ಮಹಾನಗರ: ಸ್ಮಾರ್ಟ್‌ಸಿಟಿಯಾಗಿ ಮಂಗಳೂರು ನಗರ ಅಭಿವೃದ್ಧಿಯತ್ತ ಸಾಗುತ್ತಿದ್ದರೂ ಅದಕ್ಕೆ ಕಪ್ಪುಚುಕ್ಕೆಯಂತೆ ವಿವಿಧ ಕಡೆಗಳಲ್ಲಿ ಫುಟ್‌ಪಾತ್‌ಗಳು ಅವ್ಯವಸ್ಥೆಯಿಂದ ಕೂಡಿದೆ. ಹಲವು ಕಡೆ ಫುಟ್‌ಪಾತ್ ಸಹಿತ ರಸ್ತೆ ಬದಿಯಲ್ಲಿ ಮಣ್ಣು, ಜಲ್ಲಿ, ಕಲ್ಲುಗಳನ್ನು ರಾಶಿ ಹಾಕಲಾಗಿದ್ದು, ಪಾದಚಾರಿಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಎದುರಾಗಿದೆ.
ಸ್ಮಾರ್ಟ್‌ಸಿಟಿ ಅಂದರೆ, ನಗರ “ಸ್ಮಾರ್ಟ್’ ಆಗುವ ಜತೆಗೆ ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು. ಸದ್ಯ ಹಲವು ಕಡೆಗಳಲ್ಲಿ ಪಾದಚಾರಿಗಳು ರಸ್ತೆ ಬದಿ ನಡೆಯಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಈ ಕುರಿತಂತೆ “ಉದಯವಾಣಿ ಸುದಿನ’ ನಗರದ ವಿವಿಧ ಕಡೆಗಳ ವಾಸ್ತವ ಚಿತ್ರಣವನ್ನು ಓದುಗರ ಮುಂದಿಡುತ್ತಿದೆ.
ಸದಾ ವಾಹನ ಜಂಜಾಟದಿಂದ ಕೂಡಿರುವ ಕೆ.ಎಸ್. ರಾವ್ ರಸ್ತೆಯ ಒಂದು ಭಾಗದಲ್ಲಿ ಅಗೆಯಲಾಗಿದೆ. ಅಲ್ಲಿನ ಮಣ್ಣು ಸಹಿತ ದೊಡ್ಡ ಕಲ್ಲು, ಸ್ಲ್ಯಾಬ್ ಅನ್ನು ಫುಟ್‌ಪಾತ್, ರಸ್ತೆಯಲ್ಲೇ ರಾಶಿ ಹಾಕಲಾಗಿದೆ. ಇದರಿಂದಾಗಿ ಪಾದಚಾರಿಗಳು ನಡೆಯುವುದು ಹೇಗೆ? ಎನ್ನುತ್ತಿದ್ದಾರೆ. ನಗರದ ಎ.ಬಿ. ಶೆಟ್ಟಿ ವೃತ್ತ ಬಳಿ ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಉಳಿದಂತಹ ಸಿಮೆಂಟ್, ಜಲ್ಲಿ ರಾಶಿ, ಪೈಪ್‌ಗ್ಳು, ಮಣ್ಣು ಸಹಿತ ಕಸ-ಕಡ್ಡಿಗಳು ಫುಟ್‌ಪಾತ್‌ನಲ್ಲೇ ಬಿದ್ದಿದೆ. ಇಲ್ಲೇ ರಸ್ತೆ ಪಕ್ಕ ಡಾಮರು ಡಬ್ಬ, ಕಬ್ಬಿಣದ ಸರಳುಗಳನ್ನು ಇಡಲಾಗಿದೆ.
ಸುಗಮ ಸಂಚಾರದ ದೃಷ್ಟಿಯಲ್ಲಿ ಇತ್ತೀಚೆಗೆ ರಾವ್ ಆ್ಯಂಡ್ ರಾವ್ ವೃತ್ತ ಕೆಡಹಲಾಗಿತ್ತು. ಆದರೂ ಇಲ್ಲಿ ಸದ್ಯ ನಡೆಯುವುದು ಕಷ್ಟ. ಇಲ್ಲಿನ ರಿಕ್ಷಾ ನಿಲ್ದಾಣ ಬಳಿ ಫುಟ್‌ಪಾತ್‌ಗೆ ಅಳವಡಿಸಿದ್ದ ಇಂಟರ್‌ಲಾಕ್ ಎದ್ದು ಹಲವು ತಿಂಗಳುಗಳು ಕಳೆದರೂ ಸಂಬಂಧಪಟ್ಟ ಇಲಾಖೆ ಸರಿಪಡಿಸಿಲ್ಲ. ಇದೇ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಪೈಪ್‌ಲೈನ್ ರಾಶಿ ಹಾಕಲಾಗಿದೆ. ಬಾವುಟ ಗುಡ್ಡೆಯ ಸಂತ ಅಲೋಶಿಯಸ್ ಕಾಲೇಜು ಬಳಿಯೂ ಇದೇ ಪರಿಸ್ಥಿತಿ. ಫುಟ್‌ಪಾತ್ ಸಮೀಪವೇ ಅಗೆಯಲಾಗಿದ್ದು, ಅಲ್ಲೇ ಮಣ್ಣು ರಾಶಿಹಾಕಲಾಗಿದೆ. ಸ್ಥಳದಲ್ಲಿ ಯಾವುದೇ ಬ್ಯಾರಿಕೇಡ್ ಅಳವಡಿಸಲಿಲ್ಲ. ಬಹುತೇಕ ಕಡೆಗಳಲ್ಲಿ ಅರ್ಧಂಬರ್ಧ ಕಾಮಗಾರಿ ನಡೆದಿದೆ.
