Advertisement

ಪುಟ್ಟ  ಕತೆ

07:30 AM Apr 01, 2018 | |

ಟೀವಿ ನೋಡದ ಹುಡುಗ
ತಾಯಿಯೊಬ್ಬಳು ತನ್ನ ಆರು ವರ್ಷದ ಮಗುವಿನೊಂದಿಗೆ ವೈದ್ಯರ ಬಳಿಗೆ ಹೋದಳು.
“”ನನ್ನ ಮಗು ಆರೋಗ್ಯ ಮತ್ತು ಸಂತೋಷದಿಂದಲೇ ಇದ್ದಾನೆ. ಚೆನ್ನಾಗಿ ಹಾಲು ಕುಡಿಯುತ್ತಾನೆ. ಚೆನ್ನಾಗಿ ಊಟ ಮಾಡ್ತಾನೆ. ಚಪ್ಪರಿಸಿಕೊಂಡು ಸಿಹಿತಿಂಡಿಗಳನ್ನು ತಿನ್ತಾನೆ. ಮನಸಾರೆ ಹಣ್ಣು-ಹಂಪಲುಗಳನ್ನು ತಿನ್ತಾನೆ. ಚೆನ್ನಾಗಿ ಆಡ್ತಾನೆ. ಶ್ರಮವಹಿಸಿ ಓದ್ತಾನೆ. ಬಣ್ಣ ತಂದುಕೊಟ್ಟರೆ ನೂರಾರು ಪೇಟಿಂಗ್ಸ್‌ಗಳನ್ನು ಮಾಡ್ತಾನೆ. ರಾಗವಾಗಿ ಹಾಡ್ತಾನೆ. ಸದಾ ಖುಷಿಯಾಗಿರ್ತಾನೆ. ಆದರೆ ಒಂದು ಸಮಸ್ಯೆಯಿದೆ. ಅವನು ಪೆಪ್ಸಿ ಕುಡಿಯಲ್ಲ, ನೆಸ್ಲೆ ಚಾಕಲೇಟ್ಸ್‌ ಗಳನ್ನು ತಿನ್ನಲ್ಲ. ಹೋಸ್ಟೆಸ್‌ ಪೊಟೆಟೋ ಚಿಪ್ಸ್‌ ತಿನ್ನಲ್ಲ. ಲಿವೋ ಆಟಿಕೆಗಳಿಂದ ಆಡಲ್ಲ. ಮ್ಯಾಗಿ ನೂಡಲ್ಸ್‌ ತಿನ್ನಲ್ಲ. ಡಾಲಪ್ಸ್‌ ಐಸ್‌ಕ್ರೀಮ್‌ ತಿನ್ನಲ್ಲ. ಅವನಿಗೇನು ಕಾಯಿಲೆಯೋ ತಿಳೀತಿಲ್ಲ. ನನಗೆ ತುಂಬಾ ಯೋಚನೆಯಾಗಿದೆ ಡಾಕ್ಟರ್‌” ತಾಯಿ ತನ್ನ ಮಗನ ಬಗ್ಗೆ ಹೇಳಿದಳು.

Advertisement

ವೈದ್ಯರಿಗೆ ಆಶ್ಚರ್ಯ! ಇಂಥ ಕೇಸ್‌ ಈ ಹಿಂದೆ ಬಂದಿರಲಿಲ್ಲ. ಅವರು ಮಗುವಿನ ಎದೆ, ಬೆನ್ನು, ಹಲ್ಲು, ನಾಡಿ, ಕಣ್ಣುಗಳು, ಉಗುರುಗಳನ್ನು ಪರೀಕ್ಷಿಸಿದರು. ಮಲ-ಮೂತ್ರಗಳ ಬಣ್ಣ ವಿಚಾರಿಸಿದರು. ದಿನದಲ್ಲಿ ಎಷ್ಟು ಸಲ ಮಲ ವಿಸರ್ಜಿಸುತ್ತಾನೆ ಎಂದು ವಿಚಾರಿಸಿದರು. ಎಕ್ಸ್‌ರೇ ತೆಗೆಸಿದರು. ಎಲ್ಲವೂ ಸರಿಯಿದ್ದವು. ವೈದ್ಯರು ರೋಗಿಯನ್ನು ಸುಮ್ಮನೆ ಕಳೆದುಕೊಳ್ಳಲು ಬಯಸುತ್ತಿರಲಿಲ್ಲ.

