Advertisement

‘ಸ್ಮಾರ್ಟ್‌ಸಿಟಿ; ನಗರ ಹಸುರೀಕರಣಕ್ಕೆ ಯೋಜನೆ

12:29 AM Sep 05, 2019 | mahesh |

ಮಹಾನಗರ: ನಗರದಲ್ಲಿ ವೃಕ್ಷದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಮಂಗಳೂರು ಹಸುರೀಕರಣ ಯೋಜನೆಗೆ ಉದ್ದೇಶಿಸಲಾಗಿದೆ.

Advertisement

ಅ. 2ರಂದು ಮಂಗಳೂರು ಸ್ಮಾರ್ಟ್‌ಸಿಟಿ ನೇತೃತ್ವದಲ್ಲಿ ಸ್ಥಳೀಯ ನಾಗರಿಕರಿಗೆ ಗರಿಷ್ಠ ಮಟ್ಟದ ಉತ್ತಮ ಪ್ರಯೋಜನ ಪಡೆಯುವ ಮೌಲ್ಯಯುತ ಕಾರ್ಯಕ್ರಮ ‘ಒನ್‌ ಸ್ಮಾರ್ಟ್‌ ಸಿಟಿ ಒನ್‌ ಇಂಪ್ಯಾಕ್ಟ್’ ಕಾರ್ಯಕ್ರಮ ಆಯೋಜನೆ ಹಿನ್ನೆಲೆಯಲ್ಲಿ ಪಾಲಿಕೆಯ ಸಭಾಂಗಣದಲ್ಲಿ ಪ್ರಮುಖರ ಜತೆಗೆ ಬುಧವಾರ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಮಂಗಳೂರು ಬಿಷಪ್‌ ಡಾ| ಪೀಟರ್‌ ಪೌಲ್ ಸಾಲ್ಡಾನ್ಹಾ ಮಾತನಾಡಿ, ನಗರದ ಠಾಗೋರ್‌ ಪಾರ್ಕ್‌ನಂತಹ ಹಸುರು ಪ್ರದೇಶಗಳು ಇಂದು ಬರಡಾಗಿವೆ. ಸ್ಮಾರ್ಟ್‌ ಸಿಟಿ ಜನರನ್ನೂ ಪ್ರೀತಿಸುವಂತಾಗುವುದಕ್ಕೆ ಮರಗಳ ಸಂಖ್ಯೆ ಹೆಚ್ಚಳವಾಗಬೇಕು. ಜಲ ಉಳಿತಾಯ, ಮಳೆನೀರಿಂಗಿಸುವ ವ್ಯವಸ್ಥೆ, ಮಳೆಯ ಜತೆಯಲ್ಲಿ ಮಣ್ಣು ಉಳಿಸುವಂತಹ ಕ್ರಮಗಳನ್ನೂ ಕೈಗೊಳ್ಳುವುದು ಅಗತ್ಯ ಎಂದರು.

ಅಧಿಕಾರಿಗಳ ಬದ್ಧತೆ ಅಗತ್ಯ

ರಾಮಕೃಷ್ಣ ಮಿಷನ್‌ನ ಸ್ವಾಮಿ ಏಕಗಮ್ಯಾನಂದಜಿ ಮಾತನಾಡಿ, ಸ್ಮಾರ್ಟ್‌ ಸಿಟಿ ಅನುಷ್ಠಾನದ ನೆಲೆಯಲ್ಲಿ ಎಲ್ಲ ಅಧಿಕಾರಿಗಳೂ ಹೆಚ್ಚಿನ ಬದ್ಧತೆ ತೋರಿಸಬೇಕು. ಸರ್ವರ ಸಲಹೆಗಳನ್ನು ಕ್ರೋಡೀಕರಿಸಿಕೊಂಡು ಸುವ್ಯವಸ್ಥಿತ ಯೋಜನೆ ರೂಪಿಸಿದರೆ ಸುಂದರ ನಗರ ರೂಪುಗೊಳ್ಳಲು ಸಾಧ್ಯ ಎಂದರು.

Advertisement

ಕ್ರೆಡೈ ಅಧ್ಯಕ್ಷ ಡಿ.ಬಿ. ಮೆಹ್ತ ಮಾತನಾಡಿ, ಹಸುರೀಕರಣಕ್ಕೆ ಪೂರಕವಾಗಿ ಹಸುರು ಕಟ್ಟಡ ನಿರ್ಮಾಣವಾಗಬೇಕು. ಇದಕ್ಕೆ ಬೇಕಾದ ನೀತಿಯನ್ನು ರಾಜ್ಯದಲ್ಲಿ ರೂಪಿಸಬೇಕು. ಸರಕಾರಿ ಭೂಮಿಯಲ್ಲಿ ಖಾಲಿ ಸ್ಥಳಗಳಲ್ಲಿ ಗಿಡ ನೆಡಬಹುದು ಎಂದರು.

ಸಮತೋಲನ ಕಾಪಾಡಲು ಯೋಜನೆ

ಮನಪಾ ಆಯುಕ್ತ ಮಹಮ್ಮದ್‌ ನಝೕರ್‌ ಮಾತನಾಡಿ, 2011ರಿಂದ ಇತ್ತೀಚೆಗಿನವರೆಗಿನ ನಗರದ ಬೆಳವಣಿಗೆ ನೋಡಿದರೆ ಹಲವು ಮರಗಳು ನಾಶವಾಗಿವೆ. ಬೇರೆ ಬೇರೆ ಉದ್ದೇಶಗಳಿಗಾಗಿ ಪಾರ್ಕ್‌ ಮತ್ತು ತೆರೆದ ಪ್ರದೇಶಗಳನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲಾಗಿದೆ. ನಗರದ ಸಮತೋಲನ ಕಾಪಾಡಲು ಹಸುರೀಕರಣ ಯೋಜನೆ ರೂಪಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next