Advertisement

ಮೌನಿ ಹೋರಾಟಗಾರನ ಚುನಾವಣಾ ಗುರುತು ಸ್ಲೇಟ್

10:58 PM Apr 12, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣಾ ಅಭ್ಯರ್ಥಿ ಎಂದಾಕ್ಷಣ ಬಿರುಸಿನ ಓಡಾಟ, ಭರ್ಜರಿ ರ್ಯಾಲಿ, ರೋಡ್‌ ಶೋ, ಬಾಯಿ ಮಾತಿನ ಆಶ್ವಾಸನೆ ಹಾಗೂ ಆಮಿಷಗಳ ಅಬ್ಬರವು ಸಾಮಾನ್ಯ. ಆದರೆ, ಇಲ್ಲೊಬ್ಬ ಅಭ್ಯರ್ಥಿ ಕಳೆದ 14 ವರ್ಷಗಳಿಂದ ಮಾತು ಬಿಟ್ಟಿದ್ದು, ಮೌನವಾಗಿಯೇ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.

Advertisement

ತಾನು ಕಾಲಿಗೆ 16 ವರ್ಷಗಳಿಂದ ಚಪ್ಪಲಿ ಹಾಕದೇ ಹೋರಾಟ ಮಾಡುತ್ತಿರುವ ಇವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಪ್ಪಲಿ ಗುರುತನ್ನು ಪಡೆದು ಸುದ್ದಿಯಾದರೆ, ಈ ಬಾರಿ ಈ ಹೋರಾಟಗಾರನ ಗುರುತು ಮಾತ್ರ ಸ್ಲೇಟು. ಸದ್ಯ ಈವರೆಗೂ ಇವರ ಚುನಾವಣಾ ವೆಚ್ಚ 90 ರೂ.ಮಾತ್ರ. ಹೌದು, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ಅಂಬ್ರೋಸ್‌ ಡಿ’ಮೆಲ್ಲೋ(ಅಮೃತ್‌) ಎಂಬ ಹೋರಾಟಗಾರನ ಕತೆಯಿದು.

ಈ ಅಭ್ಯರ್ಥಿ ಕಳೆದ 16 ವರ್ಷಗಳಿಂದ ಸಾಮಾಜಿಕ, ರಾಜಕೀಯ ಹಾಗೂ ಸರ್ಕಾರದ ವಿವಿಧ ನಿಯಮಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ. ಪ್ರಮುಖವಾಗಿ ನೀರಿನ್ನು ವ್ಯಾಪಾರೀಕರಣ ಮಾಡುತ್ತಿರುವುದನ್ನು ಖಂಡಿಸಿ ಮಾತು ಬಿಟ್ಟಿದ್ದು, ಹಗಲು ಹೊತ್ತಲ್ಲಿ ನೀರು, ಆಹಾರ ಸೇವನೆ ಮಾಡದೇ ಸಂಜೆಯಾದ ಮೇಲೆ ಶೌಚಾಲಯದಲ್ಲಿ ಬಳಸುವ ನೀರನ್ನೇ ಕುಡಿದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರದ ನೋಟು ರದ್ಧತಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ಇವರು ಇಂದಿಗೂ ಹಳೆಯ ನೋಟುಗಳನ್ನೇ ಬಳಸುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಸ್ಪರ್ಧಿಸುವ ಅಮೃತ್‌ “ಜನ ಸಾಮಾನ್ಯರ ಸಮಸ್ಯೆಗಳೇ ನನ್ನ ಹೋರಾಟದ ಭಾಗವಾಗಿದ್ದು, ನನ್ನ ಸ್ಪರ್ಧೆಯ ಮೂಲಕವಾದರೂ ವಿಧಾನಸಭೆ, ಸಂಸತ್ತಿಗೆ ಸಾಮಾನ್ಯ ಜನರ ಸಮಸ್ಯೆಗಳು ತಿಳಿಯಲಿ ಎಂಬ ಉದ್ದೇಶದಿಂದ ಚುನಾವಣೆಗೆ ಸ್ವರ್ಧಿಸುತ್ತಿದ್ದೇನೆ’ ಎಂದು ತಮ್ಮ ಚುನಾವಣಾ ಕರಪತ್ರದಲ್ಲಿ ನಮೂದಿಸಿದ್ದಾರೆ.

