Advertisement
ಇದು ಕಳೆದ ವರ್ಷದ ಯುಎಸ್ ಓಪನ್ ಚಾಂಪಿಯನ್ ಹಾಗೂ ಫ್ರೆಂಚ್ ಓಪನ್ ಚಾಂಪಿಯನ್ ಆಟಗಾರ್ತಿಯರ ನಡುವಿನ ಪ್ರತಿಷ್ಠೆಯ ಕಣವಾಗಿತ್ತು. ಇಲ್ಲಿ ತವರಿನ ಆಟಗಾರ್ತಿಗೆ ಅದೃಷ್ಟ ಒಲಿಯಿತು. ಇದರೊಂದಿಗೆ ಎಲ್ಲ 6 ಟೆನಿಸ್ ಫೈನಲ್‌ಗಳಲ್ಲಿ ಗೆದ್ದು ಬಂದ ಹಿರಿಮೆ ಸ್ಲೋನ್ ಸ್ಟೀಫನ್ಸ್ ಅವರದಾಯಿತು.ಮೊದಲ ಸೆಟ್ ಇಬ್ಬರ ಪಾಲಿಗೂ ಅತ್ಯಂತ ಕಠಿನವಾಗಿತ್ತು, ಯಾರೂ ಗೆಲ್ಲಬಹುದಾದ ಕದನವಾಗಿತ್ತು. ಕೊನೆಗೆ ಟೈ ಬ್ರೇಕರ್‌ನಲ್ಲಿ ಸ್ಟೀಫನ್ಸ್ ಕೈ ಮೇಲಾಯಿತು. ಆದರೆ ದ್ವಿತೀಯ ಸೆಟ್‌ನಲ್ಲಿ ಒಸ್ಟಾಪೆಂಕೊ ಪ್ರತಿರೋಧ ತೋರುವಲ್ಲಿ ವಿಫಲರಾದರು. ಅವರ ಆಕ್ರಮಣಕಾರಿ ಆಟ ಮರೆಯಾಗಿತ್ತು. ಅಮೆರಿಕನ್ ಆಟಗಾರ್ತಿ ಸುಲಭದಲ್ಲಿ ಇದನ್ನು ವಶಪಡಿಸಿಕೊಂಡರು. ಒಂದು ಗಂಟೆ, 32 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು.
ಗೆಲುವಿನ ಹಾದಿಯಲ್ಲಿ ಗ್ರ್ಯಾನ್‌ಸ್ಲಾಮ್ ವಿಜೇತರಾದ ಗಾರ್ಬಿನ್ ಮುಗುರುಜಾ, ಆ್ಯಂಜೆಲಿಕ್ ಕೆರ್ಬರ್, ವಿಕ್ಟೋರಿಯಾ ಅಜರೆಂಕಾ ಅವರನ್ನೆಲ್ಲ ಹಿಮ್ಮೆಟ್ಟಿಸಿದ ಹಿರಿಮೆ ಸ್ಲೋನ್ ಸ್ಟೀಫನ್ಸ್ ಅವರದಾಗಿತ್ತು. ಇದರೊಂದಿಗೆ ಸ್ಟೀಫನ್ಸ್ ಮೊದಲ ಬಾರಿಗೆ ಟಾಪ್-10 ರ್‍ಯಾಂಕಿಂಗ್ ಯಾದಿಯಲ್ಲಿ ಕಾಣಿಸಿಕೊಂಡರು. ಅಧಿಕೃತ ರ್‍ಯಾಂಕಿಂಗ್ ಪಟ್ಟಿ ಸೋಮವಾರ ಬಿಡುಗಡೆಯಾಗಲಿದೆ. “ಒಸ್ಟಾಪೆಂಕೊ ಅಮೋಘ ಶಾಟ್‌ಗಳೊಂದಿಗೆ ಮುನ್ನುಗ್ಗುತ್ತಿದ್ದರು. ಆದರೆ ಈ ಬಗ್ಗೆ ನಾನು ವಿಶೇಷವಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಮೊದಲ ಸೆಟ್ ಯಾವಾಗ ಗೆದ್ದೇನೋ ಅಲ್ಲಿಂದ ಆತ್ಮವಿಶ್ವಾಸ ಹೆಚ್ಚಿತು. ಟಾಪ್-10 ರ್‍ಯಾಂಕಿಂಗ್ ಯಾದಿಯಲ್ಲಿ ಕಾಣಿಸಿಕೊಳ್ಳಬೇಕೆಂಬುದು ನನ್ನ ಬಹು ದಿನಗಳ ಕನಸಾಗಿತ್ತು. ಇದೀಗ ನೆರವೇರಿದೆ. ಖುಷಿ ಹಾಗೂ ರೋಮಾಂಚನವಾಗುತ್ತಿದೆ’ ಎಂದು ಸ್ಲೋನ್ ಸ್ಟೀಫನ್ಸ್ ಪ್ರತಿಕ್ರಿಯಿಸಿದ್ದಾರೆ.
Related Articles
Advertisement
ಕೊನೆಯ ಕೀ ಬಿಸ್ಕೇನ್ ಟೂರ್ನಿಇಷ್ಟು ವರ್ಷಗಳ ಕಾಲ ಫ್ಲೋರಿಡಾದ ಕೀ ಬಿಸ್ಕೇನ್‌ನ “ಕ್ರಾಂಡನ್ ಪಾರ್ಕ್’ನಲ್ಲಿ ನಡೆಯುತ್ತಿದ್ದ ಮಯಾಮಿ ಓಪನ್ ಟೆನಿಸ್ ಪಂದ್ಯಾವಳಿ ಬರುವ ವರ್ಷದಿಂದ “ಹಾರ್ಡ್ ರಾಕ್ ಸ್ಟೇಡಿಯಂ’ಗೆ ವರ್ಗಾವಣೆಗೊಳ್ಳಲಿದೆ. ಕೂಟದ ನಿರ್ದೇಶಕ ಜೇಮ್ಸ್ ಬ್ಲೇಕ್ ಇದನ್ನು ಅಧಿಕೃತವಾಗಿ ಘೋಷಿಸಿದರು.ಇಲ್ಲಿ ವನಿತಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಕೊನೆಯ ಆಟಗಾರ್ತಿ ಎಂಬುದು ತನ್ನ ಪಾಲಿನ ಹಿರಿಮೆ ಎಂಬುದಾಗಿ ಸ್ಲೋನ್ ಸ್ಟೀಫನ್ಸ್ ಹೇಳಿದರು.