Advertisement

ಕೆರೆ ನೀರಿಗೆ ಮೊರೆ ಹೋದ ಸ್ಮಾರ್ಟ್‌ ಸಿಟಿ ಜನ

12:29 PM May 05, 2017 | Team Udayavani |

ದಾವಣಗೆರೆ: ಸ್ಮಾರ್ಟ್‌ ಸಿಟಿ ಗುಂಗಿನಲ್ಲಿರುವ ದಾವಣಗೆರೆಯಲ್ಲೀಗ ಅಕ್ಷರಶಃ ಜಲಕ್ಷಾಮ. ಇಡೀ ನಗರದ ಜನತೆ (ಬೋರ್‌ವೆಲ್‌ ಹೊಂದಿದವವರ ಬಿಟ್ಟು) ಬಿಂದಿಗೆ ನೀರಿಗೆ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ. ಬೇಸಿಗೆಯ ಬಿಸಿಲ ಜಳ ಲೆಕ್ಕಿಸದೆ ಜನ ಕೊಡಪಾನ, ಕ್ಯಾನ್‌, ಡ್ರಮ್‌ಗಳೊಂದಿಗೆ ನೀರಿಗಾಗಿ ಅಲೆಯುತ್ತಿದ್ದಾರೆ. 

Advertisement

ನಗರದ ಜನತೆಗೆ ನೀರು ಸರಬರಾಜು ಮಾಡುವ ಎಲ್ಲಾ ಆಕರಗಳು ಬರಿದಾಗಿವೆ. ಇದ್ದುದರಲ್ಲೇ ಹನಿ ಹನಿಗೂಡಿಸಿ ಜನರಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಸಲಾಗುತ್ತಿದೆ. ಕುಂದುವಾಡ ಹಾಗೂ ದೂರದರ್ಶನ ಕೆರೆಗಳಲ್ಲಿ ಒಂದಿಷ್ಟು ನೀರಿದೆ. ಆದರೆ, ಅದನ್ನು ಪಾಲಿಕೆ ತೀವ್ರ ಸಂಕಷ್ಟಕ್ಕೆ ಕಾಲಕ್ಕೆ ಮೀಸಲಿಟ್ಟಿದೆ.

ಇನ್ನು ನಗರಕ್ಕೆ ಬಹುಪಾಲು ನೀರು ಪೂರೈಕೆ ಮಾಡುವ ರಾಜನಹಳ್ಳಿಯ ಜಾಕ್‌ವೆಲ್‌ ಸದ್ದು ನಿಲ್ಲಿಸಿ, ತಿಂಗಳುಗಳೇ ಉರುಳಿವೆ. ರಾಜನಹಳ್ಳಿಯ ಬಳಿ ನದಿಯ ಗುಂಡಿ ಎಂದೂ ಬತ್ತಿದ್ದಿಲ್ಲ. ಆದರೆ, ಈ ಬಾರಿ ಸಂಪೂರ್ಣ ನೆಲ ಕಾಣುವಷ್ಟು ಬತ್ತಿಹೋಗಿದೆ. ಇನ್ನು ಸತತ ಮೂರು ವರ್ಷಗಳ ಕಾಲ ಸರಿಯಾಗಿ ಮಳೆ ಆಗದೇ ಇರುವುದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. 

ಕಾಡಾ ಭದ್ರಾ ಜಲಾಶಯದಿಂದ ನಾಲೆಗೆ ನಾಲ್ಕು ದಿನ ನೀರು ಹರಿಸಿತು. ಆದರೆ, ಅತ್ತ ರೈತರು ಒಣಗುತ್ತಿರುವ ಬತ್ತ, ಕಬ್ಬು, ತೋಟಗಾರಿಕೆ ಬೆಳೆಗಳಿಗೆ ನೀರು ಹರಿಸಿಕೊಂಡರು. ಕಾಲುವೆ ಉದ್ದಕ್ಕೂ ಅಳವಡಿಸಿಕೊಂಡಿರುವ ಪಂಪ್‌ ಸೆಟ್‌ಗಳಿಂದ ನೀರೆತ್ತಿದರು.

ನೀರನ್ನು ದೂರದರ್ಶನ ಕೆರೆ, ಕುಂದುವಾಡ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ತುಂಬಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಾಲಿಕೆಯವರು ದೂರದರ್ಶನ ಕೆರೆಗೆ ಒಂದು ಅಡಿಯಷ್ಟು ನೀರು ತುಂಬಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೂ ನಗರದ ಜನತೆಗೆ ಇದನ್ನು ಪೂರೈಕೆ ಮಾಡುವುದು ಸಾಧ್ಯವಿಲ್ಲ. 

