Advertisement
ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಮನುಷ್ಯನ ಆಯುಷ್ಯವನ್ನು ಕಾಪಾಡುವ ಮೂರು ಸ್ತಂಭಗಳೆಂದು (ತ್ರಯೋಪಸ್ತಂಭ) ಆಯುರ್ವೇದ ತಿಳಿಸುತ್ತದೆ.
Related Articles
Advertisement
ಹಗಲಿನ ನಿದ್ರೆ ಆಲಸ್ಯಕ್ಕೆ ಕಾರಣವಾಗುತ್ತದೆ. ಜತೆಗೆ ಉತ್ಸಾಹ ಕುಂದಿಸುತ್ತದೆ. ತಲೆನೋವು, ಮೈ ಭಾರ, ಮೈಕೈ ನೋವು ಉಂಟುಮಾಡುತ್ತದೆ. ಕ್ರಮೇಣ ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಮಾತ್ರವಲ್ಲದೇ ಹಗಲು ನಿದ್ರೆಯು ರಾತ್ರಿಯ ನಿದ್ರೆಯನ್ನು ಕೆಡಿಸುತ್ತದೆ. ಹೀಗಾಗಿ ಹಗಲು ನಿದ್ರಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ.
ಹಗಲು ಹೊತ್ತು ವಿಶ್ರಾಂತಿ ಬೇಕಾಗಿದಲ್ಲಿ ಕುರ್ಚಿಯ ಮೇಲೆ ಕುಳಿತು ತೂಕಡಿಸುವುದು ಸೂಕ್ತ. ಬೇಸಗೆಯಲ್ಲಿ ಮಧ್ಯಾಹ್ನ ಒಂದೆರಡು ಗಂಟೆ ವಿಶ್ರಾಂತಿ ಪಡೆಯಬಹುದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಗಲಿನಲ್ಲಿ ನಿದ್ರೆ ಮಾಡಬಹುದು. ಆದರೆ ಇವರು ಊಟದ ಮೊದಲು ನಿದ್ರಿಸಬೇಕು. ಊಟದ ಅನಂತರ ನಿದ್ರಿಸುವುದು ಅನಾರೋಗ್ಯಕರವಾಗುವುದು.
ನಿದ್ರೆಯ ಅವಧಿ ಮಕ್ಕಳಲ್ಲಿ ಹೆಚ್ಚಾಗಿದ್ದು ವಯಸ್ಸಾಗುತ್ತಾ ಕ್ರಮೇಣ ಕಡಿಮೆಯಾಗುತ್ತದೆ. ಶಿಶುಗಳು ಸುಮಾರು 18- 20 ಗಂಟೆಗಳ ತನಕ ನಿದ್ರಿಸಿದರೆ, ಮಕ್ಕಳು 9- 10 ಗಂಟೆಗಳ ಕಾಲ ನಿದ್ರಿಸಬಹುದು. ಯೌವನದಲ್ಲಿ 8 ಗಂಟೆ ಮತ್ತು ವೃದ್ಧಾಪ್ಯದಲ್ಲಿ 4- 6 ಗಂಟೆಗಳು. ಮಾನಸಿಕ ಗುಣಗಳಿಗೆ ಅನುಗುಣವಾಗಿ ನಿದ್ರೆಯ ಅವಧಿಯೂ ಬೇರೆಬೇರೆಯಾಗಿರುತ್ತದೆ. ಸಾತ್ವಿಕ ಪುರುಷರ ನಿದ್ರೆ 4- 6 ಗಂಟೆಗಳ ಕಾಲ, ರಾಜನಿಗೆ ಪುರುಷರ ನಿದ್ರೆ 8 ಗಂಟೆಗಳಿಗೂ ಹೆಚ್ಚು ಮತ್ತು ತಾಮಸಿಕ ಪುರುಷರಿಗೆ 10-12 ಗಂಟೆಗಳ ಕಾಲ. ನಿದ್ರೆಯ ಕ್ರಮ ಸರಿಯಾಗಿದ್ದರೆ ಆಯಾಸ ಪರಿಹಾರವಾಗುವುದು, ಆರೋಗ್ಯದ ಬೆಳವಣಿಗೆಗೆ ಬೇಕಾದ ಸರ್ವಾಂಗ ವಿಕಾಸವೂ ಆಗುತ್ತದೆ.
