Advertisement

ನಿದ್ದೆಯ ಸಿದ್ದು ಸರ್ಕಾರ ಕಿತ್ತೆಸೆಯಿರಿ: ಸ್ಮೃತಿ

05:44 PM May 06, 2018 | Team Udayavani |

ದಾವಣಗೆರೆ: ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ನಿದ್ದೆಯಲ್ಲಿ ಮುಳುಗಿದೆ ಎಂದು ಕೇಂದ್ರದ ಜವಳಿ ಮತ್ತು ಮಾಹಿತಿ ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯವಾಡಿದ್ದಾರೆ. ಶನಿವಾರ ಹರಿಹರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್‌ ಪರ ರೋಡ್‌ ಶೋ ವೇಳೆ ಮಹಾತ್ಮಗಾಂಧಿ ವೃತ್ತದಲ್ಲಿ ಮಾತನಾಡಿದ ಅವರು, ಸದಾ ನಿದ್ದೆಯಲ್ಲಿ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿದ್ದರಾಮಯ್ಯ ಸರ್ಕಾರವನ್ನು ಮೇ 12ರಂದು ನಡೆಯುವ ಚುನಾವಣೆಯಲ್ಲಿ ಕಿತ್ತೆಸೆಯುವಂತೆ ಮನವಿ ಮಾಡಿದರು. 

Advertisement

ಕರ್ನಾಟಕದಲ್ಲಿ ಪ್ರಚಾರ ನಡೆಸಿದ ಕಡೆಯಲ್ಲೆಲ್ಲ ಪರಿವರ್ತನೆ ಅಲೆ ಕಾಣಿಸುತ್ತಿದೆ. ಕರ್ನಾಟಕದ ಜನತಾ ಜನಾರ್ದನರು, ವಿಶೇಷವಾಗಿ ಮಹಿಳೆಯರು ಯಡಿಯೂರಪ್ಪನವರ ನೇತೃತ್ವದ ಆಡಳಿತ ಬಯಸುತ್ತಿದ್ದಾರೆ. ಉರಿ ಬಿಸಿಲಿನಲ್ಲೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದೇ ಅದಕ್ಕೆ ಸಾಕ್ಷಿ. ಮಹಿಳೆಯರು ಮತ್ತು ಮಕ್ಕಳಿಗೆ ಹಲವಾರು ಸೌಲಭ್ಯ, ರಕ್ಷಣೆಯ ವಾತಾವರಣವನ್ನು ಬಿಜೆಪಿ ಒದಗಿಸಿದೆ. ಲಕ್ಷ್ಮೀ ಬರುವುದು ಕಮಲದಲ್ಲಿ, ಹಸ್ತದಲ್ಲಲ್ಲ. ಕಮಲದಲ್ಲಿ ಬರುವ ಲಕ್ಷ್ಮೀಯನ್ನು ಬರಮಾಡಿಕೊಳ್ಳಲು ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು. 

ಬಿಜೆಪಿ ರಾಜ್ಯ ಅಧ್ಯಕ್ಷ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಶತಃ ಸಿದ್ಧ. ಅಧಿಕಾರಕ್ಕೆ ಬಂದ ನಂತರ ನಡೆಯುವ ಮೊದಲ ಸಚಿವ ಸಂಪುಟ ಸಭೆಯಲ್ಲೇ ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರ ಸಂಘಗಳಲ್ಲಿನ ರೈತರ ಮತ್ತು ನೇಕಾರರ 1 ಲಕ್ಷ ರೂ. ಸಾಲ ಮನ್ನಾ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಮಹಿಳೆಯರೇ ನಡೆಸುವ ಅತಿ ದೊಡ್ಡ ಸಹಕಾರಿ ಸಂಸ್ಥೆಗೆ 10 ಸಾವಿರ ಕೋಟಿ ಸ್ತ್ರೀ ಉನ್ನತ ನಿಧಿ, ಮುಖ್ಯಮಂತ್ರಿ ಸ್ಮಾರ್ಟ್‌ಫೋನ್‌ ಯೋಜನೆಯಡಿ ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್‌ಫೋನ್‌, ಎಸ್ಸಿ ಸಮುದಾಯಗಳಿಗೆ ಮಾದಾರ ಚೆನ್ನಯ್ಯ ವಸತಿ ಯೋಜನೆ, ವಿವಾಹ ಮಂಗಳ ಯೋಜನೆಯಡಿ ಬಿಪಿಎಲ್‌ ಕುಟುಂಬದ ಯುವತಿಯರ ಮದುವೆಗೆ 25 ಸಾವಿರ ರೂಪಾಯಿ, 3 ಗ್ರಾಂ ಚಿನ್ನದ ತಾಳಿ… ಒದಗಿಸುವುದು ಒಳಗೊಂಡಂತೆ ಸುಖೀ, ಸುಭದ್ರ ಕರ್ನಾಟಕ ನಿರ್ಮಾಣದ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಬಿಜೆಪಿಯ ಪ್ರತಿ ಕಾರ್ಯಕರ್ತರು ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜನರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.

ಮಹಿಳಾ ರಕ್ಷಣೆ ಮತ್ತು ದೌರ್ಜನ್ಯ ತಡೆಗೆ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಪೊಲೀಸ್‌ ಪಡೆ, ಓಬಿಸಿ ನಿಧಿಯಡಿ 7,500 ಕೋಟಿ ಅನುದಾನದಲ್ಲಿ ವಸತಿ ಸೌಲಭ್ಯ, ವೃತ್ತಿಪರ ಶಿಕ್ಷಣ ಹೊರತುಪಡಿಸಿ ಸರ್ಕಾರಿ ಕಾಲೇಜಿಗಳಲ್ಲಿ ಪದವಿಯವರೆಗೆ ಉಚಿತ ಶಿಕ್ಷಣ, ಶಾಲಾ-ಕಾಲೇಜುಗಳಲ್ಲಿ ಶುಲ್ಕ ನಿಯಂತ್ರಣಕ್ಕಾಗಿಯೇ ನಿಯಂತ್ರಣ ಪ್ರಾಧಿಕಾರ, ಹತ್ತು ಹಲವಾರು ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. 

