Advertisement

ಮೂರು ವರ್ಷಗಳು ಕಳೆದರೂ ವೇಗ ಪಡೆಯದ “ಸ್ಮಾರ್ಟ್‌ ಸಿಟಿ’ಕಾಮಗಾರಿಗಳು !

11:38 PM Nov 04, 2019 | Team Udayavani |

ಮಂಗಳೂರು ನಗರ ಬೆಳೆದಂತೆ ಇಲ್ಲಿನ ಸಮಸ್ಯೆಗಳು ಹೆಚ್ಚುತ್ತಿದ್ದು, ಟ್ರಾಫಿಕ್‌-ಪಾರ್ಕಿಂಗ್‌, ಒಳಚರಂಡಿ, ಫುಟ್‌ಪಾತ್‌, ತ್ಯಾಜ್ಯ ನಿರ್ವಹಣೆ ಜ್ವಲಂತ ನಗರ ಸಮಸ್ಯೆಗಳಾಗಿ ಕಾಡುತ್ತಿದೆ. 5 ವರ್ಷಗಳಿಗೊಮ್ಮೆ ಪಾಲಿಕೆ ಚುನಾವಣೆ ನಡೆದು ವಿವಿಧ ರಾಜಕೀಯ ಪಕ್ಷಗಳಿಂದ ಜನಪ್ರತಿನಿಧಿಗಳು ಆಯ್ಕೆಯಾಗಿ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇನ್ನೂ ದೊರಕಿಲ್ಲ. ಇದೀಗ ಮತ್ತೆ ಚುನಾವಣೆ ಬಂದಿದ್ದು, ನಗರದ ಆದ್ಯತೆಯ ನಾಗರಿಕ ಸಮಸ್ಯೆಗಳಿಗೆ ಮುಂದಿನ ಆಡಳಿತಾವಧಿಯಲ್ಲಾದರೂ ಮುಕ್ತಿ ಸಿಗಬೇಕೆಂಬುದು ಮತದಾರರ ನಿರೀಕ್ಷೆಯಾಗಿದ್ದು, ಇದಕ್ಕೆ “ಸುದಿನ’ ಜನರ ಧ್ವನಿಯಾಗಿ “ನಗರ ಸಮಸ್ಯೆ-ಜನರ ನಿರೀಕ್ಷೆ’ ಅಭಿಯಾನ ಪ್ರಾರಂಭಸಿದೆ.

Advertisement

ಮಹಾನಗರ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಕೇಂದ್ರ- ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದ “ಮಂಗಳೂರು ಸ್ಮಾರ್ಟ್‌ ಸಿಟಿ’ ಯೋಜನೆ ಘೋಷಣೆಯಾಗಿ ಮೂರು ವರ್ಷಗಳು ಸಂದರೂ ಅನುಷ್ಠಾನ ಪ್ರಕ್ರಿಯೆ ಮಾತ್ರ ಇನ್ನೂ ಮಂದಗತಿಯಲ್ಲೇ ನಡೆಯುತ್ತಿದೆ!

ಸ್ಮಾರ್ಟ್‌ಸಿಟಿ ಅನುಷ್ಠಾನದ ನೆಲೆಯಲ್ಲಿ ಮಂಗಳೂರು ಪಾಲಿಕೆಗೆ ಹೆಚ್ಚಿನ ಜವಾಬ್ದಾರಿ, ಹೊಣೆಗಾರಿಕೆಯೂ ಇರುವುದರಿಂದ ಮುಂದಿನ ಪಾಲಿಕೆ ಆಡಳಿತ ನಡೆಸುವವರಿಗೆ ಈ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಮುತುವರ್ಜಿ ವಹಿಸುವ ಮಹತ್ತರ ಜವಾಬ್ದಾರಿ ಇದೆ. ಸ್ಮಾರ್ಟ್‌ಸಿಟಿ ಅನುಷ್ಠಾನಕ್ಕೆ ಪ್ರತ್ಯೇಕ ಸಂಸ್ಥೆ ಜವಾಬ್ದಾರಿ ವಹಿಸಿದ್ದರೂ ಪಾಲಿಕೆಯ ಸಮಗ್ರ ಅಭಿವೃದ್ಧಿಯ ಸಂಕಲ್ಪದಿಂದ ಪಾಲಿಕೆ ಆಡಳಿತ ನಡೆಸುವವರು ಕೂಡ ಈ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದರೆ ಉತ್ತಮ.

