Advertisement
ದೇವರ ದಯದಿಂದ ಈ ನಿದ್ರಾಲಕ್ಷ್ಮಿಯು ನನಗೆ ಸಾಧಾರಣ ಮಟ್ಟಿಗೆ ಒಲಿದಿದ್ದಾಳೆ ಎನ್ನಬಹುದು. ನನ್ನ ಅಮ್ಮ ಹೇಳುವ ಪ್ರಕಾರ ಎಳೆ ಮಗುವಾಗಿದ್ದಾಗಲೂ ನಾನು ಮಲಗಲು ತೊಂದರೆ ಕೊಟ್ಟಿದ್ದೇ ಇಲ್ಲವಂತೆ. ಹೊಟ್ಟೆ ತುಂಬಿಸಿದರೆ ಸಾಕಿತ್ತಂತೆ, ಸುಮ್ಮನೆ ಮಲಗಿಕೊಳ್ಳುತ್ತಿದ್ದೆನಂತೆ. ಎಲ್ಲಿ ಗಲಾಟೆ ಗೌಜಿಯ ಸಮಾರಂಭಕ್ಕೆ ಕರೆದುಕೊಂಡು ಹೋದರೂ ನನ್ನ ನಿದ್ರೆಯ ಸಮಯಕ್ಕೆ ಆ ಶಬ್ದ ಯಾರಿಗೋ ಎಂಬಂತೆ ಅಲ್ಲೇ ತೂಕಡಿಸುತ್ತಿದ್ದೆನಂತೆ. ಈ ಸ್ವಭಾವ ಆನುವಂಶೀಯವೇ ಆಗಿರಬಹುದು. ನಿದ್ರಾದೇವಿಯೇ ಕೃಪಾಕಟಾಕ್ಷಕ್ಕೆ ಪಾತ್ರರಾದ ಸಂತೆಯಲ್ಲೇ ಮಲಗಬಲ್ಲ ನಮ್ಮ ತಂದೆಯವರಿಂದಲೇ ನನಗೂ ನನ್ನ ತಮ್ಮಂದಿರಿಗೂ ಈ ಗುಣ ಬಂದಿರಬಹುದು. ಬಸ್ಸಿನಲ್ಲಿ ಪಯಣಿಸುವಾಗ ನಮಗೆ ಈ ನಿದ್ರಾದೇವಿಯು ಸ್ವಲ್ಪ ಹೆಚ್ಚೇ ಕರುಣೆ ತೋರಿಸುತ್ತಾಳೆ. ನನಗೆ ಹತ್ತಿರದ ಬೇರೆ ಊರಿನಲ್ಲಿ ಕಾಲೇಜಿಗೆ ಸೀಟು ಸಿಕ್ಕಿದಾಗ ನಾನು ಆರಿಸಿಕೊಂಡಿದ್ದು ಹಾಸ್ಟೆಲ್ ವಾಸವನ್ನಲ್ಲ. ಬದಲಿಗೆ ಒಂದು ಗಂಟೆಯಲ್ಲಿ ಕ್ರಮಿಸಬಹುದಾದ ದಿನನಿತ್ಯದ ಪ್ರಯಾಣವನ್ನು. ಬಸ್ಸಿನಲ್ಲಿ ಮಲಗಬಹುದು ಎಂಬ ಕಾರಣಕ್ಕೆ ! ಕಾಲೇಜಿಗೆ ಹೋಗುವಾಗ ಹೇಗೂ ಲಾಸ್ಟ್‌ಸ್ಟಾಪ್‌ನಲ್ಲಿ ಇಳಿದು ಬೇರೆ ಬಸ್ ಹತ್ತಬೇಕಿತ್ತು. ಆದ್ದರಿಂದ, ಮಲಗಿದ್ದರೆ ಹೇಗೂ ಎಚ್ಚರವಾಗುತ್ತಿತ್ತು. ಅದೇ ವಾಪಸು ಬರುವಾಗ ಲಾಸ್ಟ್‌ಸ್ಟಾಪ್‌ಗಿಂತ ನಾಲ್ಕೈದು ಸ್ಟಾಪ್ ಹಿಂದೇ ನಮ್ಮ ಮನೆಯಿತ್ತು. ಮತ್ತು ಎಷ್ಟೋ ದಿನ ನಾನು ಅಲ್ಲಿ ಇಳಿಯದೆ ಲಾಸ್ಟ್‌ಸ್ಟಾಪ್‌ನಲ್ಲಿ ಬಸ್ ನಿಂತು ಇಂಜಿನ್ ಆಫ್ ಆದ ನಂತರ ನಿದ್ದೆಯಿಂದ ಎದ್ದು ಕಣ್ಣು ಬಿಟ್ಟು ನೋಡಿ ಎಲ್ಲಿರುವೆನೆಂದು ಅರಿವಿಗೆ ಬಂದ ನಂತರ ಬೇರೊಂದು ಲೋಕಲ್ ಬಸ್ ಹಿಡಿದು ಮನೆಗೆ ಬರುತ್ತಿದ್ದೆ. ಪ್ರತಿಸಲ ಹಾಗಾಗುತ್ತಿರಲಿಲ್ಲ. ಕೆಲವೊಮ್ಮೆ ಕಂಡಕ್ಟರ್ ಪರಿಚಯದವನಾಗಿದ್ದರೆ ನನ್ನ ಸ್ಟಾಪ್ ಬಂದಾಗ ಎಬ್ಬಿಸುತ್ತಿದ್ದ.
