Advertisement

ಸ್ಲಿಮ್‌ ಧ್ಯಾನ!

10:39 AM Sep 21, 2019 | mahesh |

“”ರೀ, ನಾನು ದಪ್ಪಗಾಗಿದ್ದೀನ? ಅಂತ ಗಂಡನಲ್ಲಿ ಕೇಳಿದೆ. ನೀನ್ಯಾವಾಗ ಸಣ್ಣಗಿದ್ದೆ ಅನ್ನೋ ಥರ ನೋಡಿ, “ಹಾಗೆ ಕಾಣುತ್ತಪ್ಪಾ!’ ಅಂತ ಅಡ್ಡಗೋಡೆಯ ಮೇಲೆ ದೀಪವಿಟ್ಟರು. ಸುಪುತ್ರನಲ್ಲಿ ಕೇಳಿದರೆ, “ಊಟ-ತಿಂಡಿಗೆ ಅಷ್ಟು ತುಪ್ಪ ಸುರೀಬೇಡ ಅಂತ ಹೇಳಿದ್ರೆ ಕೇಳ್ತೀಯ? ಅಷ್ಟೊಂದು ಆಯ್ಲಿ ತಿನ್ನೋದು ಒಳ್ಳೇದಲ್ಲಮ್ಮ’ ಅಂತ ಡಯಟ್‌ ಪಾಠ ಮಾಡಿದ.

Advertisement

ಏನೇ, ಮತ್ತೆ ಒಂದು ಸುತ್ತು ದಪ್ಪ ಆಗಿದ್ದೀಯಾ?”- ಕೆಲ ತಿಂಗಳುಗಳ ಹಿಂದೆ, ಗೆಳತಿಯ ಮಗಳ ಮದುವೆಗೆ ಹೋಗಿದ್ದಾಗ ನನ್ನತ್ತ ಈ ಪ್ರಶ್ನೆ ತೂರಿ ಬಂತು. ಮದುವೆಗೂ ಮುಂಚೆ ಹಂಚಿಕಡ್ಡಿ, ಊದುಗೊಳವೆ, ಕಡ್ಡಿ ಪೈಲ್ವಾನ್‌ ಅಂತೆಲ್ಲಾ ಕರೆಸಿಕೊಳ್ಳುತ್ತಿದ್ದ ನಾನು, ಮದುವೆಯ ನಂತರ ನಿಧಾನವಾಗಿ ಊದತೊಡಗಿದ್ದೆ. ಮಕ್ಕಳಿಬ್ಬರು ಹುಟ್ಟಿದ ನಂತರ, ನಾನೂ ತೂಕದ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಟ್ಟೆ. ತೂಕ ಹೆಚ್ಚಿಸಿಕೊಳ್ಳಲು ಮೊದಲು ಏನೇನೆಲ್ಲಾ ಪ್ರಯತ್ನ ಮಾಡಿ ಸೋತಿದ್ದೆನೋ, ಅವೆಲ್ಲವೂ ಒಂದೇ ಸಾರಿ ವರ್ಕೌಟ್‌ ಆಗಿ, ನಾನು ಜಿಮ್‌ನಲ್ಲಿ ವಕೌìಟ್‌ ಮಾಡಬೇಕಾದ ಸ್ಥಿತಿ ತಲುಪಿದ್ದು ಮಾತ್ರ ಇತ್ತೀಚೆಗೆ.

