Advertisement

ಬೆರಳ ತುದಿಯಲ್ಲಿ ‘ಸ್ಮಾರ್ಟ್‌’ಒನ್‌ ಆ್ಯಪ್‌: ಸಾರ್ವಜನಿಕರಿಗೆ ಲಭ್ಯವಾಗಲಿದೆ ಹೊಸ ಆ್ಯಪ್‌

04:35 PM Jul 29, 2022 | Team Udayavani |

ಮಹಾನಗರ: ನಗರದಲ್ಲಿ ಕಸ ಸಂಗ್ರಹ ಆಗದಿದ್ದರೆ ಮೊಬೈಲ್‌ ಆ್ಯಪ್‌ನಲ್ಲೇ ದೂರು ನೀಡಬಹುದು. ಸಿಟಿ ಬಸ್‌ ಯಾವ ಸಮಯಕ್ಕೆ ಬರಲಿದೆ ಎಂಬ ಮಾಹಿತಿಯೂ ಇಲ್ಲಿ ಲಭ್ಯ. ಹೀಗೆ, ಸಿಟಿಯ ಪೂರ್ಣ ಅಪ್‌ಡೇಟ್‌ ಇನ್ನು ಮುಂದೆ ಮೊಬೈಲ್‌ನಲ್ಲೇ ಸಿಗಲಿದೆ. ಮಂಗಳೂರು ಸ್ಮಾರ್ಟ್‌ಸಿಟಿಯು “ಒನ್‌ ಟಚ್‌ ಮಂಗಳೂರು’ ಎಂಬ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದ್ದು, ಈಗ ಸಾರ್ವಜನಿಕರಿಗೆ ಲಭ್ಯವಾಗಿದೆ.

Advertisement

ಪಾನ್‌ಸಿಟಿ ಸೌಲಭ್ಯಗಳಾದ ಇಂಟಲಿಜೆಂಟ್‌ ಟ್ರಾನ್ಸ್‌ಪೋರ್ಟ್‌, ಘನತ್ಯಾಜ್ಯ ನಿರ್ವಹಣೆ, ನಗರದ ಪ್ರಮುಖ ಘಟನೆಗಳು, ಪ್ರವಾಸಿ ತಾಣಗಳು, ಪ್ರಮುಖ ಇವೆಂಟ್‌ಗಳು, ಸರ್ವೇ, ಹವಾಮಾನ ಸೇರಿದಂತೆ ವಿವಿಧ ಮಾಹಿತಿಗಳನ್ನು ಒಳಗೊಂಡಂತೆ ಸ್ಮಾರ್ಟ್‌ಸಿಟಿಯು ಆ್ಯಪ್‌ ಅಭಿವೃದ್ಧಿಗೊಳಿಸಿದೆ. ಮನೆಗಳಲ್ಲಿ ಕಸ ಸಂಗ್ರಹವಾಗದಿದ್ದರೂ ಆ್ಯಪ್‌ ಬಳಸಿ ದೂರು ನೀಡುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆಂದು ಸುಮಾರು 80,000 ಮನೆಗಳ ಮುಂದೆ ಕ್ಯೂ ಆರ್‌ ಕೋಡ್‌ ಅಳವಡಿಸಿದ್ದು, ಆ್ಯಪ್‌ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ನೇರವಾಗಿ ದೂರು ನೀಡಬಹುದು. ಆ ದೂರು ಸ್ಮಾರ್ಟ್‌ಸಿಟಿ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ಗೆ ಬಂದು ಅದು ಪಾಲಿಕೆ ಅಧಿಕಾರಿಗಳಿಗೆ ರವಾನೆಯಾಗುತ್ತದೆ.

ಮಂಗಳೂರಿನಲ್ಲಿ ಹವಾಮಾನ ಹೇಗಿದೆ? ವಾಯು ಗುಣಮಟ್ಟ ಯಾವ ರೀತಿ ಇದೆ ಎಂಬ ಮಾಹಿತಿಯೂ ಈ ಆ್ಯಪ್‌ನಲ್ಲಿಯೇ ದೊರಕುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕೆಂದು ನಗರದಲ್ಲಿ ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಕಚೇರಿ ಕಟ್ಟಡ, ಹಂಪನಕಟ್ಟೆಯಲ್ಲಿರುವ ಪುರಭವನ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಬೋಳಾರ ಬಿಇಒ ಕಚೇರಿ ಮತ್ತು ಬಂದರ್‌ನ ಕ್ರೆಸೆಂಟ್‌ ಶಾಲೆಯಲ್ಲಿ ಮಾಪನ ಅಳವಡಿಸಲಾಗಿದೆ. ಎಸ್‌ಒಎಸ್‌ ಬಟನ್‌ ಮೂಲಕ ಅಗ್ನಿಶಾಮಕ, ಪೊಲೀಸ್‌ ಕಂಟ್ರೋಲ್‌ ರೂಂಗೆ ತುರ್ತು ಕರೆ ಸೌಲಭ್ಯ ಅಳವಡಿಸಲಾಗಿದೆ.