Related Articles
Advertisement
“ಹಾಗಲ್ಲ ಸರ್, ನನಗೆ ನಿದ್ರೆ ಬರಬಹುದು ಪಾಠ ಮಾಡುವಾಗ’ ಎಂದೆ. ಏನೋ ಒಂದು ಅನ್ಯಗ್ರಹದ ಪ್ರಾಣಿಯ ಹಾಗೆ ನೋಡಿದರು. ಆದರೆ ಮರುದಿನ ನನ್ನ ಟೈಮ್‌ಟೇಬಲ್ ಬದಲಾಯಿಸಿ ಬೆಳಗ್ಗಿನ ತರಗತಿಗಳನ್ನೇ ಹಾಕಿದ್ದರು.
ನನಗೋ ಕೂತ ಲ್ಲಿ ನಿ¨ªೆಯೇ. ಆದರೆ ನನ್ನ ಕಟ್ಟಿಕೊಂಡವರಿಗೆ ಸ್ವಲ್ಪ ಜಾಗ ಬದಲಾದರೂ ನಿದ್ರೆಗೆ ಭಂಗ. ನಾನು ಬೆಳಗ್ಗೆ ಐದು ಗಂಟೆಗೆ ಏಳ ಬೇಕು.
ಎಲ್ಲಾದರೂ 4.56ಕ್ಕೆ ಎಚ್ಚರವಾದರೆ ಪುನಃ ಮಲಗಿ 5 ಗಂಟೆಗೆ ಅಲಾರಂ ಇಟ್ಟು ಏಳುತ್ತಿದ್ದೆ. ಆ ನಾಲ್ಕು ನಿಮಿಷ ನನಗೆ ನಿದ್ದೆಯೂ ಬರುತ್ತಿತ್ತು, ಕನಸೂ ಬೀಳುತ್ತಿತ್ತು. ಅದೇ ನನ್ನವರಿಗೆ 6 ಗಂಟೆಯ ಅಲಾರಂಗೆ ನಾಲ್ಕು ಗಂಟೆಗೇ ಎಚ್ಚರವಾಗಿ ನಂತರದ ಎರಡು ಗಂಟೆ ನಿದ್ದೆಯೇ ಬರುವುದಿಲ್ಲ. ಮುಂದೆ ನಾನು ಮಗುವಿನ ತಾಯಿಯಾಗಿ ಭಡ್ತಿ ಹೊಂದಿದಾಗಲು ನನ್ನವರಿಗೂ ನನ್ನ ಅಮ್ಮನಿಗೂ ಚಿಂತೆ. ಹೇಗಪ್ಪಾ ಇವಳು ಅಷ್ಟು ಪುಟ್ಟ ಮಗುವನ್ನು ನಿದ್ದೆ ಬಿಟ್ಟು ನೋಡಿಕೊಳ್ಳುತ್ತಾಳೆ ಎಂದು. ಆದರೆ, ಪಾಪದ ಮಗು ಅಮ್ಮ ನನ್ನನ್ನು ಹೊತ್ತು ಕಷ್ಟಪಟ್ಟಿದ್ದು ಸಾಕು ಎಂದು ಜೋರು ಹಸಿವಾಗುವ ತನಕ ನಿದ್ದೆಯಿಂದ ಏಳುತ್ತಲೇ ಇರಲಿಲ್ಲ. ಆದರೆ, ಏನು ಮಾಡುವುದು ಹೇಳಿ ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ನರ್ಸ್‌ಗಳು ಪ್ರತಿ ಎರಡು ಗಂಟೆಗೊಮ್ಮೆ ಮಗುವಿಗೆ ಫೀಡ್ ಮಾಡಬೇಕು