Advertisement

ಪುಟ್‌ ಪುಟ್‌ ಕತೆಗಳು

08:02 PM Jul 03, 2019 | mahesh |

ಇಲ್ಲಿನ ಪುಟ್ಟ ಪುಟ್ಟ ಕಥೆಗಳ ಓಘ ಮಕ್ಕಳನ್ನು ಬೇಗನೆ ಓದಿಸಿಕೊಂಡು ಹೋಗುವುದಷ್ಟೇ ಅಲ್ಲ, ಮನಸ್ಸಿಗೆ ಕಚಗುಳಿಯನ್ನೂ ಇಡುತ್ತವೆ.

Advertisement

1. ಅಪ್ಪನ ಚಿಂತೆ
ಆ ತಂದೆಗೆ ತನ್ನ ಮಕ್ಕಳು ತನ್ನ ಜೊತೆಯಲ್ಲಿ ಇಲ್ಲವಲ್ಲ ಎಂಬ ಕೊರಗಿತ್ತು. ಪ್ರೀತಿಯಿಂದ ಬೆಳೆಸಿದ ಮೇಲೆ ರೆಕ್ಕೆ ಬಲಿತ ಹಕ್ಕಿಗಳಂತೆ ಹಾರಿಹೋದ ಮಕ್ಕಳ ಬಗ್ಗೆ ಸಿಟ್ಟಿರದೇ ಸ್ವಲ್ಪ ಚಿಂತೆಯಲ್ಲಿ ಮುಳುಗಿದ್ದ.

ಅದೇ ಚಿಂತೆಯಲ್ಲಿ ಅಪ್ಪ ಕೊರಗಿ ಸತ್ತಾಗ, ಯಮಲೋಕದಲ್ಲಿ ಯಮ ಅಪ್ಪನ ಚಿಂತೆಗೆ ಕಾರಣವನ್ನು ಕೇಳಿದ. ಅಪ್ಪ ತನ್ನ ಮಕ್ಕಳು ತನ್ನ ಜೊತೆಯಲ್ಲಿ ಬದುಕಲಿಲ್ಲವಲ್ಲ ಎಂದು ಕೊರಗಿದ. ಆಗ ಯಮ

‘ ಮೂರ್ಖ, ನೀನು ನಿನ್ನ ಮನೆಯ ಮುಂದೆ ಬೆಳೆಸಿದ ಮರಗಳ ನೋಡು. ಅವುಗಳನ್ನು ನೀನು ಮಕ್ಕಳಂತೆ ಬೆಳೆಸಿದೆ. ಈಗ ಅವುಗಳನ್ನು ಬಿಟ್ಟು ಬಂದಿರುವೆ. ಅವು ನಿನ್ನ ಮಕ್ಕಳಲ್ಲವೇ ? ನಿನಗಾದ ನೋವು ಅವುಗಳಿಗೂ ಆಗುವುದಿಲ್ಲವೇ?’ ಎಂದಾಗ ಅಪ್ಪನ ಚಿಂತೆ ದೂರಾಯಿತು.

2. ಮೆರವಣಿಗೆ
ವಯಸ್ಸಾಯಿತು. ಅಪ್ಪ ನಿವೃತ್ತಿಯಾಗಬೇಕಾಯಿತು. ಸದಾ ಕಾರ್ಯಗಳ ಜೊತೆಯಲ್ಲಿದ್ದ ಜೀವಕ್ಕೆ ನಿವೃತ್ತಿಯಾದ ಮೇಲೆ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ಸುಮ್ಮನೆ ಕಾಲಹರಣ ಮಾಡುವ ಮನಸ್ಸು ಅಪ್ಪನಿಗಿಲ್ಲ . ಇರುವಷ್ಟು ದಿನಗಳ ಕಾಲ ಜಗತ್ತಿಗೆ ಬೆಳಕಾಗುವ ಕಾರ್ಯ ಮಾಡಬೇಕೆನಿಸಿತು. ತನ್ನಂಥ ನಿವೃತ್ತರ ಸಂಘ ಕಟ್ಟಿಕೊಂಡು ರಸ್ತೆಯ ಅಕ್ಕ ಪಕ್ಕದಲ್ಲಿ , ಖಾಲಿ ಜಾಗಗಳಲ್ಲಿ , ಮರಗಿಡಗಳನ್ನು ಬೆಳೆಸುವ ಕೆಲಸ ಹಮ್ಮಿಕೊಂಡ. ಆತ ಸತ್ತು, ಮೆರವಣಿಗೆ ಹೊರಟಾಗ ಅಪ್ಪ ಬೆಳೆಸಿದ ಮರಗಳು ನೆರಳು ಹಾಸಿದವು. ತಂಪಾದ ಗಾಳಿ ಬೀಸಿದವು. ಆ ಮರಗಳು ಇಬ್ಬನಿಯ ಕಂಬನಿ ಹರಿಸಿದವು.

