Advertisement

ಪರಸ್ಪರ ಸಗಣಿ ಉಂಡೆಯಲ್ಲಿ ಹೊಡೆಯುವ ಗೊರೆಹಬ್ಬ

06:19 PM Oct 28, 2022 | Team Udayavani |

ಚಾಮರಾಜನಗರ: ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮುಗಿಯುತ್ತಿದ್ದರೆ, ಇತ್ತ ಜಿಲ್ಲೆಯ ಗಡಿಯಲ್ಲಿರುವ ತಮಿಳುನಾಡಿನ ಗುಮಟಾಪುರ ಗ್ರಾಮದಲ್ಲಿ ವಿಶಿಷ್ಟವಾದ ಹಬ್ಬವೊಂದು ನಡೆಯು ತ್ತದೆ. ಪರಸ್ಪರ ಸಗಣಿಯ ಉಂಡೆಯಲ್ಲಿ ಹೊಡೆ ದಾಡುವ ಆ ವಿಶಿಷ್ಟ ಆಚರಣೆಯೇ ಗೊರೆ ಹಬ್ಬ.

Advertisement

ಬಲಿಪಾಡ್ಯಮಿ ನಡೆದ ಮಾರನೆ ದಿನ ಪ್ರತಿ ವರ್ಷ ಚಾಚೂ ತಪ್ಪದೆ ಗೊರೆ ಹಬ್ಬ ನಡೆಯುತ್ತದೆ. ಅಂತೆಯೇ ಗುರುವಾರ ಗ್ರಾಮದಲ್ಲಿ ಈ ವಿಶಿಷ್ಟ ಹಬ್ಬವನ್ನು ಗ್ರಾಮಸ್ಥರು ಸಂಭ್ರಮೋಲ್ಲಾಸದಿಂದ ಆಚರಿಸಿದರು. ವಿಶೇಷವೆಂದರೆ ಗುಮಟಾಪುರ ಗ್ರಾಮ ತಮಿಳುನಾಡಿಗೆ ಸೇರಿದ್ದರೂ, ಅಲ್ಲಿರುವವರೆಲ್ಲರೂ ಅಪ್ಪಟ ಕನ್ನಡಿಗರು.

ಪ್ರತಿ ವರ್ಷದ ದೀಪಾವಳಿಯ ಬಲಿಪಾಡ್ಯಮಿ ಮುಗಿದ ಮಾರನೇ ದಿನ ಈ ಗೊರೆಹಬ್ಬ ನಡೆಯುತ್ತದೆ. ಪಂಚಾಗ ನೋಡುವ ಹಾಗಿಲ್ಲ, ಯಾವ ನಕ್ಷತ್ರ ತಿಥಿ ಎಂಬ ಗೊಡವೆಯಿಲ್ಲ. ಬಲಿಪಾಡ್ಯಮಿಯ ಮಾರನೆಯ ದಿನ ಈ ಗ್ರಾಮದಲ್ಲಿ ಗೊರೆ ಹಬ್ಬ ನಡೆಯುತ್ತದೆ. ಗ್ರಾಮದ ಪುರುಷರು ಸಗಣಿಯ ಗುಡ್ಡೆಯಲ್ಲಿ ನಿಂತು ಪರಸ್ಪರ ಸಗಣಿಯನ್ನು ಎರಚಿಕೊಂಡು, ಉಂಡೆ ಮಾಡಿ ಎಸೆದುಕೊಂಡು ವಿನೋದ ಪಡುವ ಹಬ್ಬವೇ ಗೊರೆ ಹಬ್ಬ.