Advertisement

ಬಡ ಮತ್ತು ದುರ್ಬಲ ವರ್ಗದವರ ಚಿಕಿತ್ಸೆ ಮತ್ತು ವಿಮೆಗೆ ಆಯುಷ್ಮಾನ್‌ ಕರ್ನಾಟಕ ಯೋಜನೆ, ಜನರ ಹಸಿವು ನೀಗಿಸುವ ಮಹತ್ತರ ಉದ್ದೇಶದಿಂದ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಎಲ್ಲರಿಗೂ ಆಹಾರ ಒದಗಿಸುವ ಅನ್ನದಾಸೋಹ ಯೋಜನೆ, ಕ್ಯಾಂಟೀನ್‌ ಪ್ರಾರಂಭಿಸಲಾಗುವುದು. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲು ಹರಿಹರ ಕ್ಷೇತ್ರದ ಜನರು ಬಿ.ಪಿ. ಹರೀಶ್‌ ಗೆಲ್ಲಿಸಬೇಕು ಎಂದರು. 

ಮಾಜಿ ಶಾಸಕ ಬಿ.ಪಿ. ಹರೀಶ್‌ ಮಾತನಾಡಿ, ಹರಿಹರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ, ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ, ಬಿ. ಶ್ರೀರಾಮುಲು ಉಪಮುಖ್ಯಮಂತ್ರಿಯಾಗಲು ಎಲ್ಲರೂ ಸಹಕಾರ ನೀಡಬೇಕು. ತಮ್ಮನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. 

ಹರಿಹರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರೋಡ್‌ ಶೋ ಶಿವಮೊಗ್ಗ ವೃತ್ತದ ಮೂಲಕ ಮಹಾತ್ಮಗಾಂಧಿ ವೃತ್ತದಲ್ಲಿ ಮುಕ್ತಾಯವಾಯಿತು. ಅನಾರೋಗ್ಯದ ನಿಮಿತ್ತ ಸ್ಮೃತಿ ಇರಾನಿ ಅರ್ಧಕ್ಕೆ ರೋಡ್‌ ಶೋ ಸ್ಥಗಿತಗೊಳಿಸಿ, ದಾವಣಗೆರೆಗೆ ವಾಪಾಸ್ಸಾಗಿ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ.

ವಾಹನ ಏರಲು ಜಟಾಪಟಿ…
ಕೇಂದ್ರ ಸಚಿವೆ ಸ್ಮೃತಿ ಇರಾನಿ ರೋಡ್‌ ಶೋ ವಾಹನ ಏರಲು ಬಿಜೆಪಿ ಮಹಿಳಾ ಕಾರ್ಯಕರ್ತರಿಬ್ಬರು ಜಟಾಪಟಿಗೆ ಬಿದ್ದ ಘಟನೆ ನಡೆಯಿತು. ರೋಡ್‌ ಶೋ ಪ್ರಾರಂಭವಾಗುತ್ತಿದ್ದಂತೆ ಮಹಿಳಾ ಕಾರ್ಯಕರ್ತರೊಬ್ಬರು ವಾಹನ ಏರಲು ಮುಂದಾದರು. ವಾಹನದಲ್ಲಿದ್ದವರು ಅವಕಾಶ ನೀಡಲೇ ಇಲ್ಲ. ಆದರೂ, ಹಠಕ್ಕೆ ಬಿದ್ದ ಆ ಕಾರ್ಯಕರ್ತೆ ಅಂತೂ ಇಂತೂ ವಾಹನ ಏರಿದರು. ಇದಕ್ಕೆ ಇನ್ನೊಬ್ಬ ಕಾರ್ಯಕರ್ತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೆಳಗಿಳಿಯುವಂತೆ ತಾಕೀತು ಮಾಡಿದರು.

ಕಾರ್ಯಕರ್ತೆಯರ ಜಟಾಪಟಿಯಿಂದ ಮುಜುಗರಕ್ಕೆ ಒಳಗಾದ ಸಚಿವೆ ಸ್ಮೃತಿ ಇರಾನಿ ಅವರಿಬ್ಬರನ್ನು ಸಮಾಧಾನಗೊಳಿಸಲು ಮುಂದಾದರು. ಆದರೂ, ಕಾರ್ಯಕರ್ತೆಯರ ಜಟಾಪಟಿ ನಿಲ್ಲಲಿಲ್ಲ. ಆಗ ಬೇಸರಗೊಂಡ ಸ್ಮೃತಿ ಇರಾನಿ ಹಿಂದಕ್ಕೆ ಸರಿದು ನಿಂತರು. ಬಿ.ಪಿ. ಹರೀಶ್‌, ಇತರರು ಮುಂದೆ ಬರುವಂತೆ ಮನವಿ ಮಾಡಿದರೂ ಸಹ ಸಚಿವೆ ಮುಂದೆ ಬರಲಿಲ್ಲ. ನಂತರ ಕಾರ್ಯಕರ್ತರು, ಇತರರ ಒತ್ತಾಯದ ಮೇಲೆ ವಾಹನದ ಮುಂದೆ ಬಂದು ನಿಂತರು. 

Advertisement

Udayavani is now on Telegram. Click here to join our channel and stay updated with the latest news.

Next