Advertisement

ಮಾಫಿಯಾ ಕಡಿವಾಣಕ್ಕೆ ಸ್ಮಾರ್ಟ್‌ ಪಾರ್ಕಿಂಗ್‌

11:31 AM May 15, 2017 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಪಾರ್ಕಿಂಗ್‌ ವ್ಯವಸ್ಥೆ ಜಾರಿಯಾಗಲಿದ್ದು, ಹಿಂದಿನ ಕಹಿ ಅನುಭವದ ಹಿನ್ನೆಲೆಯಲ್ಲಿ ಮಾನವ ರಹಿತ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಲು ಪಾಲಿಕೆ ಯೋಜನೆ ರೂಪಿಸಿದೆ.

Advertisement

ಪಾರ್ಕಿಂಗ್‌ ಮಾಫಿಯಾಗೆ ಕಡಿವಾಣ ಹಾಕುವುದು, ಪಾರ್ಕಿಂಗ್‌ ಬಾಬಿ¤ನಿಂದ ಸಂಪನ್ಮೂಲ ಕ್ರೋಢೀಕರಿಸುವುದು ಜತೆಗೆ ವಾಹನ ಸವಾರರಿಗೆ ವ್ಯವಸ್ಥಿತ ನಿಲುಗಡೆ ವ್ಯವಸ್ಥೆ ಕಲ್ಪಿಸುವುದು ಬಿಬಿಎಂಪಿ ಉದ್ದೇಶವಾಗಿದೆ.

ನಗರದಲ್ಲಿನ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ. ಹೀಗಾಗಿ, ನಗರದ ಆಯ್ದ 85 ರಸ್ತೆಗಳಲ್ಲಿ ವ್ಯವಸ್ಥಿತ ಪಾರ್ಕಿಂಗ್‌ ಕಲ್ಪಿಸಲು ಪಾಲಿಕೆ ಮುಂದಾಗಿದೆ.

ಮಾನವ ರಹಿತ ನಿಲುಗಡೆ ವ್ಯವಸ್ಥೆ ಜಾರಿಗೆ ಉದ್ದೇಶಿಸಿದ್ದು, ವಾಹನ ಸವಾರರು ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಮೂಲಕ ಶುಲ್ಕ ಪಾವತಿಸಬಹುದಾಗಿದೆ. ವಾಹನಗಳು ನಿಲುಗಡೆ ಸ್ಥಳಕ್ಕೆ ಬರುವ ಮತ್ತು ಹೋಗುವ ನಿಖರ ಸಮಯ ಸೆನ್ಸಾರ್‌ ಮೂಲಕ ದಾಖಲಾಗಲಿದ್ದು, ಅದರ ಆಧಾರದ ಮೇಲೆ ಸವಾರರು ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

ಈಗಾಗಲೇ ಬಿಬಿಎಂಪಿಯಿಂದ ನೂತನ ಪಾರ್ಕಿಂಗ್‌ ನೀತಿ ಜಾರಿಗೊಳಿಸಿದ್ದು, ಅದರಂತೆ 85 ರಸ್ತೆಗಳ ಬದಿಯಲ್ಲಿ ಸ್ಮಾರ್ಟ್‌ ಪೇ ಆ್ಯಂಡ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಲು ಯೋಜನೆ ರೂಪಿಸಿದೆ. ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ಸಹ ಪ್ರಾರಂಭವಾಗಿದೆ. 

Advertisement

ಸಂಪೂರ್ಣ ಮಾನವ ರಹಿತ: ಪಾಲಿಕೆಯಿಂದ ಗುರುತಿಸಲಾಗಿರುವ ರಸ್ತೆ ಬದಿಯ ವಾಹನ ನಿಲುಗಡೆ ಸ್ಥಳದಲ್ಲಿ “ಪಾರ್ಕಿಂಗ್‌ ಮೀಟರ್‌’ ಎಂನ ಆತ್ಯಾಧುನಿಕ ಯಂತ್ರ ಅಳವಡಿಕೆ ಪಾಲಿಕೆ ಮುಂದಾಗಿದೆ. ಒಮ್ಮೆ ಖಾಲಿಯಿರುವ ನಿಲುಗಡೆ ಸ್ಥಳಕ್ಕೆ ವಾಹನ ಬಂದ ಕೂಡಲೇ ಸ್ವಯಂ ಚಾಲಿತವಾಗಿ ಕಾರ್‌ ಸಂಖ್ಯೆ, ಸಮಯದೊಂದಿಗೆ ಬಾರ್‌ಕೋಡ್‌ ಒಳಗೊಂಡ ಟಿಕೆಟ್‌ ಮುದ್ರಿಸಲಿದೆ.

ಸವಾರರು ನಿಲುಗಡೆಯಿಂದ ವಾಹನ ತೆಗೆಯುವ ವೇಳೆ ಪಾರ್ಕಿಂಗ್‌ ಮೀಟರ್‌ನಲ್ಲಿ ಬಾರ್‌ ಕೋಡ್‌ ತೋರಿಸಿದರೆ ಎಷ್ಟು ಶುಲ್ಕ ಎಂಬುದನ್ನು ತೋರಿಸಲಿದೆ. ಸವಾರರು ಕಾರ್ಡ್‌ ಮೂಲಕ ಇಲ್ಲವೆ, ನಗದು ಮೂಲಕವೂ ಶುಲ್ಕ ಪಾವತಿ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ನಿತ್ಯ ವಾಹನ ನಿಲುಗಡೆ ಮಾಡುವವರಿಗೆ ಸ್ಮಾರ್ಟ್‌ ಕಾರ್ಡ್‌ ಸಹ ನೀಡಲು ಅಕಾರಿಗಳು ಚಿಂತನೆ ನಡೆಸಿದ್ದಾರೆ. ಪ್ರತಿ ನಿಲುಗಡೆಯಲ್ಲಿ 8 ಕಾರು ಮತ್ತು 15 ಬೈಕುಗಳಿಗೆ ಒಂದು ಮೀಟರ್‌ ಅಳವಡಿಕೆಸಲಾಗುತ್ತದೆ. 