ವೈದ್ಯರು ಯೋಚಿಸಿದರು, ತುಂಬಾ ಯೋಚಿಸಿದರು. ಕಡೆಗೆ ಇದ್ದಕ್ಕಿದ್ದಂತೆ ತಾಯಿಯನ್ನು ಪ್ರಶ್ನಿಸಿದರು, “”ಇವನು ಟಿ.ವಿ. ನೋಡ್ತಾನಾ?” “”ಡಾಕ್ಟರ್‌, ನಾನು ಗಡಿಬಿಡಿಯಲ್ಲಿ, ಇವನು ಟಿ.ವಿ. ನೋಡಲ್ಲ ಎಂಬುದನ್ನು ಹೇಳಲು ಮರೆತೆ. ಇದರಿಂದ ನನಗೆ ಮತ್ತೂ ಯೋಚನೆಯಾಗಿದೆ” ತಾಯಿ ಕಳವಳಗೊಂಡಳು. “”ಯೋಚೆ° ಮಾಡಬೇಡಿ. ನಾನು ಇವನಿಗೆ ಟಿ.ವಿ. ನೋಡುವ ಏಳು ದಿನಗಳ ಒಂದು ಕೋರ್ಸ್‌ ಕೊಡ್ತೀನಿ. ನೀವು ಮೂರನೆಯ ದಿನದಿಂದ ಮಗುವಿನ ಆರೋಗ್ಯದಲ್ಲಿ ಸುಧಾರಣೆಯಾಗುವುದನ್ನು ಕಾಣಬಹುದು” ವೈದ್ಯರು ದೃಢ ವಿಶ್ವಾಸದಿಂದ ಹೇಳಿದರು.

ವಿದೇಶಿ ಕಾರು
ಒಂದು ಕಾರಿತ್ತು. ಅದರ ವಿಶೇಷತೆ ಎಂದರೆ, ಅದು ಪೆಟ್ರೋಲಿನ ಬದಲು ಮನುಷ್ಯನ ಬಿಸಿರಕ್ತದಿಂದ ಓಡುತ್ತಿತ್ತು. ಅಲ್ಲದೆ ವಿಮಾನದ ವೇಗದಲ್ಲಿ ಸಾಗುತ್ತಿತ್ತು. ಬೇಕಾದಲ್ಲಿಗೆ ಹೋಗುತ್ತಿತ್ತು. ಆದರೆ ಅದಕ್ಕೆ ದಿನನಿತ್ಯ ಮನುಷ್ಯನ ರಕ್ತವನ್ನು ಎಲ್ಲಿಂದ ತರುವುದೆಂಬ ಪ್ರಶ್ನೆ ಎದುರಾಗಿತ್ತು.

ಅದಕ್ಕೆ ಒಂದೇ ವಿಧಾನವಿತ್ತು. ನಿತ್ಯ ಒಬ್ಬ ಮನುಷ್ಯನನ್ನು ದುರ್ಘ‌ಟನೆಯಲ್ಲಿ ಸಾಯಿಸಿ, ಅವನ ಹರಿಯುವ ರಕ್ತವನ್ನು ಟ್ಯಾಂಕಿಗೆ ತುಂಬಿಸಬೇಕಿತ್ತು. ನಾನು ಸರ್ಕಾರಕ್ಕೆ ನನ್ನ ಕಾರಿನ ವಿಶೇಷತೆಯನ್ನು ತಿಳಿಸುತ್ತ ಒಂದು ಪ್ರಾರ್ಥನಾ ಪತ್ರವನ್ನು ಬರೆದು ಅರಿಕೆ ಮಾಡಿಕೊಂಡೆ. “”ನನಗೆ ಪ್ರತಿದಿನ ರಸ್ತೆ ಅಪಘಾತದಲ್ಲಿ ಒಬ್ಬ ಮನುಷ್ಯನನ್ನು ಸಾಯಿಸುವ ಅವಕಾಶವನ್ನು ಕೊಡಿ”
ಸರ್ಕಾರದ ವತಿಯಿಂದ ಒಂದು ಪತ್ರ ಬಂದಿತ್ತು- “”ಸರ್ಕಾರಕ್ಕೆ ನಿಮ್ಮ ಮನವಿ ಒಂದು ಶರತ್ತಿನ ಮೇಲೆ ಒಪ್ಪಿಗೆಯಿದೆ. ಒಂದು ವೇಳೆ ಆ ಕಾರು ವಿದೇಶಿ ಸಹಕಾರದಿಂದ ತಯಾರಾಗಿದ್ದರೆ ಅಭ್ಯಂತರವಿಲ್ಲ”.