ಎಂದು ನನ್ನನ್ನೂ ಮಗುವನ್ನೂ ಎಬ್ಬಿಸಿ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದರು. ಹೆರಿಗೆ ಸಮಯದಲ್ಲಿ ಅನಸ್ತೇಶೀಯಾ ತಜ್ಞರು ಬರುವುದು ತಡವಾಗುತ್ತದೆಂದು ತಿಳಿದು ಓಟಿ ಬೆಡ್ ಮೇಲೆ ಒಂದು ಸಣ್ಣ ನಿದ್ರೆ ಮಾಡಿದ ನನ್ನನ್ನು ಎಬ್ಬಿಸಿದ್ದು ಈ ಕರ್ತವ್ಯಪರ ದಾದಿಯರೇ.
ದೊಡ್ಡ ದೊಡ್ಡ ಸೆಲೆಬ್ರಿಟಿಗಳೆಲ್ಲ ಲಾಂಗ್ ಡ್ರೈವ್ ಹೋಗುವುದೆಂದರೆ ತುಂಬಾ ಇಷ್ಟ ಎಂದು ಹೇಳುವುದನ್ನು ಕೇಳಿ ನನ್ನನ್ನೂ ಒಮ್ಮೆ ಹಾಗೇ ಕರೆದುಕೊಂಡು ಹೋಗಿ ಎಂದು ಪತಿದೇವರಲ್ಲಿ ಕೇಳಿದಾಗ “ಈಗಲೇ ಹೋಗೋಣ ರೆಡಿಯಾಗು’ ಎಂದರು. ನಮ್ಮ ಈ ಲಾಂಗ್‌ಡ್ರೈವ್ ಸರಿಯಾಗಿ ಮೈನ್ ರೋಡ್ ದಾಟಿ ಹೈವೇ ತಲುಪಿದೆಯೋ ಇಲ್ಲವೋ ನಾನಂತೂ ನಿದ್ರೆಗೆ ಜಾರಿಬಿಟ್ಟಿದ್ದೆ ಅದೇ ಕೊನೆ, ಮುಂದೆ ಈ ಸೆಲೆಬ್ರಿಟಿಗಳೆಲ್ಲ ಹೇಳುವುದು ಒಂದೂ ಸರಿಯಾಗಿರುವುದಿಲ್ಲ ಎಂದು ತೀರ್ಮಾನಕ್ಕೆ ಬಂದೆ. ಈಗಲೂ ನಾನು ಮಕ್ಕಳನ್ನು ಕರೆದುಕೊಂಡು ಎಲ್ಲಾದರೂ ದೂರ ಪ್ರಯಾ ಣಕ್ಕೆ ಹೊರಟರೆ ಮಕ್ಕಳಿಗಿಂತ ಮೊದ ಲು ನನಗೆ ನಿದ್ರೆ ! ಹೇಗೂ ಇಳಿಯುವ ಅಂದಾಜು ಸಮಯಕ್ಕಿಂತ ಸ್ವಲ್ಪ ಮುಂಚೆ ಯಜಮಾನರು ಫೋನ್ ಮಾಡುತ್ತಾರೆ, ಎಬ್ಬಿಸಲು! ಆ ರಿಂಗ್ ಕೇಳಿ ಮಕ್ಕಳೂ ಎದ್ದು ಅಮ್ಮ, “ಅಪ್ಪನ ಫೋನ್, ಇಳಿಯುವ ಸ್ಟಾಪ್ ಹತ್ತಿರ ಬಂದಿರಬೇಕು’ ಎನ್ನುತ್ತವೆ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ!