ನಿದ್ರೆಯನ್ನು ನಿರ್ಲಕ್ಷಿ$Âಸಿದರೆ ಆಲಸ್ಯ ಹೆಚ್ಚಾಗುತ್ತದೆ. ಕಣ್ಣು ಉರಿ ಮತ್ತು ತಲೆ ಭಾರ ಕಾಣಿಸಿಕೊಳ್ಳುತ್ತದೆ. ಜತೆಗೆ ಮೈಕೈ ನೋವು, ಗೊಂದಲಮಯವಾದ ಮನಸ್ಸು, ಆಕಳಿಕೆ, ಆಯಾಸ ಅಧಿಕವಾಗುತ್ತದೆ. ನಿದ್ರೆ ಇಲ್ಲದಿದ್ದರೆ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಅಜೀರ್ಣ ಉಂಟಾಗಿ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಮುಂಗೋಪವೂ ಹೆಚ್ಚುತ್ತದೆ.
ಸುಖ ನಿದ್ರೆಗೆ ಏನು ಮಾಡಬಹುದು? :
ಸುಖವಾದ ನಿದ್ರೆಗಾಗಿ ಸಂತೃಪ್ತ ಮನಸ್ಸು ನಮ್ಮದಾಗಿರಬೇಕು. ಇದಕ್ಕಾಗಿ ಒಳ್ಳೆಯ ಆಲೋಚನೆಗಳನ್ನು ಮನದಲ್ಲಿ ತುಂಬಿಕೊಳ್ಳಬೇಕು. ದೇವರ ಪ್ರಾರ್ಥನೆಯೂ ಸುಖ ನಿದ್ರೆಗೆ ಮನಸ್ಸನ್ನು ಪ್ರೇರೇಪಿಸುತ್ತದೆ. ಇದರೊಂದಿಗೆ ವಾರಕ್ಕೆ ಒಂದು ಬಾರಿಯಾದರೂ ಅಭ್ಯಂಗ ಸ್ನಾನ ಮಾಡಬೇಕು. ರಾತ್ರಿ ಮಲಗುವ ಮುನ್ನ ಸಾದಾಭ್ಯಂಗ ಮಾಡುವುದು, ಶ್ರೀಗಂಧ ಮೊದಲಾದ ಸುಗಂಧ ದ್ರವ್ಯಗಳ ಲೇಪನ ಉಪಯೋಗಕಾರಿ.
ಮನಸ್ಸಿಗೆ ಮುದಕೊಡುವ ಸಂಗೀತ ಕೇಳುವುದು, ಧ್ಯಾನ ಮಾಡುವುದು, ರಾತ್ರಿ ಮಲಗುವ ಮೊದಲು ಹಾಲು ಸೇವಿಸುವುದು ಉತ್ತಮ. ನಿದ್ರೆಯ ಸಮಸ್ಯೆ ಉಳ್ಳವರು ಎಮ್ಮೆಯ ಹಾಲು ಕುಡಿಯುವುದು ಒಳ್ಳೆಯದು. ಜತೆಗೆ ವಿಪರೀತ ಕರಣಿ, ಸುಪ್ತಬದ್ಧ ಕೋಣಾಸನ, ಬಾಲಾಸನ, ಶೀರ್ಷಾಸನ ಮತ್ತು ಶವಾಸನಗಳನ್ನು ಅಭ್ಯಾಸ ಮಾಡುವುದರಿಂದ ಮನಸ್ಸು ಹಾಗೂ ಶರೀರ ಶಾಂತವಾಗಿ ನಿದ್ರೆ ಸಹಜವಾಗಿ ಬರುತ್ತದೆ. ರಾತ್ರಿ ಬೇಗ ಮಲಗಿ ಮುಂಜಾನೆ ಬೇಗನೆ ಏಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಡಾ| ಮೇಘನಾ,ಡಬ್ಲಿನ್, ಐರ್ಲೆಂಡ್