ಬಲರಾಂಪುರ: ಏಳು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಶುಕ್ರವಾರ ತಮ್ಮ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ತನ್ನ ಬಂಧನಕ್ಕೆ ಒತ್ತಾಯಿಸಿ ವಿನೇಶ್ ಫೋಗಟ್ ಮತ್ತು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಧರಣಿಯನ್ನು ಸಿಂಗ್ ಉಲ್ಲೇಖಿಸಿ ಮಾತನಾಡಿದ ಬ್ರಿಜ್ ಭೂಷಣ್, “ಈ ಚಳವಳಿಯು ದೆಹಲಿಯಿಂದ ಪಂಜಾಬ್ ಮತ್ತು ಖಲಿಸ್ತಾನ್ ಕಡೆಗೆ ಚಲಿಸುತ್ತಿದೆ. ಬಜರಂಗ್ ಪುನಿಯಾ ಬೇರೊಬ್ಬರ ಪರವಾಗಿ ಮಾತನಾಡುತ್ತಿದ್ದಾರೆ” ಎಂದು ಹೇಳಿದರು.
ಜೂನ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ದಾರ್ಶನಿಕರ ರ‍್ಯಾಲಿಗೆ ತಯಾರಿ ನಡೆಸಲು ಬ್ರಿಜ್ ಭೂಷಣ್ ಸಿಂಗ್ ಬಲರಾಂಪುರ್‌ನಲ್ಲಿದ್ದಾರೆ. ರ‍್ಯಾಲಿಯಲ್ಲಿ 11 ಲಕ್ಷ ಭಕ್ತರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಗುರುವಾರ, ಅವರು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯನ್ನು ದೊಡ್ಡ ಪ್ರಮಾಣದಲ್ಲಿ ದುರುಪಯೋಗ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ದಾರ್ಶನಿಕರ ನೇತೃತ್ವದಲ್ಲಿ ಅದನ್ನು ಬದಲಾಯಿಸಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದರು.