ಹುಬ್ಬಳ್ಳಿ: ಸುರಕ್ಷತೆ, ನೀರಿನ ಸದ್ಬಳಕೆ, ವಿದ್ಯುತ್ ಉಳಿತಾಯದ ದಿಸೆಯಲ್ಲಿ ನೂತನ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುವ ಮೂಲಕ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಸ್ಮಾರ್ಟ್ ಕ್ಯಾಂಪಸ್ ಮಾಡುತ್ತಿದ್ದು, ಕಾರ್ಯ ಪೂರ್ಣಗೊಂಡರೆ ಇದು ರಾಜ್ಯದಲ್ಲಿಯೇ ಮೊದಲ ಸ್ಮಾರ್ಟ್ ಕ್ಯಾಂಪಸ್ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆ.
ಸ್ಟಾರ್ಟ್‌ಅಪ್‌ಗ್ಳಾದ ಆಮ್‌ಟ್ರಾನಿಕ್ಸ್, ಕ್ರೊಮೊಸಿಸ್, ಸಂಶೋಧನಾ ವಿದ್ಯಾರ್ಥಿಗಳು, ಉದ್ಯಮ ತಜ್ಞರನ್ನೊಳಗೊಂಡ ತಂಡವನ್ನು ಮಾಡಲಾಗಿದೆ. ತಂಡವು ಸ್ಮಾರ್ಟ್ ಕ್ಯಾಂಪಸ್ ನಿರ್ಮಾಣಕ್ಕೆ ಸಹಕರಿಸುತ್ತಿದೆ. ಮೊದಲ ಹಂತದಲ್ಲಿ ಮೆಕ್ಯಾನಿಕಲ್ ವಿಭಾಗವನ್ನು ಸ್ಮಾರ್ಟ್ ಮಾಡಲಾಗುತ್ತಿದ್ದು, ಜನವರಿ ಅಂತ್ಯಕ್ಕೆ ಮೆಕ್ಯಾನಿಕಲ್ ವಿಭಾಗ ಸ್ಮಾರ್ಟ್ ವಿಭಾಗವಾಗಲಿದ್ದು, ಕ್ಯಾಂಪಸ್ ನಲ್ಲಿರುವ 24 ಕಟ್ಟಡಗಳಿಗೆ ತಂತ್ರಜ್ಞಾನವನ್ನು ವಿಸ್ತರಿಸಿ, ಇನ್ನು 3 ತಿಂಗಳಲ್ಲಿ ಇಡೀ ಕ್ಯಾಂಪಸ್ ಸ್ಮಾರ್ಟ್ ಕ್ಯಾಂಪಸ್ ಆಗಲಿದೆ.
ಏನಿದು ಸ್ಮಾರ್ಟ್ ಕ್ಯಾಂಪಸ್: ಕೆಎಲ್‌ಇ ತಾಂತ್ರಿಕ ವಿವಿಯ ಕ್ಯಾಂಪಸ್‌ನಲ್ಲಿ ವಿಭಾಗಗಳು, ಕಚೇರಿಗಳು, ವರ್ಗ ಕೊಠಡಿಗಳು, ಹಾಸ್ಟೆಲ್‌ಗಳು, ವಿದ್ಯಾರ್ಥಿ ನಿಲಯಗಳಿವೆ. ಅವುಗಳಿಗೆ ಸಮರ್ಪಕವಾಗಿ ನೀರು, ವಿದ್ಯುತ್ ಪೂರೈಕೆ ಮಾಡುವುದು ಹಾಗೂ ಇಂಧನ ಹಾಗೂ ನೀರು ಉಳಿತಾಯ ಮಾಡುವುದು ಇದರ ಉದ್ದೇಶವಾಗಿದೆ. ನಸುಕಿನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ನಾನಕ್ಕಾಗಿ ನೀರು ಬೇಕಾಗುತ್ತದೆ. ಆಡಳಿತ ಕಚೇರಿ, ವಿಭಾಗಗಳಲ್ಲಿ ಬೋಧನೆ ಆರಂಭಗೊಂಡ ನಂತರ ಅಲ್ಲಿ ನೀರು, ವಿದ್ಯುತ್ ಪೂರೈಕೆಯಾಗಬೇಕು. ಆದರೆ ಅವಶ್ಯಕತೆಗೆ ಅನುಗುಣವಾಗಿ ಪೂರೈಕೆ ಮಾಡುವುದು ಇಲ್ಲಿ ಮುಖ್ಯ.