Advertisement

ಸಮಸ್ಯೆಗೆ ಮೂಲವೇ ಪಾಲಿಕೆ!: ನಗರದ 5 ಲಕ್ಷಕ್ಕೂ ಅಧಿಕ ಜನಸಂಖ್ಯೆಗೆ ಕುಡಿಯುವ ನೀರು ಪೂರೈಸುವುದು ಬಹು ದೊಡ್ಡ ಸವಾಲಲ್ಲ. ಅದರಲ್ಲೂ ಎರಡು ಕೆರೆಗಳು ನೀರು ಸಂಗ್ರಹಕ್ಕಾಗಿಯೇ ಮೀಸಲಿವೆ. ಈ ಕೆರೆಗಳಿಗೆ ತುಂಬಿಸಿಕೊಳ್ಳುವ ನೀರು ನಗರದ ಜನತೆಗೆ ಕುಡಿಯಲು ಪೂರೈಕೆಯಾಗುವುದು ಬಿಟ್ಟರೆ ಬೇರೆ ಉದ್ದೇಶಕ್ಕೆ ಬಳಕೆಯಾಗುವುದಿಲ್ಲ. 

ತುಂಗಭದ್ರಾ ನದಿಯಲ್ಲಿ ನೀರು ಹರಿಯುವಾಗ ರಾಜನಹಳ್ಳಿ ನೀರು ಸರಬರಾಜು ಕೇಂದ್ರದಿಂದ ದಿನಕ್ಕೆ 40 ಎಂಎಲ್‌ಡಿ ನೀರು ಎತ್ತಿ, ನಗರಕ್ಕೆ ಪೂರೈಕೆ ಮಾಡಲಾಗುತ್ತದೆ. ಉಳಿದ 20 ಎಂಎಲ್‌ಡಿ ನೀರನ್ನು ಕೆರೆಯಿಂದ ಪೂರೈಕೆ ಮಾಡಲಾಗುತ್ತದೆ. ರಾಜನಹಳ್ಳಿ ಕೇಂದ್ರದಿಂದ ವರ್ಷದ 8 ತಿಂಗಳ ಕಾಲ ನದಿಯಿಂದ ನೀರೆತ್ತಬಹುದಾಗಿದೆ. 

ಕುಂದುವಾಡ ಕೆರೆ 2,400 ಮಿಲಿಯನ್‌ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದರೆ, ದೂರದರ್ಶನ ಕೆರೆ 1,600 ಮಿಲಿಯನ್‌ ಲೀಟರ್‌ ಸಂಗ್ರಹ ಸಾಮರ್ಥ್ಯ ಹೊಂದಿದೆ. ಅಲ್ಲಿಗೆ 4,000 ಮಿಲಿಯನ್‌ ಲೀಟರ್‌ ನೀರನ್ನು ಸಂಗ್ರಹಿಸುವ ಸಾಧ್ಯತೆ ಇದೆ. ದಿನವೊಂದಕ್ಕೆ ನಗರದ 5 ಲಕ್ಷ ಜನರಿಗೆ 60ಎಂಎಲ್‌ ಡಿಯಂತೆ ಸತತ 66 ದಿನಗಳ ಕಾಲ ನೀರು ಪೂರೈಕೆ ಮಾಡಬಹುದು. 

ಎರಡೂ ಕೆರೆಯಿಂದ 20ಎಂಎಲ್‌ಡಿ ನೀರನ್ನು ಪೂರೈಸಿದರೂ ಸಹ ಬೇಸಿಗೆಗೆ 400 ಎಂಎಲ್‌ಡಿ ನೀರು ಸಂಗ್ರಹಿಸಲು ಸಾಧ್ಯವಿದೆ. ಇದರ ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 200 ಬೋರ್‌ ವೆಲ್‌ ಇವೆ. ಇವುಗಳಿಂದಲೂ ಸಹ ನೀರು ಪೂರೈಕೆಮಾಡಲಾಗುತ್ತದೆ. ಬಹುತೇಕ ಬಳಕೆಗೆ ಈ ನೀರು ಬಳಸಿಕೊಳ್ಳುವ ಜನರು ಕುಡಿಯಲು ಮಾತ್ರ ನದಿ ನೀರು ಬಳಸುತ್ತಾರೆ. ಅಲ್ಲಿಗೆ ಎರಡೂ ಕೆರೆಗಳನ್ನು ಬೇಸಿಗೆಗೆಂದೇ ತುಂಬಿಸಿಕೊಳ್ಳುವುದು ಸಾಧ್ಯವಿದೆ.

* ಪಾಟೀಲ ವೀರನಗೌಡ

Advertisement

Udayavani is now on Telegram. Click here to join our channel and stay updated with the latest news.

Next