Advertisement

ಕಿಲಾಡಿ ಮೊಲಗಳು

03:28 PM May 23, 2019 | keerthan |

ಖಾಲಿ ಹೊಟ್ಟೆಯಲ್ಲಿ ಮನೆಗೆ ಹಿಂತಿರುಗಿದ ಬೆಕ್ಕುಗಳು, ಮಂಗಣ್ಣ ತಮಗೆ ಮೋಸ ಮಾಡಿದ ಕಥೆಯನ್ನು ಗೆಳೆಯರ ಬಳಿ ಹೇಳಿಕೊಂಡು ಗೋಳಾಡಿದವು. ಆ ಮೋಸಗಾರ ಮಂಗಣ್ಣನಿಗೆ ಬುದ್ಧಿ ಕಲಿಸಲೇಬೇಕು ಅಂತ ಮೊಲಗಳು ಮಾತಾಡಿಕೊಂಡವು.

Advertisement

ಒಂದಾನೊಂದು ಊರಿನಲ್ಲಿ ಒಂದು ದೊಡ್ಡ ಮನೆ ಇತ್ತು. ಮನೆಯವರು ತುಂಬಾ ಒಳ್ಳೆಯವರಾಗಿದ್ದರು. ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಹೀಗಾಗಿ ಎರಡು ನಾಯಿಗಳು, ಎರಡು ಬೆಕ್ಕುಗಳು, ಎರಡು ಮೊಲಗಳನ್ನು ಸಾಕಿದ್ದರು. ಬೆಕ್ಕುಗಳ ಹೆಸರು ಕರಿಯ ಮತ್ತು ಬಿಳಿಯ. ಮೊಲಗಳ ಹೆಸರು ಚಿನ್ನು- ಮುನ್ನು, ನಾಯಿಗಳ ಹೆಸರು ರಾಮು- ಶಾಮು. ಅವೆಲ್ಲವೂ ಪರಸ್ಪರ ಸ್ನೇಹದಿಂದಿದ್ದವು. ಯಾರಿಗೇ ತೊಂದರೆ ಯಾದರೂ ಕಷ್ಟದಲ್ಲಿ ಭಾಗಿಯಾಗುತ್ತಿದ್ದವು.

ಒಂದು ದಿನ ಮನೆಯ ಯಜಮಾನಿ ‘ಕರಿಯಾ… ಬಿಳಿಯಾ… ಬನ್ರೋ… ಅಂತ ಕರೆದಳು. ಕರಿಯ, ಬಿಳಿಯನ ಹಿಂದೆ ಚಿನ್ನು, ಮುನ್ನು, ಎಲ್ಲರೂ ಓಡಿದರು. ಯಜಮಾನಿ ಮೊಲಗಳಿಗೆ, ಬೆಕ್ಕುಗಳಿಗೆ ಹಾಗೂ ನಾಯಿಗಳಿಗೆ ಸೇರಿಸಿ ಮೂರು ರೊಟ್ಟಿಗಳನ್ನು ಕೊಟ್ಟಳು. ‘ಗಲಾಟೆ ಮಾಡದೇ ಹಂಚಿಕೊಂಡು ತಿನ್ನಿ’ ಅಂತ ಹೇಳಿ ಮನೆಯೊಳಕ್ಕೆ ಹೊರಟು ಹೋದಳು. ನಾಯಿಗಳು, ಮೊಲಗಳು ಸಂತೋಷದಿಂದ ಬಾಲ ಅಲ್ಲಾಡಿಸುತ್ತಾ ರೊಟ್ಟಿಯನ್ನು ಹಂಚಿಕೊಂಡವು. ಬೆಕ್ಕುಗಳು ಮಾತ್ರ ‘ಇಲ್ಲಿ ರೊಟ್ಟಿ ತಿನ್ನೋದು ಬೇಡ, ಮನೆಯ ಆಚೆ ಹೋಗಿ ಮರದಡಿ ತಿನ್ನೋಣ, ಮಜವಾಗಿರುತ್ತೆ’ ಎಂದು ಕಾಂಪೌಂಡ್‌ ಹಾರಿ ರಸ್ತೆಗೆ ಬಂದವು. ಮರದಡಿ ಹಂಚಿಕೊಂಡು ತಿನ್ನುವಷ್ಟರಲ್ಲಿ ಅದೆಲ್ಲಿಂದಲೋ ಮಂಗಣ್ಣ ಬಂದ. ಅದರ ಪರಿಚಯ ಬೆಕ್ಕುಗಳಿಗೆ ಚೆನ್ನಾಗಿಯೇ ಇತ್ತು. ಹೇಗೆಂದರೆ ಒಮ್ಮೊಮ್ಮೆ ಮಂಗಣ್ಣ ಮನೆಗೆ ನುಗ್ಗಿ ಬಾಳೆಹಣ್ಣು, ಪರಂಗಿ ಹಣ್ಣು ಎಲ್ಲವನ್ನೂ ಕದ್ದು ತಿಂದು ಓಡುತ್ತಿತ್ತು.

