Advertisement

ಸ್ಲೋ ಮೋಷನ್‌ ಸ್ಲಾತ್‌; ಸೋಮಾರಿಗಳ ಕುಲ ದೇವತೆ

10:24 AM Feb 14, 2020 | Sriram |

ದಿನಕ್ಕೆ 20 ಗಂಟೆ ನಿದ್ದೆ, ತಿಂಗಳುಗಟ್ಟಲೆ ಊಟ ಮಾಡೋಲ್ಲ, ಸದಾ ಮರದಲ್ಲಿ ನೇತಾಡಿಕೊಂಡೇ ಇರುತ್ತೆ. ಈ ಪ್ರಾಣಿಗೆ,”ಜಗತ್ತಿನ ಅತಿ ಸೋಂಬೇರಿ’ ಎನ್ನುವ ಹೆಗ್ಗಳಿಕೆ ಇದರದ್ದು…

Advertisement

ಈ ಹಿಂದೆ “ವಿಶ್ವ ಸೋಮಾರಿಗಳ ದಿನಾಚರಣೆ’ ನಡೆಯಿತು. ಆ ಸಂದರ್ಭದಲ್ಲಿ ಬಳಸಿದ ಚಿಹ್ನೆ ಸ್ಲಾತ್‌ ಎಂಬ ಸಸ್ತನಿ ಪ್ರಾಣಿಯದ್ದು. ಜೀವಜಗತ್ತಿನ ಅತ್ಯಂತ ಸೋಮಾರಿ ಪ್ರಾಣಿಯೆಂದೇ ವಿಜ್ಞಾನಿಗಳು ಗುರುತಿಸಿರುವ ಕುತೂಹಲಕಾರಿ ಜೀವಿ ಸ್ಲಾತ್‌ ಅಳಿವಿನ ಅಂಚಿನಲ್ಲಿದೆ. ದಕ್ಷಿಣ ಮತ್ತು ಮಧ್ಯ ಅಮೆರಿಕದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಸ್ಲಾತ್‌ ಎನ್ನುವ ಪ್ರಾಣಿಯೊಂದನ್ನು ಕಾಣಬಹುದು. ಸೋಮಾರಿ ಜೀವಿಯೆಂದೇ ಹೆಸರಾಗಿರುವ ಈ ಪ್ರಾಣಿ ಉಷ್ಣವಲಯದ ಅಪರೂಪದ ಜೀವವರ್ಗದಲ್ಲಿ ಸೇರಿದೆ. ಈಗ ಉಳಿದಿರುವ ಎರಡು ಪ್ರಭೇದಗಳಲ್ಲಿ ಮುಂಗಾಲಿನಲ್ಲಿ ಎರಡು ಬೆರಳುಗಳಿರುವ ಮೆಗಾಲೋನಿಸೆಡೆ ಮತ್ತು ಮೂರು ಬೆರಳುಗಳಿರುವ ಬ್ರಾಡಿಪೋಡಿಡೆ ಕುಟುಂಬಗಳು ಪ್ರಮುಖವಾದವು. ಎರಡು ಬೆರಳಿರುವ ಜಾತಿ ಒಂದೂವರೆ ಅಡಿ ಎತ್ತರ, ಆರು ಕಿಲೋ ಭಾರವಾಗಿದ್ದರೆ ಮೂರು ಬೆರಳಿನದು ಎರಡು ಅಡಿಗಿಂತಲೂ ಎತ್ತರ ಎಂಟು ಕಿಲೋ ತನಕ ಭಾರವಿರುತ್ತದೆ.

ದೃಢವಾದ ಹಿಡಿತ
ಸ್ಲಾತ್‌, ಬಹುತೇಕ ಬದುಕನ್ನು ದಟ್ಟ ಮರಗಳ ಮೇಲೆಯೇ ಕಳೆಯುತ್ತದೆ. ಅವುಗಳ ಬೆರಳುಗಳಲ್ಲಿ ಸುಮಾರು ನಾಲ್ಕು ಇಂಚು ಉದ್ದವಿರುವ ಉಗುರುಗಳಿರುತ್ತವೆ. ಎರಡೂ ಕೈಗಳಿಂದ ಮರದ ಕೊಂಬೆಯನ್ನು ಬಿಗಿಯಾಗಿ ಹಿಡಿದು ಬೆನ್ನು ಕೆಳಗೆ ಮಾಡಿ ನೇತಾಡುವುದು ಇದರ ಅಭ್ಯಾಸ. ಕೈಗಳ ಹಿಡಿತ ಎಷ್ಟು ದೃಢವಾದುದೆಂದರೆ, ಮರದ ಕೊಂಬೆಯನ್ನು ಹಿಡಿದು ತೋಳುಗಳ ನಡುವೆ ತಲೆಯಿಟ್ಟು, ದಿನದಲ್ಲಿ 18- 20 ತಾಸುಗಳವರೆಗೂ ಇದೇ ಸ್ಥಿತಿಯಲ್ಲಿ ನಿದ್ರೆ ಮಾಡುತ್ತವೆ. ಆದರೂ ಆಯ ತಪ್ಪಿ ಕೆಳಗೆ ಬೀಳುವುದಿಲ್ಲ.