ಸಚಿವರು ಸೂಚಿಸಿದ್ದರು :
“ನಗರದ ಅಲ್ಲಲ್ಲಿ ರಸ್ತೆಗಳನ್ನು ಅಗೆದಿರುವುದನ್ನು ನೋಡಿದಾಗ ಹೊಟ್ಟೆ ಉರಿಯುತ್ತೆ. ಅಲ್ಲಲ್ಲಿ ರಸ್ತೆಯುದ್ದಕ್ಕೂ ಕಟ್ಟಡ ತ್ಯಾಜ್ಯ, ಸ್ವತ್ಛತೆ ಇಲ್ಲದ್ದನ್ನು ನೋಡುವಾಗ ಅಧಿಕಾರಿಗಳು ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡುತ್ತಿದೆ. ಅಗೆದಿರುವ ರಸ್ತೆಗಳನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ಮುಚ್ಚಿಸುವ, ರಸ್ತೆ ಬದಿಗಳಲ್ಲೇ ಸುರಿದಿರುವ ಕಟ್ಟಡ ತ್ಯಾಜ್ಯವನ್ನು ಪ್ರತೀ ವಾರ ಸ್ಥಳ ಭೇಟಿ ಅಭಿಯಾನ ರೀತಿಯಲ್ಲಿ ಪರಿಶೀಲನೆ ಮಾಡಿ ತೆರವುಗೊಳಿಸಬೇಕು. ಮುಂದಿನ ತಿಂಗಳು ಮತ್ತೆ ಮಂಗಳೂರಿಗೆ ಬಂದು ಪರಿಶೀಲನೆ ಮಾಡಲಿದ್ದೇನೆ. ಸರಿಯಾಗದಿದ್ದರೆ ಅದೇ ಸಂದರ್ಭ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಕೆಲವು ದಿನಗಳ ಹಿಂದೆ ನಗರಕ್ಕೆ ಆಗಮಿಸಿದಾಗ ಅಧಿಕಾರಿಗಳಿಗೆ ಸೂಚಿಸಿದ್ದರು. ಅವರು ಬಂದು ಹೋಗಿ ಎರಡು ವಾರ ಕಳೆದರೂ ನಗರ ಹಲವು ಕಡೆಗಳ ಚಿತ್ರಣ ಬದಲಾಗಿಲ್ಲ.
