Advertisement

ಮರಿ ಆನೆಗೆ ಅಮ್ಮ ಸಿಗಲಿಲ್ಲ: ಸಕ್ರೆಬೈಲು ಆನೆ ಶಿಬಿರಕ್ಕೆ ಸ್ಥಳಾಂತರ

06:00 AM Apr 10, 2018 | |

ಸುಳ್ಯ: ಗುಂಪಿನಿಂದ ಬೇರೆಯಾಗಿದ್ದ ಮರಿಯಾನೆಯನ್ನು ತಾಯಿಯೊಂದಿಗೆ ಸೇರಿಸುವ ಯತ್ನ ಕೊನೆಗೂ ಸಫ‌ಲವಾಗಿಲ್ಲ. ಮರಿ ಅಸ್ವಸ್ಥವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿದೆ.

Advertisement

ಐದು ದಿನಗಳ ಹಿಂದೆ ಸುಳ್ಯ ಸಮೀಪ ಭಸ್ಮಡ್ಕದ ಪಯಸ್ವಿನಿ ನದಿ ತಟಕ್ಕೆ ಬಂದಿದ್ದ ಆನೆಗಳ ಹಿಂಡು ರವಿವಾರ ಅರಣ್ಯದತ್ತ ಮರಳಿತ್ತು. ಆದರೆ ಅವುಗಳನ್ನು ಹಿಂಬಾಲಿಸಲಾಗದ ಗಂಡು ಮರಿ ನದಿ ತೀರದಲ್ಲೇ ಬಾಕಿಯಾಗಿತ್ತು. ಮರಿಯಾನೆಯನ್ನು ಕುರುಂಜಿಕಾರ್ ಫಾಮ್ಸ್‌ìನಲ್ಲಿ ರಕ್ಷಿಸಿ ಪಶು ವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತು. ಆನೆಗಳ ಗುಂಪು ಮರಿಯನ್ನು ಅರಸಿ ಬರಬಹುದು ಎಂದು ಸೋಮವಾರ ಮಧ್ಯಾಹ್ನದ ತನಕ ಕಾದರೂ ಅವು ಬಾರದ್ದರಿಂದ ಹಾಗೂ ಮರಿ ಆನೆ ತಾನಾಗಿ ಅರಣ್ಯದತ್ತ ತೆರಳುವಷ್ಟು ಆರೋಗ್ಯದಲ್ಲಿ ನಿರೀಕ್ಷಿತ ಚೇತರಿಕೆ ಕಂಡು ಬಾರದಿರುವ ಕಾರಣ ಸಕ್ರೆಬೈಲು ಶಿಬಿರಕ್ಕೆ ಕೊಂಡೊಯ್ಯಲಾಯಿತು.

ಚಿಕಿತ್ಸೆ ಮುಂದುವರಿಕೆ
ಸೋಮವಾರ ಬೆಳಗ್ಗೆ ಮರಿ ಆನೆಯನ್ನು ರೋಶನ್‌ ಅವರ ತೋಟದಲ್ಲಿ ಇರಿಸಿ ಸುಳ್ಯ ಪಶು ಇಲಾಖೆ ವೈದ್ಯಾಧಿಕಾರಿ ಡಾ| ನಿತಿನ್‌ ಪ್ರಭು ಚಿಕಿತ್ಸೆ ಮುಂದುವರಿಸಿದ್ದರು. ಆನೆ ದೇಹದಲ್ಲಿ ನೀರಿನಂಶ ಹೆಚ್ಚಳಕ್ಕೆ ಪೂರಕವಾಗಿ ವಿವಿಧ ದ್ರಾವಣಗಳ ಮಿಶ್ರಣದ 12.5 ಬಾಟಲಿ ಡ್ರಿಪ್ಸ್‌ ನೀಡಿದರು. ಸಂಜೆ ಸಕ್ರೆಬೈಲಿಗೆ ತೆರಳುವ ಮೊದಲು ಆನೆ ಮರಿ ತಾನಾಗಿಯೇ ನೀರು ಕುಡಿಯುವಷ್ಟು ಚೇತರಿಸಿಕೊಂಡಿತ್ತು.