ಕಾರಪ್ಪ ದೇವಸ್ಥಾನದಲ್ಲಿ ಪೂಜೆ: ಮೊದಲಿಗೆ ಮಧ್ಯಾಹ್ನ ಗ್ರಾಮದ ಕೆರೆ ಪಕ್ಕದಲ್ಲಿರುವ ಕಾರಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕೆರೆಯಿಂದ ಕೊಂಡಕ್ಕಾರ ಎಂಬ ವೇಷ ಧರಿಸಿದ ಇಬ್ಬರನ್ನು ಕತ್ತೆಯ ಮೇಲೆ ಕೂರಿಸಿಕೊಂಡು ಸಗಣಿ ಗುಡ್ಡೆ ಹಾಕಿರುವ ಜಾಗಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ಕೊಂಡಕ್ಕಾರ ಕೃತಕ ಗಡ್ಡ ಮೀಸೆ ಧರಿಸಿ ಅಶ್ಲೀಲ ಸಂಜ್ಞೆ ಮಾಡುತ್ತಿರುತ್ತಾರೆ. ನಗು ತಮಾಷೆಯ ನಡುವೆ ಮೆರವಣಿಗೆ ಸಾಗಿತು.

ಇದಕ್ಕೂ ಮುನ್ನ ಗ್ರಾಮದ ವಿವಿಧೆಡೆಯ ಸಗಣಿ ಗುಡ್ಡೆಗಳಿಂದ ಸಗಣಿಯನ್ನು ಬೀರೇಶ್ವರ ದೇವಸ್ಥಾನದ ಬಳಿ ಸುರಿಯಲಾಗುತ್ತದೆ. ಸಂಜೆ 4 ಗಂಟೆಯ ಹೊತ್ತಿಗೆ ಗ್ರಾಮದ ಬೀರೇಶ್ವರ ದೇವಾಲಯದ ಸಮೀಪದಲ್ಲಿ ಸಗಣಿ ರಾಶಿ ಹಾಕಿರುವ ಜಾಗದಲ್ಲಿ ಗ್ರಾಮಸ್ಥರೆಲ್ಲ ಸಂಜೆ ಸೇದಿರು. ಪುರುಷರು ಚಡ್ಡಿ ಧರಿಸಿ, ಬರಿಮೈಯಲ್ಲಿ ಸಗಣಿಯಲ್ಲಿ ಆಟವಾಡಲು ಸಿದ್ಧರಾಗುತ್ತಾರೆ. ಸಗಣಿ ರಾಶಿಗೆ ಪೂಜೆ ಸಲ್ಲಿಸಿದ ಬಳಿಕ ಸಗಣಿ ಎರಚಾಟ ಶುರುವಾಗುತ್ತದೆ. ದೊಡ್ಡ ದೊಡ್ಡ ಸಗಣಿ ಉಂಡೆಗಳನ್ನು ಪರಸ್ಪರ ಎರಚಾಡಿದರು.

Advertisement

ಸಗಣಿಯ ಗುಂಡುಗಳನ್ನು ಒಬ್ಬರ ಮೇಲೊಬ್ಬರು ಎತ್ತಿ ಹಾಕಿದರು.. ನೂರಾರು ಮಂದಿ ಒಬ್ಬರ ಮೇಲೊಬ್ಬರು ತೊಪ್ಪೆ ಯನ್ನು (ಸಗಣಿ ) ಎತ್ತಿಹಾಕುತ್ತಾ ವಿನೋದಿಸಿದರು. ಸುತ್ತ ನಿಂತ ಗ್ರಾಮಸ್ಥರು ಹರ್ಷೋದ್ಗಾರ ಮಾಡುತ್ತಾ ಅವರನ್ನು ಹುರಿದುಂಬಿಸಿದರು. ಸೂರ್ಯ ಪಶ್ಚಿಮದ ದಿಗಂತದ ಅಂಚಿಗೆ ಬರುವವರೆಗೂ ಈ ಸಗಣಿ ಎರಚಾಟ ನಡೆಯಿತು.