Advertisement

ಕಳ್ಳ ಮತ್ತು ಕೊತ್ವಾಲ
ಒಬ್ಬ  ಪಳಗಿದ ಕಳ್ಳನಿದ್ದ. ತನ್ನ ಕಸುಬಿನ ಜವಾಬ್ದಾರಿಗಳನ್ನು ಪೂರೈಸಲು ಮನೆಯಿಂದ ಹೊರಟಿದ್ದ. ಆಕಸ್ಮಾತ್‌ ನಾಲ್ಕೂ ಕಡೆಯಿಂದ ಅವನನ್ನು ಪೊಲೀಸರು ಸುತ್ತುವರೆದರು. ಕಳ್ಳ ಮೊದಲು ಹೆದರಿದ. ಆದರೆ, ಅವನಿಗೆ ಕೊತ್ವಾಲ ತನಗೆ ಸೆಲ್ಯೂಟ್‌ ಹೊಡೆದಿದ್ದನ್ನು ಕಂಡು ಧೈರ್ಯ ಬಂದಿತು. ಕಳ್ಳ ಕೊತ್ವಾಲನಿಗೆ ನಿಂದಿಸುತ್ತ ಹೇಳಿದ, “”ಕೊತ್ವಾಲ್‌ ಸಾಹೇಬ್ರೇ, ನನ್ನ ಸಾಮರ್ಥ್ಯ ಏನೆಂದು ನಿಮಗೆ ಗೊತ್ತಿಲ್ಲ. ನನ್ನನ್ನು ಬಂಧಿಸುವಷ್ಟು ಧೈರ್ಯ ನಿಮಗೆ ಹೆಚ್ಚಿತೆ?” ಕೊತ್ವಾಲ ಸೆಲ್ಯೂಟ್‌ ಹೊಡೆಯುತ್ತಲೇ ಹೇಳಿದ, “”ಸಾರ್‌, ನಿಮಗೆ ತಪ್ಪು ತಿಳಿವಳಿಕೆಯಾಗಿದೆ, ನಿಮ್ಮ ಜೀವಕ್ಕೆ ಅಪಾಯವಿದೆ, ನಿಮಗೆ ತಕ್ಷಣ ಜೆಡ್‌ ಸೆಕ್ಯೂರಿಟಿ ಕೊಡಬೇಕೆಂದು ಗೃಹಮಂತ್ರಿಗಳ ಆದೇಶವಿದೆ. ಸಾರ್‌, ನಾವೀಗ ನಿಮ್ಮ ಸೇವೆಗೆ ಬಂದಿದ್ದೇವೆ.”

“”ಆದ್ರೆ, ನೀವು ನನ್ನೊಂದಿಗಿದ್ದರೆ ನಾನು ಕದಿಯೋದು ಹೇಗೆ?” ಕಳ್ಳನಿಗೆ ಸಮಸ್ಯೆ ಎದುರಾಯಿತು. “”ಸಾರ್‌, ನಾವು ನಮ್ಮ ಡ್ನೂಟಿ ಮಾಡ್ತೀವಿ, ನೀವು ನಿಮ್ಮ ಡ್ನೂಟಿ ಮಾಡ್ತಿರಿ, ನಾವು ನಿಮಗೆ ರಕ್ಷಣೆ ಕೊಡ್ತೀವಿ, ನೀವು ಕಳ್ಳತನ ಮಾಡಿ” ಕೊತ್ವಾಲ ಕಳ್ಳನನ್ನೇ ನೋಡಿದ.

ಮಾವ ಕಂಸ
ಅವರು ನನ್ನ ಏಕಮೇವ ಮಾವ ಆಗಿದ್ದರು. ನಾನು ಅವರ ಏಕಮೇವ ಸೋದರಳಿಯನಾಗಿದ್ದೆ. ನನ್ನ ಕೃಷ್ಣಭಕ್ತ ಅಧ್ಯಾಪಕರಿಂದ ನಾನು ಕೃಷ್ಣನ ಲೀಲೆಗಳ ಬಗ್ಗೆ ಕೇಳಿದ ದಿನವೇ ಸಂಯೋಗವೆಂಬಂತೆ ಅಂದು ನನ್ನ ಮಾವ ನನ್ನ ಮನೆಗೆ ಬಂದರು. ಅವರು ನನಗೆ ರಸಗುಲ್ಲಾ ತಂದರು. “”ಮಾವ, ನಾನೇಕೆ ಕೃಷ್ಣನಲ್ಲ, ನೀವೇಕೆ ಕಂಸನಲ್ಲ?” ನಾನು ಮಾವನನ್ನು ಪ್ರೀತಿಯಿಂದ ಕೇಳಿದೆ.

