್ರಾಜಿಡಿ ಹಿನ್ನೆಲೆಯೂ ಇದೆ. ಎಲ್ಲಾ ಚಿತ್ರಗಳಲ್ಲಿರುವಂತೆ ಇಲ್ಲೂ ದೆವ್ವ, ದೇವರು, ಮಂತ್ರ ಶಕ್ತಿ, ಯುಕ್ತಿ ಎಲ್ಲವೂ ಇದೆ. ಆದರೆ, ಅವೆಲ್ಲಕ್ಕಿಂತಲೂ ಹೆಚ್ಚಾಗಿ ಒಂದಷ್ಟು “ಗಿಮಿಕ್‌’ಗಳಿವೆ. ಅವೇನು ಎಂಬುದೇ ಸಸ್ಪೆನ್ಸ್‌. ಹಾಗಂತ, ಇದು ಅಪ್ಪಟ ಕನ್ನಡದ ಚಿತ್ರವೇನಲ್ಲ. ತಮಿಳಿನ “ದಿಲ್ಲುಕು ದುಡ್ಡು’ ಚಿತ್ರವನ್ನು ಕನ್ನಡೀಕರಿಸಿ, ಒಂದಷ್ಟು “ಗಿಮಿಕ್‌’ ಮಾಡಿದ್ದಾರಷ್ಟೇ.

ಎಲ್ಲೂ “ತಮಿಳು ದೆವ್ವ’ದ ಛಾಯೆ ಇಲ್ಲದಂತೆ ಮಾಡಿರುವುದು ತಕ್ಕಮಟ್ಟಿಗಿನ ಸಮಾಧಾನದ ವಿಷಯ. ಅದೇನೆ ಇರಲಿ, ಇಂತಹ ಚಿತ್ರಗಳಿಗೆ ಮುಖ್ಯವಾಗಿ ಬೇಕಾಗಿರೋದು, ಕತ್ತಲು-ಬೆಳಕಿನಾಟ. ಛಾಯಾಗ್ರಹಣದ ಕೆಲಸ ಅದನ್ನಿಲ್ಲಿ ನೀಗಿಸಿದೆ. ಆದರೆ, ಅಷ್ಟೇ ಬೆಚ್ಚಿಬೀಳಿಸುವ ಕೆಲಸ ಹಿನ್ನೆಲೆ ಸಂಗೀತದ ಜವಾಬ್ದಾರಿ. ಆದಕ್ಕಿನ್ನೂ ಎಫ‌ರ್ಟ್‌ ಬೇಕಿತ್ತು. ಎಫೆಕ್ಟ್ಸ್ ಮತ್ತು ಗ್ರಾಫಿಕ್ಸ್‌ನತ್ತ ಇನ್ನಷ್ಟು ಗಮನಹರಿಸುವ ಅವಶ್ಯಕತೆಯೂ ಇತ್ತು. ಮೊದಲೇ ಹೇಳಿದಂತೆ, ಇಲ್ಲಿ ನಗಿಸುವ ದೆವ್ವಗಳಿರುವುದರಿಂದ ಒಂದಷ್ಟು ತಪ್ಪುಗಳನ್ನು ಬದಿಗಿಡಬಹುದು.

ಆರಂಭದ ಕೆಲ ದೃಶ್ಯಗಳನ್ನು ನೋಡಿದರೆ, ನಿರ್ದೇಶಕರು ತಮ್ಮ ಹಳೆಯ ಶೈಲಿಯಿಂದ ಆಚೆ ಬಂದಿಲ್ಲ ಎಂಬುದು ಸ್ಪಷ್ಟವಾಗುತ್ತೆ. ಚಿತ್ರದಲ್ಲಿ ನಾಯಕಿಗೆ ನಾಯಕನ ಮೇಲೆ ಲವ್‌ ಆಗೋಕೆ ಅವನು ನಾಯಕಿಯನ್ನು ರೌಡಿಗಳಿಂದ ಕಾಪಾಡುವ ದೃಶ್ಯ ಅದೆಷ್ಟೋ ಹಳೆಯ ಚಿತ್ರಗಳನ್ನು ನೆನಪಿಸುತ್ತೆ. ಅಷ್ಟೇ ಅಲ್ಲ, ಅಲ್ಲಿ ನಡೆಯೋ “ಫೈಟ್‌’ ಕೂಡ ಎಲ್ಲೋ ಕಾಟಚಾರಕ್ಕೆ ಮಾಡಿದಂತಿದೆ. ಸಿನಿಮಾದಲ್ಲಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇನ್ನು ಬೆರಳೆಣಿಕೆಯಷ್ಟು ಎಡವಟ್ಟುಗಳು ಸಿಗುತ್ತವೆ. ಆದರೆ, ಪ್ರಮುಖವಾಗಿ ಇಲ್ಲಿ ಮನರಂಜನೆಗೆ ಹೆಚ್ಚು ಒತ್ತು ಕೊಟ್ಟಿರುವುದು ಕೊಂಚ ನೋಡುವ ಸಮಾಧಾನ ತರುತ್ತದೆ.

