Advertisement
ನಾನಾಗ ಸೆಕೆಂಡ್ ಪಿಯುಸಿ ವಿದ್ಯಾರ್ಥಿನಿ. ನಮ್ಮ ತರಗತಿಯಲ್ಲಿ ಮೋಹನ ಎಂಬ ವಿದ್ಯಾರ್ಥಿಯೊಬ್ಬನಿದ್ದ. ಮಧ್ಯಾಹ್ನದ ನಂತರದ ಮೊದಲ ಅವಧಿಯಲ್ಲಿ ಯಾರು ಎಷ್ಟೇ ಆಸಕ್ತಿದಾಯಕವಾಗಿ ಬೋಧಿಸುತ್ತಿರಲಿ, ಅವನಂತೂ ಯಾರ ಹಂಗೂ ಇಲ್ಲದಂತೆ ಹಾಯಾಗಿ ತೂಕಡಿಸುತ್ತಿದ್ದ. ಮಧ್ಯಾಹ್ನದ ಭೋಜನಕ್ಕೆ ಹೇಳಿಕೇಳಿ ಕುಚ್ಚಿಲಕ್ಕಿಯ ಗಂಜಿ ಊಟ. ಬೆಚ್ಚಗೆ ಉಂಡು ಬರುವ ಯಾವ ವಿದ್ಯಾರ್ಥಿಗೇ ಆದರೂ ನಿದ್ರೆಯ ಮಂಪರಿಂದ ಪಾರಾಗುವುದು ಅಸಾಧ್ಯ.
Related Articles
Advertisement
ಆಯ್ತೇನಪ್ಪಾ ನಿದ್ದೆ?: ಆ ಉಪನ್ಯಾಸಕರಿಗೆ ಅವನ ನಿದ್ದೆಯ ಬಗ್ಗೆ ಮುನಿಸೇ ಉಂಟಾಗುತ್ತಿರಲಿಲ್ಲ! ಅವನ ನಿದ್ದೆಯ ಕುರಿತಾಗಿ ಅವರಿಗೆ ಸಹಾನುಭೂತಿಯಿತ್ತೋ, ಅನುಕಂಪವಿತ್ತೋ ನನಗೆ ಗೊತ್ತಿಲ್ಲ. ಆದರೆ, ಈಗ ಉಪನ್ಯಾಸಕಿಯ ಹುದ್ದೆಯಲ್ಲಿದ್ದುಕೊಂಡು ಮಧ್ಯಾಹ್ನ ನಂತರದ ಮೊದಲ ಅವಧಿ ತೆಗೆದುಕೊಳ್ಳುವಾಗಲೆಲ್ಲ ಮೋಹನ ನೆನಪಾಗುತ್ತಾನೆ. ಯಾಕೆಂದರೆ, ನನ್ನ ಶಿಷ್ಯವರ್ಗದಲ್ಲಿ ಅದೆಷ್ಟೊಂದು ಮಂದಿ ನಿದ್ರಾಕಾಂಕ್ಷಿಗಳಿದ್ದಾರೋ!
ಅವರ ಮೇಲೆ ರೇಗಲಾಗದೇ, ಇತ್ತ ಅವರು ಅಷ್ಟೊಂದು ನಿರಾತಂಕದಿಂದ ನಿದ್ದೆ ಹೋಗುವುದನ್ನು ಸಹಿಸಲೂ ಆಗದೇ ಒದ್ದಾಡುವ ಕರ್ಮ ನನ್ನದು. ಕೆಲವೊಮ್ಮೆ “ಆಯ್ತೇನಪ್ಪಾ ನಿದ್ದೆ?’ ಎಂದು ಒಬ್ಬೊಬ್ಬರನ್ನೇ ಎಬ್ಬಿಸಬೇಕಾದ ಪರಿಸ್ಥಿತಿ ಬರುವುದೂ ಇದೆ. ನನ್ನ ತರಗತಿಯಲ್ಲಿ ಏನಿಲ್ಲವೆಂದರೂ ನಾಲ್ಕಾರು ಬಾರಿ ಯಕ್ಷಗಾನದ ಹಾವಭಾವಗಳು ನುಸುಳಿರುತ್ತವೆ. ಇಷ್ಟಪಟ್ಟು ಮಾಡುವ ನಾಟಕ, ಪದ್ಯಭಾಗಗಳು ಈ ಮಕ್ಕಳಿಗೆ ಅದೇಕೆ ನಿದ್ದೆ ತರಿಸುತ್ತವೋ ಗೊತ್ತಿಲ್ಲ.