ನನ್ನ ತಾಯಿ ದೇವಕಿಯಾಗಿರಲಿಲ್ಲ. ಅವಳು ಆ ಕೂಡಲೇ ಮಧ್ಯಪ್ರವೇಶಿಸಿ ನನ್ನ ಕೆನ್ನೆಗೆ ರಪ್ಪನೆ ಹೊಡೆದಳು. ನಾನಾಗ ರೋದಿಸುವುದನ್ನು ಹೊರತುಪಡಿಸಿದರೆ ಬೇರೆ ಮಾರ್ಗವಿರಲಿಲ್ಲ. ನಾನು ರೋದಿಸಿದೆ. ನನ್ನ ಮಾವ ಕಂಸನಾಗಿರಲಿಲ್ಲ. ಅವರು ನನ್ನ ಮನಸ್ಸನ್ನು ಸಂತೋಷಪಡಿಸಬೇಕಿತ್ತು. ಅಲ್ಲದೆ ಕೂಡಲೇ ನನ್ನನ್ನು ರೆಸ್ಟುರೆಂಟ್‌ಗೆ ಕರೆದೊಯ್ದು ಕಾಫಿ ಕೊಡಿಸಬೇಕಾದ ಪರಿಸ್ಥಿತಿ ಎದುರಾಯಿತು. ನಾನು ಕೃಷ್ಣನಾಗಿರಲಿಲ್ಲ, ನಾನೂ ಕಾಫಿ ಕುಡಿದು ತುಂಬಾ ಖುಷಿಪಟ್ಟೆ.

ಆನೆಯ ದಂತಗಳು
ಆನೆಯ ದಂತಗಳು ತೋರಿಸಲೊಂದು ಮತ್ತು ತಿನ್ನುವುದಕ್ಕೊಂದು ಇದ್ದವು. ಆದರೆ, ಮಕ್ಕಳಿಗೆ ತೋರಿಸುವ ದಂತಗಳು ಇಷ್ಟವಾಗಿದ್ದವು. ಯಾಕೆಂದರೆ, ಅವು ಸುಂದರವಾಗಿದ್ದವು. ದೊಡ್ಡವರಿಗೂ ಪ್ರಿಯವಾಗಿದ್ದವು. ಅವಕ್ಕೆ ತುಂಬಾ ಬೆಲೆಯಿತ್ತು. ಒಮ್ಮೆ ಮಕ್ಕಳು ಆನೆಯ ಬಳಿಗೆ ಹೋಗಿ ಹೇಳಿದವು, “”ಆನೆ ಅಣ್ಣಾ , ನಿನ್ನ ಹಲ್ಲುಗಳನ್ನು ನಮಗೆ ಕೊಡು” 
“”ತಿನ್ನುವ ಹಲ್ಲುಗಳನ್ನು ಕೊಡಲಾರೆ, ಬೇಕಾದರೆ ತೋರಿಸಲು ಇರುವ ಹಲ್ಲುಗಳನ್ನು ತೆಗೆದುಕೊಳ್ಳಿ” ಆನೆ ಹೇಳಿತು.
“”ಹೌದೌದು, ನಮಗೆ ತೋರಿಸುವ ಹಲ್ಲುಗಳೇ ಬೇಕು. ಅವು ತುಂಬಾ ಸುಂದರವಾಗಿವೆ. ನಾವು ಅವುಗಳನ್ನು ಹಿಡಿದು ಆಡುತ್ತೇವೆ” ಮಕ್ಕಳೆಲ್ಲಾ ಒಮ್ಮತದಿಂದ ಹೇಳಿದರು. “”ಆದರೆ ದೊಡ್ಡವರು ನಿಮಗೆ ಆಡಲು ಬಿಡುವರೆ?” “”ಯಾಕೆ ಬಿಡಲ್ಲ? ದೊಡ್ಡವರಿಗೆ ನಾವು ಆಡುವ ಬಗ್ಗೆ ತಕರಾರಿಲ್ಲ. ನಾವು ಅಪಾಯಕಾರಿ ವಸ್ತುಗಳೊಂದಿಗೆ ಆಡಬಾರದೆಂಬುದು ಅವರಾಸೆಯಾಗಿದೆ, ಅಷ್ಟೆ”
“”ನನ್ನ ದಂತಗಳೂ ಅಪಾಯಕಾರಿ” ಆನೆ ವ್ಯಂಗ್ಯದಿಂದ ಮುಗುಳ್ನಕ್ಕಿತು. “”ಇಲ್ಲ, ನೀನು ಸುಳ್ಳು ಹೇಳುತ್ತಿದ್ದೀಯ. ಅವು ಅಪಾಯಕಾರಿಯಲ್ಲ” ಮಕ್ಕಳು ಆನೆಯನ್ನೇ ನೋಡಿದರು. ಆನೆ ಸ್ವಲ್ಪ ಯೋಚಿಸಿ ಹೇಳಿತು, “”ಸರಿ, ನನ್ನ ಹಲ್ಲುಗಳನ್ನು ತೆಗೆದುಕೊಂಡು ಹೋಗಿ. ದೊಡ್ಡವರು ನನ್ನ ಹಲ್ಲುಗಳನ್ನು ಕೇಳಿದರೆ, “ಆನೆಯ ಬಗ್ಗೆ ಎಚ್ಚರವಿರಲಿ, ನನಗೆ ತುಂಬಾ ಸಿಟ್ಟು ಬರುತ್ತದೆ’ ಎಂದು ಹೇಳಿ. ಆಗಲೂ ಅವರು ಹಲ್ಲುಗಳನ್ನು ಕೇಳಿದರೆ, “ಆನೆಯಿಂದ ದೂರವಿರಿ, ಆನೆಯ ಬಾಲ ಚಿಕ್ಕದಾಗಿದ್ದರೂ ಅದರ ಕಾಲುಗಳು ಭಾರವಾಗಿರುತ್ತವೆ, ಅವು ಮನುಷ್ಯನನ್ನು ತುಳಿದು ಹಾಕಬಹುದು’ ಎಂದು ಹೇಳಿ. ಆಗಲು ಅವರು ಹಲ್ಲುಗಳನ್ನು ಕೇಳಿದರೆ, “ಎಚ್ಚರ, ಆನೆಗೆ ತಿನ್ನುವ ಹಲ್ಲುಗಳಷ್ಟೇ ಪ್ರೀತಿ ತೋರಿಸುವ ಹಲ್ಲುಗಳ ಬಗ್ಗೆಯೂ  ಇದೆ, ಅಲ್ಲದೆ ಆನೆ ದೂರವೂ ಇಲ್ಲ. ಇಲ್ಲೇ ಎಲ್ಲೋ ಇದೆ’ ಎಂದು ಹೇಳಿ”.

