ಬೆಂಗಳೂರು: ಕಾಂಗ್ರೆಸ್ ತೊರೆದಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿಗೆ ಕರೆತರಲು ವೇದಿಕೆ ಸಿದಟಛಿವಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಪಂಚ ರಾಜ್ಯಗಳ ಫಲಿತಾಂಶ ಹೊರಬಿದ್ದ ಬಳಿಕ ಈ ತಿಂಗಳ ಅಂತ್ಯದೊಳಗೆ ಅವರು ಬಿಜೆಪಿ ಸೇರಲಿದ್ದಾರೆ. ಈ ಮಧ್ಯೆ ಎಸ್.ಎಂ.ಕೃಷ್ಣ ಅವರನ್ನು ದೆಹಲಿಯಲ್ಲಿ ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ನ ಈಗಿನ ನಾಯಕತ್ವದ ವಿರುದಟಛಿ ಹಿರಿಯ ಕಾಂಗ್ರೆಸಿಗರು ತಿರುಗಿಬಿದ್ದು ಬಿಜೆಪಿಗೆ ಸೇರುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಹಿರಿಯ ಕಾಂಗ್ರೆಸಿಗರೇ ಸಾಥ್ ನೀಡುತ್ತಿದ್ದಾರೆ ಎಂಬುದನ್ನು ಬಿಂಬಿಸಲು ಬಿಜೆಪಿ ವರಿಷ್ಠ ನಾಯಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ನಿಟ್ಟಿನಲ್ಲಿ ವರಿಷ್ಠರ ಸೂಚನೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಸೋಮವಾರ ಸಂಜೆ ಎಸ್.ಎಂ.ಕೃಷ್ಣ ಅವರ ಸದಾಶಿವನಗರ ನಿವಾಸಕ್ಕೆ ತೆರಳಿ ಅವರನ್ನು ಬಿಜೆಪಿಗೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಆದರೆ, ಕೃಷ್ಣ ಅವರು ಈ ಆಹ್ವಾನವನ್ನು ತಿರಸ್ಕರಿಸಿಯೂ ಇಲ್ಲ, ಸ್ವೀಕರಿಸಿಯೂ ಇಲ್ಲ.
ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಂಡು ನಿಮಗೆ ತಿಳಿಸುತ್ತೇನೆ ಎಂದು ಹೇಳಿಕಳುಹಿಸಿದ್ದಾರೆ ಎನ್ನಲಾಗಿದೆ. ಸೋಮವಾರ ಸಂಜೆ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ ಮತ್ತು ಅಶೋಕ್ ಅವರು ಕೃಷ್ಣ ಮತ್ತು ಅವರ ಪತ್ನಿ ಪ್ರೇಮಾ ಕೃಷ್ಣ ಅವರೊಂದಿಗೆ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ. ಎಲ್ಲರೂ ಜತೆಯಾಗಿ ತಿಂಡಿ, ಕಾಫಿ ಸೇವಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಅಭಿಪ್ರಾಯವನ್ನು ಎಸ್.ಎಂ.ಕೃಷ್ಣ ಅವರ ಗಮನಕ್ಕೆ ತಂದ ಯಡಿಯೂರಪ್ಪ ಅವರು, ಬಿಜೆಪಿಗೆ ಸೇರುವಂತೆ ಅಧಿಕೃತ ಆಹ್ವಾನ ನೀಡಿದರು. “ನಿಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳಲು ರಾಷ್ಟ್ರೀಯ ನಾಯಕರು ಈಗಾಗಲೇ ಒಪ್ಪಿದ್ದಾರೆ ಎಂಬುದು ನಿಮಗೂ ಗೊತ್ತಿದೆ. ನಿಮ್ಮ ಒಪ್ಪಿಗೆ ಸಿಕ್ಕಿದರೆ ಪಂಚರಾಜ್ಯಗಳ ಫಲಿತಾಂಶ ಹೊರಬಿದ್ದ ಬಳಿಕ ದೆಹಲಿಯಲ್ಲೇ ಸಮಾರಂಭವೊಂದನ್ನು ಏರ್ಪಡಿಸಿ ಬಿಜೆಪಿಗೆ ಸೇರಿಸಿಕೊಳ್ಳುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ, ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮತ್ತು ನಿಮ್ಮ ಪಕ್ಷದ ಬೆಳವಣಿಗೆ ಬಗ್ಗೆ ನನಗೆ ಸದಭಿಪ್ರಾಯವಿದೆ. ಆದರೆ, ಏಕಾಏಕಿ ನಿಮ್ಮ ಆಹ್ವಾನ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕುಟುಂಬ ಸದಸ್ಯರು ಹಾಗೂ ಬೆಂಬಲಿಗರೊಂದಿಗೆ ಮತ್ತೂಮ್ಮೆ ಕುಳಿತು ಚರ್ಚಿಸಿ ನಂತರ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿ ಕಳುಹಿಸಿದರು ಎನ್ನಲಾಗಿದೆ.
ದೆಹಲಿಯಲ್ಲೇ ಸೇರ್ಪಡೆಗೆ ಒಲವು: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಏನೇ ಇರಲಿ, ಎಸ್.ಎಂ.ಕೃಷ್ಣ ಅವರ ಬಿಜೆಪಿ ಸೇರ್ಪಡೆಯನ್ನು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಲು ಬಯಸಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ದೆಹಲಿಯಲ್ಲೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಈ ಪೈಕಿ ಎಸ್.ಎಂ.ಕೃಷ್ಣ ಅವರನ್ನು ವಿಶೇಷವಾಗಿ ಪರಿಗಣಿಸಲು ನಿರ್ಧರಿಸಿರುವ ಪಕ್ಷದ ರಾಷ್ಟ್ರೀಯ ನಾಯಕರು, ಕಾಂಗ್ರೆಸ್‌ನ ಈಗಿನ ನಾಯಕತ್ವದ ವಿರುದ್ಧ ಅವರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಹೆಸರು ಗಳಿಸಿದ್ದ ಕೃಷ್ಣ ಅವರು ಕೇಂದ್ರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಅಲ್ಲದೆ, ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಹೀಗಾಗಿ ಅವರನ್ನು ರಾಷ್ಟ್ರ ಮಟ್ಟದ ನಾಯಕ ಎಂಬುದಾಗಿ ಬಿಂಬಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವುದು ಬಿಜೆಪಿಯ ಉದ್ದೇಶ ಎನ್ನಲಾಗಿದೆ.
ಬಿಜೆಪಿಗೆ ಸೇರಿದರೆ ಎಸ್.ಎಂ.ಕೃಷ್ಣ ಅವರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬ ಬಗ್ಗೆ ಬಿಜೆಪಿ ಇನ್ನೂ ಯೋಚಿಸಿಲ್ಲ. ಅಲ್ಲದೆ, ಎಸ್.ಎಂ.ಕೃಷ್ಣ ಕೂಡ ಈ ಬಗ್ಗೆ ಯಾವುದೇ ಬೇಡಿಕೆ ಇಟ್ಟಿಲ್ಲ. ಅಲ್ಲದೆ, ನಾನು ಸ್ಥಾನಮಾನ ಬಯಸಿಲ್ಲ, ಗೌರವ ಸಿಕ್ಕಿದರೆ ಸಾಕು ಎಂಬ ಮಾತನ್ನು ಕೃಷ್ಣ ಅವರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.