Advertisement

ಸ್ಮಾರ್ಟ್‌ ಬಸ್‌ ಶೆಲ್ಟರ್‌ಗಳ ನಿರ್ಮಾಣಕ್ಕೆ  ತಾತ್ಕಾಲಿಕ ತಡೆ: ಡಿಸಿ

11:42 AM Nov 25, 2018 | |

ಮಹಾನಗರ: ನಗರದಲ್ಲಿ ಸ್ಮಾರ್ಟ್‌ ಬಸ್‌ ಶೆಲ್ಟರ್‌ಗಳ ನಿರ್ಮಾಣ ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸ್ಮಾರ್ಟ್‌ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.

Advertisement

ಈಗ ನಿರ್ಮಾಣ ಹಂತದಲ್ಲಿರುವ ಸ್ಮಾರ್ಟ್‌ ಬಸ್‌ ಶೆಲ್ಟರ್‌ಗಳಿಗೆ ಸಂಬಂಧಿಸಿ ಸ್ಥಳದ ಆಯ್ಕೆ ಮತ್ತು ನಿರ್ಮಾಣ ವಿನ್ಯಾಸದ ಬಗ್ಗೆ ಸಾರ್ವಜನಿಕ ವಲಯದಿಂದ ದೂರು ಮತ್ತು ಟೀಕೆಗಳು ವ್ಯಕ್ತವಾಗಿವೆ. ಆದ್ದರಿಂದ ಮೊದಲು ಮೂರು ಮಾದರಿ ಬಸ್‌ ಶೆಲ್ಟರ್‌ಗಳನ್ನು ನಿರ್ಮಿಸಿ ಕೊಡಿ. ಅವುಗಳ ಪರಿಶೀಲನೆ ನಡೆಸಿ ಅನುಮೋದನೆ ದೊರೆತ ಬಳಿಕ ಉಳಿದ ಬಸ್‌ ಶೆಲ್ಟರ್‌ಗಳನ್ನು ನಿರ್ಮಿಸಿ ಎಂದು ಅವರು ತಿಳಿಸಿದರು. ಒಟ್ಟು 27 ಸ್ಮಾರ್ಟ್‌ ಬಸ್‌ ಶೆಲ್ಟರ್‌ಗಳನ್ನು ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ಟೆಂಡರ್‌ ವಹಿಸಿ ಕೊಡಲಾಗಿದೆ.

ವೇಗ ಪಡೆದುಕೊಳ್ಳುವ ನಿರೀಕ್ಷೆ
ಸರಕಾರವು ಸ್ಮಾರ್ಟ್‌ ಸಿಟಿ ಯೋಜನೆಗೆ ಪೂರ್ಣಾವ ಧಿ ಎಂ.ಡಿ.ಯಾಗಿ ನಾರಾಯಣಪ್ಪ ಅವರನ್ನು ನೇಮಿಸುವ ಮೂಲಕ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಯು ಮತ್ತಷ್ಟು ವೇಗ ಪಡೆದುಕೊಳ್ಳುವ ನಿರೀಕ್ಷೆ ಜನರಲ್ಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಹೇಳಿದರು. ಪಂಪ್‌ವೆಲ್‌ ಬಸ್‌ ನಿಲ್ದಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಾಗ ರಾಷ್ಟ್ರೀಯ ಹೆದ್ದಾರಿ ಫ್ಲೈ  ಓವರ್‌ನ್ನು ಗಮನದಲ್ಲಿರಿಸಿ ಯೋಜನೆಯನ್ನು ರೂಪಿಸಬೇಕೆಂದು ಸಂಸದರು ಸಲಹೆ ಮಾಡಿದರು.

ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಭಾಸ್ಕರ್‌ ಕೆ., ಪಾಲಿಕೆಯ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ಲ್ಯಾನ್ಸ್‌ ಲೊಟ್‌ ಪಿಂಟೋ, ರಮೀಜಾ ಬಾನು, ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ನಾರಾಯಣಪ್ಪ, ಸಲಹಾ ಸಮಿತಿ ಸದಸ್ಯರಾದ ಧರ್ಮರಾಜ್‌, ಕೆನರಾ ಛೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷರು, ಸತೀಶ್‌ ಕುಮಾರ್‌ ಭಟ್‌, ವೆಂಕಟೇಶ್‌ ಪೈ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

ವಿವಿಧ ವಿಷಯ ಚರ್ಚೆ
ಸ್ಮಾರ್ಟ್‌ ಸಿಟಿ ಯೋಜನೆಯಡಿ ಅನುಷ್ಠಾನಗೊಳ್ಳುವ ಕ್ಲಾಕ್‌ ಟವರ್‌ ವೃತ್ತದಿಂದ ಎ.ಬಿ. ಶೆಟ್ಟಿ ವೃತ್ತದ ವರೆಗಿನ ಸ್ಮಾರ್ಟ್‌ ರಸ್ತೆ ಕಾಮಗಾರಿ, ಕ್ಲಾಕ್‌ ಟವರ್‌, ಪಂಪ್‌ವೆಲ್‌ ಬಸ್‌ ನಿಲ್ದಾಣ, ಹಂಪನಕಟ್ಟೆಯ ಮಲ್ಟಿಲೆವೆಲ್‌ ಕಾರ್‌ ಪಾರ್ಕಿಂಗ್‌, ಸೆಂಟ್ರಲ್‌ ಮಾರ್ಕೆಟ್‌ ಇತ್ಯಾದಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next