Advertisement

ಇಲ್ಲಿ ಹೆಚ್ಚು ನಗುತರಿಸುವ ಅಂಶಗಳಿಗೆ ಕಾರಣ, ಅಲ್ಲಿ ಕಾಣುವ ಹೆಣ್ಣು ದೆವ್ವಗಳು. ಆ ದೆವ್ವಗಳ ಜೊತೆ ಸುತ್ತುವ ಪಾತ್ರಗಳು. ಇವೆಲ್ಲದರ ಜೊತೆಗೆ, ಸಂಭಾಷಣೆ ಕೂಡ ಆಗಾಗ ನೋಡುಗರಲ್ಲಿ ಕಚಗುಳಿ ಇಡುತ್ತದೆ. ಚಿತ್ರಕಥೆಗೆ ಇನ್ನಷ್ಟು ಒತ್ತು ಕೊಟ್ಟಿದ್ದರೆ, ಪರಿಣಾಮಕಾರಿಯಾಗಿರುತ್ತಿತ್ತು. ಆದರೂ, ತೆರೆಯ ಮೇಲೆ, ಒರಿಜಿನಲ್‌, ಡೂಪ್ಲಿಕೇಟ್‌ ದೆವ್ವಗಳ ಅರಚಾಟ, ಕಿರುಚಾಟ ಒಂದಷ್ಟು ಮಜಾ ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ. ಒಂದೇ ಬಂಗಲೆಯಲ್ಲಿ ಅಷ್ಟೊಂದು ಪಾತ್ರಗಳು, ತರಹೇವಾರಿ ದೆವ್ವಗಳನ್ನು ಹಿಡಿದುಕೊಂಡು, ಆ ಪಾತ್ರಗಳಿಗೂ, ಆಗಾಗ ಕಂಡು ಕಾಣದಂತಾಗುವ ದೆವ್ವಗಳಿಗೂ ಸೂಕ್ತ ಜಾಗ ಕಲ್ಪಿಸಿಕೊಟ್ಟಿರುವುದನ್ನು ಮೆಚ್ಚಬೇಕು.

ಹಾರರ್‌ ಚಿತ್ರದಲ್ಲೂ ಹೀಗೂ ಮನರಂಜನೆ ಪಡೆಯಬಹುದಾ ಅನ್ನುವುದನ್ನು ತಿಳಿಯಲು “ಗಿಮಿಕ್‌’ ನೋಡಲ್ಲಡ್ಡಿಯಿಲ್ಲ. ನಾಯಕ ಗಣಿ ಮಿಡ್ಲ್ಕ್ಲಾಸ್‌ ಹುಡುಗ. ಹುಡುಗಿಯೊಬ್ಬಳ ಪ್ರೀತಿಯ ಬಲೆಗೆ ಬಿದ್ದವನು. ಹುಡುಗಿ ತಂದೆ ಶ್ರೀಮಂತ. ತನ್ನ ಮಗಳನ್ನು ಶ್ರೀಮಂತನಿಗೆ ಮದ್ವೆ ಮಾಡಿಕೊಡಬೇಕು ಎಂಬ ಹಠ ಅವನದು. ಗಣಿಗೆ ಪ್ರೀತಿಸುವ ಹುಡುಗಿಯನ್ನು ಮದ್ವೆ ಆಗುವ ಹಠ. ಒಂದು ಹಂತದಲ್ಲಿ ಹುಡುಗಿ ತಂದೆ ಹೇಗಾದರೂ ಮಾಡಿ, ಗಣಿಯನ್ನು ಮುಗಿಸಬೇಕೆಂದು ತೀರ್ಮಾನಿಸುತ್ತಾನೆ. ಒಬ್ಬ ರೌಡಿಗೆ ಸುಫಾರಿ ಕೊಡುತ್ತಾನೆ. ಆ ರೌಡಿ, ಸುಲಭವಾಗಿ ಗಣಿಯನ್ನು ಮುಗಿಸಲು ಬಂಗಲೆಯೊಂದರಲ್ಲಿ ಸರಳವಾಗಿ ವಿವಾಹ ನಡೆಸಿಕೊಡುವ ಐಡಿಯಾ ಕೊಡುತ್ತಾನೆ.

