Advertisement

ನಗರದ 22 ಕಡೆ ‘ಸ್ಮಾರ್ಟ್‌ ಬಸ್‌ ಶೆಲ್ಟರ್‌’

09:44 AM Jan 12, 2018 | |

ಮಹಾನಗರ: ಕೇಂದ್ರ-ರಾಜ್ಯ ಸರಕಾರದ ಸಹಭಾಗಿತ್ವದ ‘ಸ್ಮಾರ್ಟ್‌ ಸಿಟಿ’ ಯೋಜನೆಯನ್ವಯ ಎಲ್ಲವೂ ಅಂದು ಕೊಂಡಂತೆ ನಡೆದರೆ, ಮುಂದಿನ ಎರಡು – ಮೂರು ತಿಂಗಳೊಳಗೆ ಮಂಗಳೂರಿನ 22 ಕಡೆಗಳಲ್ಲಿ ಸುಸಜ್ಜಿತ ಸ್ಮಾರ್ಟ್‌ ಬಸ್‌ ಶೆಲ್ಟರ್‌ (ತಂಗುದಾಣ) ನಿರ್ಮಾಣವಾಗಲಿದೆ.

Advertisement

ಬಸ್‌ ಶೆಲ್ಟರ್‌ ನಿರ್ಮಾಣವಾಗಲಿರುವ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದ್ದು, ಈ ಎಲ್ಲ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಮುಂದಿನ ವಾರದಿಂದ ಚಾಲನೆ ಪಡೆಯಲಿದ್ದು, ತಿಂಗಳಾಂತ್ಯಕ್ಕೆ ಇದರ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಸ್ಮಾರ್ಟ್‌ಸಿಟಿ ಯೋಜನೆಯನ್ವಯ ಮಂಗಳೂರು ನಗರ, ಹಂಪನಕಟ್ಟೆ, ಬಂದರು, ಕಾರ್‌ಸ್ಟ್ರೀಟ್‌ ವ್ಯಾಪ್ತಿಯ 1,628 ಎಕ್ರೆ ಪ್ರದೇಶವನ್ನು ಆರಿಸಿ, 2,000.72 ಕೋ.ರೂ. ಪ್ರಸ್ತಾವನೆಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಈಗಾಗಲೇ ಒಪ್ಪಿಗೆ ನೀಡಿದೆ.

ಇದರಂತೆ ನಿಗದಿತ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆ  ಅನುಷ್ಠಾನವಾಗಬೇಕಿದೆ. ಆದರೆ, ಇದನ್ನು ಹೊರತುಪಡಿಸಿ ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣವನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿಯೇ ಕೈಗೆತ್ತಿಕೊಳ್ಳಲಾಗಿದೆ. ಇದೇ ರೀತಿ ಸ್ಮಾರ್ಟ್‌ಸಿಟಿಯ ನಿಗದಿತ ವ್ಯಾಪ್ತಿಯನ್ನು ಮೀರಿ ಸಮಗ್ರ ಮಂಗಳೂರಿಗೆ ಉಪಯೋಗವಾಗುವ ನೆಲೆಯಲ್ಲಿ 22 ಕಡೆಗಳಲ್ಲಿ ಸುಸಜ್ಜಿತ ಬಸ್‌ ಶೆಲ್ಟರ್‌ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ‘ಎ’, ‘ಬಿ’ ಹಾಗೂ ‘ಸಿ’ ಶ್ರೇಣಿಗಳಲ್ಲಿ ಬಸ್‌ ತಂಗುದಾಣ ನಿರ್ಮಿಸಲು ಯೋಚಿಸಲಾಗಿದೆ.

ಈಗ ಇರುವ ಬಸ್‌ ನಿಲ್ದಾಣದ ಸ್ಥಳಾವಕಾಶವನ್ನು ಪರಿಗಣಿಸಿ ಬಸ್‌ ತಂಗುದಾಣ ನಿರ್ಮಾಣ ಆಗಲಿದೆ. ಜಾಗದ ಲಭ್ಯತೆ ಅಧಿಕವಿರುವಲ್ಲಿ ಇ ಟಾಯ್ಲೆಟ್‌ ಸಹಿತವಾದ ‘ಎ’ ಶ್ರೇಣಿಯ ಬಸ್‌ ತಂಗು ದಾಣ ನಿರ್ಮಾಣವಾಗಲಿದೆ. ಇದಕ್ಕೆ ಸುಮಾರು 21 ಲಕ್ಷ ರೂ.ವರೆಗೆ ವೆಚ್ಚ ನಿಗದಿ ಮಾಡಲಾಗಿದೆ. ನಗರದ 8 ಕಡೆಗಳಲ್ಲಿ ಇಂತಹ ತಂಗುದಾಣ ನಿರ್ಮಾಣಗೊಳ್ಳಲಿದೆ.

