Advertisement

ಸ್ಮಾರ್ಟ್‌ಸಿಟಿ ಕಾಮಗಾರಿ ಮಾರ್ಚ್‌ನೊಳಗೆ ಪೂರ್ಣ ; ಸಚಿವ ಬೈರತಿ ಬಸವರಾಜ್‌ ಸೂಚನೆ

12:41 AM Feb 02, 2022 | Team Udayavani |

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾದ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ತಿಳಿಸಿದ್ದಾರೆ.

Advertisement

ಮಂಗಳೂರು ಪಾಲಿಕೆ, ಮುಡಾ, ಸ್ಮಾರ್ಟ್‌ ಸಿಟಿ ಹಾಗೂ ಕೆಯುಐಡಿಎಫ್‌ಸಿವತಿಯಿಂದ ನಗರದ ವಿವಿಧ ಕಡೆ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಮಂಗಳವಾರ ಮುಂಜಾನೆ ವೀಕ್ಷಿಸಿದ ಅನಂತರ ಸುದ್ದಿಗಾರರ ಜತೆಗೆ ಮಾತನಾಡಿದರು.

ನಗರದಲ್ಲಿ ಸ್ಮಾರ್ಟ್‌ಸಿಟಿ ಸೇರಿದಂತೆ ವಿವಿಧ ಕಾಮಗಾರಿಗಳು ಬಹಳಷ್ಟು ವಿಳಂಬವಾಗುತ್ತಿವೆ ಎಂಬ ದೂರು ಕೇಳಿಬಂದಿದೆ. ಹೀಗಾಗಿ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ಮಾರ್ಚ್‌ ಗಡುವು
ಮೇ ತಿಂಗಳ ಒಳಗೆ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೇಂದ್ರಸರಕಾರ ಸೂಚನೆ ನೀಡಿದ್ದರೂ ನಾವು ಆದಷ್ಟು ಶೀಘ್ರ ಮುಗಿಸಲು ಒತ್ತು ನೀಡಿದ್ದೇವೆ. ಈಗಾಗಲೇ ಕೈಗೆತ್ತಿಕೊಂಡಿರುವ ಮಾರುಕಟ್ಟೆ, ಪಾರ್ಕ್‌, ಸ್ಟೇಡಿಯಂ, ರಸ್ತೆ ಇತ್ಯಾದಿ ಕಾಮಗಾರಿಗಳನ್ನು ಆದಷ್ಟು ಶೀಘ್ರಮುಗಿಸಬೇಕು. ಸ್ವತ್ಛತೆಗೆ ಆದ್ಯತೆ ನೀಡಬೇಕು. ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಳಪೆ ಕಾಮಗಾರಿ; ಕ್ರಿಮಿನಲ್‌ ಕೇಸು ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕಳಪೆ ಕಾಮಗಾರಿಯ ದೂರುಗಳು ಕೇಳಿ ಬಂದಲ್ಲಿ ತನಿಖೆ ನಡೆಸಲಾಗುವುದು. ಕಳಪೆ ಕಾಮಗಾರಿ ಸ್ಪಷ್ಟವಾದರೆ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಕೇಸು ದಾಖಲಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಕೆಯುಐಡಿ ಎಫ್‌ಸಿ ಮ್ಯಾನೆಜಿಂಗ್‌ ಡೈರೆಕ್ಟರ್‌ ಡಾ| ಎಂ.ಟಿ. ರೆಜು, ಮೇಯರ್‌ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಸುಮಂಗಳಾ ರಾವ್‌, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಪಾಲಿಕೆ ಮುಖ್ಯ ಸಚೇತಕ ಸುಧಿಧೀರ್‌ ಶೆಟ್ಟಿ ಕಣ್ಣೂರು, ಸ್ಮಾರ್ಟ್‌ಸಿಟಿ ಎಂಡಿ ಪ್ರಶಾಂತ್‌ ಕುಮಾರ್‌ ಮಿಶ್ರಾ, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಉಪಸ್ಥಿತರಿದ್ದರು.

ಶಾಸಕರಾದ ಡಾ| ವೈ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ವಿ.ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು. ಬಳಿಕ ಉಳ್ಳಾಲ ಹಾಗೂ ಸುರತ್ಕಲ್‌ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.

ಮಂಗಳೂರಿಗೆ 100 ಕೋ.ರೂ. ವಿಶೇಷ ಅನುದಾನ
ಮಂಗಳೂರು ನಗರದ ಅಭಿವೃದ್ಧಿಯ ದೃಷ್ಟಿಯಿಂದ 100 ಕೋ.ರೂ. ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಯವರಿಗೆ ಈಗಾಗಲೇ ಕೋರಿಕೆ ಸಲ್ಲಿಸಲಾಗಿದೆ. ಹೀಗಾಗಿ ಖರ್ಚಾಗದೆ ಉಳಿದ ಹಣವನ್ನು ಖರ್ಚು ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವ ಬೈರತಿ ಬಸವರಾಜ್‌ ತಿಳಿಸಿದರು.

ಕಾಮಗಾರಿ ನಡೆಸದವರ ಗುತ್ತಿಗೆ ರದ್ದು
ಮಂಗಳೂರು ಪಾಲಿಕೆ, ಸ್ಮಾರ್ಟ್‌ ಸಿಟಿ, ಮುಡಾ ಕಾಮಗಾರಿಗಳ ಬಗ್ಗೆ ಪಾಲಿಕೆ ಸಭಾಂಗಣದಲ್ಲಿ ಸಚಿವ ಬೈರತಿ ಬಸವರಾಜ್‌ ಸಭೆ ನಡೆಸಿದರು. ಯಾವುದೇ ಯೋಜನೆಯ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣ ಗೊಳಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಹಾಗೂ ಟೆಂಡರ್‌ ವಹಿಸಿಕೊಂಡು ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರ ಗುತ್ತಿಗೆ ರದ್ದುಪಡಿಸಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಸಚಿವರು ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next