ಮಂಗಣ್ಣ- ‘ಕೈಲಿ ರೊಟ್ಟಿ ಹಿಡ್ಕಂಡು ಏನು ಮಾಡ್ತಾ ಇದ್ದೀರಿ?’ ಅಂತ ನಯವಾಗಿ ಕೇಳಿತು.

‘ಯಜಮಾನತಿ ರೊಟ್ಟಿ ಕೊಟ್ಟಿದ್ದಾರೆ. ನಾವು ಹಂಚಿಕೊಳ್ತಾ ಇದ್ದೀವಿ’ ಅಂದವು ಬೆಕ್ಕುಗಳು.

Advertisement

‘ನೀವು ಚಿಕ್ಕವರು, ನಿಮಗೆ ಹಂಚಿಕೊಳ್ಳೋಕೆ ಬರೋಲ್ಲ. ನಾನು ನಿಮಗೆ ಸಮನಾಗಿ ರೊಟ್ಟಿಯನ್ನು ಹಂಚಿಕೊಡ್ತೀನಿ’ ಅನ್ನುತ್ತಾ ಬೆಕ್ಕುಗಳ ಕೈಲಿದ್ದ ರೊಟ್ಟಿಯನ್ನು ಕಿತ್ತುಕೊಂಡಿತು. ಬೆಕ್ಕುಗಳು ಪಿಳಿ ಪಿಳಿ ಅಂತ ಕಣ್ಣು ಬಿಟ್ಕೊಂಡು ನೋಡುತ್ತಾ ಕುಳಿತುಕೊಂಡವು.

‘ನೋಡಿ, ನಾನು ರೊಟ್ಟಿ ಮುರೀತೀನಿ. ಬಲಗಡೆ ಕೈಯಲ್ಲಿರೋದು ಬಿಳಿಯನದು, ಎಡಗಡೆ ಕೈಯಲ್ಲಿರೋದು ಕರಿಯನದು’ ಅಂದಿತು.

‘ಸರಿ ಮಂಗಣ್ಣ’ ಅಂದವು ಬೆಕ್ಕುಗಳು. ಕೋತಿ ರೊಟ್ಟಿ ಮುರಿಯಿತು. ಆದರೆ ಮುರಿದದ್ದು ಸರಿಯಾಗಲಿಲ್ಲ. ಬಲಗೈಯ ರೊಟ್ಟಿ ತುಂಡು ಸ್ವಲ್ಪ ದೊಡ್ಡದಾಗಿತ್ತು.

‘ಅಯ್ಯಯ್ಯೋ… ಹೀಗಾಯಿತಲ್ಲ’ ಅನ್ನುತ್ತಾ ಮಂಗಣ್ಣ ಬಲಗೈನ ರೊಟ್ಟಿ ತುಂಡಲ್ಲಿ ಸ್ವಲ್ಪ ಕಚ್ಚಿ ತಿಂದು ಬಿಟ್ಟಿತು. ಈಗ ಎಡಗೈ ರೊಟ್ಟಿ ಕೊಂಚ ದೊಡ್ಡದಾಯಿತು.

‘ಅಯ್ಯಯ್ಯೋ, ಮತ್ತೆ ಹೀಗಾಯಿತಲ್ಲ…’ ಅನ್ನುತ್ತಾ ಎಡಗೈನ ರೊಟ್ಟಿಯಲ್ಲಿ ಸ್ವಲ್ಪ ಕಚ್ಚಿ ತಿಂದಿತು.

ಈಗ ಮತ್ತೆ ಬಲಗೈನ ರೊಟ್ಟಿ ಚೂರು ದೊಡ್ಡದಾಯಿತು.

ಹೀಗೇ ಮಾಡ್ತಾ ಮಾಡ್ತಾ ನೋಡ ನೋಡುತ್ತಿದ್ದಂತೆ ರೊಟ್ಟಿ ಪೂರ್ತಿ ಖಾಲಿಯಾಗಿಬಿಟ್ಟಿತು. ಪಾಪ, ಬೆಕ್ಕುಗಳಿಗೆ ತುಂಬಾ ಬೇಜಾರಾಯ್ತು. ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಗಿತ್ತು ಅವಕ್ಕೆ. ಇತ್ತ ಮಂಗಣ್ಣ, ‘ನಿಮಗೆ ಮೂರು ನಾಮ’ ಅಂತ ಅಣಕಿಸಿ ಹಲ್ಲು ಕಿರಿದು ಮರವೇರಿತು.

ಖಾಲಿ ಹೊಟ್ಟೆಯಲ್ಲಿ ಮನೆಗೆ ಹಿಂತಿರುಗಿದ ಬೆಕ್ಕುಗಳು, ಮಂಗಣ್ಣ ತಮಗೆ ಮೋಸಮಾಡಿದ ಕಥೆಯನ್ನು ಗೆಳೆಯರ ಬಳಿ ಹೇಳಿಕೊಂಡು ಗೋಳಾಡಿದವು. ಆ ಮೋಸಗಾರ ಮಂಗಣ್ಣನಿಗೆ ಬುದ್ಧಿ ಕಲಿಸಲೇಬೇಕು ಅಂತ ಮೊಲಗಳು ಮಾತಾಡಿಕೊಂಡವು.

ನಾಲ್ಕು ದಿನಗಳು ಕಳೆದವು. ಚಿನ್ನು-ಮುನ್ನುವಿನ ಪ್ಲಾನ್‌ ತಯಾರಾಯಿತು. ಒಂದು ದಿವಸ ಬೆಳಗ್ಗೆ ಮನೆ ಯಜಮಾನಿ ಮೊಲಗಳಿಗೆ ಒಂದು ಕ್ಯಾರೆಟ್ ಕೊಟ್ಟು ‘ಇಬ್ರೂ ಹಂಚಿಕೊಂಡು ತಿನ್ನಿ’ ಅಂದರು. ಚಿನ್ನು, ಮುನ್ನು ಕ್ಯಾರೆಟ್ ಹಿಡಿದು ಚುಪ್‌ಕು… ಚುಪ್‌ಕು… ಅಂತ ನೆಗೆಯುತ್ತಾ ಹೊರಗೋಡಿದವು. ಅವರ ಊಹೆಯಂತೆ ಮೋಸಗಾರ ಮಂಗಣ್ಣ ಮರದಿಂದ ಕೆಳಗೆ ಹಾರಿ ಬಂತು.

ಆದೇ ಸಮಯದಲ್ಲಿ ಮೊಲಗಳು ಕ್ಯಾರೆಟ್ಗಾಗಿ ಜಗಳವಾಡುವಂತೆ ನಟಿಸಿದವು. ಇದನ್ನೇ ಕಾಯುತ್ತಿದ್ದ ಮಂಗಣ್ಣ ‘ಅಯ್ಯೋ, ಮುದ್ದು ಮೊಲಗಳೇ… ನಾನು ನಿಮಗೆ ಕ್ಯಾರೆಟ್ ಸಮವಾಗಿ ಹಂಚಿಕೊಡ್ತೀನಿ. ಜಗಳವಾಡಬೇಡಿ’ ಅಂದಿತು. ಆಯಿತು ಎಂದ ಮೊಲಗಳು ಕಾಂಪೌಂಡಿನೊಳಕ್ಕೆ ಹೋದವು. ಮಂಗಣ್ಣ ಅವುಗಳನ್ನು ಹಿಂಬಾಲಿಸಿದ. ಕೋತಿಯನ್ನು ನೋಡಿದ ಮನೆಯ ಯಜಮಾನ ದೊಣ್ಣೆ ಹಿಡಿದು ಚೆನ್ನಾಗಿ ಬಾರಿಸಿದ. ಹಿಂದೆ ಮನೆಯಿಂದ ಆಹಾರ ಪದಾರ್ಥಗಳನ್ನು ಮಂಗ ಕದ್ದೊಯ್ದಿತ್ತಲ್ಲ; ಆ ಸಿಟ್ಟನ್ನೆಲ್ಲಾ ಯಜಮಾನ ಈಗ ತೀರಿಸಿಕೊಂಡ.

ಕೋತಿ, ‘ಅಯ್ಯಯ್ಯಪ್ಪಾ’ ಎಂದು ಅರಚುತ್ತಾ ಹೊರಗೋಡಿತು. ಕುಂಟುತ್ತಾ ಹೊರ ಬಂದ ಕೋತಿಯೆದುರು ಚಿನ್ನು, ಮುನ್ನು ಕ್ಯಾರೆಟ್ ತಿನ್ನುತ್ತಾ ಬಂದವು.

‘ಮಂಗಣ್ಣ … ಮಂಗಣ್ಣ … ರೊಟ್ಟಿ ಭಾಗ ಮಾಡ್ತೀಯ? ಕ್ಯಾರೆಟ್ ಭಾಗ ಮಾಡ್ತೀಯ? ನಮಗೇ ಮೋಸ ಮಾಡ್ತೀಯ? ಎಷ್ಟು ಹೊಡೆತ ತಿಂತೀಯಾ?’ ಎಂದು ಅಣಕಿಸಿ, ಕಿಲಕಿಲನೆ ನಕ್ಕವು.

ಸವಿತಾ ಪ್ರಭಾಕರ್‌, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next