ಆದರೆ ಮಾನವ ಸಂಪನ್ಮೂಲ ಬಳಕೆ ಕಡಿಮೆ ಮಾಡಿ ಆಟೋಮ್ಯಾಟಿಕ್ ಆಗಿ ಸೆನ್ಸಾರ್‌ಗಳು ಹಾಗೂ ಕ್ಯಾಮೆರಾಗಳ ನೆರವಿನಿಂದ ಕಾರ್ಯ ನಡೆಯುತ್ತದೆ. ಕ್ಯಾಂಪಸ್‌ನಲ್ಲಿ 8 ಬೋರ್‌ಗಳಿವೆ. ಬೋರ್ ಗಳಿಂದ ನೀರು ದೊಡ್ಡ ಓವರ್ ಹೆಡ್ ಟ್ಯಾಂಕ್‌ಗೆ ಪೂರೈಕೆಯಾಗುವುದು. ವಾಲ್ವ್ ಗಳು ತೆರೆದುಕೊಂಡ ನಂತರ ಅಲ್ಲಿಂದ ವಿಭಾಗಗಳ ಟ್ಯಾಂಕ್‌ಗಳಿಗೆ ಸರಬರಾಜು ಆಗುವುದು ಎಲ್ಲವೂ ಅಟೋಮ್ಯಾಟಿಕ್. ಓವರ್ ಹೆಡ್ ಟ್ಯಾಂಕ್‌ನಲ್ಲಿ ನೀರಿಲ್ಲದಿದ್ದರೆ ತಾನಾಗಿಯೇ ಮೋಟರ್ ಆರಂಭಗೊಂಡು ನೀರು ಟ್ಯಾಂಕ್‌ಗೆ ಹೋಗುತ್ತದೆ. ಅಲ್ಲಿಂದ ವಿವಿಧ ಟ್ಯಾಂಕ್‌ಗಳಲ್ಲಿನ ನೀರಿನ ಪ್ರಮಾಣ ಹಾಗೂ ಬಳಕೆಗೆ ಅನುಗುಣವಾಗಿ ಸ್ಮಾರ್ಟ್ ತಂತ್ರಜ್ಞಾನದ ನೆರವಿನಿಂದ ಪೂರೈಕೆಯಾಗುತ್ತದೆ. ಶುದ್ಧೀಕರಣ ಘಟಕಕ್ಕೂ ಕೂಡ ನೀರು ಪೂರೈಕೆಯಾಗುತ್ತದೆ. ಅಲ್ಲಿ ನೀರು ಫಿಲ್ಟರ್ ಆಗುವ ಬಗ್ಗೆ ಕೂಡ ಮಾಹಿತಿ ಸಿಗುತ್ತದೆ. ಫಿಲ್ಟರ್ ಕಾರ್ಯ ನಿರ್ವಹಿಸದಿದ್ದರೆ ಅದರ ನಿರ್ವಹಣೆ ಮಾಡುವವರಿಗೆ ಕೂಡಲೇ ಸಂದೇಶ ರವಾನೆಯಾಗುತ್ತದೆ. ಅವರು ಸಂದೇಶವನ್ನು ಕಡೆಗಣಿಸಿದರೆ ಅಥವಾ ನಿಗದಿತ ಸಮಯದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕೂಡಲೇ ಹಿರಿಯ ಮಟ್ಟದ ಅಧಿಕಾರಿಗಳಿಗೆ ಸಂದೇಶ ಹೋಗುತ್ತದೆ. ಕೊನೆಗೆ ವಿಶ್ವವಿದ್ಯಾಲಯದ ಕುಲಪತಿಗೆ ಸಂದೇಶ ರವಾನೆಯಾಗುತ್ತದೆ. ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುತ್ತಿರುವ ಬಗ್ಗೆ ಕೂಡ ಮಾಹಿತಿ ಸಿಗುತ್ತದೆ. ನೀರು ಶುದ್ಧೀಕರಣ ಘಟಕದಲ್ಲಿ ಉಳಿದ ನೀರನ್ನು ಇಲ್ಲಿನ ಗಾರ್ಡನ್‌ಗಳಿಗೆ ಬಳಕೆ ಮಾಡಲಾಗುತ್ತದೆ.