ಸ್ಮಾರ್ಟ್‌ಸಿಟಿ ಯೋಜನೆಗೂ ಪಾಲಿಕೆಗೂ ನೇರ ಸಂಬಂಧ ಇಲ್ಲದ ಕಾರಣದಿಂದ ಈ ಯೋಜನೆಯನ್ನು ಪ್ರಶ್ನಿಸುವ ನೇರ ಅಧಿಕಾರ ಪಾಲಿಕೆಗೆ ಇಲ್ಲ. ಹೀಗಾಗಿ ಪಾಲಿಕೆಯೂ ಇದರ ಬಗ್ಗೆ ಜಾಣ ಮೌನಕ್ಕೆ ಶರಣಾಗಿತ್ತು. ಕೇವಲ ಸಲಹೆ-ಸೂಚನೆಗಷ್ಟೇ ಪಾಲಿಕೆಯನ್ನು ಸೀಮಿತ ಮಾಡಿರುವ ಕಾರಣದಿಂದ ಯೋಜನೆಗೆ ವೇಗ ನೀಡುವ ಕೆಲಸ ಪಾಲಿಕೆಯಿಂದ ಅಥವಾ ಸ್ಥಳಿಯಾಡಳಿತದಿಂದ ನಡೆಯಲೇ ಇಲ್ಲ. ಸ್ಮಾರ್ಟ್‌ಸಿಟಿ ಯೋಜನೆಯ ಬಗ್ಗೆ ಧ್ವನಿಗೂಡಿಸುವ, ಯೋಜನೆಗೆ ವೇಗ ನೀಡುವ ಕೆಲಸವನ್ನು ಮುಂದಿನ ಆಡಳಿತಗಾರರು ನಡೆಸಬೇಕಾಗಿದೆ.

ಆಡಳಿಗಾರರ ಇಚ್ಛಾಶಕ್ತಿ ಕೊರತೆ, ಅಧಿಕಾ ರಿಗಳ ನಿರಾಸಕ್ತಿ, ಯೋಜನೆ ರೂಪಿಸುವಲ್ಲಿ ಆಗಿರುವ ವೈಫಲ್ಯ ಸಹಿತ ಹಲವು ಕಾರಣದಿಂದ ಸ್ಮಾರ್ಟ್‌ಸಿಟಿ ಕೇವಲ ಘೋಷಣೆ-ಬೋರ್ಡ್‌ನಲ್ಲಿ ಬಾಕಿಯಾಗಿದೆ. ಹೀಗಾಗಿ ಮುಂಬರುವ ಪಾಲಿಕೆ ಆಡಳಿತ ವ್ಯವಸ್ಥೆ ಇದರ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಅಗತ್ಯ. ಈ ನಿಟ್ಟಿನಲ್ಲಿ ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಸ್ಮಾರ್ಟ್‌ಸಿಟಿ ಯೋಜನೆಯು ಪರಿಣಾಮ ಕಾರಿಯಾಗಿ ಅನುಷ್ಠಾನಕ್ಕೆ ಬರುವ ಮೂಲಕ ನೂರಾರು ಕೋಟಿ ಅನುದಾನ ಪಡೆ ಯುವ ಈ ಯೋಜನೆ ಕಾಮಗಾರಿಗಳು ಕೂಡ ಪಡೆಯ ಬೇಕೆಂಬುದು ಜನರ ನಿರೀಕ್ಷೆಯಾಗಿದೆ.

Advertisement

2016 ಸೆ. 20ರಂದು “ಮಂಗಳೂರು ಸ್ಮಾರ್ಟ್‌ಸಿಟಿ’ ಪಟ್ಟಿಯಲ್ಲಿ ಸೇರ್ಪಡೆಗೊಂಡಾಗ, ನಗರವಾಸಿಗಳಲ್ಲಿ ಹೊಸ ನಿರೀಕ್ಷೆ ಹಾಗೂ ಮಂಗಳೂರು ವಿಭಿನ್ನ ನೆಲೆಯಲ್ಲಿ ಅಭಿವೃದ್ಧಿಯ ಬಗ್ಗೆ ಕಲ್ಪನೆ ಮೂಡಿತ್ತು. ಆದರೆ ವರ್ಷ ಮೂರು ಸಮೀಪಿಸುತ್ತಿದ್ದರೂ ಸ್ಮಾರ್ಟ್‌ಸಿಟಿ ಯೋಜನೆ ಮಾತ್ರ ಪೂರ್ಣ ಮಟ್ಟದಲ್ಲಿ ಅನುಷ್ಠಾನಕ್ಕೆ ಹಂತಕ್ಕೆ ಬರಲಿಲ್ಲ.