ಮಣ್ಣು ಹದ ಮಾಡುವವರು ಯಾರು? :
ಪೈಪ್‌ಲೈನ್ ಉದ್ದೇಶಕ್ಕೆ ನಗರದ ವಿವಿಧ ಕಡೆಗಳಲ್ಲಿ ರಸ್ತೆ ಬದಿ ಅಗೆಯಲಾಗಿದೆ. ಕೊಟ್ಟಾರ, ಕಲಾºವಿ, ಸಾಗರ್‌ಕೋರ್ಟ್ ಸಹಿತ ಹಲವು ಕಡೆ ಒಳ ರಸ್ತೆ ಅಗೆಯಲಾಗಿದೆ. ಅರೆಬರೆ ಪೈಪ್‌ಲೈನ್ ಕಾಮಗಾರಿ ನಡೆದಿದ್ದು, ಅಗೆದ ಮಣ್ಣು ಮುಚ್ಚಲಾಗಿದೆಯೇ ವಿನಾ ಹದಗೊಳಿಸಲಿಲ್ಲ. ಇದರಿಂದಾಗಿ ಮನೆಗಳಿಗೆ ವಾಹನ ತರಲು ಜನರು ಸಂಕಷ್ಟಪಡುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಪೈಪ್ ರಾಶಿ ಹಾಕಿ ವರ್ಷ ಕಳೆಯಿತು ! :
ಮನೆ ಮನೆಗೆ ಗ್ಯಾಸ್ ಸಂಪರ್ಕ ಕಾಮಗಾರಿ ಉದ್ದೇಶಕ್ಕೆ ಗೈಲ್ ಸಂಸ್ಥೆಯು ಎಂ.ಜಿ. ರಸ್ತೆ, ಬಲ್ಲಾಳ್‌ಬಾಗ್ ಸಹಿತ ವಿವಿಧ ಕಡೆಗಳಲ್ಲಿ ಫುಟ್‌ಪಾತ್‌ನಲ್ಲೇ ಪೈಪ್‌ಲೈನ್ ರಾಶಿ ಹಾಕಿದೆ. ಈ ರೀತಿ ರಾಶಿ ಹಾಕಿ ಒಂದು ವರ್ಷ ಸಮೀಪಿಸಿದರೂ ತೆರವಿಗೆ ಸಂಬಂಧಪಟ್ಟ ಇಲಾಖೆ ಮುಂದಾಗಿಲ್ಲ. ಸದ್ಯ ಪೈಪ್‌ಗ್ಳು ತುಕ್ಕು ಹಿಡಿದಿದ್ದು, ಸುತ್ತಲೂ ಗಿಡ-ಗಂಟಿ ಬೆಳೆದಿದೆ. ಎ.ಬಿ. ಶೆಟ್ಟಿ ವೃತ್ತ, ಬಿಜೈ ಬಳಿಯ ಫುಟ್‌ಪಾತ್‌ಗಳಲ್ಲಿ ಸೂಚನ ಫಲಕವನ್ನು ಇಡಲಾಗಿದೆ.
ಒಂದೆಡೆ ಬ್ಯಾರಿಕೇಡ್; ಮತ್ತೂಂದೆಡೆ ಮರದ ಗೆಲ್ಲು :
ಹಂಪನಕಟ್ಟೆ ಬಳಿಯ ಮಿನಿ ವಿಧಾನಸೌಧ ಎದುರು ಪುರಭವನ ಬಳಿಯ ಫುಟ್‌ಪಾತ್‌ನಲ್ಲಿ ಬ್ಯಾರಿಕೇಡ್‌ಗಳನ್ನು ರಾಶಿ ಇಡಲಾಗಿದೆ. ಇದರಿಂದಾಗಿ ಜನರು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲಿ ನಡೆಯಬೇಕಾಗಿದೆ. ಬಂಟ್ಸ್‌ಹಾಸ್ಟೆಲ್ ಬಳಿಯ ರಾಧಾ ಮೆಡಿಕಲ್ ಮುಂಭಾಗದ ಫುಟ್‌ಪಾತ್ ಅವ್ಯವಸ್ಥೆಯಿಂದ ಕೂಡಿದೆ. ಇಲ್ಲಿ ಫುಟ್‌ಪಾತ್ ತೆರೆದ ಸ್ಥಿತಿಯಲ್ಲಿದ್ದು, ಮರದ ಗೆಲ್ಲು ರಾಶಿ ಹಾಕಲಾಗಿದೆ. ಸುತ್ತಮುತ್ತ ಹುಲ್ಲು ಬೆಳೆದಿದ್ದು, ಇಲ್ಲಿ ನಡೆದುಕೊಂಡು ಹೋದರೆ ಫುಟ್‌ಪಾತ್ ಗುಂಡಿಗೆ ಬೀಳುವುದು ಖಚಿತ. ಅದಕ್ಕೂ ಮುನ್ನ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ :
ಪಾಲಿಕೆ ವ್ಯಾಪ್ತಿಯ ಹಲವು ಕಡೆಗಳಲ್ಲಿ ಪೈಪ್‌ಲೈನ್ ಕಾಮಗಾರಿ ಸಹಿತ ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ಅಗೆಯಲಾಗಿದೆ. ಈ ಮಣ್ಣನ್ನು ಫುಟ್‌ಪಾತ್ ಬಳಿ ಹಾಕಿದ್ದು, ಈ ಕುರಿತಂತೆ ಸಂಬಂಧಪಟ್ಟ ಇಲಾಖೆ, ಪಾಲಿಕೆ ಅಧಿಕಾರಿಗಳ ಜತೆ ಈಗಾಗಲೇ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಮತ್ತೂಮ್ಮೆ ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ. ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು.
-ಅಕ್ಷಯ್ ಶ್ರೀಧರ್, ಮನಪಾ ಆಯುಕ್ತರು
ಫೋಟೋ ನ್ಯೂಸ್ ಸ್ಟೋರಿ :
– ನವೀನ್ ಭಟ್ ಇಳಂತಿಲ
– ಸತೀಶ್ ಇರಾ