ಹಾಗಂತ, ಜಿಮ್‌ಗೆ ಹೋಗುವುದಕ್ಕೂ ನನಗೆ ಮುಜುಗರ. ವಯಸ್ಸು ನಲವತ್ತು ದಾಟಿದ ಮೇಲೆ ಜಿಮ್ಮು, ಗಿಮ್ಮೆಲ್ಲ ಏನು ಚಂದ ಅಲ್ವಾ? ಹರೆಯದ ಹುಡುಗಿಯರಾದರೆ ಟಿ-ಶರ್ಟ್‌, ಟ್ರ್ಯಾಕ್‌ ಪ್ಯಾಂಟ್‌, ನ್ಪೋರ್ಟ್ಸ್ ಶೂ ಹಾಕಿಕೊಂಡು, ಕಿವಿಗೊಂದು ಇಯರ್‌ಫೋನ್‌ ಸಿಕ್ಕಿಸಿಕೊಂಡು ಜುಮ್ಮಂತ ಜಿಮ್‌ಗೆ ಹೋಗಬಹುದು. ನನ್ನನ್ನು ಆ ಅವತಾರದಲ್ಲಿ ಊಹಿಸಿಕೊಂಡರೆ ನನಗೇ ನಗು ಬರುವುದರಿಂದ, ನನಗ್ಯಾಕೆ ಅದೆಲ್ಲಾ ಅಂತ ಸುಮ್ಮನಿದ್ದೆ. ಆದರೆ, ಯಾವಾಗ ಬಟ್ಟೆಗಳು ಟೈಟ್‌ ಆಗಿ ಮೂಲೆ ಸೇರತೊಡಗಿದವೋ, ಪ್ರತಿ ಬಾರಿ ಸೀರೆ ಉಡುವಾಗಲೂ ಬ್ಲೌಸ್‌ನ ಹೊಲಿಗೆ ಬಿಚ್ಚಬೇಕಾದ ಸ್ಥಿತಿ ಬಂತೋ, ಆಗ ಹೆದರಿಕೆ ಶುರುವಾಯ್ತು. ಹೀಗೇ ದಪ್ಪಗಾಗುತ್ತ ಹೋದರೆ ಇರೋಬರೋ ರೋಗಗಳೆಲ್ಲ ಬಂದುಬಿಡುತ್ತವೆ ಅಂತ, ಬೆಳಿಗ್ಗೆ-ಸಂಜೆ ವಾಕಿಂಗ್‌ ಶುರು ಮಾಡಿದೆ. ಇವತ್ತು ಇಷ್ಟು ನಡೆದಿದ್ದಕ್ಕೆ, ಇಷ್ಟು ತೂಕ ಇಳಿದಿರಬಹುದು ಅಂತ ಲೆಕ್ಕಹಾಕಿ, ಬಾಯಿಚಪಲಕ್ಕೆ ಕಡಿವಾಣ ಹಾಕುವುದನ್ನೂ ನಿಲ್ಲಿಸಿಬಿಟ್ಟೆ.

ಆದರೆ, ಗೆಳತಿ “ಏನೇ, ಮತ್ತೆ ದಪ್ಪಗಾಗಿದ್ದೀಯ?’ ಅಂತ ಕೇಳಿದಾಗಲೇ ಅರ್ಥವಾಗಿದ್ದು ವಾಕಿಂಗ್‌ನಿಂದ ಏನೂ ಪ್ರಯೋಜನ ಆಗುತ್ತಿಲ್ಲ ಅಂತ. ಸೀದಾ ಮನೆಗೆ ಬಂದವಳೇ, “”ರೀ, ನಾನು ದಪ್ಪಗಾಗಿದ್ದೀನ? ಅಂತ ಗಂಡನಲ್ಲಿ ಕೇಳಿದೆ. ನೀನ್ಯಾವಾಗ ಸಣ್ಣಗಿದ್ದೆ ಅನ್ನೋ ಥರ ನೋಡಿ, “ಹಾಗೆ ಕಾಣುತ್ತಪ್ಪಾ !’ ಅಂತ ಅಡ್ಡಗೋಡೆಯ ಮೇಲೆ ದೀಪವಿಟ್ಟರು. ಸುಪುತ್ರನಲ್ಲಿ ಕೇಳಿದರೆ, “ಊಟ-ತಿಂಡಿಗೆ ಅಷ್ಟು ತುಪ್ಪ ಸುರೀಬೇಡ ಅಂತ ಹೇಳಿದ್ರೆ ಕೇಳ್ತೀಯ? ಅಷ್ಟೊಂದು ಆಯ್ಲಿ ತಿನ್ನೋದು ಒಳ್ಳೇದಲ್ಲಮ್ಮ’ ಅಂತ ಡಯಟ್‌ ಪಾಠ ಮಾಡಿದ. ಯಾಕಾದರೂ ದಪ್ಪ ಆದೆನೋ, ಇದಕ್ಕಿಂತ ಊದುಗೊಳವೆ ಅನ್ನಿಸಿಕೊಳ್ಳುವುದೇ ಪರವಾಗಿರಲಿಲ್ಲ ಅಂತ, ನನ್ನ ಬಗ್ಗೆ ನನಗೇ ಸಿಟ್ಟು ಬಂತು. ಮದುವೆ-ಮಕ್ಕಳು ಆದ ನಂತರ ಮಹಿಳೆಯರ ದೇಹದಲ್ಲಿ ಅಗಾಧ ಬದಲಾವಣೆಗಳು, ಹಾರ್ಮೋನ್‌ನಲ್ಲಿ ಏರಿಳಿತಗಳು ಆಗೋದ್ರಿಂದ ದೇಹದ ತೂಕ ಹೆಚ್ಚುತ್ತದೆ ಅಂತ ಡಾಕ್ಟರ್‌ಗಳು ಹೇಳ್ಳೋದನ್ನು ಕೇಳಿ, ಏರುತ್ತಿರುವ ತೂಕಕ್ಕೆ, ಅಡುಗೆಯ ತುಪ್ಪವಷ್ಟೇ ಕಾರಣವಲ್ಲ ಅಂತ ಸಮಾಧಾನ ಮಾಡಿಕೊಂಡೆ.

