Advertisement

ಸೈಕಲ್‌ ಮೇಲೆಯೇ ನಿದ್ದೆ, ಅದರಲ್ಲೇ ಊಟ!; ಸಾಹಸಕ್ಕೆ ಎಣೆಯೇ ಇಲ್ಲ

01:50 AM Feb 01, 2020 | Sriram |

ಉಡುಪಿ: ಸೈಕಲ್‌ ಮೇಲೆ ಮೈ ನವಿರೇಳಿಸುವ ಕಸರತ್ತು, ಅದರಲ್ಲೇ ನಿದ್ದೆ ಅದರಲ್ಲೇ ಊಟ! ಇದು ನಗರದಲ್ಲಿ ನಡೆಯುತ್ತಿರುವ ಸೈಕಲ್‌ ತಂಡದ ಕಸರತ್ತಿನ ಝಲಕ್‌. ಟಿ.ವಿ., ಮೊಬೈಲ್‌ ಹಾವಳಿ ಮಧ್ಯೆಯೂ ಅಪೂರ್ವವೆನಿಸುವ ಈ ಕಸರತ್ತನ್ನು ತಂಡವೊಂದು ನೀಡುತ್ತಿದೆ. ಉಡುಪಿ, ಹಾವಂಜೆ, ಕೊಳಲಗಿರಿ ಸರ್ಕಲ್‌ನಲ್ಲಿ ನಡೆವ ಪ್ರದರ್ಶನಕ್ಕೆ ತಕ್ಕಮಟ್ಟಿಗೆ ಜನವೂ ಸೇರುತ್ತಿದ್ದಾರೆ.

Advertisement

ಕುಂಭಾಶಿ ಮೂಲದ ವಿಜಯಕುಮಾರ್‌ ಮತ್ತವರ ತಂಡ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿ ಬುಲ್‌ಬುಲ್‌ ಪಾಂಡು ಖ್ಯಾತಿಯ 63ರ ವಯಸ್ಸಿನ ಹಿರಿಯ ಕಲಾವಿದರಿದ್ದಾರೆ. 47 ವರ್ಷಗಳಿಂದ ಸೈಕಲ್‌ ಬ್ಯಾಲೆನ್ಸ್‌ ತಂಡದಲ್ಲಿ ಇವರು ಹಾಸ್ಯ ಕಲಾವಿದರಾಗಿ ಊರು ಸುತ್ತಿದ್ದಾರೆ.

ತಂಡವು 7-8 ದಿನಗಳ ಕಾಲ ಸಣ್ಣ ಪೇಟೆಗಳಲ್ಲಿ ಟೆಂಟ್‌ ಹಾಕಿ ಪ್ರದರ್ಶನ ನೀಡುತ್ತದೆ. ಅರ್ಧ ತಾಸುಗಳ ಪ್ರದರ್ಶನಲ್ಲಿ ಮೈಜುಮ್ಮೆನಿಸುವ ಹಲವು ಪ್ರದರ್ಶನಗಳಿರುತ್ತವೆ. ಬೆಂಕಿಯಾಟ, ಜೀವ ಸಮಾಧಿ, ರುಂಡ ಸಮಾಧಿ, ಟ್ಯೂಬ್‌ಲೈಟ್‌ ಒಡೆಯುವುದು. ಸೈಕಲ್‌ ಮೇಲೆ ನಾನಾ ಕಸರತ್ತುಗಳು, ದೇಹದ ಮೇಲೆ ಭಾರೀ ವಾಹನ ಓಡಿಸುವುದು. ಹಲ್ಲಿನಲ್ಲಿ ವಾಹನ ಎಳೆಯುವುದು, ಕೂದಲಿನಿಂದ ವಾಹನ ಎಳೆಯುವುದು ಮೊದಲಾದ ಸಾಹಸಮಯ ಪ್ರದರ್ಶನಗಳನ್ನು ಇವರು ಪ್ರದರ್ಶಿಸುತ್ತಾರೆ.

ಕುಟುಂಬಕ್ಕೆ ಆಸರೆ
ಸಾಹಸ ಪ್ರದರ್ಶನವನ್ನು ಬದುಕಾಗಿಸಿಕೊಂಡಿರುವ ಕಲಾವಿದರು ಪ್ರಾಣ ಪಣಕ್ಕಿಟ್ಟು ಪ್ರದರ್ಶನ ನೀಡುತ್ತಾರೆ. ಆತ್ಮ ರಕ್ಷಣೆಯ ಸಾಧನೆಗಳಿಲ್ಲ. ಪ್ರೇಕ್ಷಕರು ನೀಡುವ ಅಲ್ಪ ಸ್ವಲ್ಪ ಹಣದಿಂದಲೇ ಹೊಟ್ಟೆ ತುಂಬಿಸಿ ಕೊಳ್ಳುತ್ತಾರೆ. ರಾಜ್ಯದ ಮೂಲೆಮೂಲೆಗಳಿಗೆ ತೆರಳಿ ಪ್ರದರ್ಶನ ನೀಡುತ್ತಾರೆ. ಬಂದ ಆದಾಯದಿಂದ ಕಲಾವಿದರ ಮತ್ತು ಅವಲಂಬಿತ ಕುಟುಂಬಸ್ಥರ ಜೀವನ ಸಾಗುತ್ತದೆ.

ಹೈದರಾಲಿಯದು ಪ್ರಥಮ
ಸೈಕಲ್‌ ಪ್ರದರ್ಶನದ ಮೂಲ ದಕ್ಷಿಣ ಭಾರತ. ಕೇರಳದ ಹೈದರಾಲಿ ಎಂಬಾತ ಸೈಕಲ್‌ನಲ್ಲಿ ಸುತ್ತಾಡುತ್ತ ಪ್ರದರ್ಶನ ನೀಡುತ್ತಿದ್ದರು. ರಾಜ್ಯದಲ್ಲಿ ಕೇರಳದ ಕೆ. ಎಸ್‌. ಲೋಕನಾಥ ಹಾಗೂ ಕೆ.ಆರ್‌. ಮಣಿ ಎಂಬವರ ಸೈಕಲ್‌ ಸರ್ಕಸ್‌ ಪ್ರಥಮವಾಗಿ ಪ್ರದರ್ಶನ ನೀಡಿತ್ತು.

Advertisement

ಕರಾವಳಿಯಲ್ಲಿ ಪ್ರಸಿದ್ಧಿ
ಒಂದು ಕಾಲದಲ್ಲಿ ಸೈಕಲ್‌ ಪ್ರದರ್ಶನ ಬಹಳಷ್ಟು ಪ್ರಸಿದ್ಧಿಗೆ ಬಂದಿತ್ತು. ಸೈಕಲ್‌ ಸರ್ಕಸ್‌ ಕರಾವಳಿಯ ಭಾಗದಲ್ಲಿ ಹೆಚ್ಚು ಜನಪ್ರೀಯ. ಮಳೆಗಾಲದಲ್ಲಿ ತಂಡದ ಸದಸ್ಯರು ಬಯಲು ಸೀಮೆಗಳಿಗೆ ತೆರಳಿ ಪ್ರದರ್ಶನ ನೀಡಿ ಜೀವನ ನಡೆಸುತ್ತಾರೆ. ಇತರ ಅವಧಿಯಲ್ಲಿ ಮಲೆನಾಡು ಭಾಗದಲ್ಲಿ ಹಳ್ಳಿಗಳಿಗೆ ಸುತ್ತಾಡಿ ಪ್ರದರ್ಶನ ನೀಡುತ್ತಾರೆ. ರಾಜ್ಯದಲ್ಲಿ ಸದ್ಯ ಇಂತಹ ಮೂರು ತಂಡಗಳು ಮಾತ್ರ ತಿರುಗಾಟ ನಡೆಸುತ್ತಿವೆ.

