Advertisement

ಹೇರಿಕೆರೆ: ಹೂಳೆತ್ತುವ ಬದಲು ಕಲ್ಲು ಕಟ್ಟಿದ ಸಣ್ಣ ನೀರಾವರಿ ಇಲಾಖೆ

12:58 AM May 10, 2019 | sudhir |

 ವಿಶೇಷ ವರದಿ

Advertisement

ಬಸ್ರೂರು: ಕಂದಾವರ ಗ್ರಾ.ಪಂ. ವ್ಯಾಪ್ತಿಯ ದೊಡ್ಡ ಕೆರೆಯೆನಿಸಿಕೊಂಡ ಹೇರಿಕೆರೆಗೆ ಸರಕಾರದ ಸಣ್ಣ ನೀರಾವರಿ ಇಲಾಖೆ ಕಾಯಕಲ್ಪ ಮಾಡಿದೆ. 15 ಲಕ್ಷ ರೂ. ವೆಚ್ಚದಲ್ಲಿ ಈ ಕೆರೆಯ ಪೂರ್ವಭಾಗದಲ್ಲಿ ಸುಮಾರು 200 ಮೀ. ಉದ್ದಕ್ಕೆ ಕೆರೆಯ ಬದಿಗಳಿಗೆ ಶಿಲೆಕಲ್ಲನ್ನು ಕಟ್ಟಲಾಗಿದೆ.

ಒಂದು ಕಾಲದಲ್ಲಿ ಸುಮಾರು 70 ಎಕರೆಯಷ್ಟು ವಿಸ್ತಾರವಾಗಿ ಹರಡಿಕೊಂಡಿದ್ದ ಈ ಕೆರೆಯಲ್ಲಿ ಈಗ ಕೇವಲ 25 ಎಕರೆಯಷ್ಟು ಜಾಗ ಮಾತ್ರವೇ ಉಳಿದಿದೆ. ಇನ್ನು ನೀರಿನ ವಿಚಾರಕ್ಕೆ ಬಂದರೆ ಅದರಲ್ಲಿಯೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದನ್ನು ಕಾಣಬಹುದಾಗಿದೆ.
ಉಳಿದ ಜಾಗದಲ್ಲಿ ಕೆಲವರು ಮನೆ ಕಟ್ಟಿಕೊಂಡರೆ ಮತ್ತೆ ಕೆಲವು ಭಾಗ ಗದ್ದೆಯಾಗಿ ಬದಲಾಗಿದೆ.

ಹೂಳೆತ್ತದೆ ಕಲ್ಲು ಕಟ್ಟಿದ್ದಾರೆ!
ಉಳಿದ 25 ಎಕರೆ ಜಾಗದಲ್ಲಿ ಹೂಳೆತ್ತುವತ್ತ ಗಮನಹರಿಸದೆ ಒಂದು ಭಾಗದಲ್ಲಿ ಕಲ್ಲನ್ನು ಕಟ್ಟಲಾಗಿದೆ. ಒಂದು ವೇಳೆ ಇದಕ್ಕೆ ಬಳಕೆಯಾದ ಹಣವನ್ನು ಹೂಳೆತ್ತುವುದಕ್ಕಾಗಿ ವಿನಿಯೋಗಿಸಿದ್ದರೆ ಅಂತರ್ಜಲವಾದರೂ ವೃದ್ಧಿಯಾಗುವ ಸಾಧ್ಯತೆ ಇತ್ತು.

ಕೆರೆಯಲ್ಲಿ ನೀರು ಹೆಚ್ಚಾದಾಗ ಒಂದು ತೂಬಿನಲ್ಲಿ ನೀರನ್ನು ಉಳ್ಳೂರು, ಮೂಡ್ಲಕಟ್ಟೆಗೆ ಹೋದರೆ ಮತ್ತೂಂದು ತೂಬು ಸಾಂತಾವರದ ಕೃಷಿ ಭೂಮಿಗೆ ಹೋಗುತ್ತಿತ್ತು. ಈಗ ಬರೇ ಒಂದು ಕಡೆಗೆ ಮಾತ್ರ ಕಲ್ಲನ್ನು ಕಟ್ಟಲಾಗಿರುವುದು ಯಾವ ಉದ್ದೇಶಕ್ಕಾಗಿ ಎಂಬುದು ಸಾರ್ವಜನಿಕರ ಪ್ರಶ್ನೆ.

