ಹಂಬನ್ತೋಟ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ ತಂಡವು ಸುಲಭದಲ್ಲಿ ಗೆದ್ದು ಬೀಗಿದೆ. ಆಲ್ ರೌಂಡ್ ಪ್ರದರ್ಶನ ನೀಡಿದ ಅಫ್ಗಾನ್ ಪಡೆ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಅಫ್ಘಾನ್ ಬ್ಯಾಟರ್ ಇಬ್ರಾಹಿಂ ಜದ್ರಾನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 21 ವರ್ಷದ ಬ್ಯಾಟರ್ ಜದ್ರಾನ್ 98 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅವರು ತಮ್ಮ ನಾಲ್ಕನೇ ಏಕದಿನ ಶತಕವನ್ನು ಕಳೆದು ಕೊಂಡಿರಬಹುದು, ಆದರೆ ಅವರು ಶುಬ್ಮನ್ ಗಿಲ್ ದಾಖಲೆಯನ್ನು ಮುರಿದರು.
ಏಕದಿನದಲ್ಲಿ 500 ರನ್ ಗಳಿಸಿದ ಎರಡನೇ ವೇಗದ ಬ್ಯಾಟರ್ ಎಂಬ ಕೀರ್ತಿಗೆ ಜದ್ರಾನ್ ಪಾತ್ರರಾದರು. ಜದ್ರಾನ್ 9 ಇನ್ನಿಂಗ್ಸ್‌ಗಳಲ್ಲಿ ಈ ಹೆಗ್ಗುರುತನ್ನು ಸಾಧಿಸಿದರು. ಭಾರತದ ಗಿಲ್ 10 ಇನ್ನಿಂಗ್ಸ್ ಗಳಲ್ಲಿ 500 ರನ್ ಗಡಿ ದಾಟಿದ್ದರು. ಪಾಕಿಸ್ತಾನದ ಇಮಾಮ್-ಉಲ್-ಹಕ್ ಅವರ ದಾಖಲೆ ಸರಿಗಟ್ಟುವ ಮೂಲಕ ಜದ್ರಾನ್ ಅವರ ದಾಖಲೆಯು ಏಷ್ಯಾದ ಬ್ಯಾಟರ್ ನಿಂದ ಜಂಟಿ-ವೇಗದ ದಾಖಲೆಯಾಗಿದೆ. ಏಕದಿನದಲ್ಲಿ ಅತಿ ವೇಗವಾಗಿ 500 ರನ್ ಗಳಿಸಿದ ದಾಖಲೆ ದಕ್ಷಿಣ ಆಫ್ರಿಕಾದ ಜನೆಮನ್ ಮಲಾನ್ ಅವರ ಹೆಸರಿನಲ್ಲಿದೆ.
ಇದನ್ನೂ ಓದಿ:Odisha Train Tragedy: 48 ರೈಲು ಸಂಚಾರ ರದ್ದು, 39 ರೈಲುಗಳ ಮಾರ್ಗ ಬದಲಾವಣೆ
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು 50 ಓವರ್ ಗಳಲ್ಲಿ 268 ರನ್ ಗಳಿಗೆ ಆಲೌಟಾದರೆ, ಅಫ್ಗಾನ್ ತಂಡವು 46.5 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.