ಬೆಂಗಳೂರು: ನಗರದಲ್ಲಿನ ಸ್ಮಾರ್ಟ್ ಪಾರ್ಕಿಂಗ್ ಹಾಗೂ ಬಸ್ ಆದ್ಯತಾ ಪಥ ರಸ್ತೆಯನ್ನು ಮೇಯರ್ ಎಂ.ಗೌತಮ್‌ಕುಮಾರ್ ಶನಿವಾರ ಪರಿಶೀಲನೆ ನಡೆಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ನಗರದ ಕೇಂದ್ರ ಭಾಗಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಪರಿಚಯಿಸಲಾಗಿದೆ. ನಗರದ ವಿಠ್ಠಲ್ ಮಲ್ಯಾ ರಸ್ತೆಯಲ್ಲಿರುವ ಸ್ಮಾರ್ಟ್ ಪಾರ್ಕಿಂಗ್ ಜಾಗಕ್ಕೆ ಮೇಯರ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಲೌರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ನವರೆಗೆ ನಿರ್ಮಿಸುತ್ತಿರುವ ಬಸ್ ಪ್ರತ್ಯೇಕ ಪಥವನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಹಾಗೂ ಸುವ್ಯವಸ್ಥಿತಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಆಯ್ದ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ ತರಲಾಗುತ್ತಿದೆ. ಈಗಾಗಲೇ ಕಸ್ತೂರ ಬಾರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡಲಾಗಿದ್ದು, ಏಳು ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಜಾರಿ ಮಾಡಲಾಗುವುದು ಎಂದರು.
ಕಸ್ತೂರ ಬಾ ರಸ್ತೆಯಲ್ಲಿ 700 ಮೀ. ಉದ್ದದ ರಸ್ತೆಯ ಒಂದು ಭಾಗದಲ್ಲಿ ದ್ವಿಚಕ್ರ ವಾಹನ ಹಾಗೂ ಮತ್ತೂಂದು ಭಾಗದಲ್ಲಿ ಕಾರು ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಡಿಜಿಟಲ್ ಶುಲ್ಕ ಪಾವತಿಸುವ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಾಹನಗಳ ಸುರಕ್ಷತೆಗಾಗಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಾಹನಗಳನ್ನು ನಿಲ್ಲಿಸುವ ಸ್ಥಳದಲ್ಲಿ ಸೆನ್ಸಾರ್ ಸಹ ಅಳವಡಿಸಲಾಗಿದೆ ಎಂದರು.
ವಾಹನಗಳನ್ನು ಪಾರ್ಕಿಂಗ್ ಮಾಡಲು ದರನಿಗದಿಪಡಿಸಿದ್ದು, ಪಾರ್ಕಿಂಗ್ ಶುಲ್ಕ ಹಾಗೂ ರಸೀದಿ ಪಡೆಯಲು ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಲಾಗಿದೆ. ಸವಾರರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ನಲ್ಲಿ ಹಣ ಪಾವತಿಸಬಹುದಾಗಿದೆ. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಿಂದ ವಾರ್ಷಿಕ 31.60 ಕೋಟಿ ರೂ. ಪಾಲಿಕೆಗೆ ಆದಾಯ ಬರಲಿದೆ ಎಂದು ಮಾಹಿತಿ ನೀಡಿದರು.
ಸ್ಮಾರ್ಟ್ ಪಾರ್ಕಿಂಗ್‌ಗೆ ಉದ್ದೇಶಿಸಿರುವ ರಸ್ತೆಗಳು: ವಿಠ್ಠಲ್ ಮಲ್ಯ ರಸ್ತೆ, ವಿಠ್ಠಲ್ ಮಲ್ಯ ಆಸ್ಪತ್ರೆ ರಸ್ತೆ, ಎಂ.ಜಿ.ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಚರ್ಚ್ ಸ್ಟ್ರೀಟ್ ರಸ್ತೆ.
ಬಸ್ ಪಥ ಪರಿಶೀಲನೆ : ಲೌರಿ ಜಂಕ್ಷನ್ ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ನ ವರೆಗಿನ 17 ಕಿ.ಮೀ ಉದ್ದದ ರಸ್ತೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಬಸ್ ಸಂಚಾರಕ್ಕಾಗಿ ಪ್ರತ್ಯೇಕ ಪಥವನ್ನು ನಿರ್ಮಿಸಲಾಗುತ್ತಿದೆ. ಈ ಭಾಗದಲ್ಲಿನ ಎರಡು ಕಡೆ 3.5 ಮೀ. ಜಾಗದಲ್ಲಿ ಬೊಲಾರ್ಡ್ಸ್ ಹಾಗೂ ಕ್ರಾಶ್ ಬ್ಯಾರಿಯರ್ಸ್‌ಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಮೇಯರ್ ಸೂಚನೆ ನೀಡಿದರು.