ಅಂಥ ಹತಾಶೆ ಕಾಡಿದಾಗಲೆಲ್ಲ ನನಗೆ ನಾನೇ ಶಹಬ್ಟಾಶ್‌ಗಿರಿ ಕೊಟ್ಟುಕೊಂಡು ನಗುತ್ತೇನೆ… “ನೋಡಿ ಮಾರಾಯರೇ, ನನ್ನ ಸ್ವರ ಇಷ್ಟು ಜೋರಾಗಿದ್ದರೂ ಲಾಲಿಹಾಡು ಕೇಳಿದಂತೆ ನಿದ್ದೆ ಹೋಗುತ್ತಾರಲ್ಲಾ, ಮನೆಯಲ್ಲಿ ನನ್ನ ಮಗ ಸಣ್ಣವನಿದ್ದಾಗ ಮಲಗಿಸಲೆಂದು ಏನೋ ಗುನುಗಿದರೆ ಅವನು ಜೋಲಿಯೊಳಗಿಂದ ತಲೆಯೆತ್ತಿ ಪದ್ಯ ಬೇಡಮ್ಮಾ ಅಂತಿದ್ದನಲ್ಲಾ!?’ ಎಂದು.
ತರಗತಿಯ ಇತರರೆಲ್ಲ ಈ ಜೋಕಿಗೆ ನಕ್ಕರೆ ನಿದ್ದೆಯಿಂದ ಎಚ್ಚರಗೊಂಡವರು ತಮಗೇ ಏನೋ ಅಂದರು ಎಂಬುದು ಅರ್ಥವಾದಂತೆ, ತಾವು ನಿದ್ದೆ ಹೋಗಿಯೇ ಇಲ್ಲವೆಂಬಂತೆ ನಟಿಸುತ್ತಾರೆ. ಆ ನಟನೆ ಕಾಣುವಾಗ ನಿಜಕ್ಕೂ ನಗೆಯುಕ್ಕಿ ಬರುತ್ತದೆ. ಯಾಕೆಂದರೆ ನಿದ್ದೆ ಮಾಡಬಾರದ ಸ್ಥಳದಲ್ಲಿ ತೂಕಡಿಸಿ ಇತರರಿಗೆ ಕಾಣಿಸಿಕೊಂಡಾಗ ಆಗುವ ಮುಜುಗರ ನಮಗೂ ತಿಳಿದಿರುವುದೇ ತಾನೇ?
ಹೊಟ್ಟೆಗೆ ಹಿಟ್ಟಿಲ್ಲ, ಕಣ್ಣಿಗೆ ನಿದ್ದೆಯಿಲ್ಲ…: ಒತ್ತರಿಸಿಕೊಂಡು ಬರುವ ನಿದ್ದೆಯಿಂದ ತಪ್ಪಿಸಿಕೊಳ್ಳಲಾಗದೇ ಮಕ್ಕಳು ಕಕ್ಕಾಬಿಕ್ಕಿಯಾಗುವಾಗ ಕೆಲವೊಮ್ಮೆ ಅವರ ಬಗ್ಗೆ ಅಯ್ಯೋ ಎನಿಸುತ್ತದೆ. ಬೆಳಗ್ಗೆ ಐದು ಗಂಟೆಯಿಂದಲೇ ಟ್ಯೂಷನ್ ಎಂದು ಮನೆಯಿಂದ ಸೈಕಲ್ಲಿನಲ್ಲಿ ಹೊರಬೀಳುವ ಮಕ್ಕಳು ಬೆಳಗ್ಗಿನ ತಿಂಡಿಯನ್ನಾಗಲೀ, ಮಧ್ಯಾಹ್ನದ ಊಟವನ್ನಾಗಲೀ ಹೊಟ್ಟೆತುಂಬಾ ಉಂಡಿರುವುದಿಲ್ಲ.
ಎಸ್ಸೆಸ್ಸೆಲ್ಸಿಗೋ, ಪಿಯುಸಿಗೋ ಬರುವುದೇ ತಪ್ಪೇನೋ ಎಂದು ಸ್ವತಃ ಪೋಷಕರಿಗೂ ಅನ್ನಿಸುವಂಥ ಅಂಕಗಳ ನಿರೀಕ್ಷೆಯ ಒತ್ತಡವನ್ನು ತಲೆಯ ಮೇಲೆ ಹೊತ್ತುಕೊಂಡು ಓಡಾಡುವ ಈ ಕನಸುಕಣ್ಣಿನ ಮಕ್ಕಳು ದಣಿದು ಸುಣ್ಣವಾಗುವ ಪರಿಯನ್ನು ನೋಡಿದರೆ ವಿಷಾದವೆನಿಸುತ್ತದೆ. ಯಾವ ಯಂತ್ರವೇ ಆದರೂ ತನ್ನ ಸಾಮರ್ಥ್ಯಕ್ಕಿಂತ ಮೀರಿ ಕೆಲಸ ಮಾಡಿದರೆ ತಟಸ್ಥವಾಗಿ ಬಿಡುತ್ತದೆ.
