ಕಳೆದ ವಾರ ಬಿಡುಗಡೆಯಾದ “ಲಂಡನ್‌ನಲ್ಲಿ ಲಂಬೋದರ’ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ವಿದೇಶದಿಂದಲೂ ಚಿತ್ರಕ್ಕೆ ಇನ್ನಷ್ಟು ಬೇಡಿಕೆಯೂ ಹೆಚ್ಚಾಗಿದೆ. ಇದನ್ನು ಹೇಳಿಕೊಳ್ಳಲೆಂದೇ ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು. ಚಿತ್ರಕ್ಕೆ ಸಿಗುತ್ತಿರುವ ಮೆಚ್ಚುಗೆ ಕುರಿತು ನಿರ್ದೇಶಕ ರಾಜ್ ಸೂರ್ಯ ಹೇಳಿದ್ದಿಷ್ಟು.
“ಚಿತ್ರ ಬಿಡುಗಡೆಯಾದ ದಿನದಿಂದಲೂ ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಸಿಂಗಲ್ ಥಿಯೇಟರ್ ಸೇರಿದಂತೆ ಪಿವಿಆರ್ ಮತ್ತು ಮಲ್ಟಿಪ್ಲೆಕ್ಸ್‌ನಲ್ಲಿ ಶೇ.70 ರಷ್ಟು ಫಲಿತಾಂಶ ಸಿಗುತ್ತಿದೆ. ಇದಷ್ಟೇ ಅಲ್ಲ, ವಿದೇಶದಲ್ಲೂ ಈಗ “ಲಂಬೋದರ’ನ ಪಯಣ ಬೆಳೆಯುತ್ತಿದೆ.
ದುಬೈ, ಆಸ್ಟ್ರೇಲಿಯಾ, ಜರ್ಮನಿ, ಯುಕೆ ಇತರೆ ಕಡೆ ಚಿತ್ರ ಪ್ರದರ್ಶನ ಕಾಣುತ್ತಿದೆ. ಅಲ್ಲಿನ ಕನ್ನಡಿಗರು ಚಿತ್ರದ ಬಗ್ಗೆ ತಿಳಿದುಕೊಂಡು, ಇಲ್ಲೂ ಪ್ರದರ್ಶನ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ನಿರ್ಮಾಪಕರು ವಿದೇಶಿ ನೆಲದಲ್ಲೂ ಲಂಬೋದರನನ್ನು ಕರೆದೊಯ್ಯಲಿದ್ದಾರೆ’ ಎಂದರು ನಿರ್ದೇಶಕರು.
ಸುಮಾರು ಇಪ್ಪತ್ತಕ್ಕೂ ಹೆಚ್ಚು ಗೆಳೆಯರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದು, ಆ ಪೈಕಿ ನಿರ್ಮಾಪಕ ಡಾ.ಕುಮಾರ್ ಅವರು, ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಸಂತಸಗೊಂಡಿದ್ದಾರೆ. ಈ ಚಿತ್ರ ಮಾಡೋಕೆ ಕಾರಣ, ನಮ್ಮದೇ ಆದಂತಹ ಕಥೆ ಇಲ್ಲಿದೆ. ಇಲ್ಲಿಂದ ವಿದೇಶಕ್ಕೆ ಹೋಗಿ ಇತ್ತ ಬರಲಾರದೆ, ಅಲ್ಲೂ ಇರಲಾರದೆ ಸಂಕಟ ಅನುಭವಿಸುವುದು ಸಹಜ.
ಅಂತಹ ಕಥಾವಸ್ತು ಇಲ್ಲೂ ಇದೆ. ಹಾಗಾಗಿ ಇದು ಹೊರದೇಶದಲ್ಲಿರುವ ಮಂದಿಗೆ ತುಂಬಾ ಆಪ್ತವಾದ ಚಿತ್ರ ಎನಿಸಿದೆ. ಲಂಡನ್‌ನಲ್ಲಿ ಪೂರ್ವಭಾವಿ ಪ್ರದರ್ಶನ ಕಂಡಿದ್ದು, ಅಲ್ಲೂ ಭಾರೀ ಮೆಚ್ಚುಗೆ ಸಿಕ್ಕಿದೆ. ವಿಮರ್ಶೆಗಳನ್ನು ನೋಡಿಕೊಂಡು ಈಗ ಜನರು ಥಿಯೇಟರ್ ಕಡೆ ಬರುತ್ತಿದ್ದಾರೆ’ ಎಂದರು.
ಮತ್ತೂಬ್ಬ ನಿರ್ಮಾಪಕ ಗಿರೀಶ್, ಕನ್ನಡದ ಮೇಲಿರುವ ಅಭಿಮಾನ, ಪ್ರೀತಿಯಿಂದ ಈ ಚಿತ್ರ ಮಾಡಿದ್ದೇವೆ. ನಾವು ಏನು ಅಂದುಕೊಂಡಿದ್ದೆವೋ ಅದು ಈಡೇರಿದೆ. ಒಂದೊಳ್ಳೆಯ ಚಿತ್ರ ಕೊಟ್ಟು ತೃಪ್ತಿ ನಮಗಿದೆ ಎಂದರು ಅವರು.
ಚಿತ್ರಕ್ಕೆ ಸಂಗೀತ ನೀಡಿರುವ ಪ್ರಣವ್ ಅವರಿಗೆ ಚಿತ್ರಕ್ಕೆ ಸಿಗುತ್ತಿರುವ ಮೆಚ್ಚುಗೆ ಕಂಡು, ಒಳ್ಳೆಯ ಪ್ರಯತ್ನ ಸಾರ್ಥಕ ಎನಿಸಿದೆಯಂತೆ. ಎಲ್ಲರೂ ಇಲ್ಲಿ ಶ್ರಮವಹಿಸಿ, ಶ್ರದ್ಧೆಯಿಂದ ಕೆಲಸ ಮಾಡಿದ್ದರು. ಅದಕೆ ಈಗ ಪ್ರತಿಫಲ ಸಿಗುತ್ತಿದೆ. ಮಾಧ್ಯಮ ಕೊಟ್ಟ ಬೆಂಬಲ, ಪ್ರೋತ್ಸಾಹದಿಂದ ಚಿತ್ರ ಎಲ್ಲರಿಗೂ ತಲುಪುತ್ತಿದೆ ಎಂದರು ಅವರು.