Advertisement

ಗ್ರಾ.ಪಂ. ಸದಸ್ಯರ ಮನೆ ಮುಂದೆಯೇ ಕೊಳಚೆ ನೀರು!

01:30 PM Dec 22, 2018 | |

ಉಪ್ಪಿನಂಗಡಿ : ತಣ್ಣೀರುಪಂತ ಗ್ರಾಮ ಪಂಚಾಯತ್‌ ಸದಸ್ಯರ ಕಲ್ಲೇರಿ ಜನತಾ ಕಾಲನಿಯ ಮನೆ ಮುಂಭಾಗವೇ ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸುಮಾರು 100ಕ್ಕೂ ಅಧಿಕ ಮನೆಗಳಿರುವ ಕಾಲನಿಯಲ್ಲಿ ಚರಂಡಿಯಲ್ಲಿ ಘನತ್ಯಾಜ್ಯ ಹಾಗೂ ದ್ರವ್ಯ ತ್ಯಾಜ್ಯದೊಂದಿಗೆ ಮಲಿನ ನೀರು ನಿಂತು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿನ ನಿವಾಸಿಗಳು ಕಳೆದ ಎರಡು ವರ್ಷಗಳಿಂದ ಸ್ಥಳೀಯ ಪಂಚಾಯತ್‌ಗೆ ಮನವಿ ನೀಡುತ್ತಲೇ ಬಂದಿದ್ದಾರೆ. ಮನವಿ ಸ್ವೀಕರಿಸಿದ ಬೆನ್ನಲ್ಲೇ ಅಭಿವೃದ್ಧಿ ಅಧಿಕಾರಿಗಳ ಸಹಿತ ಸಿಬಂದಿ ಬಂದು ಪರಿಶೀಲಿಸಿದ್ದರೂ ಯಾವುದೇ ಕ್ರಮ ಜರಗಿಸಿಲ್ಲ.

Advertisement

ಈ ಹಿಂದಿನ ಶಾಸಕರಿಗೂ ಮನವರಿಕೆ ಮಾಡಿದ್ದರೂ ಜಿಲ್ಲಾ ಪಂಚಾಯತ್‌ ಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಾರ್ಡ್‌ ಸದಸ್ಯರಿಗೆ ಚುನಾಯಿತ ಜನಪ್ರತಿನಿಧಿಯಾಗಿ ಅವರ ಮನೆ ಮುಂಭಾಗವನ್ನು ಸರಿಪಡಿಸಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಸ್ಥಳೀಯರು ಹೇಳಿದ್ದಾರೆ.

ದುರ್ವಾಸನೆ
ಚರಂಡಿಯ ನಿಂತ ನೀರಿನಿಂದ ದುರ್ವಾಸನೆ ಬೀರುತ್ತಲಿದೆ. ಇಲ್ಲಿನ ಜನರಿಗೆ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ. ಸರಿಪಡಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅನುದಾನ ಬಿಡುಗಡೆ
ಕಲ್ಲೇರಿ ಜನತಾ ಕಾಲನಿ ಚರಂಡಿಗೆ ಸ್ಥಳೀಯ ಕೆಲ ಮನೆಗಳಿಂದ ತ್ಯಾಜ್ಯ ನೀರು ಬಿಡುತ್ತಿದ್ದು, ಒಂದೆಡೆ ಶೇಖರಣೆಯಾಗುತ್ತಿದೆ. 14ನೇ ಹಣಕಾಸಿನಲ್ಲಿ 2 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
– ಪೂರ್ಣಿಮಾ
ಗ್ರಾ.ಪಂ. ಪಿಡಿಒ, ತಣ್ಣೀರುಪಂತ

ಸಮಸ್ಯೆ ಗಮನಕ್ಕೆ ಬಂದಿದೆ
ಸಮಸ್ಯೆ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಪಂಚಾಯತ್‌ ಸ್ವಂತ ಅನುದಾನದಲ್ಲಿ 2 ಲಕ್ಷ ರೂ. ಅನ್ನು ಕಾಮಗಾರಿ ನಡೆಸಲು ಮುಂಗಡವಾಗಿ ಇರಿಸಿಕೊಂಡಿದೆ. ಕ್ರಿಯಾ ಯೋಜನೆಯಲ್ಲಿ ಅನುದಾನ ಕ್ರೋಢೀಕರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
– ಜಯವಿಕ್ರಮ ಗ್ರಾ.ಪಂ.
ಅಧ್ಯಕ್ಷರು, ತಣ್ಣೀರುಪಂತ

Advertisement
Advertisement

Udayavani is now on Telegram. Click here to join our channel and stay updated with the latest news.

Next