ಅದಕ್ಕೆ ಒಪ್ಪುವ ಹುಡುಗಿ ತಂದೆ, ಆ ಬಂಗಲೆಗೆ ಗಣಿ ಫ್ಯಾಮಿಲಿಯೊಂದಿಗೆ ಎಂಟ್ರಿಯಾಗುತ್ತಾನೆ. ಆ ಬಂಗಲೆಯಲ್ಲಿ ದೆವ್ವಗಳಿವೆ ಎಂದು ಹೆದರಿಸುವ ನಾಟಕ ಶುರುವಾಗುತ್ತೆ. ಆದರೆ, ನಿಜವಾಗಿಯೂ ಅಲ್ಲಿ ಆತ್ಮಗಳು ಬೀಡುಬಿಟ್ಟಿರುತ್ತವೆ. ಒರಿಜಿನಲ್‌ ಮತ್ತು ಡ್ಯುಪ್ಲಿಕೇಟ್‌ ದೆವ್ವಗಳ ಆರ್ಭಟ ಶುರುವಾಗುತ್ತೆ. ಇದರ ನಡುವೆ ಏನೆಲ್ಲಾ ಆಗುತ್ತೆ ಅನ್ನೋದೇ ಕಥೆ. ಇದುವರೆಗೆ ಲವ್ವರ್‌ಬಾಯ್‌ ಪಾತ್ರದಲ್ಲಿ ಕಾಣುತ್ತಿದ್ದ ಗಣೇಶ್‌, ಇಲ್ಲಿ ಬೇರೆ ಗಣೇಶ್‌ ಕಾಣಸಿಗುತ್ತಾರೆ. ಲವಲವಿಕೆಯಿಂದ, ಸದಾ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ರವಿಶಂಕರ್‌ಗೌಡ ಕೂಡ ನಗಿಸುವಲ್ಲಿ ಹಿಂದೆ ಬಿದ್ದಿಲ್ಲ. ಸುಂದರ್‌ರಾಜ್‌, ಸಂಗೀತ, ಶೋಭರಾಜ್‌, ಗುರುದತ್‌ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಅಲ್ಲಲ್ಲಿ ಬರುವ ಪಾತ್ರಗಳಿಗೂ ಇಲ್ಲಿ ನಗಿಸಲು ಜಾಗವಿದೆ. ಅರ್ಜುನ್‌ ಜನ್ಯಾ ಸಂಗೀತದ ಹಾಡು ಗುನುಗುವಂತಿಲ್ಲ. ವಿಘ್ನೇಶ್‌ ಛಾಯಾಗ್ರಹಣದಲ್ಲಿ ಒಂದಷ್ಟು “ಗಿಮಿಕ್‌’ ಇದೆ.

ಚಿತ್ರ: ಗಿಮಿಕ್‌
ನಿರ್ಮಾಣ: ದೀಪಕ್‌ ಸಾಮಿ
ನಿರ್ದೇಶನ: ನಾಗಣ್ಣ
ತಾರಾಗಣ: ಗಣೇಶ್‌, ರೋನಿಕಾ ಸಿಂಗ್‌, ರವಿಶಂಕರ್‌ಗೌಡ, ಸುಂದರ್‌ರಾಜ್‌, ಸಂಗೀತಾ, ಗುರುದತ್‌, ಮಂಡ್ಯ ರಮೇಶ್‌, ಶೋಭರಾಜ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next