ಮತ್ತೆ ನೀರೆರೆದೋ ಅಥವಾ ಅದು ತನ್ನಿಂದ ತಾನಾಗಿ ತಣ್ಣಗಾಗುವವರೆಗಾದರೂ ಕಾದು ಮತ್ತೆ ಕೆಲಸ ಮುಂದುವರಿಸುವುದು ಅನಿವಾರ್ಯ. ಅಂಥಾದ್ದರಲ್ಲಿ ಬೆಳೆಯುವ ವಯಸ್ಸಿನ ಈ ಮಕ್ಕಳು ಶರೀರಕ್ಕೆ ಕಡಿಮೆ ಪಕ್ಷ ಅಗತ್ಯವಿರುವ ನಿದ್ದೆ, ಆಹಾರದಿಂದಲೂ ವಂಚಿತರಾಗಿ, ಪಾಠ ಕೇಳುವ ಹುಮ್ಮಸ್ಸನ್ನೂ ಕಳಕೊಂಡು ಹೈರಾಣಾಗುವ ಅವಸ್ಥೆ ನೋಡಿದರೆ ನೋವಾಗದೇ ಇದ್ದೀತೇ?
ಆ ಮಕ್ಕಳು ಅದೆಷ್ಟರ ಮಟ್ಟಿಗೆ ಸೋತು ನಿದ್ದೆ ಹೋಗುತ್ತಾರೆ ಎಂದರೆ ಎಬ್ಬಿಸಿದರೂ ಕಣ್ಣು ಬಿಡಲಾರದೇ ಮತ್ತೆ ಡೆಸ್ಕಿಗೆ ತಲೆಯಾನಿಸುತ್ತಾರೆ. “ತುಂಬಾ ತಲೆನೋವು ಮಿಸ್’ ಎಂದು ಹಣೆಯೊತ್ತಿ ಹಿಡಿಯುತ್ತಾರೆ. ಇತರರ ಮುಂದೆ ಅವರನ್ನೊಮ್ಮೆ ಕರೆದು ಎಬ್ಬಿಸುವ ಗೋಜು ಬೇಡವೇ ಬೇಡವೆಂದು ನೋಡಿದರೂ ನೋಡದಂತೆ ಸುಮ್ಮನಾಗುವ ಪಾಳಿ ನಮ್ಮದು.
ಯಕ್ಷಗಾನದ ಮರುದಿನ…: ನಮ್ಮ ಬಾಲ್ಯದಲ್ಲಿ ರಾತ್ರಿಯೆಲ್ಲ ಯಕ್ಷಗಾನ ನೋಡಿ ಬೆಳಗ್ಗೆ ಶಾಲೆಗೆ ಹೋದರೆ ಬರುವ ನಿದ್ದೆಯ ಸವಿ ಇನ್ನೂ ಮರೆತಿಲ್ಲ. ಯಾವ ಮೇಷ್ಟ್ರು ಯಾವ ಪಾಠವೇ ಮಾಡುತ್ತಿರಲಿ, ನಮಗೆ ಕಣ್ಣೊಳಗೆ ಕಾಣಿಸುತ್ತಿರುವುದು ಅಟ್ಟಹಾಸ ಕೊಡುತ್ತಾ ಬರುವ ಮಹಿಷಾಸುರನೋ, ಚಂಡಮುಂಡರೋ, ಶುಂಭನಿಶುಂಭಾದಿಗಳ್ಳೋ! ಅವರನ್ನು ದೇವಿ ಸಂಹರಿಸಬೇಕಾದರೆ ಕೇಳುವ ಚೆಂಡೆಯ ಪೆಟ್ಟು ಹಾಗೇ ಕಿವಿಯಲ್ಲಿ ರಿಂಗಣಿಸುತ್ತಿರುತ್ತದೆ.
ಅದು ಹಗಲೋ, ಇರುಳ್ಳೋ ಅರ್ಥವಾಗದ ರೀತಿಯಲ್ಲಿ ಶಾಲೆಯ ಸಮಯವಂತೂ ಮುಗಿದಿರುತ್ತದೆ. ಅದೇನು ಕೇಳಿಸಿಕೊಂಡೆವೋ, ಏನು ಬರೆದೆವೋ, ಮರುದಿನ ನೋಡಿದರೆ ನಮಗೆ ಸರ್ವಥಾ ನೆನಪಿರದು. ಅಷ್ಟಕ್ಕೂ ಈ ಪಾಠ ಮಾಡಿದ್ದರೋ ಇಲ್ಲವೋ ಎಂದು ಮುಂದೊಂದು ತಲೆಕೆರೆದುಕೊಂಡರೂ ಅಚ್ಚರಿಯೇನಿಲ್ಲ. ಅಂದಹಾಗೆ ನಿದ್ರಾಭಂಗ ಮಹಾಪಾಪವಂತೆ! ಹಾಗಾಗಿ, ತರಗತಿಯಲ್ಲಿ ತೂಕಡಿಸಿ ಬೀಳುವವರನ್ನು ಎಬ್ಬಿಸದಿರುವುದೇ ಕ್ಷೇಮ!
* ಆರತಿ ಪಟ್ರಮೆ, ತುಮಕೂರು