ನಾನೇನೋ ಸಮಾಧಾನ ಮಾಡಿಕೊಂಡು ಸುಮ್ಮನಾಗಬಹುದು. ಆದರೆ, ನೋಡುವವರ ಕಣ್ಣಿಗೆ ನಾನು ಡುಮ್ಮಿಯೇ ತಾನೇ? ಇನ್ನು ಸುಮ್ಮನಿರಬಾರದು, ತೂಕ ಇಳಿಸಲೇಬೇಕು ಅಂತ ಪ್ರತಿಜ್ಞೆ ಮಾಡಿದೆ. ಅಷ್ಟೊತ್ತಿಗೆ, ಎಪ್ರಿಲ್‌-ಮೇನಲ್ಲಿ ನಡೆದ ಬಂಧು-ಮಿತ್ರರ ಮನೆಯ ಸಮಾರಂಭಗಳ ಗಡದ್ದು ಊಟದಿಂದ, ತೂಕ ಮತ್ತಷ್ಟು ಹೆಚ್ಚಿತ್ತು. ಜೂನ್‌ ಒಂದರಿಂದ ಡಯಟ್‌ ಜೊತೆಗೆ, ದಿನಾ ಬೆಳಗ್ಗೆ-ಸಂಜೆ ಬಿರುಸಿನಿಂದ ನಡೆಯಲು ಶುರುಮಾಡಿದೆ. ಹತ್ತಿರದ ಪಾರ್ಕ್‌ಗೆ ಹೋದರೆ, ಪರಿಚಯದವರು ಸಿಕ್ಕಿ, ನಡಿಗೆ ನಿಧಾನವಾಗಿಬಿಟ್ಟರೆ ಅಂತ ಬೇರೊಂದು ಪಾರ್ಕ್‌ ಕಡೆ ಹೋಗತೊಡಗಿದೆ. ಹೀಗೇ ಒಂದಿನ ಬಿರುಸಾಗಿ ಹೆಜ್ಜೆ ಹಾಕುತ್ತಿರಬೇಕಾದರೆ, ಪಾರ್ಕ್‌ ಗೇಟಿನ ಎದುರು ನಿಂತಿದ್ದ ಹುಡುಗನೊಬ್ಬ ಅಡ್ಡ ಹಾಕಿ, ಕೈಗೊಂದು ಸಣ್ಣ ಕರಪತ್ರ ಕೊಟ್ಟ. ತೆರೆದು ನೋಡಿದರೆ, ಅದೊಂದು ಯೋಗ ದಿನಾಚರಣೆ ಪ್ರಯುಕ್ತ ಉಚಿತ ಯೋಗ ಕಾರ್ಯಾಗಾರ ಅಂತ ಬರೆದಿತ್ತು. ಅದರಲ್ಲಿ “ಎಲಾ ಇವನಾ, ಆಂಟಿ ಡುಮ್ಮಿ ಇದ್ದಾಳೆ ಅಂತ ನನಗೆ ಮಾತ್ರ ಚೀಟಿ ಕೊಟ್ಟಿದ್ದಾನ?’ ಅಂತ ಅನುಮಾನವಾಗಿ ತಿರುಗಿದರೆ, ಅವನು ಸಿಕ್ಕಸಿಕ್ಕವರಿಗೆಲ್ಲ ಚೀಟಿ ಹಂಚುತ್ತಿದ್ದ. “ಹೌದಲ್ಲಾ , ನಾನ್ಯಾಕೆ ಯೋಗ ಕ್ಲಾಸ್‌ಗೆ ಸೇರಬಾರದು?’ ಅಂತ ತಲೆಯೊಳಗೆ ದೀಪ ಹೊತ್ತಕೊಂಡಿದ್ದೇ ಆವಾಗ.

