ಬೆಂಗಳೂರು: ಕೃಷಿ ಹೊರತುಪಡಿಸಿದರೆ, ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಇರುವ ಏಕೈಕ ವಲಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ). ಇನ್ನು ದೇಶದಲ್ಲೇ ಎರಡನೆಯ ಅತ್ಯಧಿಕ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದು. ಆದರೆ, ಇಲ್ಲಿ ನೆರೆಹೊರೆಯಲ್ಲಿರುವಂತೆ ಈ ವಲಯವನ್ನು ಉತ್ತೇಜಿಸಲು ಪ್ರತ್ಯೇಕ ನೀತಿಯೂ ಇಲ್ಲ.
ಕೇಂದ್ರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನೀತಿ ಇದೆ. ಅದೇ ರೀತಿ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ತಾನ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲೂ ಇವೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಎಂಎಸ್‌ಎಂಇ ನೀತಿಗಾಗಿ ಕೂಗು ಕೇಳಿಬರುತ್ತಿದ್ದು, ಈ ಸಂಬಂಧ ನೂತನ ಸರ್ಕಾರದ ಮುಂದೆ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಬೇಡಿಕೆ ಮುಂದಿಟ್ಟಿದ್ದು, ಇದಕ್ಕೆ ಪೂರಕ ಸ್ಪಂದನೆಯೂ ದೊರಕಿದೆ. ಅಂದು ಕೊಂಡಂತೆ ಎಲ್ಲವೂ ಆದರೆ, ಬಜೆಟ್ ಅಧಿವೇಶನದ ನಂತರ ಈ ಪ್ರಕ್ರಿಯೆಗೆ ಚಾಲನೆ ದೊರೆಯುವ ಸಾಧ್ಯತೆ ಇದೆ.
ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಅಂದಾಜು 5.65 ಲಕ್ಷ ಎಂಎಸ್‌ಎಂಇಗಳಿದ್ದು, ಅಂದಾಜು 45 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿವೆ. ಉದ್ಯೋಗ ಸೃಷ್ಟಿ ವಾರ್ಷಿಕ ಶೇ. 8ರಿಂದ 9ರಷ್ಟು ಇದೆ. ಆದರೆ, ಈ ಪೂರಕ ಅಂಶಗಳ ನಡುವೆ ಕೋವಿಡ್ ನಂತರದಲ್ಲಿ ಶೇ. 40 ಎಂಎಸ್ ಎಂಇಗಳು ಸ್ಥಗಿತಗೊಳ್ಳುವ ಆತಂಕದಲ್ಲಿವೆ. ಅವುಗಳನ್ನು ಮೇಲೆತ್ತಲು,ಬೆಂಗಳೂರು ಆಚೆಗೆ ಕೈಗಾರಿಕಾ ಪ್ರಗತಿ ಸಾಧಿಸಲು, “ಈಸ್ ಆಫ್ ಡುಯಿಂಗ್ ಬ್ಯುಸಿನೆಸ್’, ಮೂಲಸೌಕರ್ಯಗಳ ಅಭಿವೃದ್ಧಿ, ಹಣಕಾಸಿನ ನೆರವಿಗಾಗಿ ಈ ಪ್ರತ್ಯೇಕ ನೀತಿಯ ಅವಶ್ಯಕತೆ ಎಂದಿಗಿಂತ ಹೆಚ್ಚಿದೆ ಎಂದು ಕೈಗಾರಿಕೋದ್ಯಮಿಗಳು ಪ್ರತಿಪಾದಿಸಿದ್ದಾರೆ.