ಇಲ್ಲಿ ಆಕರ್ಷಕ ಡಿಸ್‌ಪ್ಲೇ ವ್ಯವಸ್ಥೆ, ಸಮಯ ಭಿತ್ತರಿಸುವ ಡಿಸ್‌ಪ್ಲೇ ಬೋರ್ಡ್‌ ಇರಲಿದ್ದು, ತಂಗುದಾಣವು 7.5 ಮೀ. ಉದ್ದ ಹಾಗೂ 2.5 ಮೀ. ವಿಸ್ತಾರವನ್ನು ಹೊಂದಲಿದೆ. ‘ಬಿ’ ಶ್ರೇಣಿಯ ಬಸ್‌ ತಂಗುದಾಣದಲ್ಲಿ ಇ-ಟಾಯ್ಲೆಟ್‌ ವ್ಯವಸ್ಥೆ ಇರುವುದಿಲ್ಲ. ಉಳಿದಂತೆ ಆಕರ್ಷಕ ಡಿಸ್‌ಪ್ಲೇ ವ್ಯವಸ್ಥೆ, ಸಮಯ ಬಿತ್ತರಿಸುವ ಡಿಸ್‌ಪ್ಲೇ ಬೋರ್ಡ್‌ ಕೂಡ ಇರಲಿದೆ. ಜತೆಗೆ ತಂಗುದಾಣವು 7.5 ಮೀ. ಉದ್ದ ಹಾಗೂ 2.5 ಮೀ. ವಿಸ್ತಾರವಿರಲಿದೆ.

Advertisement

‘ಸಿ’ ಶ್ರೇಣಿಯ ಬಸ್‌ ತಂಗುದಾಣದಲ್ಲಿಯೂ ಇ-ಟಾಯ್ಲೆಟ್‌ ವ್ಯವಸ್ಥೆ ಇಲ್ಲ. ಆದರೆ, ಡಿಸ್‌ಪ್ಲೇ ವ್ಯವಸ್ಥೆಗಳು ಇರಲಿವೆ. ತಂಗುದಾಣವು 6 ಮೀ. ಉದ್ದ ಹಾಗೂ 2.2 ಮೀ. ವಿಸ್ತಾರ ಹೊಂದಿರಲಿದೆ.

‘ತಿಂಗಳಾಂತ್ಯಕ್ಕೆ ಕಾಮಗಾರಿ’
ಮಂಗಳೂರಿನ 22 ಕಡೆಗಳಲ್ಲಿ ಬಸ್‌ ಶೆಲ್ಟರ್‌ ನಿರ್ಮಾಣದ ಕಾಮಗಾರಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಈ ತಿಂಗಳಾಂತ್ಯಕ್ಕೆ ಇದರ ಕಾಮಗಾರಿ ಆರಂಭಗೊಳ್ಳಲಿದೆ. ಸ್ಮಾರ್ಟ್‌ಸಿಟಿಯ ಯೋಜನೆಯಡಿಯಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಜತೆಗೆ ಉಳಿದ ಕಾಮಗಾರಿಗಳನ್ನು ಕೂಡ ಕೆಲವೇ ದಿನದಲ್ಲಿ ಆರಂಭಿಸಲಾಗುವುದು.
ಮೊಹಮ್ಮದ್‌ ನಝೀರ್‌,
   ಮನಪಾ ಆಯುಕ್ತರು

‘ಎ’ ಶ್ರೇಣಿ ಬಸ್‌ ತಂಗುದಾಣ: 
1 ಮ್ಯಾಕ್‌ ಮಾಲ್‌ ಕಂಕನಾಡಿ, 2 ಜೆರೋಸಾ ಸ್ಕೂಲ್‌ ವೆಲೆನ್ಸಿಯಾ, 3 ಸೈಂಟ್‌ ಆ್ಯಗ್ನೆಸ್‌ ಕಾಲೇಜು, ಬೆಂದೂರ್‌ವೆಲ್, 4 ಬೋಂದೆಲ್‌ ಜಂಕ್ಷನ್, 5 ಮನಪಾ ಕಚೇರಿ ಲಾಲ್‌ಬಾಗ್‌, 6 ಉರ್ವಸ್ಟೋರ್‌ ಜಂಕ್ಷನ್‌, 7 ಕಾಟಿಪಳ್ಳ ಜಂಕ್ಷನ್‌, 8 ಹೊಟೇಲ್‌ ಲಲಿತ್‌ ಇಂಟರ್‌ ನ್ಯಾಶನಲ್‌, ಸುರತ್ಕಲ್‌.

‘ಬಿ’ ಶ್ರೇಣಿ ಬಸ್‌ ತಂಗುದಾಣ:
1 ಕದ್ರಿ ಮಾರುಕಟ್ಟೆ, 2 ಕೆಪಿಟಿ ಜಂಕ್ಷನ್‌, 3 ಕೆಪಿಟಿ ಜಂಕ್ಷನ್‌, 4 ಕಾವೂರು ಜಂಕ್ಷನ್‌, 5 ಮುಲ್ಲಕಾಡ್‌, 6 ಕೊಟ್ಟಾರ ಕ್ರಾಸ್‌, 7 ಮನಪಾ ಕಚೇರಿ ಲಾಲ್‌ಭಾಗ್‌, 8 ಪದವಿನಂಗಡಿ ಜಂಕ್ಷನ್‌, 9 ಚಿಲಿಂಬಿ.

‘ಸಿ’ ಶ್ರೇಣಿ ಬಸ್‌ ತಂಗುದಾಣ
1 ಕದ್ರಿ ಸರ್ವಿಸ್‌ ಸ್ಟೇಷನ್‌,2 ಭಾರತ್‌ಮಾಲ್‌, 3 ಭಾರತ್‌ಮಾಲ್‌ ಮುಂಭಾಗ, 4 ಪಚ್ಚನಾಡಿ, 5 ಕೋಡಿಕಲ್‌ ಸರಕಾರಿ ಶಾಲೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next