ನನ್ನ ಮಗಳಂತೂ ಒಂದನೆಯ ತರಗತಿಯಲ್ಲಿರುವಾಗ ಸ್ಕೂಲ್ ಡೇ ಡ್ಯಾನ್ಸಿಗೆ ಆಕೆಯ ಸರದಿಗೆ ಕಾಯುತ್ತ ಕಾಯುತ್ತ ಗ್ರೀನ್ ರೂಮಿನಲ್ಲೇ ನಿದ್ದೆ ಹೋಗಿದ್ದಳು. ಮೈಕಾಸುರನ ಆರ್ಭಟ, ಮಕ್ಕಳ ಗದ್ದಲ, ಹಾಕಿಕೊಂಡ ಜಿಗಿಮಿಗಿ ಡ್ರೆಸ್ ಯಾವುದೂ ಆಕೆಯ ನಿದ್ದೆಗೆ ತೊಡಕಾಗಿರಲಿಲ್ಲ.
ಹಾಗೆಂದು ನಾನು ಅಥವಾ ನನ್ನಂಥ ಸಂತೆಯಲ್ಲೂ ನಿದ್ದೆಮಾಡುವ ಗುಂಪಿಗೆ ಸೇರಿದವರು ಕುಂಭಕರ್ಣನ ವಂಶಕ್ಕೆ ಸೇರಿದವರು ಎಂದು ತಿಳಿಯಬೇಡಿ. ನಮ್ಮದು ಏನಿದ್ದರೂ ಪವರ್ ನ್ಯಾಪ್! ಹತ್ತೇ ನಿಮಿಷದ ನಿದ್ದೆ. ಫುಲ್ ಫ್ರೆಶ್ ಆಗಿ ಬಿಡುತ್ತೇವೆ. ಐಐಟಿ, ಐಐಎಂಗಳಲ್ಲಿ ಪಾಠದ ಮಧ್ಯೆ ಪ್ರೊಫೆಸರ್‌ಗಳೇ ಹತ್ತು ನಿಮಿಷ ಪವರ್ ನ್ಯಾಪ್‌ಗೆಂದು ಬಿಡುತ್ತಾರಂತೆ.
ನೀವು ಏನೇ ಹೇಳಿ, ನಿದ್ದೆ ಎನ್ನುವುದು ಮಾನವನಿಗೆ ಒಂದು ವರವಿದ್ದಂತೆ. ದೇಹಕ್ಕೆ ಎಷ್ಟೇ ಆಯಾಸವಾಗಿರಲಿ ಒಂದು ನಿದ್ದೆಯ ನಂತರ ಪುನಃ ಶಕ್ತಿ ಸಂಚಯವಾಗುತ್ತದೆ. ಮನಸ್ಸು ಗೊಂದಲದ ಗೂಡಾಗಿದ್ದರೆ ಒಂದು ನಿದ್ದೆ ಅದನ್ನು ಸರಿಪಡಿಸುತ್ತದೆ. ಕೆಲವು ಸಮಸ್ಯೆಗಳಿಗೆ ನಿದ್ದೆಯಲ್ಲೇ ಕನಸುಗಳ ರೂಪದಲ್ಲಿ ಪರಿಹಾರವೂ ದೊರಕುತ್ತದೆ. ನಿ ದ್ದೆ ಬಾರದಿರುವ ಕಷ್ಟ ಸ್ವತಃ ಅನುಭವಿಸಿಯೇ ತಿಳಿಯಬೇಕು. ಇಂಥ ದೇವತಾ ಸ್ವರೂಪಿ ನಿದ್ದೆಯನ್ನು ಕಡೆಗಣಿಸದೇ ಅದಕ್ಕೆ ಅಗತ್ಯ ಪ್ರಾಶಸ್ತ್ಯ ಕೊಡಲೇಬೇಕು. ಚಿಕ್ಕದಾದ ಒಂದು ನಿದ್ದೆ ಕೊಡುವ ಆಹ್ಲಾದ ಅದನ್ನು ಅನುಭವಿಸಿದವನಿಗೇ ಗೊತ್ತು.
ದೇವರಲ್ಲಿ ಬೇಡಿಕೊಳ್ಳುವುದಿಷ್ಟೇ- ಬದುಕಿರುವಷ್ಟು ದಿನ ಆರೋಗ್ಯ, ನೆಮ್ಮದಿಯ ನಿದ್ದೆದಯಪಾಲಿಸು!
ಶಾಂತಲಾ ಎನ್. ಹೆಗ್ಡೆ