ವಿದ್ಯುತ್-ನೀರು ಪೋಲು ತಡೆ : ಸ್ಮಾರ್ಟ್ ತಂತ್ರಜ್ಞಾನದಿಂದಾಗಿ ಇಲ್ಲಿ ಅನಗತ್ಯವಾಗಿ ವಿದ್ಯುತ್ ಪೋಲಾಗುವುದಿಲ್ಲ. ಡಿಜಿಟಲ್ ಮೀಟರ್ ಬಳಕೆಯಿಂದ ವಿದ್ಯುತ್ ಉಳಿತಾಯವಾಗುತ್ತದೆ. ಯಾರೂ ಇಲ್ಲದ ಕಡೆಗೆ ಬಲ್ಬ್ಗಳು ತಾವಾಗಿಯೇ ಸ್ವಿಚ್ ಆಫ್ ಆಗುತ್ತವೆ. ಸೆನ್ಸರ್‌ಗಳ ನೆರವಿನಿಂದಾಗಿ ಸೂರ್ಯನ ಬೆಳಕಿಗೆ ಅನುಗುಣವಾಗಿ ದೀಪಗಳು ಉರಿಯುತ್ತವೆ. ಅಲ್ಲದೇ ಜನರೇಟರ್ ಕೂಡ ಕಾರ್ಯನಿರ್ವಹಿಸುತ್ತದೆ. ಹೆಸ್ಕಾಂನಿಂದ ವಿದ್ಯುತ್ ಸ್ಥಗಿತ, ಅಲ್ಲದೇ ಜನರೇಟರ್ ಬಳಕೆ ಯಾಗುತ್ತಿರುವ ಬಗ್ಗೆ ಅಪ್ಲಿಕೇಶನ್ ನಲ್ಲಿ ಸಂದೇಶ ರವಾನೆ ಯಾಗುತ್ತದೆ. ಜನರೇಟರ್‌ನಲ್ಲಿ ಇಂಧನದ ಪ್ರಮಾಣದ ಬಗ್ಗೆ ಕೂಡ ಮಾಹಿತಿ ಸಿಗುತ್ತದೆ. ಆಯಾ ಕಟ್ಟಡದ ನಿಯಂತ್ರಣ ಕಟ್ಟಡಗಳಲ್ಲಿರುತ್ತದೆ. ಅಲ್ಲದೇ ಎಲ್ಲ ಕಟ್ಟಡಗಳ ನಿರ್ವಹಣೆ ಮುಖ್ಯ ಕೇಂದ್ರದಲ್ಲಿರುತ್ತದೆ.
ಹೇಗೆ ಕಾರ್ಯ ನಿರ್ವಹಿಸುತ್ತದೆ? : ಮ್ಯಾತ್‌ವರ್ಕ್ಸ್ ಸಂಸ್ಥೆಯ ಮ್ಯಾಟ್‌ಲ್ಯಾಬ್ ತಂತ್ರಜ್ಞಾನದಿಂದ ಇದು ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾಗಳಿಂದ ಸ್ಕ್ರೀನ್‌ನಲ್ಲಿ ಎಲ್ಲ ವಿಡಿಯೋ ಫೂಟೇಜ್‌ಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ. ಸಿಸಿ ಕ್ಯಾಮೆರಾಗಳು, ಲೆವೆಲ್ ಸೆನ್ಸರ್‌ಗಳು, ಅಲ್ಟ್ರಾಸೊನಿಕ್ ಸೆನ್ಸರ್‌ಗಳು, ಸೊಲೊನಾಯ್ಡ ವಾಲ್ವ್ ಗಳು, ಫ್ಲೋ ಸ್ವಿಚ್ ಗಳ ಸಹಾಯದಿಂದ ಕಾರ್ಯ ನಿರ್ವಹಿಸುತ್ತದೆ. ಎಲ್ಲ ಡಾಟಾ ಒಂದೆಡೆ ಕೇಂದ್ರದಲ್ಲಿ ಸಂಗ್ರಹವಾಗುವುದರಿಂದ ಕೃತಕ ಬುದ್ಧಿಮತ್ತೆ ನೆರವಿನಿಂದ ತಂತ್ರಜ್ಞಾನದ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.
ಸ್ಮಾರ್ಟ್ ಕ್ಯಾಂಪಸ್ ಮಾಡುತ್ತಿರುವುದು ವಿದ್ಯಾರ್ಥಿಗಳ ಕಲಿಕೆಗೂ ಪೂರಕವಾಗುತ್ತದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತದೆ. ಆಸಕ್ತರು ಈ ದಿಸೆಯಲ್ಲಿ ಇನ್ನಷ್ಟು ಆವಿಷ್ಕಾರಗಳನ್ನು ಮಾಡಬಹುದಾಗಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನೀರು-ವಿದ್ಯುತ್ ಕುರಿತ ಮಾಹಿತಿಯನ್ನು ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದಾಗಿದೆ
–ಪ್ರಕಾಶ ಕುರ್ಡೇಕರ, ಎಡ್ಮೆಂಟ್ ಪ್ರಾಧ್ಯಾಪಕ, ಸಿಐಪಿಡಿ
–ವಿಶ್ವನಾಥ ಕೋಟಿ