Advertisement

ಕಬ್ಬನ್‌ ಉದ್ಯಾನಕ್ಕೆ ಸ್ಮಾರ್ಟ್‌ ಟಚ್‌

12:35 AM Feb 03, 2020 | Lakshmi GovindaRaj |

ಬೆಂಗಳೂರು: “ಕಬ್ಬನ್‌ಪಾರ್ಕ್‌’ ಅಭಿವೃದ್ಧಿಗೆ ನಮ್ಮಿಂದ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ಅಭಿವೃದ್ಧಿ ಹೆಸರಲ್ಲಿ ಉದ್ಯಾನವನ್ನು “ಕಾಂಕ್ರೀಟ್‌ ಕಾಡು’ ಮಾಡಬೇಡಿ ಎಂಬ ಒಕ್ಕೊರಲ ಕೂಗು ಪರಿಸರವಾದಿಗಳು, ವಾಯುವಿಹಾರಿ ಗಳು, ವಿವಿಧ ಸಂಘಟನೆಗಳ ಸದಸ್ಯರಿಂದ ಕೇಳಿಬಂತು.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ಕಬ್ಬನ್‌ಪಾರ್ಕ್‌ ಅನ್ನು 40 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತದಲ್ಲಿ ಅಭಿವೃದ್ಧಿ ಮಾಡುವ ಯೋಜನೆ ಸಂಬಂಧ ಉದ್ಯಾನದ ಬ್ಯಾಂಡ್‌ ಸ್ಟಾಂಡ್‌ ಆವರಣದಲ್ಲಿ, ಸ್ಮಾರ್ಟ್‌ಸಿಟಿ ಲಿ., ತೋಟಗಾ ರಿಕೆ ಇಲಾಖೆ ಹಾಗೂ ಪಾಲಿಕೆ ವತಿಯಿಂದ ಭಾನುವಾರ ಸಾರ್ವಜನಿಕರೊಂದಿಗೆ ಸಂವಾದ ಆಯೋಜಿಸಲಾಗಿದೆ.

ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ನ ಸಂಯೋಜಕರಾದ ರಾಜ್‌ಕುಮಾರ್‌ ದುಗಾರ್‌, ಕಬ್ಬನ್‌ಪಾರ್ಕ್‌ ಸುತ್ತಲ ಪ್ರದೇಶದಲ್ಲಿ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಉಂಟಾಗುತ್ತಿದ್ದು, ಕಸ್ತೂರಬಾ ರಸ್ತೆಯಲ್ಲೂ ಸಸಿಗಳನ್ನು ನೆಡಬೇಕು. ಪಾರ್ಕ್‌ನ ವಿವಿಧೆಡೆ ಮತ್ತಷ್ಟು ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಅಗತ್ಯವಿದೆ. 300 ಎಕರೆ ವಿಸ್ತೀರ್ಣದ ಕಬ್ಬನ್‌ ಪಾರ್ಕ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿದರೆ ತುರ್ತು ಸಂದರ್ಭಗಳಲ್ಲಿ ಸಹಾಯವಾಗಲಿದೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಚೆಟ್ಟಿ ರಾಜಗೋಪಾಲ್‌, ಅಭಿವೃದ್ಧಿ ಕೆಲಸ ಆರಂಭಿಸುವ ಮುನ್ನ ಇಲ್ಲಿನ ಕೆಲವು ಪ್ರಾಥಮಿಕ ಹಂತದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಉದ್ಯಾನ ಅಭಿವೃದ್ಧಿಗೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿಲ್ಲ.

ಹೀಗಾಗಿ, ಮತ್ತಷ್ಟು ಸಂವಾದ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಶಾಸಕ ರಿಜ್ವಾನ್‌ ಹರ್ಷದ್‌, ಪಾಲಿಕೆ ಸದಸ್ಯರಾದ ವಸಂತ್‌ಕುಮಾರ್‌, ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಟಾರಿಯ, ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್‌ ಮತ್ತಿತರರು ಹಾಜರಿದ್ದರು.

Advertisement

ಮೊದಲ ಹಂತದ ಕಾಮಗಾರಿ: ಪಾದಚಾರಿ ಮಾರ್ಗ ನವೀಕರಣ, ವಾಯುವಿಹಾರ ಪಥ, ಉದ್ಯಾನದೊಳಗಿನ ವಿವಿಧ ರಸ್ತೆಗಳ ಅಭಿವೃದ್ಧಿ, ನೀರು ಶುದ್ಧೀಕರಣ, ಸೈಕಲ್‌ ಪಥ, ಜಾಗಿಂಗ್‌ ಪಥ, ಕಮಲದ ಕೊಳ, ನಾಲೆ ಮತ್ತು ಸೇತುವೆಗಳ ಅಭಿವೃದ್ಧಿ.

ಎರಡನೇ ಹಂತ ಕಾಮಗಾರಿ: ಕರಗದ ಕುಂಟೆ ಮತ್ತು ಜೌಗು ಪ್ರದೇಶ, ಕಾರಂಜಿಗಳು, ಆಸನಗಳ ವ್ಯವಸ್ಥೆ, ಕಲ್ಯಾಣಿ ಹಾಗೂ ನಾಲೆಗಳ ಅಭಿವೃದ್ಧಿ, ಸಸಿ ನೆಡು ವುದು, ದಿವ್ಯಾಂಗ ಸ್ನೇಹಿ ಆವರಣ, ಆಯುರ್ವೇದ ಸಸ್ಯಗಳ ಉದ್ಯಾನ ನಿರ್ಮಾಣ, ಹಿರಿಯ ನಾಗರಿಕರು, ಮಕ್ಕಳಿಗಾಗಿ ಪ್ರತ್ಯೇಕ ಆವರಣ, ಯೋಗಾಭ್ಯಾಸಕ್ಕೆ ಪ್ರತ್ಯೇಕ ಸ್ಥಳಾವಕಾಶ, ಕಬ್ಬನ್‌ ಉದ್ಯಾನದ ಇತಿಹಾಸ ಹಾಗೂ ಮಾಹಿತಿ ನೀಡುವ ಫ‌ಲಕ, ಬಯೋಗ್ಯಾಸ್‌ ಪಾಯಿಂಟ್‌ ಸ್ಥಾಪನೆ.

