ಹುಬ್ಬಳ್ಳಿ: ಇಲ್ಲಿನ ಹೃದಯ ಭಾಗದಲ್ಲಿರುವ ಹಾಗೂ ತನ್ನದೇ ಮಹತ್ವ ಹೊಂದಿರುವ ಇಂದಿರಾ ಗಾಜಿನಮನೆ ಹಾಗೂ ಮಹಾತ್ಮಗಾಂಧಿ ಉದ್ಯಾನವನಕ್ಕೆ ಸ್ಮಾರ್ಟ್ ಸ್ಪರ್ಶ ನೀಡಲಾಗುತ್ತಿದೆ. ಇನ್ಮೂರು ತಿಂಗಳಲ್ಲಿ ಅಭಿವೃದ್ಧಿ ಕಾಮಗಾರಿ ಮುಕ್ತಾಯಗೊಳ್ಳುವ ಸಾಧ್ಯತೆ ಇದ್ದು, ಹೊಸ ಗೆಟಪ್‌ನಲ್ಲಿ ಮಿಂಚಲು ಸಜ್ಜಾಗುತ್ತಿದೆ.
ಗಾಜಿನಮನೆ ಆವರಣದಲ್ಲಿ ಸಂಗೀತ ಕಾರಂಜಿ, ಪುಟಾಣಿ ರೈಲು, ಹಸಿರು ಹಾಸು, ಪೆವರ್, ಕಾಂಪೌಂಡ್ ನಿರ್ಮಾಣ, ಕ್ಯಾಂಟಿನ್ ನಿರ್ಮಾಣ, ಓಪನ್ ಜಿಮ್ ಸೇರಿದಂತೆ ಇನ್ನು ಹಲವಾರು ಕಾಮಗಾರಿಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಅಂದಾಜು 12.10 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.
ಸಂಗೀತ ಕಾರಂಜಿ: ಸುಮಾರು ಐದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಂಗೀತ ಕಾರಂಜಿ ಕಾಮಗಾರಿ ಈಗಾಗಲೇ ಮುಕ್ತಾಯ ಹಂತದಲ್ಲಿದ್ದು, ಮಾರ್ಚ್ ಕೊನೆಯ ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಸಂಗೀತ ಕಾರಂಜಿಯಲ್ಲಿ ದ.ರಾ.ಬೇಂದ್ರೆ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ವಿ.ಕೃ.ಗೋಕಾಕ ಮುಂತಾದ ಸಾಹಿತಿಗಳ ಸಾಹಿತ್ಯದ ಸೊಗಡು ಸಂಗೀತದ ಮೂಲಕ ಹೊರ ಹೊಮ್ಮಲಿದೆ. ಇಂದಿರಾ ಗಾಜಿನಮನೆ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗೆ ಇನ್ಮೂರು ತಿಂಗಳ ಕಾಲಾವಕಾಶ ಇದ್ದು, ಅಷ್ಟರಲ್ಲೇ ಎಲ್ಲ ಕಾರ್ಯಗಳನ್ನು ಮುಕ್ತಾಯಗೊಳಿಸಲು ಯೋಜಿಸಲಾಗಿದೆ.
ಮತ್ತೆ ಪುಟಾಣಿ ಚುಕುಬುಕು ರೈಲು: ಇಂದಿರಾ ಗಾಜಿನ ಮನೆ ಉದ್ಯಾನವನದಲ್ಲಿ ಮಕ್ಕಳಿಗೆಂದು ನಿರ್ಮಿಸಿದ ಪುಟಾಣಿ ರೈಲು ಹಲವಾರು ಸಮಸ್ಯೆಗಳಿಂದ ಬಂದ್ ಮಾಡಲಾಗಿತ್ತು. ಉದ್ಯಾನವನದಲ್ಲಿ ಪುಟಾಣಿ ರೈಲು ತುಕ್ಕು ಹಿಡಿಯತ್ತಿದೆ. ಪುಟಾಣಿ ರೈಲು ಪುನರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪುಣೆಯ ಸಂಸ್ಥೆಯೊಂದು ಪುಟಾಣಿ ರೈಲು ಪುನರಾರಂಭ ಹಾಗೂ ನಿರ್ವಹಣೆಗೆ ಮುಂದಾಗಿದೆ. ಪುಟಾಣಿ ರೈಲು ಚುಕುಬುಕು ಶಬ್ದ ಶೀಘ್ರದಲ್ಲೇ ಕೇಳಿ ಬರಲಿದೆ. ಉದ್ಯಾನವನದಲ್ಲಿ ಇರುವ ಸ್ಕೇಟಿಂಗ್ ಮೈದಾನ, ಮಿಣಜಗಿ ಆರ್ಟ್ ಗ್ಯಾಲರಿ, ಮೀನು ಸಂಗ್ರಹಾಲಯ, ಕ್ಯಾಂಟಿನ್, ಮಕ್ಕಳಿಗೆ ಆಟವಾಡಲು ಮುಕ್ತ ಪ್ರದೇಶ, ಶೌಚಾಲಯ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಇಲ್ಲಿನ ಇಂದಿರಾ ಗಾಜಿನ ಮನೆ ಉದ್ಯಾನವನ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್ ಕೊನೆಯವರೆಗೆ ಸಂಗೀತ ಕಾರಂಜಿ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಪುಟಾಣಿ ರೈಲು, ಮಕ್ಕಳ ಆಟದ ಪ್ರದೇಶ, ವಾಯುವಿಹಾರ ಮಾರ್ಗ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಕೆಲ ಯೋಜನೆ ಮುಕ್ತಾಯ ಹಂತಕ್ಕೆ ತಲುಪಿವೆ. –
ಎಸ್.ಎಚ್.ನರೇಗಲ್ಲ, ಸ್ಮಾರ್ಟ್ ಸಿಟಿ ವಿಶೇಷ ಅಧಿಕಾರಿ.
-ಬಸವರಾಜ ಹೂಗಾರ