ಪುಸ್ತಕ ಮಾರಿ ಗಳಿಸಿದ್ದೇ ಠೇವಣಿ: ಪ್ರಗತಿ ಪರ ಪುಸ್ತಕಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಅಮೃತ್‌, ಈ ಬಾರಿ ಚುನಾವಣೆಗೆಂದು ಕೆಲ ಸಾಹಿತಿಗಳ ಬಳಿ ಪುಸ್ತಕಗಳನ್ನು ರಿಯಾಯ್ತಿ ದರದಲ್ಲಿ ಪಡೆದು ಅವುಗಳನ್ನು ಮಾರಿ ಸಂಗ್ರಹವಾದ ಹಣದಲ್ಲಿಯೇ ಠೇವಣಿ ಇಟ್ಟಿದ್ದಾರೆ. ಠೇವಣಿ ಮೊತ್ತ 25,000 ರೂ. ಇದ್ದು,

Advertisement

ಮೊದಲು ನಾಮಪತ್ರ ಸಲ್ಲಿಸುವಾಗ ಹಣ ಕಡಿಮೆ ಇದ್ದ ಹಿನ್ನೆಲೆ 22,000 ರೂ. ಕಟ್ಟಿ ಚುನಾವಣಾ ಆಯೋಗಕ್ಕೆ ಠೇವಣಿ ಬಾಕಿ ಇರಿಸಿ ವಾರದ ಮಟ್ಟಿಗೆ ಕಾಲಾವಕಾಶ ಪಡೆದು ಬಂದಿದ್ದರು. ಆ ನಂತರ ಐದು ದಿನಗಳಲ್ಲಿ ಒಂದಿಷ್ಟು ಪುಸ್ತಕಗಳನ್ನು ಮಾರಿ ಬಾಕಿ 3,000 ರೂ. ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಕಟ್ಟಿದ್ದಾರೆ. ಅದಾದ ನಂತರವೇ ಇವರ ನಾಮಪತ್ರ ಅಂಗೀಕೃತವಾಗಿದೆ.

ಕಳೆದ ಬಾರಿ ಮೋದಿ ಜತೆ ಸ್ಪರ್ಧೆ: ಚುನಾವಣೆಯಲ್ಲಿ ನಾನು ಯಾರ ವಿರುದ್ಧವೂ ಸ್ಪರ್ಧಿಸುವುದಿಲ್ಲ ಎನ್ನುವ ಇವರು, 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರವಾದ ವಾರಣಾಸಿಯಲ್ಲಿಯೂ ಸ್ಪರ್ಧಿಸಿದ್ದರು. ಇದಲ್ಲದೇ 2013 ಚಿಕ್ಕಪೇಟೆ, 2015ರಲ್ಲಿ ಶಿಕಾರಿಪುರ, 2017 ಹೆಬ್ಟಾಳ, 2018ರಲ್ಲಿ ಶಿವಾಜಿನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ವರ್ಧಿಸಿದ್ದಾರೆ.

ಇಂದಿಗೂ ಪುಸ್ತಕ ಮಾರಾಟ ವೇಳೆ ಹೊಸ 500, 2,000 ಮುಖಬೆಲೆಯ ಹೊಸನೋಟು ಕೊಟ್ಟರೇ ನಿರಾಕರಿಸುವ ಈ ಅಭ್ಯರ್ಥಿಯು ಆಸ್ತಿ ಘೋಷಣಾ ಪತ್ರದಲ್ಲಿ ಒಟ್ಟಾರೆ ಆಸ್ತಿ 70,000 ರೂ. ಅವುಗಳಲ್ಲಿ ಬಹುಪಾಲು ಹಳೆಯ ನೋಟುಗಳೇ ಇದೆ ಎಂದು ನಮೂದಿಸಿದ್ದಾರೆ. ಇನ್ನು ಕ್ಷೇತ್ರದಲ್ಲಿ ಕರಪತ್ರ ಹಂಚಿಕೆ ಮಾಡುತ್ತಾ, ಕುತ್ತಿಗೆಗೊಂದು ಮಾಹಿತಿ ಫ‌ಲಕ ಹಾಕಿಕೊಂಡ ಪ್ರಚಾರದಲ್ಲಿ ತೊಡಗಿದ್ದಾರೆ.

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next