ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಆತ್ಯಾಕರ್ಷಕವಾಗಿ ಅಭಿವೃದ್ಧಿಪಡಿಸಲಿದ್ದು, ಸರ್ಕಾರಿ ಶಾಲೆಗಳ ಬಗೆಗಿನ ಜನರ ದೃಷ್ಟಿಕೋನವೇ ಬದಲಾಗುವಂತೆ ಮಾಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಒಟ್ಟು 25.67 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಘಂಟಿಕೇರಿಯ ಶಾಸಕರ ಸರ್ಕಾರಿ ಮಾದರಿ ಶಾಲೆ ನಂ.5ರ ಆವರಣದಲ್ಲಿ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಾಸಕರ ಮಾದರಿ ಶಾಲೆ ಹಾಗೂ ಇದೇ ಆವರಣದಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯನ್ನು ಖಾಸಗಿ ಶಾಲೆಗಳಿಗಿಂತ ಭಿನ್ನವಾಗಿ ಅಭಿವೃದ್ಧಿಪಡಿಸುವುದು ನನ್ನ ಬಹುದಿನದ ಕನಸಾಗಿದೆ. ಶಾಲೆ ಆವರಣದಲ್ಲಿ ಹಸಿರೀಕರಣ, ಶಾಲಾ ಕೊಠಡಿಗಳ ಸೌಂದರ್ಯಿಕರಣ, ತಳಹಾಸು ಬದಲಾವಣೆ, ಹೈಟೆಕ್ ಶೌಚಾಲಯ, ಗ್ರಿಲ್, ಸ್ಮಾರ್ಟ್ ಬೋರ್ಡ್, ಕಂಪ್ಯೂಟರ್, ಯುಪಿಎಸ್ ಅಳವಡಿಕೆ, ಕಾಂಪೌಂಡ್ ಗೋಡೆ ನಿರ್ಮಾಣ, ಸುಣ್ಣ-ಬಣ್ಣ ಸೇರಿದಂತೆ ಇನ್ನಿತರೆ ಸೌಕರ್ಯ ಒದಗಿಸಿ ಹೈಟೆಕ್ ಸ್ಪರ್ಶ ನೀಡಲಿದ್ದು, ಇವೆರಡೂ ಶಾಲೆ ಸಮಗ್ರ ಅಭಿವೃದ್ಧಿಗಾಗಿಯೇ 1.30 ಕೋಟಿ ಮೀಸಲಿಡಲಾಗಿದೆ ಎಂದರು.
ಅತ್ಯಂತ ಹಿಂದುಳಿದಿರುವ ಸೆಟ್ಲಮೆಂಟ್ ಹಾಗೂ ಘಂಟಿಕೇರಿ ಪ್ರದೇಶವನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ 19.07 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸ ಲಾಗುವುದು. ತೊರವಿಗಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 1.02 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಗೊಳಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯ ಯಮನೂರು ಜಾಧವ್, ಮುಖಂಡರಾದ ಶಫಿ ಮುದ್ದೇಬಿಹಾಳ, ಶೇಖಣ್ಣ ಬೆಂಡಿಗೇರಿ, ಶರೀಫ್ ಅದವಾನಿ, ಬಸವರಾಜ ಚಟಿ, ಶ್ಯಾಮ್ ಜಾಧವ, ಪ್ರಸನ್ನ ಮಿರಜಕರ, ನಾಸಿರ ಅಸುಂಡಿ, ಯಲ್ಲಪ್ಪ ಮಡಿವಾಳರ, ರವಿ ಜಾಧವ, ಭಾಸ್ಕರ ಮುತ್ತಗಿ, ಎಸ್‌ಡಿಎಂಸಿ ಅಧ್ಯಕ್ಷೆ ಶೈಲಜಾ , ಮುಖ್ಯ ಶಿಕ್ಷಕಿ ಎಸ್.ಎಸ್. ಖೇಣಿ, ಶಿಕ್ಷಕರಾದ ಎ.ಎಂ.ಚುಹೇ, ಸಿ.ಎಸ್. ಪೂಜಾರ, ಪಿ.ಎಚ್.ನದಾಫ್, ವಿ.ಐ.ಕುರುಬರ ಇನ್ನಿತರರಿದ್ದರು.