ಸಂತಾನೋತ್ಪತ್ತಿಗಾಗಿ ವಿಚಿತ್ರ ಶಬ್ದ
ಮರದಿಂದಲೇ ನೀರಿಗೆ ಹಾರಿ ವೇಗವಾಗಿ ಈಜುವುದರಲ್ಲಿ ಅಸಾಧಾರಣ ಸಾಮರ್ಥ್ಯ ಹೊಂದಿದೆ. ಉಗುರುಗಳಿಂದ ಬಿಲ ತೋಡುತ್ತದೆ. ಹದ್ದು ಮತ್ತು ಜಾಗ್ವಾರ್‌ ಅದಕ್ಕೆ ಪ್ರಮುಖ ಶತ್ರುಗಳು. ಗಂಡು ಸ್ಲಾತ್‌, ನಾಚಿಕೆಯ ಪ್ರಾಣಿ. ಅದು ತನ್ನ ಜೀವನದ ಬಹುಭಾಗ ಒಂಟಿಯಾಗಿ ಬದುಕುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಸ್ಲಾತ್‌ ಹೆಣ್ಣನ್ನು ಆಕರ್ಷಿಸಲು ವಿಚಿತ್ರ ದನಿಗಳ ಪ್ರಯೋಗ ಮಾಡುತ್ತದೆ. ಅವು ವರ್ಷ ವರ್ಷವೂ ಮರಿಯಿಡುತ್ತದೆ. ಮರಿ 400 ಗ್ರಾಂ ತೂಕ, ಹತ್ತು ಇಂಚು ಉದ್ದವಿರುತ್ತದೆ. ಒಂಭತ್ತು ತಿಂಗಳ ಕಾಲ ಅದು ತಾಯಿಯ ಹೊಟ್ಟೆ ಕೆಳಗಿನ ತುಪ್ಪಳವನ್ನು ಹಿಡಿದುಕೊಂಡು ತೂಗಾಡುತ್ತಿರುತ್ತದೆ.

ತಿಂದದ್ದು ಸುಲಭದಲ್ಲಿ ಕರಗುವುದಿಲ್ಲ
ಸ್ಲಾತ್‌, ಆಹಾರ ತಿನ್ನುವುದು ರಾತ್ರಿಯ ವೇಳೆಯಲ್ಲಿ. ನಾಲಗೆಯನ್ನು 10ರಿಂದ 12 ಇಂಚು ಹೊರಚಾಚಿ ಮರದ ಚಿಗುರುಗಳನ್ನು ಬಳಿಗೆಳೆದು ಸಣ್ಣ ಹಲ್ಲುಗಳಿಂದ ಜಗಿದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಚಿಗುರುಗಳನ್ನು ಜಗಿಯುವಾಗ ರಸವೂ ಅದರ ಹೊಟ್ಟೆ ಸೇರುವುದರಿಂದ ಬಾಯಾರಿಕೆಯೂ ನೀಗುತ್ತದೆ. ತನ್ನ ತೂಕಕ್ಕಿಂತ ಎರಡು ಪಾಲು ಅಧಿಕ ಆಹಾರವನ್ನು ಒಂದು ಸಲ ತಿಂದರೆ ಅದು ಅರಗಲು ಒಂದರಿಂದ ಎರಡು ತಿಂಗಳು ಬೇಕಾಗುತ್ತದೆ. ಎಲ್ಲಿಯೂ ಓಡಾಡದೇ ಇರುವುದರಿಂದ ತಿಂದದ್ದು ಅಷ್ಟು ಬೇಗ ಕರಗುವುದಿಲ್ಲ. ಇದರ ಹಿಂಗಾಲುಗಳು ತೀರ ಚಿಕ್ಕದು. ಹೀಗಾಗಿ ನೆಲಕ್ಕಿಳಿದರೆ ವೇಗವಾಗಿ ಓಡುವ ಶಕ್ತಿಯಿಲ್ಲ. ಹೀಗಾಗಿ ಅದು ತೆವಳಿಕೊಂಡೇ ಓಡಾಡುತ್ತದೆ.

Advertisement

– ಪ.ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next