Advertisement

ಪುಟಾಣಿ ರೈಲು ಪಲ್ಟಿ

04:03 PM Nov 01, 2021 | Shwetha M |

ಆಲಮಟ್ಟಿ: ಸ್ಥಳೀಯ ರಾಕ್‌ ಉದ್ಯಾನದಲ್ಲಿನ ಪುಟಾಣಿ ರೈಲು ಹಳಿ ತಪ್ಪಿ ಬಿದ್ದ ಪರಿಣಾಮ ರೈಲಿನ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಜೆ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

Advertisement

ರೈಲು ಹಳಿ ತಪ್ಪಿರುವುದರಿಂದ ರೈಲಿನ ಡಬ್ಬಿಗಳಿಗೆ ಹಾನಿಯಾಗಿದ್ದು, ರೈಲಿನಲ್ಲಿ ಮೂರ್ನಾಲ್ಕು ಜನ ಪ್ರಯಾಣಿಕರಿದ್ದು, ಅವರಿಗೂ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕ ವೀರೇಶ ಗುಳೇದಗುಡ್ಡ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಘಟನೆಗೆ ಕಾರಣ

2018 ಅಕ್ಟೋಬರ್‌ನಿಂದ ಕಾರ್ಯಾರಂಭಗೊಂಡಿರುವ ಈ ಪುಟಾಣಿ ರೈಲು ರಾಕ್‌ ಉದ್ಯಾನದಲ್ಲಿ ಸಂಚರಿಸುತ್ತದೆ. ಇದಕ್ಕಾಗಿ ಪ್ರತ್ಯೇಕ ಟಿಕೆಟ್‌ ನೀಡಲಾಗುತ್ತಿದೆ. ಚಿಣ್ಣರ ಅಚ್ಚುಮೆಚ್ಚಿನ ಈ ಪುಟಾಣಿ ರೈಲಿನ ಹಳಿ ನಿರ್ಮಾಣವೇ ಅವೈಜ್ಞಾನಿಕ ಎನ್ನಲಾಗಿದೆ. ಒಂದೆಡೆ ಅತಿ ಇಳಿಜಾರು, ಮತ್ತೊಂದೆಡೆ ಎತ್ತರ ಅಷ್ಟೇ ಅಲ್ಲದೇ ಹಳಿ ಹಾಕಬೇಕಾದ ಗುತ್ತಿಗೆದಾರನು ಕಳಪೆ ಕಬ್ಬಿಣದ ಎಂಗಲ್‌ ಹಾಕಿರುವದೇ ಕಾರಣ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.

ಎಂಜಿನ್‌ ಹಾಗೂ ಮೂರು ಬೋಗಿಗಳಿರುವ ರೈಲಿನ ಬ್ರೇಕ್‌ ಕೂಡಾ ಸಮರ್ಪಕವಾಗಿಲ್ಲ. ಹೀಗಾಗಿ ಇಳಿಜಾರಿನಲ್ಲಿ ಈ ರೈಲು ಚಾಲಕನ ನಿಯಂತ್ರಣಕ್ಕೆ ಬರುತ್ತಿರಲಿಲ್ಲ ಎನ್ನಲಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇದನ್ನು ಸಮರ್ಪಕವಾಗಿ ಪರಿಶೀಲಿಸಬೇಕಿದ್ದ ಅಧಿಕಾರಿಗಳು ಕೂಡಾ ಈ ವಿಷಯದಲ್ಲಿ ನಿರ್ಲಕ್ಷé ವಹಿಸಿದ್ದು ಘಟನೆ ಕಾರಣ ಎನ್ನಲಾಗಿದೆ.

Advertisement

ಘಟನೆ ನಡೆದಾಗ ಕೇವಲ ಮೂರ್ನಾಲ್ಕು ಪ್ರಯಾಣಿಕರಿದ್ದು ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಇಳಿಜಾರಿನಲ್ಲಿ ಈ ಘಟನೆ ಸಂಭವಿಸಿದ್ದರೇ ದೊಡ್ಡ ಅನಾಹುತವಾಗುತ್ತಿತ್ತು ಎನ್ನಲಾಗಿದೆ.

ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಕೋವಿಡ್‌ ಕಾರಣದಿಂದ ರೈಲು ಸಂಚಾರ ಇರಲಿಲ್ಲ. ಕಳೆದ ಕೆಲ ದಿನಗಳ ಹಿಂದಷ್ಟೇ ಈ ರೈಲು ಸಂಚಾರ ಮತ್ತೆ ಆರಂಭಗೊಂಡಿತ್ತು. ಈ ಕ್ಷೇತ್ರದಲ್ಲಿ ಪರಿಣಿತರಾಗಿರುವವರನ್ನು ಕರೆಯಿಸಿ ಹಳಿ ನಿರ್ಮಾಣ ಹಾಗೂ ಪುಟಾಣಿ ರೈಲನ್ನು ಪರಿಶೀಲಿಸಿದ ನಂತರವೇ, ಈ ಪುಟಾಣಿ ರೈಲು ಆರಂಭಗೊಳ್ಳಲಿ, ಪ್ರಯಾಣಿಕರ ಸುರಕ್ಷತೆಯೇ ಮುಖ್ಯ ಎಂದು ನಾಗರಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next