ಹಂಪನಕಟ್ಟೆಯಲ್ಲಿ ನೂತನವಾಗಿ ಕ್ಲಾಕ್‌ ಟವರ್‌ ನಿರ್ಮಾಣಕ್ಕೆ ಪಾಲಿಕೆಯು ಕಾಮಗಾರಿ ಆರಂಭಿಸಿದ ಬಳಿಕ ಆ ಯೋಜ ನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಗೆ ಪರಿವರ್ತಿಸಲಾಗಿತ್ತು. ಪ್ರಸ್ತುತ ಈ ಕಾಮಗಾರಿಯೊಂದು ಮಾತ್ರ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಂತಿಮ ಹಂತದಲ್ಲಿದೆ. ಉಳಿದಂತೆ 20 ಸ್ಮಾರ್ಟ್‌ ಬಸ್‌ನಿಲ್ದಾಣಗಳಲ್ಲಿ 17 ನಿಲ್ದಾಣಗಳ ಭೌತಿಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಇದು ಪ್ರಯಾಣಿಕ ಸ್ನೇಹಿಯಾಗಿಲ್ಲ ಹಾಗೂ ದುಬಾರಿ ವೆಚ್ಚ ಮಾಡಲಾಗಿದೆ ಎಂಬ ಕಾರಣದಿಂದ ವಿವಾದಕ್ಕೂ ಕಾರಣವಾಯಿತು. ಹಂಪನಕಟ್ಟೆಯ ಎ.ಬಿ. ಶೆಟ್ಟಿ ವೃತ್ತದಿಂದ ಕ್ಲಾಕ್‌ಟವರ್‌ವರೆಗೆ ಸ್ಮಾರ್ಟ್‌ ರೋಡ್‌ ಕಾಮಗಾರಿ ಚಾಲನೆಯಲ್ಲಿದೆ. ಪುರಭವನ ಮುಂಭಾಗ ಸ್ಮಾರ್ಟ್‌ ಅಂಡರ್‌ಪಾಸ್‌ ಕಾಮಗಾರಿ ಶುರುವಾಗಿದೆ. ಕೇಂದ್ರ ಮಾರುಕಟ್ಟೆ ಕಾಮಗಾರಿ ಟೆಂಡರ್‌ನಲ್ಲಿ ಬಾಕಿಯಾಗಿದೆ. 13 ಸರಕಾರಿ ಸರಕಾರಿ ಶಾಲೆಗಳನ್ನು ಇ-ಸ್ಮಾರ್ಟ್‌ ಸ್ಕೂಲ್‌ ಆಗಿ ರೂಪಿಸಲು ಉದ್ದೇಶಿಸಿದ್ದು ಇದರಲ್ಲಿ 2 ಶಾಲೆ ಆಗಿದೆ. ಉಳಿದದ್ದು ಬಾಕಿಯಿದೆ. ಇನ್ನುಳಿದಂತೆ ಬಹು ಅಂತಸ್ತು ಕಾರು ಪಾರ್ಕಿಂಗ್‌ ಟಂಡರ್‌ ಆಗಿದೆ. ನಗರದ ಬಂದರು ಸಹಿತ ಅಲ್ಲಲ್ಲಿ ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನೆಲ್ಲ ಅಗೆದು ಹಾಕಿದ್ದು ಕಾಮಗಾರಿ ಚಾಲನೆಯಲ್ಲಿದೆ ಎಂದು ಬೋರ್ಡ್‌ ನೇತು ಹಾಕಲಾಗಿದೆ!

