Advertisement
ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಮನೆಯಿಂದ ಕಸವನ್ನು ಸಣ್ಣ ಟೆಂಪೋದಲ್ಲಿ ಸಂಗ್ರಹಿಸಿ ಅದನ್ನು ಮಿನಿ ಲಾರಿಗೆ ತುಂಬಿಸಿ ಎರಡು ಅಥವಾ ಮೂರು ದಿನಕ್ಕೊಮ್ಮೆ ಸೂಕ್ತವಾಗಿ ವಿಲೇವಾರಿ ಮಾಡುವ ಕ್ರಮವನ್ನು ಅನು ಸರಿಸಲಾಗುತ್ತದೆ. ಆದರೆ ಈ ಮಿನಿ ಲಾರಿಯನ್ನು ಜನ ವಸತಿ ಪ್ರದೇಶದಲ್ಲಿ ತಂದು ಖಾಯಂ ಆಗಿ ರಾತ್ರಿ ಹಗಲು ನಿಲ್ಲಿಸುವುದರಿಂದ, ಆ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತದೆ. ಅಲ್ಲದೇ ಬೀದಿ ನಾಯಿಗಳು ತ್ಯಾಜ್ಯ ಪ್ರದೇಶದಲ್ಲಿ ಸುತ್ತಾಡುವುದರಿಂದ ಪ್ರದೇಶವೆಲ್ಲಾ ತ್ಯಾಜ್ಯಮಯವಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಈ ಮಿನಿ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿಯ ಖಾಸಗಿ ನರ್ಸರಿ ಬಳಿ ನಿಲ್ಲಿಸಲಾಗುತ್ತಿತ್ತು. ಅಲ್ಲಿಯೂ ಬೃಹತ್ ಜನವಸತಿ ಸಂಕೀರ್ಣ ಇರುವುದರಿಂದ ನಿಲ್ಲಿಸಿದ್ದ ಲಾರಿಯ ತ್ಯಾಜ್ಯವನ್ನು ಹಕ್ಕಿಗಳು ಸುತ್ತಮುತ್ತ ಪ್ರದೇಶಕ್ಕೆ ಕೊಂಡೊಯ್ದು ಕೆಟ್ಟ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ ಅಲ್ಲಿಂದ ಹೆದ್ದಾರಿಯಲ್ಲಿನ ಪೆಟ್ರೋಲ್ ಪಂಪ್‌ನ ಮುಂಭಾಗದ ಗುಡ್ಡೆ ಪ್ರದೇಶದಲ್ಲಿ ನಿಲ್ಲಿಸಲಾಗಿತ್ತು. ಇಲ್ಲಿ ನಿಲ್ಲಿಸಿದ್ದ ಮಿನಿ ಲಾರಿಯ ಟಯರ್ ಹಾಗೂ ಬ್ಯಾಟರಿಯನ್ನು ಕಿಡಿಗೇಡಿಗಳು ಅಪಹರಿಸಿ ಲಾರಿ ಮಾಲಕರಿಗೆ ನಷ್ಟವುಂಟು ಮಾಡಿದ್ದರು. ಅನಂತರ ಇಂದಿರಾನಗರದ ಲೈಟ್ ಹೌಸ್‌ನ ರೈಲ್ವೇ ಗೇಟ್ ಬಳಿಯ ಪ್ರದೇಶದಲ್ಲಿ ನಿಲ್ಲಿಸಲಾಗಿದೆ ಈಗ ಇಲ್ಲಿಂದಲೂ ಸಹ ಬಲವಾದ ಆಕ್ಷೇಪ ಕೇಳಿ ಬಂದಿದೆ. ಗ್ರಾಮ ಪಂಚಾಯತ್ ಗೆ ಸೂಕ್ತವಾದ ತ್ಯಾಜ್ಯ ವಿಲೇವಾರಿಯ ಜಮೀನು ಮಂಜೂರಾತಿಯಾಗದೇ ಇರುವುದರಿಂದ ಈ ಸಮಸ್ಯೆ ಕಾಡುತ್ತಲೇ ಇದೆ.
Related Articles
ಮಿನಿ ಲಾರಿಯನ್ನು ಈಗಾಗಲೇ ಆಕ್ಷೇಪ ಬಂದ ಪ್ರದೇಶದಿಂದ ಮೂರು ಕಡೆಗಳಿಂದ ಶಿಫ್ಟ್ ಮಾಡಲಾಗಿದೆ. ತ್ಯಾಜ್ಯದ ಮೇಲೆ ಸೂಕ್ತವಾದ ಪ್ಲಾಸ್ಟಿಕ್ ಹೊದಿಕೆ ಹಾಕಲು ಸೂಚಿಸಲಾಗಿದೆ. ತ್ಯಾಜ್ಯವನ್ನು ಕೆಳಗೆ ಸುರಿಯದಿರಲು ನಿರ್ದೇಶಿಸಲಾಗಿದೆ. ಸೂಕ್ತವಾದ ತ್ಯಾಜ್ಯ ವಿಲೇವಾರಿಗೆ ಜಮೀನು ಇಲ್ಲದಿರುವುದರಿಂದ ಜನರು ಸಹಕಾರ ನೀಡಬೇಕು. ತ್ಯಾಜ್ಯವನ್ನು ದುರ್ವಾಸನೆಯಿಂದ ಮುಕ್ತವಾಗಿಡಲು ಪ್ರಯತ್ನ ನಡೆಸಿದ್ದೇವೆ.
– ಕೇಶವ ದೇವಾಡಿಗ
ಪ್ರಭಾರ ಪಿಡಿಒ ಹಳೆಯಂಗಡಿ ಗ್ರಾ.ಪಂ.
Advertisement
ಮಕ್ಕಳನ್ನು ಹೊರಗೆ ಕಳುಹಿಸಲು ಹೆದರಿಕೆಸುತ್ತಮುತ್ತ ಮನೆಗಳಿರುವ ಪ್ರದೇಶದಲ್ಲಿ ತ್ಯಾಜ್ಯ ತುಂಬಿದ ಲಾರಿಯನ್ನು ಇಡುವುದರಿಂದ ಹಾಗೂ ಸಣ್ಣ ಟೆಂಪೋದಿಂದ ಮಿನಿ ಲಾರಿಗೆ ತುಂಬಿಸುವಾಗ ಸುತ್ತಮುತ್ತ ಪ್ರದೇಶದಲ್ಲಿ ತ್ಯಾಜ್ಯ ಸುರಿಯುವುದರಿಂದ ಬೀದಿ ನಾಯಿಗಳ ಕಚ್ಚಾಟದ ತಾಣವಾಗಿದೆ. ಕೆಟ್ಟ ವಾಸನೆಯೊಂದಿಗೆ ಪ್ರದೇಶವೆಲ್ಲ ದುರ್ವಾಸನೆ ಮೂಡಿದೆ. ನಾಯಿಗಳ ಕಾಟದಿಂದ ಮಕ್ಕಳನ್ನು ಹೊರಗೆ ಕಳುಹಿಸಲು ಹೆದರಿಕೆಯಾಗುತ್ತಿದೆ.
- ಮನೋಜ್‌ಕುಮಾರ್
ಇಂದಿರಾನಗರ ನರೇಂದ್ರ ಕೆರೆಕಾಡು