ಸವಾರ ಭೂಸ್ಪರ್ಶಿಸುವುದಿಲ್ಲ
ಸೈಕಲ್‌ ಸಾಹಸಕ್ಕೆ ಮಡ್‌ಗಾರ್ಡ್‌, ಬ್ರೇಕ್‌ ಕಳಚಿದ ಸೈಕಲ್‌, ಸೌಂಡ್‌ ಸಿಸ್ಟಮ್‌, ಲೈಟಿಂಗ್ಸ್‌ ಜನರೇಟರ್‌ ಜತೆಗೆ ಹಾಸ್ಯ ಮತ್ತು ಡ್ಯಾನ್ಸ್‌ ಕಲಾವಿದರರು ಅವಶ್ಯ. ಸೈಕಲ್‌ ಸವಾರ ಪಾದ ಭೂಸ್ಪರ್ಶ ಮಾಡದೆ ದ್ರವ ರೂಪದ ಆಹಾರ ಸೇವನೆಯ ಮೂಲಕ ಸೈಕಲ್‌ ಮೇಲೆಯೇ ಸ್ನಾನ, ನಿದ್ರೆ ಸಹಿತ ಇತರೆ ನಿತ್ಯ ಕರ್ಮಗಳನ್ನು ಮಾಡುತ್ತಾನೆ.

ಹಳ್ಳಿಯ ಜನ ಹಿಂದೆಲ್ಲ ಸಾಹಸಗಳನ್ನು ನೋಡಲು ಕಾತರದಿಂದ ಸೇರುತ್ತಿದ್ದರು. ಈಗ ಟಿ.ವಿ., ಮೊಬೈಲ್‌ಗ‌ಳ ಭರಾಟೆಯಿಂದ ಜನ ಪ್ರದರ್ಶನಗಳಿಗೆ ಬರುವುದಿಲ್ಲ. ಕಲೆ ಮೇಲಿನ ನಿಷ್ಠೆ ಕಮ್ಮಿಯಾಗಿಲ್ಲ. ಅಪಾಯಕಾರಿ ಕಾಯಕವಾಗಿದ್ದರೂ ಉತ್ತೇಜಿಸುವ ಜನರ ಪ್ರೋತ್ಸಾಹಕ್ಕೆ ಬೆಲೆಯಿತ್ತು ತೊಡಗಿಸಿಕೊಂಡಿದ್ದೇನೆ.
-ರವಿರಾಜ್‌, ಹಿರಿಯ ಹಾಸ್ಯ ಕಲಾವಿದ

ನೆರವಿಗೆ ಯಾರೂ ಬರುತ್ತಿಲ್ಲ
ಪ್ರದರ್ಶನಕ್ಕೆ ಕಲಾವಿದರ ಕೊರತೆಯಿದೆ. ನಿರೀಕ್ಷಿತ ಆದಾಯ ಬರುತ್ತಿಲ್ಲ. ಧ್ವನಿವರ್ಧಕ ಸಹಿತ ಎಲ್ಲವನ್ನು ಬಾಡಿಗೆಗೆ ಪಡೆಯುತ್ತೇವೆ. ನಮ್ಮಂತ ಬಡ ಕಲಾವಿದರ ನೆರವಿಗೆ ಸರಕಾರ ಬರುತ್ತಿಲ್ಲ. ಸಾಧನಗಳ ಖರೀದಿಗೆ ಸಾಲ ಕೂಡ ಆರ್ಥಿಕ ಸಂಸ್ಥೆಗಳು ನೀಡುತಿಲ್ಲ. ಸಂಘ ಸಂಸ್ಥೆಗಳು ದಾನ ರೂಪದಲ್ಲಿ ನೀಡಿದಲ್ಲಿ ನಮಗೆ ಅನುಕೂಲವಾಗುತ್ತಿತ್ತು.
-ವಿಜಯಕುಮಾರ್‌ ಕುಂಭಾಶಿ, ತಂಡದ ಮುಖ್ಯಸ್ಥ.

Advertisement

Udayavani is now on Telegram. Click here to join our channel and stay updated with the latest news.

Next