ಮೀಟಿಂಗ್‌-ಟೆಂಡರ್‌-ಪರಿಶೀಲನೆ-ಸರ್ವೆ ಹಂತದಲ್ಲಿ
38.79 ಕೋ.ರೂ.ವೆಚ್ಚದಲ್ಲಿ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಕಾಂಪೊನೆಂಟ್ಸ್‌, 94 ಕೋ.ರೂ.ವೆಚ್ಚದಲ್ಲಿ ಹಂಪನಕಟ್ಟದಲ್ಲಿ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ನಿರ್ಮಾಣ, 10 ಕೋ.ರೂ.ವೆಚ್ಚದಲ್ಲಿ ಸ್ಮಾರ್ಟ್‌ ರಸ್ತೆ, 7 ಕೋ.ರೂ.ವೆಚ್ಚದಲ್ಲಿ ಸುಸಜ್ಜಿತ ಒಳಚರಂಡಿ ವ್ಯವಸ್ಥೆ, 519 ಕೋ.ರೂ.ವೆಚ್ಚದಲ್ಲಿ ಪಂಪ್‌ವೆಲ್‌ನಲ್ಲಿ ಬಸ್‌ ಟರ್ಮಿನಲ್‌, 138 ಕೋ.ರೂ.ವೆಚ್ಚದಲ್ಲಿ ಸೆಂಟ್ರಲ್‌ ಹಾಗೂ ಮೀನು ಮಾರುಕಟ್ಟೆ ಯೋಜನೆ, ಕ್ಲಾಕ್‌ ಟವರ್‌ ಮುಂಭಾಗ ಸುಂದರೀಕರಣ, 9.66 ಕೋ.ರೂ.ವೆಚ್ಚದಲ್ಲಿ ವೆನಾÉಕ್‌, ಲೇಡಿಗೋಶನ್‌ ಆಸ್ಪತ್ರೆ ಮೇಲ್ದರ್ಜೆಗೆ, 3.50 ಕೋ.ರೂ.ವೆಚ್ಚದಲ್ಲಿ ಒಳಚರಂಡಿ ಯೋಜನೆ ಸುಧಾರಣೆ, 16 ಕೋ.ರೂ.ವೆಚ್ಚದಲ್ಲಿ ಇ-ಸ್ಮಾರ್ಟ್‌ ಸರಕಾರಿ ಶಾಲೆ, 3.3 ಕೋ.ರೂ.ವೆಚ್ಚದಲ್ಲಿ ಕೌಶಲಾಭಿವೃದ್ಧಿ ಹಾಗೂ ರಕ್ಷಣಾ ತರಬೇತಿ ಕೇಂದ್ರ, 2 ಕೋ.ರೂ.ವೆಚ್ಚದಲ್ಲಿ ಮಳೆ ನೀರು ಕೊಯ್ಲು ಯೋಜನೆ, 2.73 ಕೋ.ರೂ.ವೆಚ್ಚದಲ್ಲಿ ಸರಕಾರಿ ಕಚೇರಿಗಳಿಗೆ ಎಲ್‌ಇಡಿ ಲೈಟ್‌, 31 ಕೋ.ರೂ.ವೆಚ್ಚದಲ್ಲಿ ಎಲ್‌ಇಡಿ ದಾರಿದೀಪ ಹೀಗೆ ಹಲವು ಯೋಜನೆಗಳಿಗೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಉದ್ದೇಶಿಸಲಾಗಿದ್ದರೂ, ಎಲ್ಲವೂ ಮೀಟಿಂಗ್‌-ಟೆಂಡರ್‌-ಪರಿಶೀಲನೆ-ಸರ್ವೆ ಹಂತದಲ್ಲಿದೆ.

