Advertisement

ಸ್ಮಾರ್ಟ್‌ ಮೀಟರ್‌ ಅಳವಡಿಕೆ: ಹಿಂದೆ ಬಿದ್ದ ರಾಜ್ಯ

12:27 AM May 23, 2024 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿಯನ್ನು ಹೊಂದಿರುವ ಕರ್ನಾಟಕ ಮಾಹಿತಿ ತಂತ್ರಜ್ಞಾನ ಸೇರಿ ಹಲವು ಕ್ಷೇತ್ರಗಳಲ್ಲಿ ಉಳಿದ ರಾಜ್ಯಗಳಿಗಿಂತ ಸಾಕಷ್ಟು ಮುಂದಿದೆ. ಆದರೆ ಅದೇ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ವಿದ್ಯುತ್‌ ಮೀಟರ್‌ಗಳ ಅಳವಡಿಕೆಯಲ್ಲಿ ಮಾತ್ರ ಹಿಂದುಳಿದ ರಾಜ್ಯಗಳಿಗಿಂತ ಸಾಕಷ್ಟು ಹಿಂದಿದೆ.

Advertisement

ಮೀಟರ್‌ ರೀಡಿಂಗ್‌ ಇಲ್ಲದೆ ತಾವಿದ್ದಲ್ಲಿಂದಲೇ ರೀಚಾರ್ಜ್‌ ಮಾಡಿಕೊಳ್ಳಬಹುದಾದ ಪ್ರಿಪೇಯ್ಡ ಮೀಟರ್‌ಗಳ ಅಳವಡಿಕೆಯಲ್ಲಿ ಅಸ್ಸಾಂ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣದಂತಹ ರಾಜ್ಯಗಳು ಸಾಕಷ್ಟು ಮುಂದೆ ಹೋಗಿವೆ. ಆದರೆ ಕರ್ನಾಟಕವು ಸ್ವತಃ ರಾಜ್ಯ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಹಳೆಯ ಮೀಟರ್‌ಗಳಿಗೇ ಜೋತುಬಿದ್ದಿದೆ.

ವಾರ್ಷಿಕ ದರ ಪರಿಷ್ಕರಣೆ ಸಂದರ್ಭದಲ್ಲಿ ಹೊಸ ವಿದ್ಯುತ್‌ ಸಂಪರ್ಕಗಳಿಗೆ ಕಡ್ಡಾಯವಾಗಿ ಇನ್ನು ಮುಂದೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮಾಡಬೇಕು ಎಂದು ಎಪ್ರಿಲ್‌ 1ರಿಂದ ಅನ್ವಯ ಆಗುವಂತೆ ಕೆಇಆರ್‌ಸಿ ಆದೇಶ ಹೊರಡಿಸಿದೆ. ಆದರೆ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು, ಆಯೋಗದ ಸೂಚನೆಯಂತೆ ಎಪ್ರಿಲ್‌ 1ರಿಂದ ದರ ಪರಿಷ್ಕರಣೆಯನ್ನಂತೂ ಕಟ್ಟುನಿಟ್ಟಾಗಿ ಜಾರಿಗೊಳಿಸಿದವು. ಸ್ಮಾರ್ಟ್‌ ಮೀಟರ್‌ಗಳ ಸೂಚನೆಯಂತೆ ಮರೆತವು. ಪರಿಣಾಮ ಜನ ಈ ಗ್ರಾಹಕ ಸ್ನೇಹಿ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದಾರೆ.

2 ತಿಂಗಳಲ್ಲಿ 80 ಸಾವಿರ ಸಂಪರ್ಕ
ಸ್ಮಾರ್ಟ್‌ಮೀಟರ್‌ ಅಳವಡಿಕೆಗೆ ಆದೇಶ ಹೊರಡಿಸಿದ ಅನಂತರವೇ ಅಂದರೆ ಕಳೆದೆರಡು ತಿಂಗಳಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ವ್ಯಾಪ್ತಿಯಲ್ಲೇ ಅಂದಾಜು 40 ಸಾವಿರ ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಉಳಿದ ನಾಲ್ಕು ಎಸ್ಕಾಂಗಳಲ್ಲಿ ಸರಿಸುಮಾರು 35-40 ಸಾವಿರ ಹೊಸ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಅವೆಲ್ಲವುಗಳಿಗೂ ಸ್ಟಾಂಡರ್ಡ್‌ ಮೀಟರ್‌ಗಳನ್ನೇ ಅಳವಡಿಸಿಕೊಂಡಿದ್ದಾರೆ. ಈ ಮಧ್ಯೆ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 25 ಲಕ್ಷ ಸಾಂಪ್ರದಾಯಿಕ (ಡಿಸ್ಕ್ಗಳಿದ್ದ) ಮೀಟರ್‌ಗಳನ್ನು ಬದಲಿಸಿ, ಸ್ಟಾಂಡರ್ಡ್‌ ಮೀಟರ್‌ಗಳನ್ನು ಹಾಕಿದ್ದಾರೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮಾತ್ರ ಎಸ್ಕಾಂಗಳು ಮೀನಮೇಷ ಎಣಿಸುತ್ತಿವೆ ಎಂದು ಆರೋಪ ಕೇಳಿಬರುತ್ತಿದೆ.

