Advertisement

ಬಂದಿದೆ ಬಾರ್‌ಕೋಡ್‌ ಆಧರಿತ “ಸ್ಮಾರ್ಟ್‌ ವೋಟರ್‌ ಐಡಿ’

10:04 AM Jan 26, 2020 | mahesh |

ಮಂಗಳೂರು: ಇದುವರೆಗೆ ಕಪ್ಪು ಬಿಳುಪಿನಲ್ಲಿದ್ದು, ಮುಖ ಗುರುತು ಸಿಗುವುದು ಕಷ್ಟ ಎಂಬಂತಿದ್ದ ಮತದಾರರ ಗುರುತಿನ ಚೀಟಿ ಈಗ ಬಾರ್‌ಕೋಡ್‌, ಕಲರ್‌ ಫೋಟೋ ಸಹಿತ ಬಹು ವರ್ಣಗಳಲ್ಲಿ ಆಕರ್ಷಕವಾಗಲಿದೆ. ಜತೆಗೆ ಮತದಾರರ ಸಂಪೂರ್ಣ ವಿವರ ನೀಡುವ ಬಾರ್‌ಕೋಡ್‌ ಹೊಂದಿರುವ “ಸ್ಮಾರ್ಟ್‌ ಕಾರ್ಡ್‌’ ಇದು. ಭಾರತೀಯ ಚುನಾವಣಾ ಆಯೋಗವು ಆಧಾರ್‌ ಕಾರ್ಡ್‌ನಂತೆಯೇ ಮತದಾರರ ಗುರುತಿನ ಚೀಟಿ (ಎಪಿಕ್‌ ಕಾರ್ಡ್‌) ಅನ್ನು ಒಂದು “ಯುನೀಕ್‌’ ಕಾರ್ಡ್‌ ಆಗಿ ರೂಪಿಸುತ್ತಿದೆ.

Advertisement

ಬಾರ್‌ಕೋಡ್‌ ಯಾಕೆ?
ಮತದಾರರ ಪೂರ್ಣ ಮಾಹಿತಿ ತತ್‌ಕ್ಷಣ ಪಡೆಯಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ಬಾರ್‌ಕೋಡ್‌ ಹಾಕಲಾಗಿದೆ. ಅದನ್ನು ಸ್ಕ್ಯಾನ್‌ ಮಾಡಿದ ಕೂಡಲೇ ಎಲ್ಲ ಮಾಹಿತಿಗಳು ದೊರೆಯಲಿವೆ. ಮತದಾರನಿಗೆ ಸಂಬಂಧಿಸಿದ ಮತ  ದಾನ ಕೇಂದ್ರ, ಮತದಾರರ ಪಟ್ಟಿ ಹೀಗೆ ಎಲ್ಲ ಕಡೆಗಳಲ್ಲಿಯೂ ಮಾಹಿತಿ ಏಕರೂಪವಾಗಿ ಇರುವಂತೆ ನೋಡಿ ಕೊಳ್ಳಲು ಇದ ರಿಂದ ಸಾಧ್ಯ  ಆಗಲಿದೆ. ಜತೆಗೆ ಮತದಾರರ ಗುರುತಿನ ಚೀಟಿಯ ವಿವರ ಸಂಗ್ರಹಿಸಲು ಅಧಿಕಾರಿ, ಸಿಬಂದಿಗೆ ಸುಲಭವಾಗಬೇಕೆನ್ನುವ ಉದ್ದೇಶವೂ ಇದೆ. ಚುನಾವಣೆ ಸಂದರ್ಭ ಮತದಾನ ಕೇಂದ್ರಗಳ ಮತಗಟ್ಟೆ ಅಧಿಕಾರಿ, ಸಿಬಂದಿಯ ಕೆಲಸಕ್ಕೂ ನೆರವಾಗಲಿದ್ದು, ಗೊಂದಲಗಳೂ ದೂರವಾಗಲಿವೆ. ಇದರಿಂದ ಮತದಾನ ಪ್ರಕ್ರಿಯೆ ವೇಗ ಪಡೆಯಲೂ ಸಾಧ್ಯ.