ಸಗಣಿ ಹಬ್ಬದ ಹಿನ್ನೆಲೆ
ಎಲ್ಲ ಆಚರಣೆಗಳಿಗೂ ಒಂದು ಹಿನ್ನೆಲೆ ಐತಿಹ್ಯ ಇರುವಂತೆ ಈ ಹಬ್ಬಕ್ಕೂ ಒಂದು ಐತಿಹ್ಯವಿದೆ. ಗುಮಟಾಪುರ ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದೆ ದೇವರಗುಡ್ಡನೊಬ್ಬ ಗೌಡರಮನೆಯಲ್ಲಿ ಆಳು ಮಗನವಾಗಿ ಕೆಲಸಕ್ಕಿದ್ದನಂತೆ. ಆತ ಮೃತನಾದ ನಂತರ ಆತನ ಜೋಳಿಗೆಯನ್ನು ಸಗಣಿಯ ತಿಪ್ಪೆಗೆ ಎಸೆಯಲಾಗುತ್ತದೆ. ಅದಾದ ನಂತರ ಗೌಡನ ಎತ್ತಿನಗಾಡಿಯು ಮಾರ್ಗದಲ್ಲಿ ಸಾಗುವಾಗ ಗಾಡಿಯ ಚಕ್ರ ಆ ಜೋಳಿಗೆ ಮೇಲೆ ಹರಿಯುತ್ತದೆ. ತಿಪ್ಪೆಯೊಳಗೆ ಲಿಂಗರೂಪದ ಕಲ್ಲಿನಿಂದ ರಕ್ತ ಬರುತ್ತದೆ. ಅಂದು ರಾತ್ರಿ ದೇವರು ಕನಸಿನಲ್ಲಿ ಬಂದು ಈ ದೋಷ ಪರಿಹಾರಕ್ಕಾಗಿ ಗುಡಿ ಕಟ್ಟಿಸಬೇಕು.

ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಅಚರಿಸಬೇಕು ಎಂದು ಗೌಡನಿಗೆ ಹೇಳಿತಂತೆ. ನಂತರದ ವರ್ಷದಿಂದಲೇ ಈ ಆಚರಣೆ ಶುರುವಾಯಿತು ಎಂಬ ಪ್ರತೀತಿ ಇದೆ. ಹೀಗಾಗಿ ತಲತಲಾಂತರದಿಂದ ಈ ಆಚರಣೆ ನಡೆದು ಬಂದಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ತ.ನಾಡಿಗೆ ಸೇರಿದ್ದರೂ, ಅಚ್ಚಕನ್ನಡ ಪ್ರದೇಶ
ತಾಳವಾಡಿ ಪ್ರದೇಶ ತಮಿಳುನಾಡಿಗೆ ಸೇರಿ ಹೋಗಿದ್ದರೂ ಇದು, ಅಚ್ಚಕನ್ನಡ ಪ್ರದೇಶ. ತಾಳವಾಡಿ ಫಿರ್ಕಾ (ಹೋಬಳಿ)ದ 48 ಹಳ್ಳಿಗಳಲ್ಲಿ ಕನ್ನಡಿಗರೇ ಇದ್ದಾರೆ. ಭಾಷಾವಾರು ಪ್ರಾಂತ್ಯ ವಿಂಗಡಣೆ ಸಂದರ್ಭದಲ್ಲಿ ಈ ಪ್ರದೇಶ ತಮಿಳುನಾಡಿಗೆ ಸೇರಿ ಹೋಯಿತು. ಆದರೆ ಸರ್ಕಾರಿ ವ್ಯವಹಾರಗಳಿಗೆ ತಮಿಳುನಾಡನ್ನು ಅವಲಂಬಿಸಿರುವ ಈ ಜನರ ನಂಟು, ಸಂಬಂಧಗಳೆಲ್ಲ ಕರ್ನಾಟಕದ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹರಡಿವೆ. ತಾಳವಾಡಿ ಫಿರ್ಕಾದ ಗುಮಟಾಪುರ ಗ್ರಾಮದಲ್ಲಿ ನಡೆಯುವ ಗೊರೆ ಹಬ್ಬ ಈ ಭಾಗದಲ್ಲೇ ವಿಶಿಷ್ಟವಾದ ಹಬ್ಬ. ಸಗಣಿಯಿಂದ ಹೊಡೆದಾಡುವ ಈ ರೀತಿಯ ಹಬ್ಬ ಈ ಭಾಗದಲ್ಲಿ ಇನ್ನಾವ ಗ್ರಾಮದಲ್ಲೂ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next