ಯೋಜನೆ ಹಂತದಲ್ಲೇ ಉಳಿದ ಸುಸಜ್ಜಿತ ಬಸ್‌ ನಿಲ್ದಾಣ
ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಿಸಲು ದ.ಕ. ಜಿಲ್ಲಾಡಳಿತ ಕೆಲವು ವರ್ಷದ ಹಿಂದೆ ಯೋಜನೆ ರೂಪಿಸಿತ್ತು. ಅದಕ್ಕಾಗಿ ಭೂಮಿ ಕೂಡ ಕಾಯ್ದಿರಿಸಿತ್ತು. ಆದರೆ ಹೆದ್ದಾರಿ ಸಹಿತ ಬೇರೆ ಬೇರೆ ಕಾರಣಗಳಿಂದ ಈ ಯೋಜನೆ ನಿಧಾನವಾಗಿ ಕೊನೆಗೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಇದನ್ನು ಕೈಗೆತ್ತಿಕೊಳ್ಳಲಾಯಿತು. ಆದರೆ ಕೆಲವೇ ತಿಂಗಳಿನಲ್ಲಿ ಈ ಯೋಜನೆ ಪಂಪ್‌ವೆಲ್‌ನಿಂದ ಪಡೀಲ್‌ಗೆ ಸ್ಥಳಾಂತರವಾಯಿತು. ಜಿಲ್ಲಾಧಿಕಾರಿ ನೂತನ ಸಂಕೀರ್ಣ ನಿರ್ಮಾ ಣವಾಗುವ ವ್ಯಾಪ್ತಿಯಲ್ಲಿಯೇ ಹೊಸ ಬಸ್‌ಸಂಕೀರ್ಣಕ್ಕೆ ಯೋಚಿಸಲಾಗಿತ್ತು. ಇದೀಗ ಕೊನೆಯ ಹಂತದಲ್ಲಿ ಬಸ್‌ನಿಲ್ದಾಣ ಮತ್ತೆ ಪಂಪ್‌ವೆಲ್‌ಗೆ ಸ್ಥಳಾಂತರವಾಗಿದೆ!

ಅಧಿಕಾರಿಗಳ ಬದಲಾವಣೆ; ವೇಗಕ್ಕೆ ಬ್ರೇಕ್‌!
ಎಸ್‌ಪಿವಿ (ವಿಶೇಷ ಉದ್ದೇಶ ವಾಹಕ) ಅಡಿಯಲ್ಲಿ 2017ರಲ್ಲಿ ನಿರ್ದೇಶಕ ಮಂಡಳಿ ರಚಿಸಲಾಗಿತ್ತು. ಇದರಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಕೆಯುಡಿಎಫ್‌ಸಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಸಹಿತ ಬೇರೆ ಬೇರೆ ಇಲಾಖೆಯ ಐಎಎಸ್‌ ಅಧಿಕಾರಿಗಳು ಇದ್ದಾರೆ. ಇದರ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಹಿಸಿರುತ್ತಾರೆ. ಅವರ ನೇತೃತ್ವದಲ್ಲಿಯೇ ಸ್ಮಾರ್ಟ್‌ಸಿಟಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಯುತ್ತದೆ. ಆದರೆ ಮೂರು ವರ್ಷಗಳಲ್ಲಿ ಉಸ್ತುವಾರಿ ಕಾರ್ಯದರ್ಶಿಗಳು ಬದಲಾಗುತ್ತಿದ್ದಂತೆ ಸ್ಮಾರ್ಟ್‌ಸಿಟಿ ಯೋಜನೆಯ ವೇಗಕ್ಕೆ ಬ್ರೇಕ್‌ ಬಿದ್ದಂತಾಗಿದೆ. ಕೆಲವು ತಿಂಗಳಿನಿಂದ ಮಂಗಳೂರಿಗೆ ಪೂರ್ಣಾವಧಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಹುದ್ದೆ ಸೃಷ್ಟಿಸಲಾಗಿರುವುದರಿಂದ ಕಾಮಗಾರಿಗೆ ಕೊಂಚ ಜೀವ ಬಂದಂತಾಗಿದೆ.

ಮೆಲ್ದರ್ಜೆಗೇರಲಿರುವ ವಾರ್ಡ್‌
ಮಂಗಳೂರು ಸ್ಮಾರ್ಟ್‌ಸಿಟಿ ಅಡಿಯಲ್ಲಿ ಮೆಲ್ದರ್ಜೆಗೇರಲಿರುವ ವಾರ್ಡ್‌ಗಳು: ಕೋರ್ಟ್‌ ವಾರ್ಡ್‌, ಸೆಂಟ್ರಲ್‌ ಮಾರುಕಟ್ಟೆ, ಬಂದರ್‌, ಪೋರ್ಟ್‌, ಮಿಲಾಗ್ರಿಸ್‌, ಮಂಗಳಾದೇವಿ, ಹೊಗೆಬಜಾರ್‌, ಬೋಳಾರ.

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next