ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ನಗರ ಬಸ್ ನಿಲ್ದಾಣ (ಸಿಬಿಟಿ) ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸೋಮವಾರ ಪರಿಶೀಲಿಸಿದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗಾವಿಯಲ್ಲಿ ಅರ್ಧಂಬರ್ಧ ಸ್ಮಾರ್ಟ್ ಎಂಬ ಶೀರ್ಷಿಕೆಯಡಿ ಉದಯವಾಣಿಯಲ್ಲಿ ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಕಾಮಗಾರಿ ಪರಿಶೀಲಿಸಿದ್ದು ವಿಶೇಷವಾಗಿತ್ತು.
ಸಿಬಿಟಿ ಪಕ್ಕದ ಜಾಗಕ್ಕೆ ಸಂಬಂಧಿಸಿದ ವಿವಾದದಿಂದ ಎಂಟು ತಿಂಗಳು ಕಾಲ ಕಾಮಗಾರಿ ವಿಳಂಬಗೊಂಡಿದೆ. ಆದರೆ ಇದೀಗ ಜಾಗದ ವಿವಾದ ಬಗೆಹರಿದಿರುವುರಿಂದ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀಣ ಬಾಗೇವಾಡಿ ಮಾತನಾಡಿ, ನಗರ ಬಸ್ ನಿಲ್ದಾಣದ ಕಾಮಗಾರಿ ಇದೀಗ ಭರದಿಂದ ಸಾಗಿದ್ದು, ಎರಡು ಅಂತಸ್ತು ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಜಾಗದ ವಿವಾದದ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದ್ದು, ನಿಗದಿತ ಅವ ಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಲಾಮಂದಿರ ಕಾಮಗಾರಿ ಪರಿಶೀಲನೆ: ನಗರದ ಟಿಳಕವಾಡಿಯಲ್ಲಿ 46 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಲಾಮಂದಿರ ಕಾಮಗಾರಿಯನ್ನು ಜಿಲ್ಲಾ ಧಿಕಾರಿ ಪರಿಶೀಲಿಸಿದರು.
ಕಲಾಮಂದಿರದ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವುದರಿಂದ ಉಳಿದ ಕೆಲಸಗಳನ್ನು ಡಿಸೆಂಬರ್ ಅಂತ್ಯದೊಳಗೆ ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಕಲಾಮಂದಿರದ ಒಂದು ಬದಿಯ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಇರುತ್ತದೆ. ಹೀಗಾಗಿ ಕೂಡಲೇ ತಡೆಯಾಜ್ಞೆ ತೆರವುಗೊಳಿಸುವ ಮೂಲಕ ಅಲ್ಲಿಯೂ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಹರ್ಷ ಶೋರೂಂ ಎದುರಿನಿಂದ ಜಿ.ಎಸ್ .ಟಿ. ಕಚೇರಿಯವರೆಗಿನ ರಸ್ತೆ ವೈಟ್ ಟಾಪಿಂಗ್ ಹಾಗೂ ಪೇವರ್ಸ್(ನೆಲಹಾಸು) ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾ ಧಿಕಾರಿ ನಿತೇಶ್ ಪಾಟೀಲ ಅವರು, ಮಳೆಗಾಲ ಇರುವುದರಿಂದ ಅಕ್ಟೋಬರ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದ ಅವರು, ಪೇವರ್ಸ್ ಅಳವಡಿಕೆ ಹಾಗೂ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಸ್ವತಃ ಪರಿಶೀಲಿಸಿದ ಅವರು, ಗುಣಮಟ್ಟದ ಕೆಲಸ ಮಾಡುವಂತೆ ಸೂಚನೆ ನೀಡಿದರು.
ಎಲ್ಲ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದ್ದು, ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ಪ್ರವೀಣ ಬಾಗೇವಾಡಿ ತಿಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ಚಂದ್ರಶೇಖರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.