ಮಕ್ಕಳು ಮನೆಗೆ ಬಂದರು. ಆನೆಯ ದಂತಗಳನ್ನು ತಂದರು. ದಂತಗಳನ್ನು ನೋಡಿದ ದೊಡ್ಡವರು ಮಕ್ಕಳಿಗೆ ದೊಡ್ಡ ದೊಡ್ಡ ಉಡುಗೊರೆ ಮತ್ತು ಸುಂದರವಾದ ಆಟದ ಸಾಮಾನುಗಳನ್ನು ಮನೆಗೆ ತಂದರು. ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದರು. ಮಕ್ಕಳು ಆನೆಯ ದಂತಗಳನ್ನು ಮರೆತರು. ದೊಡ್ಡವರು ಆನೆಯ ದಂತಗಳನ್ನು ಅವರಿಗೆ ತಿಳಿಯದಂತೆ ತೆಗೆದುಕೊಂಡು ಹೋಗಿ ಮಾರಿದರು.

ಅತ್ತ ಆನೆ, ಮಕ್ಕಳು ತನ್ನ ದಂತಗಳಿಂದ ಆಡುತ್ತಿರಬೇಕೆಂದು ಯೋಚಿಸಿ ಸಂತೋಷದಲ್ಲಿರುತ್ತಿತ್ತು. ಒಂದು ದಿನ ಅದು ಮಕ್ಕಳ ಸಂತೋಷವನ್ನು ಕಣ್ಣಾರೆ ಕಾಣಬೇಕೆಂದು ಬಯಸಿ ಅವರ ಬಳಿಗೆ ಬಂದಿತು, ಆದರೆ ಆಗ ಮಕ್ಕಳು ದೊಡ್ಡವರಾಗಿದ್ದರು!

ಮೂಲ         ವಿಷ್ಣು ನಾಗರ್‌ 
ಅನು. :         ಡಿ. ಎನ್‌. ಶ್ರೀನಾಥ್‌

Advertisement

Udayavani is now on Telegram. Click here to join our channel and stay updated with the latest news.

Next