Advertisement

ವಾಕಿಂಗ್‌ ಮುಗಿಸಿ ಬಂದವಳೇ ಆ ಕರಪತ್ರದಲ್ಲಿದ್ದ ನಂಬರ್‌ಗೆ ಫೋನ್‌ ಮಾಡಿ, ಎಲ್ಲಿ ಎಷ್ಟು ಹೊತ್ತಿಗೆ ಕ್ಲಾಸ್‌ ನಡೆಯುತ್ತೆ ಅಂತೆಲ್ಲಾ ವಿಚಾರಿಸಿದೆ. ಮನೆಯಿಂದ ಹತ್ತು ನಿಮಿಷ ನಡೆದರೆ ಯೋಗ ಕ್ಲಾಸ್‌. ಮುಂದಿನ ಪಾಠದಿಂದ ನಾನೂ ಬರುತ್ತೇನೆ ಅಂತ ಹೇಳಿ, ಹೆಸರು ನೋಂದಾಯಿಸಿದೆ. ನನ್ನ ಹೊಸ ಸಾಹಸಕ್ಕೆ ಗಂಡನಿಂದ ಯಾವ ತಕರಾರೂ ಬರಲಿಲ್ಲವಾದರೂ, ಬೆಳಗ್ಗೆ ಅವರ ಆಫೀಸ್‌ ಟೈಮಿಂಗ್‌ಗೆ ತೊಂದರೆಯಾಗದಂತೆ ಬೆಳಿಗ್ಗೆ 5.30ರ ಕ್ಲಾಸ್‌ಗೆà ಸೇರಿಕೊಂಡೆ. ಮನೆಗೆ ಬಂದು ಎಂದಿನಂತೆ ಕಾಫಿ-ತಿಂಡಿ ಮಾಡಬಹುದು ಅನ್ನೋದು ನನ್ನ ಲೆಕ್ಕಾಚಾರ.