ಮೊಬೈಲ್‌ ಆ್ಯಪ್‌ ಅಭಿವೃದ್ಧಿ
ನಿಲುಗಡೆಗೆ ಅವಕಾಶದ ಬಗ್ಗೆ ಸವಾರರಿಗೆ ಮಾಹಿತಿ ನೀಡಲು ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ಸ್ಮಾರ್ಟ್‌ಸ್ಕ್ರೀನ್‌ ಫೋಲ್‌ ಅಳವಡಿಸುವ ಚಿಂತನೆ ಯಿದ್ದು, ಈ ಫೋಲ್‌ಗ‌ಳಲ್ಲಿ ಮುಂದಿನ ಪಾರ್ಕಿಂಗ್‌ ಸ್ಥಳ ಎಲ್ಲಿದೆ ಮತ್ತು ಅಲ್ಲಿ ಎಷ್ಟು ವಾಹನ ಗಳ ನಿಲುಗಡೆಗೆ ಅವಕಾಶವಿದೆ ಎಂಬ ಮಾಹಿತಿ ದೊರೆಯಲಿದೆ. ಜತೆಗೆ ಸ್ಮಾರ್ಟ್‌ಕಾರ್ಡ್‌ ರೀಚಾರ್ಜ್‌ ಮತ್ತು ವಾಹನ ನಿಲುಗಡೆಗಾಗಿ ಸ್ಥಳ ಕಾಯ್ದಿರಿಸಿ ಆನ್‌ಲೈನ್‌ ಟಿಕೆಟ್‌ ಪಡೆಯಲು ಪ್ರತ್ಯೇಕ ಅಪ್ಲಿಕೇಷನ್‌ ಅಭಿವೃದ್ ಪಡಿಸಲು ಅಕಾರಿಗಳು ತೀರ್ಮಾನಿಸಿದ್ದಾರೆ.

ಪಾಲಿಕೆ ಸ್ಥಳಗಳನ್ನು ಸ್ಮಾರ್ಟ್‌ ಮಾಡಿ!
ನಗರದ 85 ರಸ್ತೆಗಳ ಜತೆ ಪಾಲಿಕೆಯ ಸ್ಥಳಗಳಾದ ಗರುಡಾ ಮಾಲ್‌, ಮಹಾರಾಜ ಕಾಂಪ್ಲೆಕ್ಸ್‌, ಜಯನಗರ ಶಾಪಿಂಗ್‌ಮಾಲ್‌ ಸೇರಿ ಇತರ ಸ್ಥಳಗಳಲ್ಲೂ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಗೆ ಅಕಾರಿಗಳು ಮುಂದಾಗಬೇಕು. ಇದರಿಂದಾಗಿ ಪಾಲಿಕೆಗೆ ಬರುವ ಆದಾಯ ಹೆಚ್ಚಾಗಲಿದೆ ಎಂದು ಕೆಲ ಪಾಲಿಕೆ ಸದಸ್ಯರು ಸಲಹೆ ನೀಡಿದ್ದಾರೆ.

ವಾಹನ ನಿಲುಗಡೆಗೆ ಮೂರು ವಿಧ 
ಸ್ಮಾರ್ಟ್‌ ಪಾರ್ಕಿಂಗ್‌ ಅನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ) ಮತ್ತು ಸಿ (ಸಾಮಾನ್ಯ) ಎಂದು ಮೂರು ಭಾಗಗಳಾಗಿ ವಿಂಗಡಿಸಿದ್ದು, ಅದರ ಆಧಾರದ ಮೇಲೆ ಶುಲ್ಕ ಸಂಗ್ರಹ ಮಾಡಲಾಗುತ್ತದೆ. ಎ ವರ್ಗದಲ್ಲಿ 14, ಬಿ ವರ್ಗದಲ್ಲಿ 46 ಮತ್ತು ಸಿ ವರ್ಗದಲ್ಲಿ 25 ರಸ್ತೆಗಳಿವೆ. ಎಲ್ಲ 85 ರಸ್ತೆಗಳಲ್ಲಿ ಸುಮಾರು 2,500 ಕಾರು ಮತ್ತು 5 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪಾಲಿಕೆಯ ಅಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಮಾರ್ಟ್‌ ಪಾರ್ಕಿಂಗ್‌ಗೆ ಈಗಾಗಲೇ ಟೆಂಡರ್‌ ಆಹ್ವಾನಿಸಲಾಗಿದೆ. ಟೆಂಡರ್‌ ಪಡೆಯುವ ಸಂಸ್ಥೆ ಸ್ಮಾರ್ಟ್‌ ಪಾರ್ಕಿಂಗ್‌ಗೆ ಅಗತ್ಯವಿರುವ ಎಲ್ಲ ಉಪಕರಣ ಹೊಂದಿರ ಬೇಕು. ವಾಹನ ನಿಲುಗಡೆ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ, ಮ್ಯಾಗ್ನೆಟಿಕ್‌ ಐಆರ್‌ ಸೆನ್ಸಾರ್‌, ಸವಾರರ ಅನುಕೂಲಕ್ಕೆ ಹೆಲ್ಪ್ ಡೆಸ್ಕ್ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ.
-ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next