ನೀರಾಟವಾಡಿದ ಮರಿಯಾನೆ
ಮಧ್ಯಾಹ್ನದ ಅನಂತರ ಮರಿಯಾನೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತ್ತು. ತೋಟದಲ್ಲಿ ವೀಕ್ಷಣೆಗೆ ಬಂದಿದ್ದ ನೂರಾರು ಜನರನ್ನು ಕಂಡು ಆನೆ ತನ್ನ ಚೇಷ್ಟೆ ಪ್ರದರ್ಶಿಸಿತ್ತು. ಕೆಲವರು ಫೋಟೋ ತೆಗೆದು ಸಂಭ್ರಮಿಸಿದರು. ಮಿಕ್ಕವರು ಆನೆಯನ್ನು ಸ್ಪರ್ಶಿಸಿ ಖುಷಿಪಟ್ಟರು. ಪೈಪು ಮೂಲಕ ದೇಹದ ಮೇಲೆ ನೀರು ಹಾಯಿಸಿದಾಗಲೂ ಖುಷಿ ಪಟ್ಟಿತು. ಸ್ಪಿಂಕ್ಲರ್‌ ನೀರಿಗೆ ಸೊಂಡಿಲು ಒಡ್ಡಿ, ಕೆಲ ಕಾಲ ಆಟವಾಡಿತು.

ಪಿಕಪ್‌ನಲ್ಲಿ  ಸಕ್ರೆಬೈಲಿಗೆ
ಸಂಜೆ 5.30ರ ಹೊತ್ತಿಗೆ ಆನೆಯನ್ನು ಸಕ್ರೆಬೈಲು ಶಿಬಿರಕ್ಕೆ ಕೊಂಡೊಯ್ಯುವ ಸಿದ್ಧತೆ ಪೂರ್ಣಗೊಂಡಿತ್ತು. ಪಿಕಪ್‌ ವಾಹನದಲ್ಲಿ ಬೈಹುಲ್ಲು ಮತ್ತು ಅಡಿಕೆ ಸಿಪ್ಪೆ ತುಂಬಿದ ಗೋಣಿಚೀಲಗಳನ್ನು ಇರಿಸಿ ಆನೆಗೆ ತೊಂದರೆ ಆಗದಂತೆ ಎಚ್ಚರದಿಂದ ವಾಹನ ಏರಿಸಲಾಯಿತು. ರವಿವಾರದಿಂದಲೇ ಆನೆಯೊಂದಿಗಿದ್ದ ಊರವರು, ಮೂರು ದಿನಗಳಿಂದ ನಿದ್ದೆಯಿಲ್ಲದೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬಂದಿ ಮರಿಯಾನೆ ತೆರಳುತ್ತಿರುವುದನ್ನು ಕಂಡು ಕಣ್ಣೀರು ಸುರಿಸಿದರು.

Advertisement

ಆತಂಕ ಕೊನೆಯಾಗಿಲ್ಲ
ಮರಿಯಾನೆ ಗುಂಪಿನೊಂದಿಗೆ ಸೇರದೆ ಇರುವ ಕಾರಣ ಆನೆ ಹಿಂಡು ಮರಳಿ ನದಿಯತ್ತ ಬರುವ ಸಾಧ್ಯತೆ ಹೆಚ್ಚಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಸಿಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ನದಿಗೆ ತಾಗಿಕೊಂಡಿರುವ ಮೇದಿನಡ್ಕ ರಕ್ಷಿತಾರಣ್ಯದಲ್ಲಿ ಹಿಂಡಾನೆ ಘೀಳಿಡುವ ಸದ್ದು ಕೇಳಿ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸೋಮವಾರವೂ ಮರಿಯಾನೆಗೆ ಚಿಕಿತ್ಸೆ, ಆಹಾರ ನೀಡಲಾಗಿದೆ. ತೋಟದಲ್ಲಿ ತುಸು ಓಡಾಟ ನಡೆಸಿದ್ದರೂ ಆನೆ ಮರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವುದರಿಂದ ಕ್ಯಾಂಪ್‌ಗೆ ಕಳುಹಿಸುವುದು ಅನಿವಾರ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಮೇಲಧಿಕಾರಿಗಳ ಸೂಚನೆಯಂತೆ ಸೋಮವಾರ ಸಂಜೆ ಮರಿ ಆನೆಯನ್ನು ಸಕ್ರೆಬೈಲು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
 ಮಂಜುನಾಥ ಎನ್‌., ಸುಳ್ಯ ವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next