Advertisement
ದೃಢವಾದ ಹಿಡಿತಸ್ಲಾತ್, ಬಹುತೇಕ ಬದುಕನ್ನು ದಟ್ಟ ಮರಗಳ ಮೇಲೆಯೇ ಕಳೆಯುತ್ತದೆ. ಅವುಗಳ ಬೆರಳುಗಳಲ್ಲಿ ಸುಮಾರು ನಾಲ್ಕು ಇಂಚು ಉದ್ದವಿರುವ ಉಗುರುಗಳಿರುತ್ತವೆ. ಎರಡೂ ಕೈಗಳಿಂದ ಮರದ ಕೊಂಬೆಯನ್ನು ಬಿಗಿಯಾಗಿ ಹಿಡಿದು ಬೆನ್ನು ಕೆಳಗೆ ಮಾಡಿ ನೇತಾಡುವುದು ಇದರ ಅಭ್ಯಾಸ. ಕೈಗಳ ಹಿಡಿತ ಎಷ್ಟು ದೃಢವಾದುದೆಂದರೆ, ಮರದ ಕೊಂಬೆಯನ್ನು ಹಿಡಿದು ತೋಳುಗಳ ನಡುವೆ ತಲೆಯಿಟ್ಟು, ದಿನದಲ್ಲಿ 18- 20 ತಾಸುಗಳವರೆಗೂ ಇದೇ ಸ್ಥಿತಿಯಲ್ಲಿ ನಿದ್ರೆ ಮಾಡುತ್ತವೆ. ಆದರೂ ಆಯ ತಪ್ಪಿ ಕೆಳಗೆ ಬೀಳುವುದಿಲ್ಲ. ಮರದಿಂದಲೇ ನೀರಿಗೆ ಹಾರಿ ವೇಗವಾಗಿ ಈಜುವುದರಲ್ಲಿ ಅಸಾಧಾರಣ ಸಾಮರ್ಥ್ಯ ಹೊಂದಿದೆ. ಉಗುರುಗಳಿಂದ ಬಿಲ ತೋಡುತ್ತದೆ. ಗಂಡು ಸ್ಲಾತ್, ನಾಚಿಕೆಯ ಪ್ರಾಣಿ. ಅದು ತನ್ನ ಜೀವನದ ಬಹುಭಾಗ ಒಂಟಿಯಾಗಿ ಬದುಕುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಸ್ಲಾತ್ ಹೆಣ್ಣನ್ನು ಆಕರ್ಷಿಸಲು ಧ್ವನಿಗಳ ಪ್ರಯೋಗ ಮಾಡುತ್ತದೆ.
ಸ್ಲಾತ್ ಆಹಾರ ತಿನ್ನುವುದು ರಾತ್ರಿ. ನಾಲಗೆಯನ್ನು 10ರಿಂದ 12 ಇಂಚು ಹೊರಚಾಚಿ ಮರದ ಚಿಗುರುಗಳನ್ನು ಬಳಿಗೆಳೆದು ಸಣ್ಣ ಹಲ್ಲುಗಳಿಂದ ಜಗಿದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಚಿಗುರುಗಳನ್ನು ಜಗಿಯುವಾಗ ರಸವೂ ಅದರ ಹೊಟ್ಟೆ ಸೇರುವುದರಿಂದ ಬಾಯಾರಿಕೆಯೂ ನೀಗುತ್ತದೆ. ತನ್ನ ತೂಕಕ್ಕಿಂತ ಎರಡು ಪಾಲು ಅಧಿಕ ಆಹಾರವನ್ನು ಒಂದು ಸಲ ತಿಂದರೆ ಅದು ಅರಗಲು ಒಂದರಿಂದ ಎರಡು ತಿಂಗಳು ಬೇಕಾಗುತ್ತದೆ. - ಪ.ರಾಮಕೃಷ್ಣ ಶಾಸ್ತ್ರಿ