ಹುಬ್ಬಳ್ಳಿ: ಚಿಗರಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಸಂಚಾರಕ್ಕೆ ಸುಲಭವಾಗುವ ನಿಟ್ಟಿನಲ್ಲಿ ಬಿಆರ್‌ಟಿಎಸ್‌ನಿಂದ ಶುಕ್ರವಾರ ಸ್ಮಾರ್ಟ್ ಕಾರ್ಡ್ ಬಿಡುಗಡೆ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೊಸೂರಿನ ಬಸ್ ಟರ್ಮಿನಲ್‌ನಲ್ಲಿ ಸ್ಮಾರ್ಟ್ ಕಾರ್ಡ್ ಬಿಡುಗಡೆಗೊಳಿಸಿದರಲ್ಲದೆ, ಬಿಆರ್‌ಟಿಎಸ್ ಯೋಜನೆ ಕುರಿತಾಗಿ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವಳಿನಗರದ ನಡುವೆ 100 ಬಿಆರ್ ಟಿಎಸ್ ಬಸ್‌ಗಳು 96 ಶೆಡ್ನೂಲ್‌ಗಳಲ್ಲಿ ನಿತ್ಯ 1152 ಟ್ರಿಪ್‌ನಂತೆ ಪ್ರತಿ ಬಸ್ 280 ಕಿಮೀ ಸಂಚರಿಸುತ್ತಿವೆ. ಎಲ್ಲ ಬಸ್‌ಗಳು ಸೇರಿ 26,047 ಕಿಮೀ ಸಂಚರಿಸುತ್ತಿವೆ. ಜನವರಿ 2019ರಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡ ಬಿಆರ್‌ಟಿಎಸ್ ಬಸ್ ಗಳಲ್ಲಿ ನಿತ್ಯ 47,253 ಪ್ರಯಾಣಿಕರು ಸಂಚರಿಸುತ್ತಿದ್ದು, ಇದೀಗ ಅದರ ಪ್ರಮಾಣ 90,919ಕ್ಕೆ ಹೆಚ್ಚಿದ್ದು, 1 ಲಕ್ಷ ದಾಟಿದೆ ಕೂಡ. ಸಮೀಕ್ಷೆ ಪ್ರಕಾರ ಅವಳಿನಗರ ನಡುವೆ ಶೇ.70 ಜನ ಬಸ್‌ಗಳಲ್ಲಿ, ಶೇ.30 ಜನ ಬೈಕ್, ಕಾರು ಇನ್ನಿತರ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ ಎಂದರು.
ಬಿಆರ್‌ಟಿಎಸ್ ಮಾರ್ಗದಲ್ಲಿ ನವಲೂರು ಸೇತುವೆ ನಿರ್ಮಾಣ ಕಾರ್ಯಕ್ಕೆ ಉಂಟಾಗಿದ್ದ ಸಮಸ್ಯೆ ಬಗೆಹರಿಸಲಾಗಿದೆ. ಕೆಲ ವಿನ್ಯಾಸಬದಲಾಯಿಸಿ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕಾಗಿ 6.50 ಕೋಟಿ ರೂ. ಬಿಡುಗಡೆಯಾಗಿದೆ. ಧಾರವಾಡದ ಟೋಲ್‌ನಾಕಾದಲ್ಲಿ ಮಳೆ ಬಂದಾಗ ನೀರು ನಿಲ್ಲುವುದನ್ನು ತಪ್ಪಿಸಲು1.30 ಕೋಟಿ ರೂ. ವೆಚ್ಚದಲ್ಲಿ ನಾಲಾನಿರ್ಮಾಣ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಆರ್‌ಟಿಎಸ್‌ಗೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ, ಕಾರಿಡಾರ್‌ನಲ್ಲಿ ಆಯ್ದ ಕಡೆ ಶೌಚಾಲಯ, ಕಾರಿಡಾರ್ ವಿಸ್ತರಣೆಗೆಕ್ರಮ ಕೈಗೊಳ್ಳಲಾಗುತ್ತದೆ. ಪಾದಚಾರಿ ಮೇಲ್ಸೇತುವೆಗಳಲ್ಲಿ ಕೆಲವೊಂದು ಲೋಪಗಳು ಇರಬಹುದು.
ಅವುಗಳನ್ನು ಸರಿಪಡಿಸುವ ಕಾರ್ಯ ಮಾಡಲಾಗುವುದು. ದೇಶದ 10 ಕಡೆ ಬಿಆರ್‌ಟಿಎಸ್ ಯೋಜನೆಗಳು ಇದ್ದು, ಅತ್ಯುತ್ತಮ ಕಾರ್ಯನಿರ್ವಹಣೆಯಲ್ಲಿ ಹು-ಧಾ ಬಿಆರ್‌ಟಿಎಸ್‌ಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿದೆ ಎಂದರು.
ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ, ವಿಧಾನಸಭೆಸದಸ್ಯರಾದ ಪ್ರಸಾದ ಅಬ್ಬಯ್ಯ, ಸಿ.ಎಂ.ನಿಂಬಣ್ಣವರ ಇನ್ನಿತರರು ಇದ್ದರು.