Advertisement

ಪುರಭವನ ಮುಂಭಾಗ “ಸ್ಮಾರ್ಟ್‌’ಅಂಡರ್‌ಪಾಸ್‌

11:38 PM Oct 17, 2019 | mahesh |

ಮಹಾನಗರ: ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಸಮೀಪದಲ್ಲಿರುವ ಅಂಡರ್‌ಪಾಸ್‌ ಮಾದರಿಯಲ್ಲಿ ಮಂಗಳೂರಿನ ಪುರಭವನದ ಮುಂಭಾಗದಲ್ಲಿ “ಸ್ಮಾರ್ಟ್‌ ಮಾದರಿಯ ಅಂಡರ್‌ಪಾಸ್‌’ ಕಾಮಗಾರಿ ಆರಂಭವಾಗಿದೆ.

Advertisement

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಭಾಗದ ರಸ್ತೆಯಿರುವ ಮಿನಿ ವಿಧಾನಸೌಧ ಮುಂಭಾಗದಿಂದ ಅಂಡರ್‌ಪಾಸ್‌ ಆರಂಭಗೊಂಡು ಪುರಭವನದ ಎಡಭಾಗದ ರಸ್ತೆಯ ಅಂಚಿನಲ್ಲಿರುವ ಹಳೆಯ ತಾಜ್‌ಮಹಲ್‌ ಹೊಟೇಲ್‌ ಮುಂಭಾಗದವರೆಗೆ ಅಂಡರ್‌ಪಾಸ್‌ ಇರಲಿದೆ.

ಅಂಡರ್‌ಪಾಸ್‌ ಕಾಮಗಾರಿಗಾಗಿ ಟೆಂಡರ್‌ನಲ್ಲಿ ಬಿಡ್‌ ಮಾಡಿದ ಕಂಪೆನಿಯು ಈಗಾಗಲೇ ಪೂರ್ವಭಾವಿ ಕಾಮಗಾರಿಯನ್ನು ಆರಂಭಿಸಿದೆ. 6 ಕೋ.ರೂ. ವೆಚ್ಚದಲ್ಲಿ ಅಂಡರ್‌ಪಾಸ್‌ ಕಾಮಗಾರಿ ನಡೆಯಲಿದ್ದು, ಸುಮಾರು 15 ಮೀ. ವಿಸ್ತೀರ್ಣವಿರಲಿದೆ. ಸೆಂಟ್ರಲ್‌ ರೈಲು ನಿಲ್ದಾಣ ಭಾಗ/ಮಿನಿ ವಿಧಾನಸೌಧ/ ತಹಶೀಲ್ದಾರ್‌ ಕಚೇರಿ, ಲೇಡಿಗೋಶನ್‌, ಮಾರ್ಕೆಟ್‌ ಭಾಗದಿಂದ ಅತ್ತಿಂದಿತ್ತ ಸಾಗುವ ಪಾದಚಾರಿಗಳಿಗೆ ಈ ಅಂಡರ್‌ಪಾಸ್‌ ಉಪಯೋಗವಾಗಲಿದೆ.

ಎ.ಬಿ. ಶೆಟ್ಟಿ ಸರ್ಕಲ್‌ನಿಂದ ಕ್ಲಾಕ್‌ಟವರ್‌ವರೆಗಿನ ರಸ್ತೆಯನ್ನು “ಸ್ಮಾರ್ಟ್‌ ರೋಡ್‌’ ಆಗಿ ಈಗಾಗಲೇ ಘೋಷಿಸಲಾಗಿದ್ದು, ಇಲ್ಲಿ ಬೇರೆ ಬೇರೆ ಕಾಮಗಾರಿಗಳು ಆರಂಭವಾಗಲಿವೆ. ಇದೇ ರಸ್ತೆಯ ಕೆಳಭಾಗದಿಂದಲೇ ಅಂಡರ್‌ಪಾಸ್‌ ಕಾಮಗಾರಿ ನಡೆಯಲಿದೆ.