ನಮ್ಮದು ಮಹಿಳೆಯರಿಗಾಗಿ ನಡೆಯುವ ಸ್ಪೆಷಲ್‌ ಬ್ಯಾಚ್‌. ಅದಕ್ಕೇ ಅಷ್ಟು ಬೇಗ ತರಗತಿ ಶುರುವಾಗುವುದು. ನಮ್ಮ ನಂತರದ ಬ್ಯಾಚ್‌ ಗಂಡಸರಿಗಂತೆ. ಯಾಕಂದ್ರೆ, ಅವರೇನು ಮನೆಗೆ ಹೋಗಿ ತಿಂಡಿ ರೆಡಿ ಮಾಡುವ ಗಡಿಬಿಡಿ ಇಲ್ಲವಲ್ಲ ! ಯೋಗಕ್ಕೆ ಬರುವ ಹೆಂಗಸರ ಪಾಡಂತೂ ಕೇಳಲೇಬಾರದು. ಕ್ಲಾಸ್‌ ಮುಗಿದರೆ ಸಾಕು ಅನ್ನುವ ಗಡಿಬಿಡಿಯಲ್ಲಿರುವ ಅವರೆಲ್ಲ ಆರೂವರೆಯಾಗುತ್ತಿದ್ದಂತೆ, ಬಿಟ್ಟ ಬಾಣದಂತೆ ಮನೆಯತ್ತ ಓಡುತ್ತಾರೆ. ಕೆಲವರು ಗಾಡಿಯಲ್ಲಿ ಬರುವವರಾದರೆ, ಇನ್ನು ಕೆಲವರು ನಡೆದೇ ಹೋಗುವವರು. ಮಕ್ಕಳಿಗೆ ಟಿಫಿನ್‌ ತಯಾರಿಸಬೇಕು, ನಾನು ಎಬ್ಬಿಸದಿದ್ದರೆ ನಮ್ಮನೆಯವರು ಏಳುವುದೇ ಇಲ್ಲ. ಇವತ್ತು ಮಗನಿಗೆ ಪರೀಕ್ಷೆ ಇದೆ, ಮಗಳದ್ದು ಪ್ರಾಜೆಕ್ಟ್ ವರ್ಕ್‌ ಪೂರ್ತಿ ಮಾಡ್ತಿಲ್ಲ… ಅಂತ ಒಬ್ಬರಿಗೊಬ್ಬರು ಮಾತಾಡುತ್ತಲೇ, ಆಸನಾಭ್ಯಾಸ ಮಾಡುತ್ತಿರುತ್ತಾರೆ ಪಾಪ. ಪ್ರಾಣಾಯಾಮ ಅಂತ ಕಣ್ಮುಚ್ಚಿ ಕುಳಿತಾಗಲೂ ಅವರ ಗಮನ ಮನೆಯತ್ತಲೇ ಓಡುತ್ತಿರುತ್ತದೇನೋ. ಅವರ ಮಧ್ಯದಲ್ಲಿ ಕಾಲೇಜಿಗೆ ಹೋಗುವಷ್ಟು ದೊಡ್ಡ ಮಕ್ಕಳಿರುವ, ನಾನು ಮನೆ ತಲುಪುವಷ್ಟರಲ್ಲಿ ಕಾಫಿ ಡಿಕಾಕ್ಷನ್‌ ಹಾಕಿ ಕಾಯುತ್ತಿರುವ ಗಂಡನನ್ನು ಪಡೆದ ನಾನೇ ಪುಣ್ಯವಂತೆ ಅನ್ನಿಸುತ್ತದೆ.

“ನೋಡ್ರೀ, ಮನೇಲಿ ಅಷ್ಟೆಲ್ಲ ಕೆಲಸ ಮಾಡ್ತೀನಿ. ಬೆಳ್‌ಬೆಳಗ್ಗೆ ಯೋಗ ಕೂಡಾ ಮಾಡ್ತೀನಿ. ಆದ್ರೂ ಮೈತೂಕ ಇಳೀತಿಲ್ಲ’… ಅಂತ, ಪಕ್ಕ ಕುಳಿತ ಮಹಿಳೆ ಏದುಸಿರು ಬಿಡುತ್ತಾ ಹೇಳಿದಾಗ, ನನಗೂ ಹೌದಲ್ಲ ಅನ್ನಿಸಿತು. ಹಾಗಂತ, ನಾನೇನು ನಾಳೆಯಿಂದ ಕ್ಲಾಸ್‌ಗೆ ಚಕ್ಕರ್‌ ಹೊಡೆಯೋದಿಲ್ಲ ಆಯ್ತಾ? ಮುಂದಿನ ಸಲ ಸಿಕ್ಕಾಗ ಗೆಳತಿ, “ಏನೇ ಮೈ ಹುಷಾರಿಲ್ವಾ? ತೆಳ್ಳಗಾಗಿದ್ದೀಯ?’ ಅಂತ ಕೇಳ್ಬೇಕು. ಅಷ್ಟು ತೆಳ್ಳಗಾಗ್ತಿàನಿ. ನೋಡ್ತಾ ಇರಿ…

ರೋಹಿಣಿ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next