Advertisement

ಈ ಬಗ್ಗೆ ಇಲಾಖೆ ಅಭಿಯಂತರರನ್ನು ಕೇಳಿದರೆ ಅಷ್ಟು ಕಲ್ಲನ್ನು ಕಟ್ಟುವುದರಲ್ಲೇ ಹಣ ಮುಗಿಯಿತು ಎನ್ನುವ ಉತ್ತರ ಬಂದಿದೆ. ಕೆರೆ ಹೂಳೆತ್ತಿದ್ದರೆ ಈ ಭಾಗದ ಸಾವಿರಾರು ಕುಟುಂಬಗಳಿಗೆ ಬಂದು ಒದಗಿರುವ ಜಲಕ್ಷಾಮಕ್ಕಾದರೂ ಮುಕ್ತಿ ದೊರೆಯುವ ಸಾಧ್ಯತೆ ಇತ್ತು. ಮಾತ್ರವಲ್ಲ ಬೆಳೆ ಬೆಳೆಯುವುದಕ್ಕೂ ಸಹಾಯವಾಗುತ್ತಿತ್ತು ಎನ್ನುವುದು ಜನರ ಅಭಿಪ್ರಾಯ.
ಈ ಹಿಂದೆ ಕೆರೆಯ ಬಗ್ಗೆ ಉದಯವಾಣಿ ಪತ್ರಿಕೆ ವರದಿ ಪ್ರಕಟಿಸಿತ್ತು.

ಪ್ರಯೋಜನವೇನು?
ಹೇರಿಕೆರೆಯನ್ನು ರೂ. 15 ಲಕ್ಷ ವೆಚ್ಚದಲ್ಲಿ ಹೂಳೆತ್ತಿದ್ದರೆ ಇಲ್ಲಿ ಅಂತರ್ಜಲ ವೃದ್ಧಿಯಾಗಿ ನೀರು ಹೆಚ್ಚುತ್ತಿತ್ತು. ಸುತ್ತಲ ಗದ್ದೆಗಳಿಗೆ ನೀರಾದರೂ ಹೋಗಬಹುದಿತ್ತು.ಈಗ ಕೆರೆಯ ಉತ್ತರ ಭಾಗದಲ್ಲಿ ಕಲ್ಲು ಕಟ್ಟಿ ಪ್ರಯೋಜನ ಏನು ಎನ್ನುವುದು ತಿಳಿದು ಬರುತ್ತಿಲ್ಲ . ಮುಂದೆ ಇಲಾಖೆ ಏನು ಕಾಮಗಾರಿ ಮಾಡುತ್ತದೋ ಗೊತ್ತಿಲ್ಲ!
-ನಾಗರಾಜ ಪೂಜಾರಿ, ಸ್ಥಳೀಯ ನಿವಾಸಿ

ಹೂಳೆತ್ತಲಾಗುವುದು
ಸಣ್ಣ ನೀರಾವರಿ ಇಲಾಖೆಯ ವತಿಯಿಂದ ರೂ.15 ಲಕ್ಷ ವೆಚ್ಚದಲ್ಲಿ ಹೇರಿಕೆರೆಯ ಪೂರ್ವ ಭಾಗದಲ್ಲಿ ಕಲ್ಲನ್ನು ಕಟ್ಟಲು ಮಾತ್ರ ಹಣ ಮಂಜೂರಾಗಿತ್ತು (ಫಿಟ್ಟಿಂಗ್‌) ಈ ಹಣದಿಂದ ಕೆರೆಯ ಹೂಳೆತ್ತಲು ಸಾಧ್ಯವಿಲ್ಲ. ಹೂಳೆತ್ತಲು ಮೇಲಧಿಕಾರಿಗಳಿಗೆ ಬರೆದುಕೊಳ್ಳಲಾಗಿದೆ.ಹಣ ಮಂಜೂರಾದ ತಕ್ಷಣ ಕೆರೆಯನ್ನು ಹೂಳೆತ್ತಲಾಗುವುದು.ಇಷ್ಟು ಹಣದಲ್ಲಿ ಹೂಳೆತ್ತಲು ಸಾಧ್ಯವೂ ಇಲ್ಲ .
-ರಾಜೇಶ್‌, ಕಿರಿಯ ಆಭಿಯಂತರರು,ಸಣ್ಣ ನೀರಾವರಿ ಇಲಾಖೆ ,ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next