ಆಧಾರ್‌ ಲಿಂಕ್‌ ಇಲ್ಲ
ಮತದಾರರ ಗುರುತಿನ ಚೀಟಿಗೆ ಸದ್ಯ ಆಧಾರ್‌ ಲಿಂಕ್‌ ಆಗಿಲ್ಲ. ಮುಂದೆ ಆಧಾರ್‌ಗೆ ಲಿಂಕ್‌ ಮಾಡಿಕೊಳ್ಳುವುದಾದರೆ ಅದಕ್ಕೂ ಬಾರ್‌ಕೋಡ್‌ ಸಹಕಾರಿಯಾಗಲಿದೆ. ಸದ್ಯ ಮತದಾರರ ಪಟ್ಟಿಯಲ್ಲಿ ಹೆಸರು- ವಿಳಾಸ ವ್ಯತ್ಯಾಸವಿದ್ದರೆ, ಇತರ ಮಾಹಿತಿ ಅಗತ್ಯವಿದ್ದರೆ ಸುಲಭವಾಗಿ ಸರಿಪಡಿಸಲು ಬಾರ್‌ಕೋಡ್‌ ನೆರವಾಗಲಿದೆ ಎನ್ನುತ್ತಾರೆ ಚುನಾವಣ ವಿಭಾಗದ ಅಧಿಕಾರಿಗಳು.

ನಿರಂತರ ಅವಕಾಶ
2019ರ ಜ.17ರ ಅನಂತರ ನ.30ರ ವರೆಗೆ ಪಟ್ಟಿಗೆ ಸೇರ್ಪಡೆಯಾದವರಿಗೆ, ಇದೇ ಅವಧಿಯಲ್ಲಿ ತಿದ್ದುಪಡಿ ಮಾಡಿ ಕೊಂಡವರಿಗೆ ಈ ಹೊಸ ಗುರುತಿನ ಚೀಟಿ ವಿತರಿಸಲಾಗುತ್ತಿದೆ. 2020ರ ಜ.15 ಈ ಹಂತದ ಮತದಾರರ ಪಟ್ಟಿ ಸೇರ್ಪಡೆಗೆ ಕೊನೆಯ ದಿನವಾಗಿತ್ತು. ಅಂತಿಮ ಪಟ್ಟಿ ಫೆ.7ರಂದು ಪ್ರಕಟಗೊಳ್ಳಲಿದೆ. ಫೆ.8ರ ಅನಂತರ ನಿರಂತರವಾಗಿ ಪಟ್ಟಿ ಸೇರ್ಪಡೆ ಪ್ರಕ್ರಿಯೆ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ ತಿದ್ದುಪಡಿ ಮತ್ತು ಹೊಸದಾಗಿ ಪಟ್ಟಿಗೆ ಸೇರ್ಪಡೆಯಾದವರು ಸೇರಿದಂತೆ ಒಟ್ಟು 71,925 ಮಂದಿಗೆ ಸದ್ಯ ಕಲರ್‌ ಕಾರ್ಡ್‌ ದೊರೆ ಯಲಿದೆ. ಇದರಲ್ಲಿ ಹೊಸ ಮತದಾರ‌ರು 48,168 ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಿದ 23,757 ಮಂದಿ ಸೇರಿದ್ದಾರೆ. ಎಲ್ಲ ಬಿಎಲ್‌ಒ, ತಹಶೀಲ್ದಾರ್‌ ಕಚೇರಿ ಅಥವಾ ಆನ್‌ಲೈನ್‌ನಲ್ಲಿ (www.nvsp.in) ಮೂಲಕ ಅರ್ಜಿ ಸಲ್ಲಿಸಬಹುದು.

ಚುನಾವಣ ಆಯೋಗ ಹೊಸದಾಗಿ ರೂಪಿಸಿದ ವೋಟರ್‌ ಹೆಲ್ಪ್ಲೈನ್‌ ಆ್ಯಪ್‌ನಲ್ಲಿ ಬಾರ್‌ಕೋಡ್‌ ರೀಡ್‌ ಮಾಡಿದರೆ ಎಲ್ಲ ಮಾಹಿತಿ ಸುಲಭವಾಗಿ ದೊರೆಯಲಿದೆ. ಇದರಿಂದ ಕಚೇರಿಯ ಅಧಿಕಾರಿ, ಸಿಬಂದಿ ಮಾತ್ರವಲ್ಲದೆ ಮತದಾರರಿಗೂ ಅನುಕೂಲವಾಗಿದೆ.
ಸಿಂಧೂ ಬಿ. ರೂಪೇಶ್‌, ಜಿಲ್ಲಾಧಿಕಾರಿ, ದ.ಕ ಜಿಲ್ಲೆ

Advertisement

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next