ಮತ್ತಷ್ಟು ಅಪ್‌ಡೇಟ್‌ ಆಗಲಿದೆ ಆ್ಯಪ್‌ “ಒನ್‌ ಟಚ್‌ ಮಂಗಳೂರು’ ಆ್ಯಪ್‌ ಸದ್ಯದಲ್ಲೇ ಮತ್ತಷ್ಟು ಅಪ್‌ ಡೇಟ್‌ ಆಗಲಿದೆ. ಈಗಿರುವ ಸೇವೆಯ ಹೊರತಾಗಿಯೂ ಕಟ್ಟಡ ಪರವಾನಿಗೆ, ನಗರದಲ್ಲಿರುವ ಪಾರ್ಕಿಂಗ್‌ ಸ್ಥಳಗಳು, ಪಾಸ್‌ಪೋರ್ಟ್‌ ಪರಿಶೀಲನೆ, ಡ್ರೈವಿಂಗ್‌ ಲೈಸೆನ್ಸ್‌ ವಿವರ, ಪ್ರಮುಖ ರಸ್ತೆಗಳ ಮಾಹಿತಿ, ನೀರಿನ ಸೌಲಭ್ಯದ ಮಾಹಿತಿ, ಉದ್ದಿಮೆ ಮಾಹಿತಿ, ಪಡಿತರ ವಿವರ, ಮಹಿಳಾವಾಣಿ, ಆದಾಯ ವಿವರಗಳು, ಮತದಾರರ ಗುರುತಿನ ಚೀಟಿ, ನಗರ ಪ್ರದಕ್ಷಿಣಿ, ಆರ್‌ ಟಿಓ ದಂಡಗಳು, ಕಾಣೆಯಾದವರ ಮಾಹಿತಿ, ಸಾರ್ವಜನಿಕ ಅಹವಾಲು, ವಿಚಾರಣೆ, ದಂಡ ಕಟ್ಟುವ ವಿಧಾನಗಳು, ಉದ್ಯೋಗ ವಿವರಗಳು, ಜನ್ಮದಿನಾಂಕ ಸರ್ಟಿಫಿಕೇಟ್‌ ಒಳಗೊಂಡಂತೆ ಆ್ಯಪ್‌ ಅಭಿವೃದ್ಧಿಯಾಗಿದೆ.

ಆ್ಯಪ್‌ ಡೌನ್‌ಲೋಡ್‌ ಹೇಗೆ?

Advertisement

ಆಂಡ್ರಾಯ್ಡ ಫೋನ್‌ನಲ್ಲಿ ಪ್ಲೇಸ್ಟೋರ್‌ನಲ್ಲಿ ಲಭ್ಯವಾಗುವಂತೆ ಆ್ಯಪ್‌ ಸಿದ್ದಪಡಿಸಲಾಗಿದ್ದು, ಗೂಗಲ್‌ ಪ್ಲೇಸ್ಟೋರ್‌ನಲ್ಲಿ 1touchmangaluru ಎಂದು ಸರ್ಚ್‌ ಮಾಡಿದಾಕ್ಷಣ ಆ್ಯಪ್‌ ಕಾಣಿಸುತ್ತದೆ. ಡೌನ್‌ಲೋಡ್‌ ಮಾಡಿದ ಬಳಿಕ ಹೊಸತಾಗಿ ಎಕೌಂಟ್‌ ಕ್ರಿಯೇಟ್‌ ಮಾಡಬೇಕು. ಅಲ್ಲಿ, ಇ-ಮೇಲ್‌ ಐಡಿ, ಪಾಸ್‌ವರ್ಡ್‌, ಮೊಬೈಲ್‌ ನಂಬರ್‌ ಹಾಕಬೇಕು. ಆಗ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದಾಕ್ಷಣ ಒನ್‌ ಟಚ್‌ ಮಂಗಳೂರು ಆ್ಯಪ್‌ ಪುಟ ತೆರೆಯುತ್ತದೆ. ಅಲ್ಲಿ ವಿವಿಧ ಸೇವೆಗಳ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ.

ಸ್ಮಾರ್ಟ್‌ಸಿಟಿಯಿಂದ “ಒನ್‌ ಟಚ್‌ ಮಂಗಳೂರು’ ಎಂಬ ಆ್ಯಪ್‌ ಬಿಡುಗಡೆಗೊಂಡಿದ್ದು, ವಿವಿಧ ಸೇವೆಗಳನ್ನು ಒಳಗೊಂಡಿದೆ. ಮಂಗಳೂರಿನ ಸಾರ್ವಜನಿಕರು ಇದರ ಉಪಯೋಗ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಆ್ಯಪ್‌ ಮತ್ತಷ್ಟು ಅಪ್‌ಡೇಟ್‌ ಆಗಲಿದ್ದು, ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ನೀಡುವುದು ನಮ್ಮ ಉದ್ದೇಶ. -ಮನೋರಂಜನ್‌ ರಾವ್‌, ಸ್ಮಾರ್ಟ್‌ಸಿಟಿ ಡೆಪ್ಯೂಟಿ ಜನರಲ್‌ ಮ್ಯಾನೇಜರ್‌-ಐಟಿ

 

Advertisement

Udayavani is now on Telegram. Click here to join our channel and stay updated with the latest news.

Next