ಕನ್ನಡ ಚಿತ್ರಗಳಿಗೆ ಇದೀಗ ಪರಭಾಷೆಯಿಂದಲೂ ಮೆಚ್ಚುಗೆ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ. “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರಕ್ಕೂ ಆ ಮೆಚ್ಚುಗೆ ಸಿಕ್ಕಿರುವುದರಿಂದ ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಇದೆ. ಅಷ್ಟಕ್ಕೂ “ಕರಿಯಪ್ಪ..’ ಬಾಲಿವುಡ್ ಮಂದಿ ಮೆಚ್ಚುವಂತಹ ಕೆಲಸ ಮಾಡಿದ್ದೇನು? ಎಂಬ ಪ್ರಶ್ನೆಗೆ ಉತ್ತರ ಟ್ರೇಲರ್. ಹೌದು. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದಲ್ಲದೆ, ಹೆಚ್ಚು ಕಮ್ಮಿ ಒಂದು ಮಿಲಿಯನ್‌ನಷ್ಟು ಮಂದಿ ವೀಕ್ಷಿಸಿದ್ದಾರೆ.
ಕನ್ನಡದ ಅನೇಕ ಸೆಲೆಬ್ರೆಟಿಗಳು ಟ್ರೇಲರ್ ವೀಕ್ಷಿಸಿ, ಚಿತ್ರತಂಡಕ್ಕೆ ಶುಭಕೋರಿದ್ದು ಒಂದು ಕಡೆಯಾದರೆ, ಅತ್ತ, ಬಾಲಿವುಡ್‌ಗೂ ಕರಿಯಪ್ಪನ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ಬಾಲಿವುಡ್‌ನ ವಿಮರ್ಶಕ ಅನೂಪ್ ಕುಮಾರ್ ಸಿನ್ಹಾ ಅವರು “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಟ್ರೇಲರ್ ನೋಡಿ ವಿಮರ್ಶೆ ಮಾಡಿದ್ದಾರೆ. ಅದೀಗ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಅವರು ಟ್ರೇಲರ್ ನೋಡಿ, “ನಾನು ನೋಡಿದ ಇತ್ತೀಚಿನ ಬೆಸ್ಟ್ ಟ್ರೇಲರ್‌ಗಳಲ್ಲಿ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಕೂಡ ಒಂದು.
ಈ ಸಿನಿಮಾವನ್ನು ಬಿಡುಗಡೆ ಮಾಡುವುದಾದರೆ, ಹಿಂದಿಯಲ್ಲೂ ಡಬ್ ಮಾಡಿ ಬಿಡುಗಡೆ ಮಾಡಿ’ ಎಂದಿದ್ದಾರೆ. ಅನೂಪ್ ಕುಮಾರ್ ಸಿನ್ಹಾ. ಚಿತ್ರತಂಡದ ಮತ್ತೂಂದು ಖುಷಿ ಅಂದರೆ, ಇದೇ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಅನ್ನು “ನಟಸಾರ್ವಭೌಮ’ ಚಿತ್ರದ ಜೊತೆಗೆ ಹರಿಬಿಡುವ ಯೋಚನೆ ಕೂಡ ನಿರ್ಮಾಪಕ ಮಂಜುನಾಥ್ ಅವರಲ್ಲಿದೆ. “ನಟಸಾರ್ವಭೌಮ’ನ ಜೊತೆಗೆ “ಕರಿಯಪ್ಪ’ನ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ ಹೇಳಿಕೊಳ್ಳುವ ಪ್ರಯತ್ನ ಅವರದು.
ಆನಂದ್ ಆಡಿಯೋ ಸಂಸ್ಥೆ ಮೂಲಕ ಬಿಡುಗಡೆಯಾಗಿರುವ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೊಂದು ಕಾಮಿಡಿ ಜೊತೆಗೆ ಕುಟುಂಬದ ಅಂಶಗಳನ್ನು ಹೊಂದಿದೆ. ನಿರ್ದೇಶಕ ಕುಮಾರ್ ಅವರಿಗೆ ಸಿನಿಮಾ ಮೇಲೆ ನಂಬಿಕೆ ಹೆಚ್ಚಾಗಿದೆ. ಅದಕ್ಕೆ ಕಾರಣ, ಸಿನಿಮಾ ಮೂಡಿಬಂದಿರುವ ರೀತಿ. ಚಿತ್ರದಲ್ಲಿ ತಬಲನಾಣಿ ಅವರ ಪಾತ್ರ ಹೈಲೈಟ್. ಅವರಿಲ್ಲಿ ನೋಡುಗರಲ್ಲಿ ನಗೆಗಡಲಲ್ಲಿ ತೇಲಿಸುವುದು ಗ್ಯಾರಂಟಿ ಎಂಬುದು ನಿರ್ದೇಶಕರ ಮಾತು. ಅಂದಹಾಗೆ, ಚಿತ್ರದಲ್ಲಿ ತಂದೆ ಮತ್ತು ಮಗನ ವಿಷಯವಿದೆ.
ಮಕ್ಕಳ ಭವಿಷ್ಯ ರೂಪಿಸಲು ಪೋಷಕರು ಹೇಗೆಲ್ಲಾ ಸಹಕಾರಿಯಾಗುತ್ತಾರೆ ಎಂಬುದು ಚಿತ್ರದ ಪ್ರಮುಖ ಅಂಶ. ಸಿನಿಮಾದಲ್ಲಿ ಅಕ್ಕಪಕ್ಕದ ಮನೆಯಲ್ಲಿ ನಡೆಯುವಂತಹ ವಿಷಯಗಳೇ ತುಂಬಿವೆ. ಹಾಗಾಗಿ, ಇದೊಂದು ನೈಜ ಅನುಭವ ಕೊಡುವಂತಹ ಚಿತ್ರ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ಅಪೂರ್ವ, ಚಂದನ್, ಸಂಜನಾ, ಸುಚೇಂದ್ರ ಪ್ರಸಾದ್, ಡಾ.ಮಂಜುನಾಥ್ ಡಿ.ಎಸ್, ಮೈಕೋ ನಾಗರಾಜ್, ರಾಕ್‌ಲೈನ್ ಸುಧಾಕರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆರವ್ ರಿಶಿಕ್ ಸಂಗೀತವಿದೆ. ಸುಜಯ್ ಕುಮಾರ್ ಹಿನ್ನೆಲೆ ಸಂಗೀತ ನೀಡಿದರೆ, ಶಿವಸೀನ ಕ್ಯಾಮೆರಾ ಹಿಡಿದಿದ್ದಾರೆ.