ಈ ನಡುವೆ ಸಾರ್ವತ್ರಿಕ ಚುನಾವಣೆ ನೆಪದಲ್ಲಿ ಹೊಸ ಸಂಪರ್ಕಗಳಿಗೆ ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ ವ್ಯವಸ್ಥೆ ಜಾರಿಗೆ ಅಕ್ಟೋಬರ್‌ವರೆಗೆ ಸಮಯಾವಕಾಶ ನೀಡುವಂತೆ ಎಸ್ಕಾಂಗಳು ಕೆಇಆರ್‌ಸಿ ಮೊರೆ ಹೋಗಿದ್ದವು. ಆದರೆ ಆಯೋಗವು ಅದನ್ನು ತಳ್ಳಿಹಾಕಿದೆ. ತತ್‌ಕ್ಷಣದಿಂದಲೇ ಈ ಹೊಸ ವ್ಯವಸ್ಥೆ ಅಳವಡಿಕೆ ಕಾರ್ಯ ಕೈಗೆತ್ತಿಕೊಂಡರೂ ಟೆಂಡರ್‌ ಪ್ರಕ್ರಿಯೆ ಮತ್ತಿತರ ಸಿದ್ಧತೆಗಳನ್ನು ಕೈಗೊಂಡು ಜಾರಿಗೊಳಿಸಲು ಕನಿಷ್ಠ ಮೂರು ತಿಂಗಳು ಹಿಡಿಯುತ್ತದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

Advertisement

ಇನ್ನು ಸ್ಮಾರ್ಟ್‌ ಮೀಟರ್‌ಗೆ ಪೂರಕವಾಗಿ ಸಾಫ್ಟ್ವೇರ್‌ ಅಥವಾ ಸರ್ವರ್‌ ಎಸ್ಕಾಂಗಳ ಬಳಿ ಇಲ್ಲ. ಉದಾಹರಣೆಗೆ ಮೀಟರ್‌ ಬಿಲ್ಲಿಂಗ್‌ ಡೇಟಾ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳ ನಿರ್ವಹಣೆಗೆ ಅಗತ್ಯವಿರುವ ಮೀಟರ್‌ ಡೇಟಾ ಮ್ಯಾನೇಜರ್‌ (ಎಂಡಿಎಂ), ದತ್ತಾಂಶ ವಿಶ್ಲೇಷಣೆ ಮತ್ತಿತರ ಕಾರ್ಯಕ್ಕೆ ಹೆಡ್‌ ಎಂಡ್‌ ಸಿಸ್ಟ್‌ಂ (ಎಚ್‌ಇಎಸ್‌) ಅಳವಡಿಸಿಕೊಂಡಿಲ್ಲ. ಹಾಗಾಗಿ, ಹೊಸ ತಂತ್ರಜ್ಞಾನ ಅಳವಡಿಕೆ ತಕ್ಷಣಕ್ಕೆ ಅನುಮಾನ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಮಾರ್ಟ್‌ ಮೀಟರ್‌ ಉಪಯೋಗ ಏನು?
– ಪ್ರಿಪೇಯ್ಡ, ಪೋಸ್ಟ್‌ಪೇಯ್ಡ ಜತೆಗೆ ಗ್ರಾಹಕರು ಉತ್ಪಾದಿಸುವ ಸೌರವಿದ್ಯುತ್‌ ಅನ್ನು ಸಹ ರೀಡಿಂಗ್‌ ಮಾಡಬಹುದು
– ತಿಂಗಳ ಬಿಲ್‌ಗಾಗಿ ಕಾಯಬೇಕಾದ ಆವಶ್ಯಕತೆ ಇಲ್ಲ. ಗ್ರಾಹಕರೇ ಮೀಟರ್‌ ರೀಡಿಂಗ್‌ ಮಾಡಬಹುದು
– ಎಷ್ಟು ದಿನಗಳಿಗೆ ವಿದ್ಯುತ್‌ ಬೇಕು ಅಂತ ಗ್ರಾಹಕರೇ ತೀರ್ಮಾನಿಸಿ, ಅದಕ್ಕೆ ತಕ್ಕಂತೆ ರೀಚಾರ್ಜ್‌ ಮಾಡಿಕೊಳ್ಳಬಹುದು. ಕನಿಷ್ಠ ಒಂದು ವಾರದ ರೀಚಾರ್ಜ್‌ ಕೂಡ ಮಾಡಲು ಅವಕಾಶ ಇರುತ್ತದೆ
– ನಿಗದಿತ ಶುಲ್ಕ ನೀಡುವ ಆವಶ್ಯಕತೆ ಇರುವುದಿಲ್ಲ
– ಎಸ್ಕಾಂಗಳ ಮೇಲಿನ ಒತ್ತಡವೂ ಕಡಿಮೆ ಆಗಲಿದೆ

ವಿವಿಧ ರಾಜ್ಯಗಳಲ್ಲಿ ಎಷ್ಟು ಪ್ರಿಪೇಯ್ಡ ಮೀಟರ್‌ ಅಳವಡಿಕೆ? (ಅಂದಾಜು)
– ಆಸ್ಸಾಂ- 6 ಲಕ್ಷ
– ಮಧ್ಯಪ್ರದೇಶ- 6 ಲಕ್ಷ
– ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿ- 2.5 ದಶಲಕ್ಷ
– ಬಿಹಾರ- 14 ಲಕ್ಷ

-ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next