ಇಳಿಮುಖದಲ್ಲಿ ಶೇ. 33 ಎಂಎಸ್‌ಎಂಇಗಳು!: ದೇಶದ ಒಟ್ಟಾರೆ ಆಂತರಿಕ ವೃದ್ಧಿ (ಜಿಡಿಪಿ)ಯಲ್ಲಿ ಕೈಗಾರಿಕೆಗಳ ಪಾಲು ಶೇ. 17ರಷ್ಟಿದ್ದರೆ, ಅದರಲ್ಲಿ ಎಂಎಸ್‌ಎಂಇ ಕೊಡುಗೆ ಸುಮಾರು ಶೇ. 40ರಷ್ಟಿದೆ. ರಾಜ್ಯದಲ್ಲೂ ಇದರ ಪ್ರಮಾಣ ಹೆಚ್ಚು-ಕಡಿಮೆ ಇಷ್ಟೇ ಇದೆ. ಜಾಗತಿಕ ಮಹಾ ಮಾರಿ ಕೋವಿಡ್ ನಂತರದಲ್ಲಿ ಈ ವಲಯಕ್ಕೆ ತೀವ್ರ ಪೆಟ್ಟುಬಿದ್ದಿದ್ದು, 1 ಕೋಟಿಗಿಂತ ಕಡಿಮೆ ವಹಿವಾಟು ನಡೆಸುವ ಸೂಕ್ಷ್ಮ ಕೈಗಾರಿಕೆಗಳ ಸಾಲ ಬಾಕಿ ಉಳಿಸಿಕೊಂಡ ಪ್ರಮಾಣ ವಾರ್ಷಿಕ (2022ರ ಸೆಪ್ಟೆಂಬರ್ ಅಂತ್ಯಕ್ಕೆ) ಶೇ. 10.6ರಿಂದ ಶೇ. 13ಕ್ಕೆ ಏರಿಕೆಯಾಗಿದೆ. 2023ರ ಮಾರ್ಚ್ ನಲ್ಲಿ ನಡೆದ ಮೆಗಾ ಸಮೀಕ್ಷೆ ವರದಿ ಪ್ರಕಾರ ಕಳೆದ 5 ವರ್ಷಗಳಲ್ಲಿ ದೇಶದಲ್ಲಿನ ಶೇ. 20.4 ಎಂಎಸ್‌ಎಂಇಗಳು ಸ್ಥಗಿತಗೊಂಡಿದ್ದು, ಶೇ. 33 ಕೈಗಾರಿಕೆಗಳ ಪ್ರಗತಿ ಇಳಿಮುಖದಲ್ಲಿದೆ. ಶೇ. 17.5 ಮಾತ್ರ ಬೆಳವಣಿಗೆ ಸಾಧಿಸುತ್ತಿವೆ. ಕರ್ನಾ ಟಕದ ಚಿತ್ರಣ ಇದಕ್ಕಿಂತ ಭಿನ್ನವಾಗಿಲ್ಲ. ಈ ಹಿನ್ನೆಲೆ ಯಲ್ಲಿ ಎಂಎಸ್‌ಎಂಇ ನೀತಿಯ ಅವಶ್ಯಕತೆ ಇದೆ ಎಂದು ಅಸೋಚಾಮ್ ಸಲಹೆಗಾರ ಹಾಗೂ “ಎಂಎಸ್‌ಎಂಇ ಮೆಗಾ ಸರ್ವೇ- 2023’ರಲ್ಲಿ ಭಾಗವಹಿಸಿದ್ದ ಸಂಪತ್‌ರಾಮನ್ ತಿಳಿಸುತ್ತಾರೆ.
“ನೀತಿ ಮಾಡಿ-ಬಿಡಿ; ಸೌಲಭ್ಯ ಕೊಡಿ’: “ಸರ್ಕಾರ ಎಂಎಸ್‌ಎಂಇಗಾಗಿ ಪ್ರತ್ಯೇಕ ನೀತಿ ಮಾಡಲಿ ಅಥವಾ ಬಿಡಲಿ. ಆದರೆ, ಈಸ್ ಆಫ್ ಡುಯಿಂಗ್ ಬ್ಯುಸಿನೆಸ್ ಜತೆಗೆ ವಿದ್ಯುತ್, ನೀರು ಮತ್ತು ರಸ್ತೆ ಈ ಮೂರು ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಿದರೆ ಸಾಕು. ವಿದ್ಯುತ್ ಉತ್ಪಾದನೆ ಹೆಚ್ಚುವರಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನೆರೆಯ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ದುಬಾರಿ ಆಗಿದೆ ಎಂದು ಕಾಸಿಯಾ ಮಾಜಿ ಅಧ್ಯಕ್ಷ ಜೆ. ಕ್ರಾಸ್ಟಾ ಆರೋಪಿಸುತ್ತಾರೆ.
ತೆರಿಗೆ ಹೊರೆ ತಗ್ಗಿಸಲು ಆಗ್ರಹ; ಮತ್ತೂಂದು ಸಭೆ : ವಿದ್ಯುತ್ ಶುಲ್ಕ ದುಬಾರಿಯಾಗಿರುವುದರಿಂದ ಕೈಗಾರಿಕೆಗಳಿಗೆ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಮೇಲಿನ ತೆರಿಗೆ ಹೊರೆಯನ್ನು ಶೇ. 9ರಿಂದ ಶೇ. 3ಕ್ಕೆ ಇಳಿಸುವಂತೆ ಕೈಗಾರಿಕೋದ್ಯಮಿಗಳು ಆಗ್ರಹಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಸರ್ಕಾರ ಇದಕ್ಕಾಗಿ ಮತ್ತೂಂದು ಸುತ್ತಿನ ಸಭೆ ಕೂಡ ಕರೆದಿದೆ.
-ವಿಜಯ ಕುಮಾರ ಚಂದರಗಿ