ಸೈಕಲ್‌ ನಿಲ್ದಾಣ, ಪಾರಿವಾಳ ಮತ್ತು ಪಕ್ಷಿಗಳಿಗೆ ಆಹಾರ ಹಾಕುವುದಕ್ಕೆ ಸ್ಥಳ ನಿಗದಿ, ತಂತಿ ಬೇಲಿ, ಹಿರಿಯ ನಾಗರಿಕರಿಗೆ ಅನುಕೂಲಕರ ಆಸನಗಳ ವ್ಯವಸ್ಥೆ, ಬಿದಿರಿನಿಂದ ಮಾಡಿದ ಕುರ್ಚಿ ಗಳು, ಶೌಚಾಲಯದ ಗೋಡೆಗಳಿಗೆ ಬಿದಿರು ಬಳಕೆ, ಕಸ ಬಿನ್‌ಗಳು ಹಾಗೂ ಕಸ ಸಂಸ್ಕರಣೆಗೆ ಒತ್ತು.

ಯೋಜನೆ ವಿಶೇಷತೆಗಳು: ದಿವ್ಯಾಂಗರು, ಅಂಧರು, ಮಕ್ಕಳು ಹಾಗೂ ಹಿರಿಯನಾಗರಿಕರ ಬಳಕೆ ಮತ್ತು ಅನು ಕೂಲಕ್ಕೆ ಹಲವು ವಿಶೇಷ ಯೋಜನೆ ರೂಪಿಸಿಕೊಳ್ಳ ಲಾಗಿದೆ. ಶೌಚಾಲಯ ನಿರ್ಮಾಣ ಹಾಗೂ ಕೆಫೆಟೇರಿ ಯಾಗಳು ಬಿದಿರಿನಿಂದ ನಿರ್ಮಾಣಗೊಳ್ಳಲಿವೆ. ಪ್ರತಿ ದಿನ 5 ಟನ್‌ ಹಸಿ ಕಸ ಸಂಸ್ಕರಣೆ ಮಾಡುವ ಸಾರ್ಮಥ್ಯವಿರುವ ಬಯೋ ಗ್ಯಾಸ್‌ ಘಟಕ ಹಾಗೂ ಬೃಹತ್‌ ವಾಯು ಶುದ್ಧೀಕರಣ ಘಟಕ ನಿರ್ಮಾಣವಾಗಲಿದೆ.

ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಕಮಿಟಿ: ಕಬ್ಬನ್‌ಪಾರ್ಕ್‌ ಅಭಿವೃದ್ಧಿ ಮತ್ತು ವಿಶೇಷ ಯೋಜನೆಗಳ ಅನುಷ್ಠಾನಕ್ಕೆ ಮೇಲುಸ್ತುವಾರಿ ಸಮಿತಿ ರಚನೆಯಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹೇಳಿದರು.

“ಉದಯವಾಣಿ’ ಜತೆ ಮಾತನಾಡಿ, “ಕಬ್ಬನ್‌ಪಾರ್ಕ್‌ ಅಭಿವೃದ್ಧಿ ಹಾಗೂ ಮೂಲ ಸೌಂದರ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ, ತೋಟಗಾರಿಕೆ ಇಲಾಖೆ, ಬಿಬಿಎಂಪಿ, ಸಂಚಾರ ಪೊಲೀಸರು, ಸ್ಮಾರ್ಟ್‌ಸಿಟಿ ಲಿ., ಪರಿಸರ ತಜ್ಞರು ಹಾಗೂ ಸಾರ್ವಜನಿಕರನ್ನು ಒಳಗೊಂಡ ಮೇಲುಸ್ತುವಾರಿ ಸಮಿತಿ ರಚನೆಯಾಗಲಿದೆ ಎಂದು ಹೇಳಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಬ್ಬನ್‌ ಪಾರ್ಕ್‌ ಅಭಿವೃದ್ಧಿಪಡಿಸಲಾಗುತ್ತಿದೆ. 40 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗುವುದು.
-ಹೆಪ್ಸಿಬಾ ರಾಣಿ ಕೊರ್ಲಪಾಟಿ, ಬೆಂಗಳೂರು ಸ್ಮಾರ್ಟ್‌ ಸಿಟಿ ಲಿ. ಎಂ.ಡಿ

ಕಬ್ಬನ್‌ಪಾರ್ಕ್‌ನಲ್ಲಿ ಬಯಲು ವ್ಯಾಯಾಮ ಶಾಲೆ (ಓಪನ್‌ ಜಿಮ್‌) ನಿರ್ಮಾಣಕ್ಕೆ ಸ್ಥಳೀಯರು ಮನವಿ ಮಾಡಿದ್ದಾರೆ. ಅದೇ ರೀತಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಾಲಭವನವನ್ನೂ ಅಭಿವೃದ್ಧಿ ಮಾಡಲಾಗುವುದು.
-ಪಿ.ಸಿ.ಮೋಹನ್‌, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next