ಬೆಂಗಳೂರು: ಅದು ಜೀತ ಇದ್ದವರು ಮತ್ತು ಅವರನ್ನು ಬಿಡುಗಡೆ ಮಾಡಿದವರ ವೇದಿಕೆ. ಸಮಾಜದಲ್ಲಿ ವಿವಿಧ ಕಾರಣಗಳಿಗಾಗಿ ಜೀತ ಎಂಬ ಅನಿಷ್ಟ ಪದ್ಧತಿಯಲ್ಲಿ ಸಿಲುಕಿ ಒದ್ದಾಡುತ್ತಿರುವವರ ವಿಮೋಚನೆ ಹೇಗೆ? ಇರುವ ಕಾನೂನುಗಳು ಏನು? ಸಂಘಟನಾತ್ಮಕ ಹೋರಾಟಗಳ ರೂಪುರೇಷೆ ಮತ್ತಿತರ ವಿಷಯಗಳ ಕುರಿತು ಚಿಂತನ-ಮಂಥನ ಅಲ್ಲಿ ನಡೆಯುತ್ತಿತ್ತು.
ಸಂಸ್ಥೆಯ ನಿರ್ದೇಶಕ ಕಿರಣ ಕಮಲ ಪ್ರಸಾದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಕಾರ್ಯಕರ್ತರು ನೆರೆದಿದ್ದರು. ಅಲ್ಲದೆ, ಇದೇ ವೇಳೆ ವರ್ಷಗಳಿಗೊಮ್ಮೆ ನಡೆಯುವ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟಕ್ಕೆ ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಅದರಲ್ಲಿ ನರಸಿಂಹಪ್ಪ (ಅಧ್ಯಕ್ಷರು), ಮುತ್ತಯ್ಯ (ಉಪಾಧ್ಯಕ್ಷರು), ಮಂಜುನಾಥ್ (ಕಾರ್ಯದರ್ಶಿ), ದ್ಯಾವಪ್ಪ (ಖಜಾಂಚಿ) ಪದಾಧಿಕಾರಿಗಳಾಗಿ ಆಯ್ಕೆಯಾದರು.
Advertisement
ನಗರದ ನಾಗರಬಾವಿಯಲ್ಲಿರುವ ಜೀವಿಕ (ಜೀತ ವಿಮುಕ್ತಿ ಕರ್ನಾಟಕ) ಸಂಸ್ಥೆಯ ಆವರಣದಲ್ಲಿ ಗುರುವಾರ ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸುಮಾರು ರಾಜ್ಯದ ಸುಮಾರು 20-22 ತಾಲ್ಲೂಕುಗಳಿಂದ ಆಗಮಿಸಿದ್ದ ಜೀತದಿಂದ ಬಿಡುಗಡೆ ಹೊಂದಿದವರು ಮತ್ತು ಅದಕ್ಕಾಗಿ ಶ್ರಮಿಸಿದ ಕಾರ್ಯಕರ್ತರು ಭಾಗವಹಿಸಿದ್ದರು. ಸಮಾಜ ಸಾಕಷ್ಟು ಮುಂದುವರಿದಿದ್ದರೂ ಸಾವಿರಾರು ಜನ ಈಗಲೂ ಜೀತದಾಳುಗಳಾಗಿದ್ದಾರೆ. ಅವರಿಗೆ ಬಿಡುಗಡೆ ಭಾಗ್ಯ ಕಲ್ಪಿಸಲು ಸಂಘಟಿತ ಹೋರಾಟ ನಡೆಸಬೇಕು ಎಂಬ ಒಕ್ಕೊರಲ ಕೂಗು ಸಭೆಯಲ್ಲಿ ಕೇಳಿಬಂದಿತು.
ಚಿತ್ರಗಳ ಬಿಡುಗಡೆ
ಅಲ್ಲದೆ, ಬಂಧನದಿಂದ ಬಿಡುಗಡೆ ಆ ಮೂಲಕ ಜೀವನೋಲ್ಲಾಸ, ಮಹಿಳೆಯರ ಒಗ್ಗಟ್ಟು ಪ್ರದರ್ಶನ, ಜೀತದಿಂದ ಕೊನೆಗೂ ಸಿಡಿದೆದ್ದ ಆಳು, ಬಿಡುಗಡೆಯನ್ನು ಸೂಚಿಸುವ ಬಾನಾಡಿ ಹೀಗೆ ಹತ್ತುಹಲವು ಸಂದೇಶಗಳನ್ನು ಜೀವಿಕ ಕಚೇರಿಯ ಗೋಡೆಗಳು ಸಾರುತ್ತಿದ್ದವು. ಕಲಾವಿದ ಜಾನ್ ದೇವರಾಜ್ ಮಾರ್ಗದರ್ಶನದಲ್ಲಿ ಸ್ವತಃ ಜೀತದಾಳುಗಳ ಕೈಯಲ್ಲಿ ಅರಳಿದ ಆ ಚಿತ್ರಗಳು ಜೀತಪದ್ಧತಿಯ ಕರಾಳ ಮುಖವನ್ನು ತೆರೆದಿಟ್ಟವು.