Advertisement

3. ತಾಳ್ಮೆ
ಮೊದಲ ಮಳೆಗೆ ಮಣ್ಣು ಹಸಿಯಾಗಿ ನಿಟ್ಟಿಸಿರು ಬಿಟ್ಟಿತು. ಒಡಲಲ್ಲಿ ಅಡಗಿಕೊಂಡಿದ್ದ ಜೀವಗಳಿಗೆ ಚೇತನ ನೀಡಿತು. ಮಣ್ಣು ಖುಷಿಯಿಂದ ಕ್ರಿಯಾಶೀಲವಾಗಿತ್ತು . ಪಕ್ಕದಲ್ಲೆ ಇದ್ದ ಕಲ್ಲು ಮುಂಗಾರು ಮಳೆಯಿಂದ ನೆಂದು ಅಳತೊಡಗಿತು. ಆಗ ಮಣ್ಣು ಕಾರಣ ಕೇಳಿದಾಗ ಕಲ್ಲು ಹೀಗೆಂದಿತು, ‘ ಮಳೆ ಬಂದರೂ ಒಂದು ಜೀವದ ಉದಯಕ್ಕೆ ಕಾರಣವಾಗಲಿಲ್ಲವಲ್ಲ’ ಎಂದು ನೊಂದು ನುಡಿಯಿತು. ಆಗ ಮಣ್ಣು , ‘ ಅಳಬೇಡ ಕಲ್ಲಣ್ಣ ನಾನು ನಿನ್ನ ಹಾಗೆ ಕಲ್ಲಾದ್ದೆ . ಬಹಳ ದಿನಗಳ ಕಾಲ ಬಿಸಿಲು ಮಳೆ ಚಳಿಯನ್ನು ಸಹಿಸಿಕೊಂಡು ಮಣ್ಣಾಗಿ ಒಂದು ಜೀವಕ್ಕೆ ಚೈತನ್ಯ ನೀಡುವ ಶಕ್ತಿ ಪಡೆದಿದ್ದೇನೆ. ನಿನಗೂ ಆ ಕಾಲ ಬಂದೇ ಬರುತ್ತೆ ತಾಳ್ಮೆ ಇರಲಿ’ ಎಂದಿತು.

4. ಮಹಾದಾಸೆ
ಆ ಮರದ ಟೊಂಗೆಗಳಲ್ಲಿ ಹಕ್ಕಿ ಪಕ್ಷಿಗಳು ಗೂಡು ಕಟ್ಟಿಕೊಂಡು ಸುಖವಾಗಿದ್ದವು. ಗೂಡುಗಳಲ್ಲಿ ಹಕ್ಕಿಗಳು ಹಾಯಾಗಿ ಮಲಗಿದ್ದವು. ಮರದ ಕಟ್ಟೆಯ ಮೇಲೆ, ಹೊಲಗದ್ದೆ ಗಳಲ್ಲಿ ರೈತರು ದುಡಿದು ಬಂದು ಸುಖವಾಗಿ ನಿದ್ರೆ ಮಾಡುತ್ತಿದ್ದರು . ಆ ದಿನ ಅಪ್ಪ ಆ ಮರವನ್ನು ಉಳಿಸದಿದ್ದರೆ ಮಗ ಅದನ್ನು ಕಡಿದು ಮಾರಾಟ ಮಾಡುತ್ತಿದ್ದ . ಮರವನ್ನು ಉಳಿಸಿ, ಬೆಳೆಸುವುದು ಅಪ್ಪನ ಮಹದಾಸೆಯಾಗಿತ್ತು. ಆ ಮರವನ್ನು ತುಂಬಾ ಪ್ರೀತಿಸುತ್ತಿದ್ದ ಅಪ್ಪ, ಆ ಮರದ ಮಡಿಲಲ್ಲಿ ಈಗಲೂ ಚಿರ ನಿದ್ರೆಯಲ್ಲಿ ಇದ್ದೆನೆ.

5. ಕೊಡುಗೆ
ಅಪ್ಪನಾದಾಗ ತನ್ನ ಹೊಲದ ಬದುವಿನಲ್ಲಿ ಒಂದು ಗಿಡ ನೆಟ್ಟು ಮಗನನ್ನು ಪ್ರೀತಿಸುವಂತೆ ಅದನ್ನು ಪೋಷಿಸತೊಡಗಿದ. ಮಗನ ಪ್ರತಿ ಜನ್ಮದಿನದಂದು ಒಂದು ಮರವನ್ನು ನೆಟ್ಟು ಬೆಳೆಸತೊಡಗಿದ. ಅಪ್ಪನ ಪೋಷಣೆಯಲ್ಲಿ ಈಗ ಮಗ ದೊಡ್ಡವನಾಗಿದ್ದಾನೆ. ಮರಗಳೂ ಬೆಳೆದು ಸಾಕಷ್ಟು ಫ‌ಲ ನೀಡುತ್ತಿವೆ. ಆದರೆ ಈಗ ಅಪ್ಪ ಇಲ್ಲ . ಮಗನ ಜೀವನ ನಿರ್ವಹಣೆಯನ್ನು ಈಗ ಮರಗಳು ಮಾಡುತ್ತಿವೆ.

– ವೆಂಕಟೇಶ ಚಾಗಿ ಲಿಂಗಸುಗೂರ

Advertisement

Udayavani is now on Telegram. Click here to join our channel and stay updated with the latest news.

Next