ಕಾಮಗಾರಿ ಆರಂಭ
ಅಂಡರ್‌ಪಾಸ್‌ ಕಾಮಗಾರಿಯನ್ನು ಮೊದಲಿಗೆ ಪುರಭವನ ಮುಂಭಾಗದ ಪಾರ್ಕ್‌ನಲ್ಲಿ ಆರಂಭಿಸಲಾಗುತ್ತದೆ. ಇದಕ್ಕಾಗಿ ಗಾಂಧಿ ಪಾರ್ಕ್‌ ಸುತ್ತ ತಗಡಿನ ಶೀಟ್‌ನಿಂದ ಬಂದ್‌ ಮಾಡಲಾಗುತ್ತಿದೆ. ಕಾಮಗಾರಿ ನಡೆಸುವ ಸಾಮಗ್ರಿಗಳನ್ನು ಪಾರ್ಕ್‌ನ ಒಳಗೆ ಇಡಲು, ಕಾಮಗಾರಿ ನಡೆಸುವಾಗ ಹೊರಭಾಗಕ್ಕೆ ಸಮಸ್ಯೆ ಆಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಪಾರ್ಕ್‌ ಸುತ್ತ ಬಂದ್‌ ಮಾಡಲಾಗುತ್ತಿದೆ. ಪಾರ್ಕ್‌ನಲ್ಲಿ ಮುಂದಿನ ಹಲವು ತಿಂಗಳು ಕಾಮಗಾರಿ ನಡೆಯುವ ಹಿನ್ನೆಲೆ ಯಲ್ಲಿ ವಾಯುವಿಹಾರ ನಡೆಸುವವರಿಗೆ, ಇತರರಿಗೆ ಪಾರ್ಕ್‌ ಪ್ರವೇಶ ಬಂದ್‌ ಆಗುವ ಸಾಧ್ಯತೆಯಿದೆ. ಅಧಿಕಾರಿಗಳ ಪ್ರಕಾರ, ಕೊಂಚ ದಿನ ಈ ಸಮಸ್ಯೆ ಇರಲಿದ್ದು, ಅಂಡರ್‌ಪಾಸ್‌ ಕಾಮಗಾರಿಯ ಜತೆಗೆ ಗಾಂಧೀ ಪಾರ್ಕ್‌ ಕೂಡ ವಿಶೇಷ ರೀತಿಯಲ್ಲಿ ಸುಂದರೀಕರಣಗೊಳ್ಳಲಿದೆೆ.

Advertisement

ಶಿಲಾನ್ಯಾಸವಾದ ಸ್ಕೈವಾಕ್‌ ರದ್ದು!
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ಪುರಭವನದ ಬಳಿಯಲ್ಲಿ ಸ್ಕೈವಾಕ್‌ (ಮೇಲ್ಸೇತುವೆ) ನಿರ್ಮಾಣಕ್ಕೆ 2016 ಆ. 23ರಂದು ಶಿಲಾನ್ಯಾಸ ನೆರವೇರಿತ್ತು. ಸುಮಾರು 1.57 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಈ ಕಾಮಗಾರಿಗೆ ಕ.ಅ.ಪ್ರಾಧಿಕಾರದಿಂದ 78 ಲಕ್ಷ ರೂ., ನಗರಾಭಿವೃದ್ಧಿ ಇಲಾಖೆಯಿಂದ 71 ಲಕ್ಷ ರೂ., ಮಂಗಳೂರು ಪಾಲಿಕೆಯಿಂದ 7 ಲಕ್ಷ ರೂ. ಅನುದಾನದ ಬಗ್ಗೆ ಅಂದು ಉಲ್ಲೇಖೀಸಲಾಗಿತ್ತು. ಆದರೆ ಶಿಲಾನ್ಯಾಸದಲ್ಲಿಯೇ ಬಾಕಿಯಾದ ಈ ಯೋಜನೆ ಇದೀಗ ಸಂಪೂರ್ಣ ರದ್ದಾಗಿ, ಸದ್ಯ ಅಂಡರ್‌ಪಾಸ್‌ ಭಾಗ್ಯ ಕಾಣುತ್ತಿದೆ.

ಅಂಡರ್‌ಪಾಸ್‌ ಕಾಮಗಾರಿ ಆರಂಭ
ಸ್ಮಾರ್ಟ್‌ಸಿಟಿ ಯೋಜನೆಯಡಿ ಪುರಭವನದ ಮುಂಭಾಗದಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕಾಗಿ ಪೂರ್ವಭಾವಿ ಕಾಮಗಾರಿ ಈಗಾಗಲೇ ಆರಂಭವಾಗಿದೆ. ರೈಲು ನಿಲ್ದಾಣ ಹಾಗೂ ಇತರ ಭಾಗದಿಂದ ಆಗಮಿಸಿ ರಸ್ತೆ ದಾಟುವ ಪಾದಚಾರಿಗಳಿಗೆ ಅನುಕೂಲವಾಗಲು ಅಂಡರ್‌ಪಾಸ್‌ ನಿರ್ಮಿಸಲಾಗುತ್ತದೆ. ಸ್ಮಾರ್ಟ್‌ ಪರಿಕಲ್ಪನೆಯನ್ನು ಇದರಲ್ಲಿ ಅನುಷ್ಠಾನಿಸಲಾಗುವುದು.
 - ಮಹಮ್ಮದ್‌ ನಝೀರ್‌, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್‌ಸಿಟಿ

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next